ಬುಧವಾರ, ನವೆಂಬರ್ 13, 2019
17 °C

ಸಿಡಿಲಿನ ಹೊಡೆತಕ್ಕೆ ಮೂರು ಬಲಿ

Published:
Updated:

ಶಹಾಪುರ: ತಾಲ್ಲೂಕಿನಲ್ಲಿ ಬುಧವಾರ ಸಂಜೆ ಅಕಾಲಿಕ ಮಳೆಯಿಂದ ಗಾಳಿ ಮತ್ತು ಸಿಡಿಲಿನ ಹೊಡೆತಕ್ಕೆ ಮೂವರು ಬಲಿಯಾಗಿದ್ದು 16ಕ್ಕೂ ಹೆಚ್ಚು ಕುರಿಗಳು ಅಸುನೀಗಿವೆ.ಅಕಾಲಿಕ ಸಿಡಿಲಿನಿಂದ ಮೂವರ ಸಾವಿನ ಸುದ್ದಿ ತಿಳಿದು ಜನತೆ ಬೆಚ್ಚಿ ಬಿದ್ದಿದ್ದಾರೆ.ಅದರಲ್ಲಿ ಹೆಚ್ಚು ನೋವು ತಂದ ಘಟನೆಯೆಂದರೆ ಚಾಮನಾಳ ತಾಂಡಾ ಹಣಮಂತರಾಯ ಮಲ್ಲಪ್ಪ (12) ಬಾಲಕ ರಸ್ತೆಯ ಮೇಲೆ ನಡೆದುಕೊಂಡು ಮನೆ ಸೇರುತ್ತಿದ್ದಾಗ ಬರ ಸಿಡಿಲು ಅಪ್ಪಳಿಸಿತ್ತು. ಮೃತ ಬಾಲಕ ಈಚೆಗೆ ಆರನೇಯ ತರಗತಿ ಪಾಸ್ ಆಗಿ  7ತರಗತಿಗೆ ಸೇರ್ಪಡೆಯ ಖುಷಿಯಲ್ಲಿದ್ದಾಗ ವಿಧಿ ಆಟವೇ ಬೇರೆಯಾಗಿತ್ತು.ತಾಲ್ಲೂಕಿನ ಸಿಂಗನಹಳ್ಳಿ ಗ್ರಾಮದ ಮಲ್ಲರಡ್ಡೆಪ್ಪ ಬಸಪ್ಪ(53) ಹೊಲದಿಂದ ಮರಳಿ ಮನೆ ಬರುತ್ತಿದ್ದಾಗ ಸಿಡಿಲಿನ ರೂಪದಲ್ಲಿ ಸಾವು ಸೆಳೆದುಕೊಂಡಿದೆ.

ಸುರಪುರ ತಾಲ್ಲೂಕಿನ ಮಂಗಳೂರ ಗ್ರಾಮದ ನಿಂಗಪ್ಪ  ಕುರಿಗಳಿಗೆ ಆಹಾರವನ್ನು ಅರಸುತ್ತಾ ಕೆಲ ದಿನಗಳ ಹಿಂದೆ ರಸ್ತಾಪೂರ ಗ್ರಾಮದ ಹತ್ತಿರ ಹೊಲವೊಂದರಲ್ಲಿ ಗೂಡಾರ ಹೂಡಿದ್ದ. ಬುಧವಾರ ಅಕಾಲಿಕವಾಗಿ ತುಸು ಮಳೆ ಕಾಣಿಸಿಕೊಂಡು ನಂತರ ಗಾಳಿ ಅಬ್ಬರ ಶುರುವಾಗಿ ಗುಡುಗು ಸಿಡಿಲಿನ ಸಪ್ಪಳ ಹೆಚ್ಚಾಗ ತೊಡಗಿತು. ತನ್ನ ಬದುಕಿನ ಸರ್ವಸ್ವಯಾಗಿದ್ದ ಕುರಿಗಳ ಜೊತೆಯಲ್ಲಿ ಉಳಿದುಕೊಂಡಿದ್ದಾಗ ಅಕಾಲಿಕವಾಗಿ ಬಂದೆರಗಿದ ಸಿಡಿಲಿನಿಂದ ಕ್ಷಣಾರ್ಧದಲ್ಲಿ ಮೃತಪಟ್ಟ ಎನ್ನಲಾಗುತ್ತದೆ.ಅದರಂತೆ ತಾಲ್ಲೂಕಿನ ವಿರುಪಾಪೂರ ಗ್ರಾಮದ ಭೀಮಣ್ಣನಿಗೆ ಸೇರಿದ್ದ  ಕುರಿಗಳು ಬುಧವಾರ ರಾತ್ರಿ ಮದ್ರಿಕಿ ಗ್ರಾಮದ ಹೊಲವೊಂದರಲ್ಲಿ ಕೂಡಿ ಹಾಕಿದ್ದಾಗ ಅಕಾಲಿಕ ಸಿಡಿಲಿನ ಸೆಳೆತಕ್ಕೆ 16 ಕುರಿಗಳು ಮೃತಪಟ್ಟಿದ್ದು ಅಂದಾಜು ಮೌಲ್ಯ 60,000ರೂ.ಆಗಿದೆ. ತಕ್ಷಣ ಪರಿಹಾರ ನೀಡಬೇಕೆಂದು ಗ್ರಾಮದ ಮುಖಂಡ ಸಾಯಿಬಣ್ಣ ಪುರ‌್ಲೆ ಆಗ್ರಹಿಸಿದ್ದಾರೆ.ಸುದ್ದಿ ತಿಳಿದ ತಕ್ಷಣವೇ ಆಯಾ ಕೇಂದ್ರ ಸ್ಥಳಕ್ಕೆ ತಾಲ್ಲೂಕು ದಂಡಾಧಿಕಾರಿ ಶಿವಶರಣಪ್ಪ ಕಟ್ಟೊಳೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಕಾಲಿಕವಾಗಿ ಜೀವ ಕಳೆದುಕೊಂಡ ಕುಟುಂಬಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಧನ ವಿತರಿಸುವಂತೆ ಸಹಾಯಕ ಆಯಕ್ತರ ಮೂಲಕ ವರದಿ ಸಲ್ಲಿಸಲಾಗುತ್ತದೆ. ಈ ಘಟನೆಯಿಂದ ನಮಗೂ ತುಂಬಾ ಬೇಸರವಾಗಿದೆ ಎಂದು ಕಟ್ಟೊಳೆ ತಿಳಿಸಿದ್ದಾರೆ.ಸರ್ಕಾರ ಮೃತ ಕುಟುಂಬಗಳಿಗೆ ತಕ್ಷಣವೇ ಪರಿಹಾರ ನೀಡಬೇಕು. ಅಕಾಲಿಕವಾಗಿ ಕುರಿಗಳನ್ನು ಕಳೆದುಕೊಂಡ ಭೀಮಣ್ಣನಿಗೆ ಬ್ಯಾಂಕಿನಿಂದ ಕುರಿ ಖರೀದಿಸಲು ಸಾಲಸೌಲಭ್ಯ ನೀಡಬೇಕೆಂದು ಸಾಯಿಬಣ್ಣ ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)