ಸಿಡಿಲಿಗೆ ಮನೆ ಛಿದ್ರ: 7 ಜನರಿಗೆ ಗಾಯ

7

ಸಿಡಿಲಿಗೆ ಮನೆ ಛಿದ್ರ: 7 ಜನರಿಗೆ ಗಾಯ

Published:
Updated:

ತಿಪಟೂರು: ನೊಣವಿನಕೆರೆ ಹೋಬಳಿ ಕಸವನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಪ್ರಬಲ ಸಿಡಿಲು ಬಡಿದು ಮನೆಯೊಂದು ಛಿದ್ರವಾಗಿ ಏಳು ಜನ ಗಾಯಗೊಂಡಿದ್ದಾರೆ.ಕೃಷ್ಣಾಚಾರ್ ಎಂಬುವರ ಮನೆ ಸಿಡಿಲಿಗೆ ಆಹುತಿಯಾಗಿದೆ. ಇವರ ಮಗ ಉಮೇಶ್, ಮಗಳು ಶೋಭಾ, ಅಳಿಯಂದಿರಾದ ಕುಮಾರ್, ರಮೇಶ್ ಹಾಗೂ ಮೊಮ್ಮಗಳು ಪೂಜಾ ತೀವ್ರ ಗಾಯಗೊಂಡಿದ್ದಾರೆ. ಇವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃಷ್ಣಾಚಾರ್ ಮತ್ತು ಪತ್ನಿ ಸರ್ವಮಂಗಳಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ರಾತ್ರಿ 9ರ ಸುಮಾರಿನಲ್ಲಿ ಮನೆಯವರೆಲ್ಲ ಊಟಕ್ಕೆ ಕುಳಿತಿದ್ದರು. ಸಣ್ಣಗೆ ಸೋನೆ ಸುರಿಯುತ್ತಿದ್ದ ಸಂದರ್ಭದಲ್ಲಿ ಭಾರಿ ಶಬ್ಧದೊಂದಿಗೆ ಸಿಡಿಲು ಅಪ್ಪಳಿಸಿತು. ಹೆಂಚುಗಳೆಲ್ಲ ಪುಡಿಯಾಗಿ ಸೂರಿಗೆ ಧಕ್ಕೆಯಾಯಿತು. ಮನೆ ಕಂಪಿಸಿದ್ದರಿಂದ ಒಳಗಿದ್ದ ಸಾಮಗ್ರಿಗಳೆಲ್ಲ ಚೆಲ್ಲಾಪಿಲ್ಲಿಯಾದವು.ಚಾಲನೆಯಲ್ಲಿದ್ದ ಟಿವಿ ಸ್ಫೋಟಿಸಿತು. ವಾಡೆ ಒಡೆದು ದವಸ ಧಾನ್ಯ ಚೆಲ್ಲಾಡಿದವು. ಸಿಡಿಲಿನ ಶಾಕ್ ತಗುಲಿ ಊಟಕ್ಕೆ ಕುಳಿತಿದ್ದವರೆಲ್ಲ ಅಸ್ವಸ್ಥಗೊಂಡರು. ತಕ್ಷಣ ಗ್ರಾಮಸ್ಥರು ನೆರವಾಗಿ ಆಸ್ಪತ್ರೆಗೆ ಕರೆದೊಯ್ದರು ಎಂದು ಕೃಷ್ಣಾಚಾರ್ ವಿವರಿಸಿದರು.ಭಾರಿ ನಷ್ಟ: ಎರಡು ವರ್ಷದ ಹಿಂದಷ್ಟೇ ಕಟ್ಟಿದ್ದ ಆ ಮನೆಗೆ ಬಡಿದ ಸಿಡಿಲು ಊಹಿಸಲಾಗದಷ್ಟು ನಷ್ಟ ಮಾಡಿದೆ. ಸೂರು ಹಾಳಾಗಿ ತೊಲೆಗಳು ಸಹ ಅದುರಿವೆ. ಕೆಲವೆಡೆ ಗೋಡೆ ಬಿರುಕು ಬಿಟ್ಟಿದೆ. ಸಿಡಿಲು ಬಡಿದಾಗ ಅದೃಷ್ಟವಶಾತ್ ಬೆಂಕಿ ಹಚ್ಚಿಕೊಳ್ಳದ್ದರಿಂದ ಪ್ರಾಣಪಾಯ ತಪ್ಪಿದೆ.ಕುಟುಂಬದವರು ಊಟಕ್ಕೆ ಕುಳಿತಿದ್ದ ನಡುಮನೆಯ ಅಟ್ಟಕ್ಕೆ ಹಲಗೆಗಳಿದ್ದರಿಂದ ಅವರಿಗೆ ಒಂದಷ್ಟು ರಕ್ಷಣೆ ಸಿಕ್ಕಿದೆ. ಮನೆ ಸಾಮಗ್ರಿ ಮತ್ತು ಇನ್ನೂ ಊಟವಿದ್ದ ತಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದ ದೃಶ್ಯ ಮನ ಕಲಕುವಂತಿತ್ತು. ಮನೆ ಹಿಂದಿದ್ದ ಎರಡು ಫಲಭರಿತ ತೆಂಗಿನ ಮರಗಳು ಸಹ ಸಿಡಿಲಿನ ರಾವಿಗೆ ಬಲಿಯಾಗಿವೆ.ಕುಲುಮೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆ ಬಡ ಕುಟುಂಬಕ್ಕೆ ಕನಿಷ್ಠ 2 ಲಕ್ಷ ರೂಪಾಯಿ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ವಿವರ ಪಡೆದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry