ಸಿಟಿ ತುಂಬಾ `ಗ್ರೀಟಿಂಗ್ಸ್'

7

ಸಿಟಿ ತುಂಬಾ `ಗ್ರೀಟಿಂಗ್ಸ್'

Published:
Updated:
ಸಿಟಿ ತುಂಬಾ `ಗ್ರೀಟಿಂಗ್ಸ್'

`ನಮ್ಮಣ್ಣ .... ಅವರಿಗೆ ಜನ್ಮದಿನೋತ್ಸವದ ಶುಭಾಶಯಗಳು'/ `ಮಕರ ಸಂಕ್ರಮಣ, ಪೊಂಗಲ್ ಹಬ್ಬಕ್ಕೆ ನಾಡಿನ ಜನತೆಗೆ ತುಂಬು ಹೃದಯದ ಶುಭಕಾಮನೆಗಳು'/ `ಹೊಸ ವರ್ಷ ಮತ್ತು ಮಕರ ಸಂಕ್ರಾಂತಿಯ ಶುಭಾಶಯಗಳು'....ಇಂತಹ ಹತ್ತಾರು ಬಗೆಯ ಒಕ್ಕಣೆಗಳನ್ನು ಹೊತ್ತ ಬ್ಯಾನರ್, ಕಟೌಟ್, ಪೋಸ್ಟರ್‌ಗಳು ನಿಮ್ಮ ಮನೆಯ ರಸ್ತೆಯಲ್ಲಿ, ಆಚೆಈಚೆಗಿನ ಅಡ್ಡರಸ್ತೆಯಲ್ಲಿ ಎಷ್ಟಿರಬಹುದು? ಒಂದೊಂದು ಜಾಹೀರಾತಿನಲ್ಲೂ ಕನಿಷ್ಠ ಎಷ್ಟು ಮಂದಿ ಇರಬಹುದು? ಲೆಕ್ಕಕ್ಕೂ ಸಿಗುವುದಿಲ್ಲ ಅಲ್ವೇ?

ನಿಜ, ಬೆಂಗಳೂರು ಮಹಾನಗರಪಾಲಿಕೆಯ ಪ್ರತಿಯೊಬ್ಬ (ಆ ಪೋಸ್ಟರ್/ಬ್ಯಾನರ್‌ನಲ್ಲಿರುವವರನ್ನು ಹೊರತುಪಡಿಸಿ) ನಾಗರಿಕರ ಕಷ್ಟವೂ ಇದೇ ಆಗಿದೆ. ಎಣಿಕೆಗೆ ಸಿಗದಷ್ಟು ಕಟೌಟ್, ಬಂಟಿಂಗ್ಸ್, ಬ್ಯಾನರ್, ಪೋಸ್ಟರ್‌ಗಳು ನಗರದ ಪ್ರತಿಯೊಂದು ವಾರ್ಡ್ ವ್ಯಾಪ್ತಿಯಲ್ಲಿ ದಿನೇದಿನೇ ವ್ಯಾಪಕವಾಗಿ ಲೈಟುಕಂಬ, ಟೆಲಿಫೋನ್ ಕಂಬ ಏರುತ್ತಿವೆ.ತಮಾಷೆಯೆಂದರೆ, ಈ ರೀತಿಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ `ಮುಖ'ಗಳು `ಭವಿಷ್ಯದ ನಾಯಕ'ರದ್ದು ಆಗಿರುತ್ತವೆ ಅಥವಾ ಸ್ಥಳೀಯ ನಾಯಕರಾಗಬಯಸುವವರು ಏನಾದರೊಂದು ನೆಪವೊಡ್ಡಿ ಅದೇ ಭಾಗದ ಜನಪ್ರತಿನಿಧಿಗೆ/ನಾಯಕರಿಗೆ ಶುಭ ಕೋರಿ ತಮ್ಮ ಇಷ್ಟಮಿತ್ರರೊಂದಿಗೆ ಜಾಹೀರಾತು ಹಾಕಿಸಿಬಿಟ್ಟರಾಯಿತು. ತಮ್ಮ ನೆಚ್ಚಿನ ಪಕ್ಷದ ರಾಷ್ಟ್ರೀಯ, ರಾಜ್ಯ, ಜಿಲ್ಲೆ, ತಾಲ್ಲೂಕು ಹಾಗೂ ಸ್ಥಳೀಯ ಮಟ್ಟದವರೆಗಿನ ನಾಯಕರ ಭಾವಚಿತ್ರಗಳನ್ನು ಕಿರೀಟಪ್ರಾಯವೆಂಬಂತೆ ಹಾಕಿಸಿ, ಶುಭ ಕೋರಬೇಕಾದವರ ಕಾಲಬುಡದಲ್ಲಿ `ನಿಮ್ಮ ಪಾದದಾಸರು ನಾವು' ಎಂಬಂಥ ಭಂಗಿಯಲ್ಲಿ ತಮ್ಮದೊಂದು ಭಾವಚಿತ್ರವನ್ನೂ ಹಾಕಿಕೊಂಡರೆ ಪುಡಾರಿಯಾದಂತೆಯೇ!

“

ಎಲ್ಲೆಲ್ಲಿ ನೋಡಲಿ ಗ್ರೀಟಿಂಗ್ಸ್ ಕಾಣುವೆ

ಸಿಟಿಯಲ್ಲಿ ತುಂಬಿರುವೆ

ಮನದಲಿ ಚುನಾವಣೆ ತುಂಬಿರುವೆ...”
ಚಿ.ಉದಯಶಂಕರ್ ಅವರ `ನಾ ನಿನ್ನ ಮರೆಯಲಾರೆ' ಚಿತ್ರಕ್ಕಾಗಿ 1976ರಲ್ಲಿ ರಾಜನ್-ನಾಗೇಂದ್ರ ಜೋಡಿ ಬರೆದ ಈ ಗೀತೆಯನ್ನು ಹೀಗೆ ಸ್ವಲ್ಪ ಮಾರ್ಪಾಡು ಮಾಡಿಕೊಂಡರೆ ಈಗಿನ ನಮ್ಮ ಜಾಹೀರಾತುಮಯ ನಗರಕ್ಕೆ ಹೇಳಿಮಾಡಿಸಿದಂತಿರುತ್ತದೆ!

ಚುನಾವಣಾ ಗಿಮಿಕ್ಕು!ಮೊನ್ನೆ ಮಕರ ಸಂಕ್ರಾಂತಿಯಂದು ಉಂಡ ಊಟ ಕರಗುವ ಮೊದಲೇ ಎರಡು ರಾಜಕೀಯ ಪಕ್ಷಗಳು ಬ್ಯಾನರ್ ವಿಚಾರದಲ್ಲಿ ಕಿತ್ತಾಡಿಕೊಂಡದ್ದು ನೆನಪಿರಬಹುದು. ಬೃಹದಾಕಾರದ ಬ್ಯಾನರ್‌ಗಳಲ್ಲಿ ಮಾಜಿ ಮೇಯರ್ ಒಬ್ಬರ ಮುಖವನ್ನಷ್ಟೇ ಅಚ್ಚುಕಟ್ಟಾಗಿ ಕತ್ತರಿಸಿ ಹಾಕಿತ್ತು ಅವರ ವಿರೋಧಿಗಳ ತಂಡ.ಈ ದೂರು ಹಾಲಿ ಪುರದೊಡೆಯ ಡಿ.ವೆಂಕಟೇಶಮೂರ್ತಿ ಅವರ ಬಳಿಗೆ ಹೋಗುವ ಹೊತ್ತಿಗೆ ಈ `ಕೃತ್ಯ'ದ ಹಿಂದಿನ ವಾಸ್ತವ ಬಯಲಾಗಿತ್ತು. `ಮುಖಭಂಗ'ವಾದವರು, `ಚುನಾವಣೆಯಲ್ಲಿ ಸೋಲಿಸುವ ಉದ್ದೇಶದಿಂದ ನಮ್ಮ ವಿರೋಧಿಗಳು ಮಾಡಿರುವ ಪಿತೂರಿಯಿದು' ಎಂದು ಪ್ರತಿಕ್ರಿಯಿಸಿದ್ದರು!ಅಸಲಿ ವಿಚಾರವೇ ಅದು. ನಿಮ್ಮ ಮನೆಯಾಚೆಯಿರುವ ಒಂದು ಕಟೌಟ್/ ಬ್ಯಾನರ್ ಒಮ್ಮೆ ನೋಡಿ. ಅದರ ಯಾವುದೋ ಮೂಲೆಯಲ್ಲಿ ಮತದಾನದ ಚಿಹ್ನೆ, ಪಕ್ಷವೊಂದರ ಚಿಹ್ನೆಯೂ ಇರುತ್ತದೆ. ಅದರ ಪಕ್ಕದಲ್ಲೇ `ಭಾವೀ ಅಭ್ಯರ್ಥಿ'ಯ ಫೋಟೊ!

ಚುನಾವಣೆಯ ವಾಸನೆ ರಾಜಕೀಯ ಪಕ್ಷಗಳ ಮೂಗಿಗೆ ಬಡಿದಿದೆ. ಒಳಸುಳಿಗಳು, ಸಂಚುಗಳು ರೂಪುಗೊಳ್ಳತೊಡಗಿವೆ. ಅದಕ್ಕಾಗಿ ಹಾದಿಬೀದಿಯಲ್ಲಿ ಜಾಹೀರಾತು ಹಾಕಿಸಿಕೊಳ್ಳುವ ಈ ಮಸಲತ್ತುಗಳು... ನಾಡಿನ ಹಬ್ಬ, ವ್ಯಕ್ತಿಯ ಹುಟ್ಟುಹಬ್ಬ ಬಾಬತ್ತು! 

ಕಾನೂನು ಬಾಹಿರ

ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಪ್ರತಿಷ್ಠೆ ಗಳಿಸಿರುವ ನಮ್ಮ ಸಿಲಿಕಾನ್ ಸಿಟಿಯ ಸುಂದರೀಕರಣದ ಬಗ್ಗೆ ಅಪರೂಪಕ್ಕೊಮ್ಮೆ ಪಾಲಿಕೆ ತಲೆಕೆಡಿಸಿಕೊಳ್ಳುವುದುಂಟು. ಒಂದೆರಡು ಬಾರಿ ಕಾರ್ಯಾಚರಣೆ ಕೈಗೊಂಡು ಒಂದಷ್ಟು ದಂಡವನ್ನೂ ವಸೂಲಿ ಮಾಡಿ ಜಾಹೀರಾತುಮುಕ್ತ ನಗರವಾಗಿಸುವ ಪಣತೊಟ್ಟಿರುವುದಾಗಿ ಹೇಳಿಕೊಳ್ಳುತ್ತದೆ.

`ಯಾವುದೇ ಸಂದರ್ಭದಲ್ಲಿ ಯಾವುದೇ ರೂಪದ ಜಾಹೀರಾತು ಹಾಕಲು ಮೊದಲು ಪಾಲಿಕೆಯಿಂದ ಪರವಾನಗಿ ಪಡೆಯಬೇಕು. ಇದು ನಿಯಮ. ಆದರೆ ಇತ್ತೀಚೆಗೆ ಕಟೌಟುಗಳು, ಬಂಟಿಂಗ್ಸ್, ಬ್ಯಾನರ್‌ಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಇವುಗಳು ಪರವಾನಗಿ ಪಡೆದವುಗಳಲ್ಲ. ಪಾಲಿಕೆಯ ಜಂಟಿ ಆಯುಕ್ತರು ಈ ಹಿಂದೆ ಆದೇಶ ಹೊರಡಿಸಿ ಆಯ್ದ 10 ಸ್ಥಳಗಳನ್ನು ಹೊರತುಪಡಿಸಿ ನಗರದ ಯಾವುದೇ ಭಾಗದಲ್ಲಿ ಜಾಹೀರಾತು ಹಾಕಬಹುದು ಎಂದು ಸ್ಪಷ್ಟಪಡಿಸಿದ್ದರು.

ಆದರೆ ಅದಕ್ಕೆ ಪರವಾನಗಿ ಪಡೆಯಬೇಕಾದದ್ದು ಕಡ್ಡಾಯ. ಕಾನೂನುಬಾಹಿರವಾಗಿ ಜಾಹೀರಾತು ಪ್ರಕಟಿಸಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಪ್ರಕರಣ ಜರುಗಿಸಲಾಗುವುದು' ಎನ್ನುತ್ತಾರೆ ಪಾಲಿಕೆಯ ಜಾಹೀರಾತು/ಮಾರುಕಟ್ಟೆ ವಿಭಾಗದ ಸಹಾಯಕ ಆಯುಕ್ತ ಸಂಗಪ್ಪ.`ಕಳೆದ ವರ್ಷ ನಾವು ಪಾಲಿಕೆಯ ಎಂಟೂ ವಲಯದಲ್ಲಿ ದಾಳಿ ನಡೆಸಿದ್ದೆವು. ಈ ಪೈಕಿ ಪೂರ್ವ ವಲಯದಲ್ಲಿ ರೂ11ಸಾವಿರ, ಪಶ್ಚಿಮದಲ್ಲಿ ರೂ 55 ಸಾವಿರ, ದಕ್ಷಿಣ ವಲಯದಲ್ಲಿ ರೂ1,72,538 (ಸಂಗ್ರಹವಾದದ್ದು ರೂ 99,587 ಏಕಕಾಲಕ್ಕೆ ಸಂಗ್ರಹ ಮಾಡಿದ್ದು, ಬೊಮ್ಮನಹಳ್ಳಿ ವಲಯದಲ್ಲಿ ರೂ 82,260 ಹಾಗೂ ದಾಸರಹಳ್ಳಿ ವಲಯದಲ್ಲಿ ರೂ12 ಸಾವಿರ ದಂಡ ಸಂಗ್ರಹಿಸಿತ್ತು. ದಾಳಿ ನಡೆಸುವ ವೇಳೆ ಸಂಬಂಧಪಟ್ಟವರಿಗೆ ನೋಟಿಸ್ ಕಳುಹಿಸುವುದರೊಂದಿಗೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರೂ ದಾಖಲಿಸಲಾಗುತ್ತದೆ' ಎಂದು ಅವರು ವಿವರಿಸುತ್ತಾರೆ. ಆದರೆ, ಸ್ವಲ್ಪ ಕಾಲ ಕಳೆದ ಮೇಲೆ? ಅದೇ ರಾಗ ಅದೇ ಹಾಡು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry