ಭಾನುವಾರ, ಜನವರಿ 19, 2020
28 °C
ಮರಳು ಮಿಶ್ರಿತ ಗೊಬ್ಬರ ಮಾರಾಟ

ಸಿಟ್ಟಿಗೆದ್ದ ರೈತರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ: ಪಟ್ಟಣದ ಎಸ್.ಎಸ್. ರಸ್ತೆಯಲ್ಲಿರುವ ಗೆಜ್ಜಿ ಫರ್ಟಿಲೈಸರ್ಸ್ ಮಳಿಗೆಯಲ್ಲಿ ಮರಳು ಮಿಶ್ರಿತ ಗೊಬ್ಬರ ಮಾರಾಟ ಮಾಡುತ್ತಿರುವುದನ್ನು ಬುಧವಾರ ಪತ್ತೆ ಹಚ್ಚಿದ ರೈತ ಮುಖಂಡರು ಸುಮಾರು 2 ಗಂಟೆ ಮಳಿಗೆಯ ಎದುರು ಪ್ರತಿಭಟನೆ ನಡೆಸಿದರು.

 

ಮಂಗಳವಾರ ಈ ಮಳಿಗೆಯಲ್ಲಿ ಗೊಬ್ಬರ ಖರೀದಿಸಿದ ರೈತರಿಗೆ ಚೀಲ­ದಲ್ಲಿ ಮರಳು ಮಿಶ್ರಣ ಮಾಡಿರುವುದು ಕಂಡು ಬಂದಿದೆ. ಇದನ್ನು ತಕ್ಷಣ ಆ ರೈತರು ಮುಖಂಡರ ಗಮನಕ್ಕೆ ತಂದಿದ್ದಾರೆ. ಕಲಬೆರಕೆ ಗೊಬ್ಬರ ಮಾರಾಟ ಮಾಡುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳುವ ಉದ್ದೇಶದಿಂದ ಪೂರ್ವ­ಯೋಜಿತ ರೀತಿಯಲ್ಲಿ ಬುಧವಾರ ಬೆಳಿಗ್ಗೆ ಮಳಿಗೆಗೆ ಬಂದ ಮುಖಂಡರು ಗೊಬ್ಬರದ ಚೀಲವನ್ನು ಹಣ ನೀಡಿ ಕೊಂಡುಕೊಂಡಿದ್ದಾರೆ.ಅದನ್ನು ಮಳಿಗೆಯ ಮಾಲೀಕರ ಎದುರಿನಲ್ಲಿಯೇ ಬಿಚ್ಚಿ ನೋಡಿದಾಗ ಗೊಬ್ಬರದ ಜೊತೆ ಮರಳು ಮಿಶ್ರಣ ಮಾಡಿರುವುದು ಕಂಡು ಬಂದಿದೆ. ಈ ವೇಳೆ ನಡೆದ ಮಾತಿನ ಚಕಮಕಿಯಲ್ಲಿ ಮಳಿಗೆಯ ಮಾಲೀಕರು ಮೊಂಡು­ವಾದ ಮಾಡುವ ಮೂಲಕ ರೈತ ಮುಖಂಡರನ್ನು ಸಾಗಹಾಕಲು ನೋಡಿದ್ದಾರೆ. ಆದರೆ ಇದಕ್ಕೆ ಜಗ್ಗದ ಮುಖಂಡರು ತಕ್ಷಣ ಈ ವಿಷಯವನ್ನು ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕೃಷಿ ಅಧಿಕಾರಿ ಸನ್ನಿವೇಶದ ಸೂಕ್ಷ್ಮತೆಯನ್ನು ಗಮನಿಸಿ ದೂರವೇ ಉಳಿದಿದ್ದಾರೆ. ನಂತರ ಮುಖಂಡರು ಈ ವಿಷಯವನ್ನು ತಹಶೀಲ್ದಾರ್‌ರ ಗಮನಕ್ಕೆ ತರಲಾಗಿ ಸ್ಥಳಕ್ಕೆ ಭೇಟಿ ನೀಡಿದ ಅಪರ್ಣಾ ಪಾವಟೆ ಗುರುವಾರದ ಹೊತ್ತಿಗೆ ಗೊಬ್ಬರದ ಕಂಪೆನಿಯ ಡೀಲರ್ ಜೊತೆ ಮಾತನಾಡಿ ರೈತರಿಗಾದ ಅನ್ಯಾಯ­ವನ್ನು ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದರು.ಮಳಿಗೆಯಲ್ಲಿ ದಾಸ್ತಾನು ಮಾಡಲಾ­ಗಿದ್ದ ಅದೇ ಕಂಪೆನಿಯ ಇತರ ಚೀಲ­ಗಳನ್ನು ಪರೀಕ್ಷಿಸಿದಾಗ ಅದರಲ್ಲಿಯೂ ಮರಳನ್ನು ಮಿಶ್ರಣ ಮಾಡಿರುವುದು ಕಂಡು ಬಂದಿತು. ನಂತರ ವಂಚನೆ ಮಾಡಿರುವ ಕುರಿತು ಪೊಲೀಸರಿಗೆ ದೂರು ಸಲ್ಲಿಸುವುದಾಗಿ ಮುಖಂಡರು ತಿಳಿಸಿದರು.

ಪ್ರತಿಕ್ರಿಯಿಸಿ (+)