ಸಿಝಾನ್ ನಗುವಿಗೆ ಬೆಂಬಲ

7

ಸಿಝಾನ್ ನಗುವಿಗೆ ಬೆಂಬಲ

Published:
Updated:
ಸಿಝಾನ್ ನಗುವಿಗೆ ಬೆಂಬಲ

ಪುಟ್ಟ ಹುಡುಗನ ಮುಖದಲ್ಲಿ ಮುಗ್ಧ ನಗು. ಕಣ್ಣು ಮಿಟುಕಿಸುತ್ತಾ ಪ್ರಪಂಚವನ್ನು ಬೆರಗುಗಣ್ಣಿನಿಂದ ನೋಡುತ್ತಾನೆ. ಕನಸು ಕಂಗಳಲ್ಲಿ ಇಡೀ ಲೋಕವನ್ನು ಗೆಲ್ಲುವ ತವಕ. ಆ ಪೋರನ ಹೆಸರು ಸಿಝಾನ್ ಅಲಂ. ಬಾಲ್ಯದ ಹೊಸ್ತಿಲು ದಾಟದ ಆ ಪುಟಾಣಿಯ ವಯಸ್ಸು ಕೇವಲ ಆರು.ತಂದೆ ರಶೀದ್ ಅಲಂ ಹೇರ್‌ಡ್ರೆಸರ್. ನಗರದ ಬೆಳ್ಳಂದೂರಿನಲ್ಲಿ ವಾಸವಿರುವ ಇವರಿಗೆ ಸಿಝಾನ್ ಒಬ್ಬನೇ ಮಗ. ಅವನೆಂದರೆ ಅಪ್ಪ ಅಮ್ಮನಿಗೆ ಪ್ರಾಣ. ಆದರೆ ಬಾಲ್ಯದ ದಿನಗಳನ್ನು ಅನುಭವಿಸಬೇಕಾದ ಈ ವಯಸ್ಸಿನಲ್ಲಿ ಅವನನ್ನು ರಕ್ತದ ಕ್ಯಾನ್ಸರ್ ಕಂಗೆಡಿಸಿದೆ.ಸಿಝಾನ್‌ಗೆ ನಾಲ್ಕು ವರ್ಷ ತುಂಬಿದ್ದಾಗಲೇ (2011ರಲ್ಲಿ) ರಕ್ತದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಒಂದು ವರ್ಷ ನಿರಂತರವಾಗಿ ಕೀಮೋಥೆರಪಿ ನಡೆಯಿತು. ಕಳೆದ ವರ್ಷ ಈ ಚಿಕಿತ್ಸೆಯ ಅವಧಿ ಮುಗಿದಾಗ ಮಗ ಸಂಪೂರ್ಣ ಗುಣವಾಗಿಬಿಟ್ಟ ಎಂದು ಕುಟುಂಬ ನಿಟ್ಟುಸಿರುಬಿಟ್ಟಿತು. ಆದರೆ ಆ ಖುಷಿ ಬಹಳ ದಿನ ಉಳಿಯಲಿಲ್ಲ.

ವಿರಳಾತಿವಿರಳ ಪ್ರಕರಣಗಳಲ್ಲಿ ಕಿಮೋಥೆರಪಿಯ ನಂತರವೂ ಮರುಕಳಿಸುವುದಿದೆಯಂತೆ.ಸಿಝಾನ್ ಅಂತಹ ನತದೃಷ್ಟರಲ್ಲೊಬ್ಬನಾಗಿದ್ದ.  ಮತ್ತೆ ಅದೇ ಕಾಯಿಲೆ ಅವನನ್ನು ತನ್ನ ತೆಕ್ಕೆಯಲ್ಲಿರಿಸಿಕೊಂಡಿದೆ. ಇದು ವೈದ್ಯಕೀಯ ಲೋಕಕ್ಕೂ ಸವಾಲಾಗುವ ಹಂತ. ಸಲೂನ್‌ನ ಆದಾಯದಿಂದ ಮಗನನ್ನು ಬದುಕಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂಬುದನ್ನು ಅರಿತ ತಂದೆ ರಶೀದ್ ಅಲಂ, ಸಲೂನ್‌ನ ನಿಯಮಿತ ಗ್ರಾಹಕರಲ್ಲಿ ಮತ್ತು ಪರಿಚಯಸ್ಥರಲ್ಲಿ ಪರಿಸ್ಥಿತಿಯನ್ನು ವಿವರಿಸಿದಾಗ ನಗರದ ಎಂಜಿನಿಯರ್‌ಗಳಾದ ರಶೀದ್ ಖಾನ್ ಹಾಗೂ ನೀಲಭ್ ಶೇಖರ್ ಅವರು ನೆರವು ನೀಡಲು ಅಭಿಯಾನವನ್ನೇ ಕೈಗೊಂಡು ಆ ಕುಟುಂಬದಲ್ಲಿ ಆಶಾವಾದ ಮೂಡಿಸಿದ್ದಾರೆ.ಸಲೂನ್‌ನಲ್ಲಿ ತನ್ನ ಪಾಡಿಗೆ ಆಟವಾಡುತ್ತಾ ಮುದ್ದು ಮಾಡಿಸಿಕೊಳ್ಳುವ ಮುಗ್ಧ ಬಾಲಕನಿಗೆ ಅಂತಹುದೊಂದು ಮಾರಕ ಕಾಯಿಲೆಯಿದೆ ಎಂಬ ಅಂಶವೇ ಆಘಾತಕಾರಿ ಎನ್ನುತ್ತಾರೆರಶೀದ್‌ಖಾನ್.`ಪುಟ್ಟ ಹುಡುಗನಿಗೆ ಇಷ್ಟು ಘೋರ ಕಾಯಿಲೆಯಿದೆ ಎಂಬ ಸುದ್ದಿ ಕೇಳಿ ನಿಜಕ್ಕೂ ಬೇಸರವಾಯಿತು. ಆತನನ್ನು ನೋಡುತ್ತಿದ್ದರೆ ಎಂತಹವರಿಗೂ ಮುದ್ದಾಡುವ ಮನಸ್ಸಾಗುತ್ತದೆ. ಈ ಪುಟ್ಟ ಹುಡುಗನಿಗೆ ಹೇಗಾದರೂ ಸಹಾಯ ಮಾಡಲೇಬೇಕು ಅನಿಸಿದೆ. ಆದ್ದರಿಂದ `ಸೇವ್ ಸಿಝಾನ್ಸ್ ಸ್ಮೈಲ್'  (ಸಿಝಾನ್‌ನ ನಗುವನ್ನು ಉಳಿಸಿ) ಎಂಬ ಕಾರ್ಯವನ್ನು ಆರಂಭಿಸಿದ್ದೇವೆ. ಜಾಗತಿಕ ಜಾಲತಾಣವಾದ ಫೇಸ್‌ಬುಕ್ ಮೂಲಕವೇ ಸಿಝಾನ್ ಚಿಕಿತ್ಸೆಗೆ ಹಣ ಹೊಂದಿಸಲು ಆರಂಭಿಸಿದ್ದೇವೆ' ಎಂದು ವಿವರಿಸುತ್ತಾರೆ ರಶೀದ್ ಮತ್ತು ನೀಲಭ್.ಇದೀಗ ನಗರದ ನಾರಾಯಣ ಹೃದಯಾಲಯದಲ್ಲಿ ಸಿಝಾನ್‌ಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಈ ಪುಟ್ಟ ಹುಡುಗ ಬದುಕಲೇಬೇಕೆಂದರೆ `ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್' (ಅಸ್ಥಿಮಜ್ಜೆ ಕಸಿ) ಚಿಕಿತ್ಸೆ ಅನಿವಾರ್ಯ ಎಂದಿದ್ದಾರೆ ವೈದ್ಯರು. ಒಟ್ಟಾರೆ ಚಿಕಿತ್ಸೆಗೆ ಕನಿಷ್ಠ 25 ಲಕ್ಷ ಅವಶ್ಯವಿದೆ. ಕೀಮೋಥೆರಪಿಗೆಂದು ಇದ್ದ ಹಣವನ್ನೆಲ್ಲಾ ಸುರಿದ ಕುಟುಂಬವೂ ಕೈಚೆಲ್ಲಿ ಕೂರಬೇಕಾದ ಪರಿಸ್ಥಿತಿ. ಸಿಝಾನ್‌ಗೆ ನೀವೂ ಸಹಾಯ ಮಾಡಬೇಕೆಂದಿದ್ದರೆ, ಬಾಲಕನ ತಂದೆ ರಶೀದ್ ಅಲಂ ಅವರನ್ನು 078994 48719 ರಲ್ಲಿ ಸಂಪರ್ಕಿಸಬಹುದು.ಬ್ಯಾಂಕ್ ಖಾತೆ ಸಂಖ್ಯೆ: ಎಚ್‌ಡಿಎಫ್‌ಸಿ-03542000005059.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry