ಶನಿವಾರ, ಜನವರಿ 18, 2020
20 °C

ಸಿಟಿಜೆನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಯಾಣಪ್ಪನ ಗುರು ಯಾರು ಎಂಬುದು ಬಹುಕಾಲದಿಂದ ಚರ್ಚೆಯಾಗುತ್ತಿರುವ ಪ್ರಶ್ನೆ. ಆದರೆ ಕಲ್ಯಾಣಪ್ಪನೇ ಆತನ ಕೆಲವು ಕಥೆಗಳಲ್ಲಿ ಹೇಳಿಕೊಂಡಿರುವಂತೆ ಆತನಿಗೊಬ್ಬ ಗುರುವಿದ್ದರು. ಅವರ ಹೆಸರು ಆಲ್-ಹಾಲ್. ಅವರನ್ನು ಮರುಭೂಮಿಯ ಮಹಾ ಮಾಂತ್ರಿಕ ಎಂದೆಲ್ಲಾ ಕಲ್ಯಾಣಪ್ಪ ಹೇಳಿದ್ದಾನೆ.ಕಲ್ಯಾಣಪ್ಪ ತನ್ನ ಪರಿವ್ರಾಜಕತ್ವದ ದಿನಗಳಲ್ಲಿ ಮರುಭೂಮಿಯಲ್ಲಿ ಅಲೆದಾಡಿದನೆಂಬುದು ಅವನ ಕುರಿತಂತೆ ಇರುವ ಅನಧಿಕೃತ ಮಾಹಿತಿಗಳಲ್ಲಿ ಒಂದು. ಕಲ್ಯಾಣಪ್ಪ ಈ ಗುರುಗಳ ಶಿಷ್ಯತ್ವ ಸ್ವೀಕರಿಸುವ ಮೊದಲು ಆತನಿಗೆ ಹೇಳಿದ ಕಥೆ ಇಲ್ಲಿದೆ. ಇದು ಕಲ್ಯಾಣಪ್ಪನಿಗೆ ಈಗಲೂ ಮಾರ್ಗದರ್ಶಿ ಸೂತ್ರವಂತೆ.ಮಹಾ ಸನ್ಯಾಸಿ ಟಾ-ರಸ ತನ್ನ ಶಿಷ್ಯರಿಗೆ ಸ್ನಾತಕತ್ವವನ್ನು ಪ್ರದಾನಿಸುವ ಮೊದಲು ಒಂದು ಪರೀಕ್ಷೆ ಇಡುತ್ತಿದ್ದ. ಅದು ಬಹಳ ಸರಳ ಪರೀಕ್ಷೆ. ವಜ್ರಗಳಿಂದ ಅಲಂಕೃತವಾದ ಚಿನ್ನದ ಲೇಪವಿರುವ ಬೆಳ್ಳಿಯ ಖಡ್ಗವನ್ನು ಕಾಲ್ನಡಿಗೆಯಲ್ಲೇ ಸಾಗಿ ಟಾ-ರಸನ ಗುರುವಾದ ಈಶಾಸತ್ವಗಳಿಗೆ ತಲುಪಿಸಿ ಬರುವುದು.ಇಂಥ ಪರೀಕ್ಷೆಯನ್ನು ತೆಗೆದುಕೊಂಡಿದ್ದ ಶಿಷ್ಯನೊಬ್ಬ ಮುಂಜಾನೆ ಆಶ್ರಮದಿಂದ ಹೊರಟಮಧ್ಯಾಹ್ನದ ಹೊತ್ತಿಗೆ ದರೋಡೆಕೋರರಂತೆ ಕಾಣಿಸುತ್ತಿದ್ದ ಮೂವರು ಹಿಂಬಾಲಿಸುತ್ತಿರುವುದು ಅವನ ಗಮನಕ್ಕೆ ಬಂತು. ಗುರುಗಳು ಒಮ್ಮೆ ಹೇಳಿದ್ದ `ಅಪರಿಚಿತರು ಅವರು ಯಾರೆಂದು ತಿಳಿಯುವ ತನಕವೂ ಗೆಳೆಯರು~ ಎಂಬುದು ಅವನಿಗೆ ನೆನಪಾಯಿತು. ಮಧ್ಯಾಹ್ನ ಜೊತೆಗೆ ಕುಳಿತು ಊಟ ಮಾಡಿದರು.

 

ಸಂಜೆಯಾಗುತ್ತಾ ಬಂದಾಗ ಇವರು ದರೋಡೆಕೋರರೇ ಇರಬೇಕು ಎಂಬ ಸಂಶಯ ಅವನಿಗೆ ಹೆಚ್ಚಿತು. ಆಗ ಅವನಿಗೆ ಮಹಾಗುರುವೊಬ್ಬರು ಬರೆದ ಗ್ರಂಥವೊಂದರಲ್ಲಿದ್ದ ದೃಷ್ಟಾಂತವೊಂದರಲ್ಲಿ ಪಕ್ಕದ ಮನೆಯಾತನ ಮಗ ಒಳ್ಳೆಯವನಾಗಿದ್ದರೂ ಕಳ್ಳನೆಂದು ಭಾವಿಸಿ ಸಂಶಯಿಸಿ ಬೇಸ್ತು ಬಿದ್ದ ವ್ಯಕ್ತಿಯ ಕಥೆ ನೆನಪಾಯಿತು. ತನ್ನ ಹೊಸ ಗೆಳೆಯರನ್ನು ಅನುಮಾನಿಸದೆ ಅವರೊಂದಿಗೆ ದಾರಿ ಸವೆಸಿದ. ರಾತ್ರಿ ಊಟದ ಹೊತ್ತಾದಾಗ ಈ ಹೊಸ ಗೆಳೆಯರು ಅವನನ್ನು ರೇಗಿಸ ತೊಡಗಿದರು.ಆಗ ಅವನಿಗೆ ಗುರು ಟಾ-ರಸ ಯೋಧನೊಬ್ಬನ ಕತ್ತಿವರೆಸೆಗೆ ಪರ್ಯಾಯವಾಗಿ ಲೇಖನಿಯನ್ನೇ ಬಳಸಿ ಸೊಳ್ಳೆಯನ್ನು ಹತ್ತು ತುಂಡಾಗಿಸಿದ್ದು ನೆನಪಾಯಿತು. ಅಲ್ಲಿ ಸೊಳ್ಳೆಗಳಿಗೇನೂ ಕೊರತೆ ಇರಲಿಲ್ಲ. ಸೊಳ್ಳೆಯೊಂದರ ಮೇಲೆ ದೃಷ್ಟಿ ನೆಟ್ಟು ಲೇಖನಿ ತೆಗೆದ. ಈ ಕಥೆಗಳೇನೂ ಗೊತ್ತಿಲ್ಲದ ದರೋಡೆಕೋರರು ಅವನ ತಲೆ ತೆಗೆದು ಖಡ್ಗವನ್ನು ಕದ್ದೊಯ್ದರು.ಸಾಮಾನ್ಯವಾಗಿ ಬೆಂಗಳೂರಿನ ಬಾರ್‌ಗಳೆಲ್ಲವೂ ಅಧಿಕೃತವಾಗಿ ಮುಚ್ಚಿದ ಮೇಲೆಯೇ ಕಲ್ಯಾಣಪ್ಪನ ಸಂಚಾರ ಆರಂಭವಾಗುವುದು. ಇಂಥದ್ದೊಂದು ಸಂಚಾರದ ಭಾಗವಾಗಿ ವೃಷಭಾವತಿಯ ದಂಡೆಯ ಮೇಲೆ ಕಲ್ಯಾಣಪ್ಪ ನಡೆಯುತ್ತಿದ್ದ. ಆ ಹೊತ್ತಿಗೆ ಚರಂಡಿ ರೂಪೀ ನದಿಯ ಆಚೆ ಬದಿಯಿಂದ ಒಂದು ಧ್ವನಿ ಕೇಳಿಸಿತು... `ಹಲೋ... ಓಲ್ಡ್ ಮ್ಯಾನ್... ಆಚೆ ಬದಿಗೆ ಬರುವುದು ಹೇಗೆ...?~. ಕಲ್ಯಾಣಪ್ಪನ ತಕ್ಷಣ ಉತ್ತರಿಸಿದ `ಮಗೂ... ನೀನು ಆಚೆ ಬದಿಯಲ್ಲಿಯೇ ಇದ್ದೀಯ.~

ಪ್ರತಿಕ್ರಿಯಿಸಿ (+)