ಶನಿವಾರ, ಮೇ 15, 2021
25 °C

ಸಿಗ್ನಲ್ ದೀಪ ನೋಡೋಕ್ ಮಾತ್ರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಲ್ಕಿ: ಜನದಟ್ಟಣೆಯ ಪ್ರದೇಶಗಳಲ್ಲಿ ಸುಗಮ ಸಂಚಾರದ ಉದ್ದೇಶದಿಂದ ಅಳವಡಿಸಲಾದ ಸಿಗ್ನಲ್ ದೀಪಗಳು ಕೇವಲ ಪ್ರದರ್ಶನಕ್ಕೆ ಮಾತ್ರ ಎಂಬಂತಾಗಿದೆ. ಅಡ್ಡಾದಿಡ್ಡಿ ಓಡಾಡುವ ವಾಹನಳಿಂದಾಗಿ ಪದೇಪದೇ ಟ್ರಾಫಿಕ್ ಜಾಮ್ ಆಗುವಂಥ ಸನ್ನಿವೇಶ ಭಾಲ್ಕಿಯ ಮಹಾತ್ಮ ಗಾಂಧಿ ವೃತ್ತದಲ್ಲಿ ಸಾಮಾನ್ಯ ಎಂಬಂತಾಗಿದೆ.ಇದೇ ವೃತ್ತದ ಒಂದು ಮೂಲೆಯಲ್ಲಿ ಸಂಚಾರಿ ಠಾಣೆಯೂ ಇದೆ. ಆದರೆ ಸಂಚಾರ ದೀಪಗಳು ಕಳೆದ 2 ವರ್ಷಗಳಿಂದ ಕಣ್ಣು ಮುಚ್ಚಿಕೊಂಡು ಕುಳಿತಿವೆ.ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗಲೆಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ಸರ್ಕಾರದ ಮೂಲ ಉದ್ದೇಶಕ್ಕೆ ಎಳ್ಳು ನೀರು ಬಿಟ್ಟಿರುವ ಸಂಬಂಧಿತರ ನಿರ್ಲಕ್ಷ್ಯಕ್ಕೆ ಜನರು ಹಿಡಿ ಶಾಪ ಹಾಕುವಂತಾಗಿದೆ.ಭಾಲ್ಕಿ ಪಟ್ಟಣವು ಬೀದರ್ ಜಿಲ್ಲೆಯ ಪ್ರಮುಖ ರಾಜಕೀಯ, ವಾಣಿಜ್ಯ ಮತ್ತು ಶೈಕ್ಷಣಿಕ ಚಟುವಟಿಕೆಯ ಕೇಂದ್ರವಾಗಿದೆ. ಪಟ್ಟಣದ  ಮಹಾತ್ಮಾ ಗಾಂಧಿ ವೃತ್ತ, ಡಾ.ಬಾಬಾಸಾಹೇಬ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ಮುಂತಾದೆಡೆ ಐ.ಡಿ.ಎಸ್.ಎಂ.ಟಿ ಯೋಜನೆ ಅಡಿಯಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಬಳಕೆಯಾಗಬೇಕಾದ ಹೈಮಾಸ್ಟ್ ದೀಪಗಳು, ಸಂಚಾರಿ ದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.

ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣ ಎನ್ನುತ್ತಾರೆ ವ್ಯಾಪಾರಿ ಮುಖಂಡ ರಾಚಪ್ಪ ಗೋರ್ಟೆ, ಓಂಪ್ರಕಾಶ ಪಾಟೀಲ.ಬೀದರ್, ಹೈದರಾಬಾದ್, ಪೂನಾ, ಮುಂಬೈ, ಉದಗೀರ್, ಲಾತೂರ ಮುಂತಾದ ನಗರಗಳ ಬಸ್‌ಗಳು ಭಾಲ್ಕಿಯ ಗಾಂಧಿ ವೃತ್ತದಿಂದಲೇ ಹಾದು ಹೋಗುತ್ತವೆ. 60ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಇಲ್ಲಿ ಸಾವಿರಾರು ವಾಹನಗಳು ನಿತ್ಯವೂ ಓಡಾಡುವುದರಿಂದ ಕ್ಷಣ ಕ್ಷಣಕ್ಕೂ ಟ್ರಾಫಿಕ್ ಜಾಮ್‌ನ ಕಿರಿಕಿರಿ ಅನುಭವಿಸುವಂತಾಗಿದೆ ಎಂಬುದು ಹೊಟೇಲ್ ಮಾಲೀಕ ಅಶೋಕ ಅವರ ದೂರು. ಕೂಡಲೇ ಸಿಗ್ನಲ್ ದೀಪಗಳನ್ನು ಸುಸ್ಥಿತಿಯಲ್ಲಿ ತಂದು ಉದ್ದೇಶಿತ ಸೇವೆಗೆ ಅಣಿಯಾಗಿರಲಿ ಎಂಬುದು ವಾಹನ ಸವಾರರ ಆಗ್ರಹವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.