ಸಿಗ್ನಲ್ ಮುಕ್ತ ಕಾರಿಡಾರ್: ದಾಖಲೆ ನೀಡಿ

7

ಸಿಗ್ನಲ್ ಮುಕ್ತ ಕಾರಿಡಾರ್: ದಾಖಲೆ ನೀಡಿ

Published:
Updated:

ಬೆಂಗಳೂರು:  ನಗರದ ಶಿರಸಿ ವೃತ್ತದಿಂದ ಲಾಲ್‌ಬಾಗ್ ಕೋಟೆ ರಸ್ತೆಯ ಮೂಲಕ ಅಗರ ಕೆರೆಯವರೆಗಿನ ಉದ್ದೇಶಿತ `ಸಿಗ್ನಲ್ ಮುಕ್ತ ಕಾರಿಡಾರ್~ಗೆ ಸಂಬಂಧಿಸಿದಂತೆ ಸಂಪೂರ್ಣ ಯೋಜನಾ ವರದಿಯನ್ನು ಹಾಜರು ಪಡಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಮಂಗಳವಾರ ಆದೇಶಿಸಿದೆ.

ಅಂತೆಯೇ, ಈ ಕಾಮಗಾರಿಗೆ ಮರಗಳನ್ನು ಕಡಿಯಲು ಪಡೆದುಕೊಂಡ ಅನುಮತಿಯ ದಾಖಲೆಗಳನ್ನೂ ಶುಕ್ರವಾರ ಹಾಜರುಪಡಿಸುವಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಬಿಡಿಎಗೆ ನಿರ್ದೇಶಿಸಿದೆ.

ಸೇಂಟ್ ಜಾನ್ಸ್ ಆಸ್ಪತ್ರೆ ರಸ್ತೆಯಿಂದ ಕೋರಮಂಗಲ 100 ಅಡಿ ರಸ್ತೆಯ ಜಂಕ್ಷನ್, ಸರ್ಜಾಪುರ ರಸ್ತೆಯಿಂದ ಮಡಿವಾಳ ರಸ್ತೆ ಜಂಕ್ಷನ್, ಕೋರಮಂಗಲ 80 ಅಡಿ ರಸ್ತೆ ಜಂಕ್ಷನ್ ಹಾಗೂ ಜಕ್ಕಸಂದ್ರ ಜಂಕ್ಷನ್‌ಗಳಲ್ಲಿ ನಡೆಸಲು ಉದ್ದೇಶಿಸಿರುವ ಈ ಕಾಮಗಾರಿಯನ್ನು ಪ್ರಶ್ನಿಸಿ `ಸಿಟಿಜನ್ಸ್ ಆಕ್ಷನ್ ಫೋರಮ್~ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

ಮರಗಳನ್ನು ಕಡಿಯದಂತೆ ಈ ಹಿಂದೆ ಹೈಕೋರ್ಟ್ ಆದೇಶ ಹೊರಡಿಸಿದ್ದರೂ ಕಳೆದ ಶುಕ್ರವಾರದಿಂದ ಭಾನುವಾರದ ನಡುವಿನ ಅವಧಿಯಲ್ಲಿ ಬಿಡಿಎ ಸಿಬ್ಬಂದಿ 40-45 ಮರಗಳನ್ನು ಕಡಿದಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಿಚಾರಣೆ ವೇಳೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 

ಅದಕ್ಕೆ ಬಿಡಿಎ ಪರ ವಕೀಲರು ತಾವು ಈ ಮರಗಳನ್ನು ಕಡಿಯುವುದಕ್ಕೆ ಅನುಮತಿ ಪಡೆದುಕೊಂಡಿರುವುದಾಗಿ ವಿವರಿಸಿದರು. ಈ ಹಿನ್ನೆಲೆಯಲ್ಲಿ ಅದರ ದಾಖಲೆಯನ್ನು ನ್ಯಾಯಮೂರ್ತಿಗಳು ಪರಿಶೀಲಿಸಬಯಸಿದ್ದಾರೆ.

ನ್ಯಾಯಾಂಗ ನಿಂದನೆ: ಈ ಮಧ್ಯೆ, ಕೋರ್ಟ್ ಆದೇಶ ಉಲ್ಲಂಘಿಸಿ ಮರಗಳನ್ನು ಕಡಿದಿರುವ ಬಿಡಿಎ ವಿರುದ್ಧ ಅರ್ಜಿದಾರರು ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲು ಮಾಡಿದ್ದಾರೆ.  ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ಅವರು ಸರ್ಕಾರ ಹಾಗೂ ಬಿಡಿಎ ಆಯುಕ್ತ ಭರತ್‌ಲಾಲ್ ಮೀನಾ ಅವರಿಗೆ ನೋಟಿಸ್ ಜಾರಿಗೆ ಆದೇಶಿಸಿದ್ದಾರೆ. ಈ ಪ್ರಕರಣಗಳ ವಿಚಾರಣೆ ಮುಂದೂಡಲಾಗಿದೆ.

ಅಧಿಸೂಚನೆ ರದ್ದು

ಯಲಹಂಕ ಹೋಬಳಿಯ ಅಳ್ಳಾಲಸಂದ್ರದ ಬಳಿ ಕರ್ನಾಟಕ ಗೃಹ ಮಂಡಳಿಯು ಜಮೀನು ಸ್ವಾಧೀನ ಪಡಿಸಿಕೊಂಡು ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ಮಂಗಳವಾರ ರದ್ದು ಮಾಡಿದೆ. 1991ರ ಅಂತಿಮ ಅಧಿಸೂಚನೆಯಲ್ಲಿನ 106 ಎಕರೆ ಜಮೀನಿನ ಸ್ವಾಧೀನದ ವಿವಾದ ಇದಾಗಿದೆ. ಅಂತಿಮ ಅಧಿಸೂಚನೆಯ ನಂತರವೂ ಕೆಲವೊಂದು ಜಮೀನುಗಳನ್ನು ಮನಸೋ ಇಚ್ಛೆ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು ಅರ್ಜಿದಾರರಿಗೆ ಸೇರಿರುವ ಜಮೀನುಗಳನ್ನು ಮಾತ್ರ ಸ್ವಾಧೀನ ಪಡಿಸಿಕೊಂಡ ಕ್ರಮಕ್ಕೆ ನ್ಯಾಯಮೂರ್ತಿ ಮೋಹನಶಾಂತನಗೌಡರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸರ್ವೆ ನಂ. 36/1, 36/3 ಹಾಗೂ 37/1 ರಲ್ಲಿ ಇರುವ ತಮ್ಮ ಜಮೀನು ಗೃಹ ನಿರ್ಮಾಣಕ್ಕೆ ಯೋಗ್ಯವಲ್ಲ ಎಂದು ಭೂಸ್ವಾಧೀನ ಅಧಿಕಾರಿಗಳು ವರದಿ ನೀಡಿದ್ದರು. ಬಳಿಕ ಎರಡೇ ವರ್ಷದಲ್ಲಿ ಅದನ್ನು ಪುನಃ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ತಮ್ಮ ಪಕ್ಕದ ಜಮೀನುಗಳನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ. ತಮಗೆ ಬೇಕಾದವರಿಗೆ ಅನುಕೂಲ ಮಾಡಿಕೊಡಲು ಈ ರೀತಿ ಮಾಡಲಾಗಿದೆ ಎಂಬ ಅರ್ಜಿದಾರರ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ಜಮೀನು ಸ್ವಾಧೀನಪಡಿಸಿಕೊಂಡು ಹೊರಡಿಸಲಾಗಿದ್ದ ಅಧಿಸೂಚನೆ ರದ್ದು ಮಾಡಿ ಅವರು ಆದೇಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry