ಮಂಗಳವಾರ, ನವೆಂಬರ್ 19, 2019
26 °C

ಸಿ.ಡಿ. `ರಾಜ'ಮಾರ್ಗ

Published:
Updated:

`ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು', `ಆಡಿಸಿ ನೋಡು ಬೀಳಿಸಿ ನೋಡು', `ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ', `ಗಂಗಾ ಯಮುನಾ ಸಂಗಮ'... ಈ ಸುಮಧುರ ಹಾಡುಗಳು ಯಾರಿಗೆ ತಾನೇ ನೆನಪಿಲ್ಲ. ವರನಟ ಡಾ. ರಾಜ್ ಕುಮಾರ್ ಅಭಿನಯದ ಚಿತ್ರಗಳ ಗೀತೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ರಾಜ್ ಅಷ್ಟೇ ಅಲ್ಲ, ಅವರ ಸಿನಿಮಾ ಹಾಗೂ ಹಾಡುಗಳ ಸಿ.ಡಿ.ಗಳಿಗೆ ಇಂದಿಗೂ ಬೇಡಿಕೆ ಹೆಚ್ಚುತ್ತಲೇ ಇದೆ. ಮಾರುಕಟ್ಟೆಯಲ್ಲಿ ಇತ್ತೀಚೆಗೆ ತೆರೆಕಂಡ ಚಿತ್ರಗಳ ಸಿ.ಡಿ.ಗಳಷ್ಟೇ ಬೇಡಿಕೆ `ಅಣ್ಣವ್ರ' ಚಿತ್ರಗಳಿಗೂ ಇರುವುದೇ ಇದಕ್ಕೆ ಸಾಕ್ಷಿ.ಐದು ದಶಕಗಳ ಕಾಲ ಕನ್ನಡ ಚಿತ್ರರಂಗದ ಬದುಕಿನಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿ, ಕನ್ನಡ ಚಿತ್ರರಂಗದ ಧ್ರುವತಾರೆಯಾಗಿ ಮೆರೆದ ರಾಜ್ ಕುಮಾರ್ ನಮ್ಮನ್ನಗಲಿ ಏಳು ವರ್ಷಗಳಾಗಿವೆ. ಅವರ ನಂತರ ಇದುವರೆಗೆ ಬಂದ ನಟರ ನೂರಾರು ಚಿತ್ರಗಳು ತೆರೆಕಂಡಿವೆ. ಆದರೆ ಬೆಂಗಳೂರಿನಲ್ಲಿ ನಿನ್ನೆ, ಮೊನ್ನೆ ತೆರೆಕಂಡ ಚಿತ್ರಗಳ, ಹಾಡುಗಳ ಸಿ.ಡಿ.ಗಳಿಗೆ ಇರುವ ಬೇಡಿಕೆ ರಾಜ್ ಸಿನಿಮಾಗಳಿಗೂ ಇರುವುದು ಗಮನಾರ್ಹ. 1971ರಲ್ಲಿ ಬಿಡುಗಡೆಯಾದ `ಕಸ್ತೂರಿ ನಿವಾಸ', `ಸಾಕ್ಷಾತ್ಕಾರ', 1983ರಲ್ಲಿ ಬಂದ `ಕವಿರತ್ನ ಕಾಳಿದಾಸ', 1988ರಲ್ಲಿ ತೆರೆಕಂಡ `ದೇವತಾ ಮನುಷ್ಯ' (200ನೇ ಚಿತ್ರ) ಚಿತ್ರಗಳ ಸಿ.ಡಿ.ಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಪಡೆದ ಹಾಗೂ ವ್ಯಾಪಾರಿಗಳಿಗೆ ಲಾಭ ತಂದುಕೊಟ್ಟ ಚಿತ್ರಗಳಾಗಿವೆ. ಇಂದಿಗೂ ಈ ಚಿತ್ರಗಳಿಗೆ ಎಲ್ಲಿಲ್ಲದ ಬೇಡಿಕೆ.ಹಾಲಿಗೆ ಸಕ್ಕರೆ ಹಾಕಿದರೆ ಎಷ್ಟು ರುಚಿಯೋ ಹಾಗೆ ರಾಜ್‌ಕುಮಾರ್ ಸಿನಿಮಾಗಳಿಗೆ ಪಿ.ಬಿ. ಶ್ರೀನಿವಾಸ್ ಹಾಡಿದರೆ ಕೇಳಲು ಇಂಪು. ಆ ಸಿನಿಮಾ ಹಾಡುಗಳು ಸೂಪರ್ ಹಿಟ್ ಆಗುತ್ತಿದ್ದವು. ಈ ಅಪೂರ್ವ ಜೋಡಿಯ ಹಿನ್ನೆಲೆ ಗಾಯನದ ಚಿತ್ರಗಳು ಇಂದಿನ ಯುವಕರಿಗೂ ಅಚ್ಚುಮೆಚ್ಚು. ಟೆಂಪ್ಟೇಷನ್ `ಎಂ' ಮಳಿಗೆಯೊಂದರಲ್ಲೇ ರಾಜ್ ಹಾಡಿದ ಗೀತೆಗಳ ಸಿ.ಡಿ.ಗಳು ದಿನಕ್ಕೆ ಸರಾಸರಿ ನೂರರಷ್ಟು (ಭಕ್ತಿಗೀತೆ, ಭಾವಗೀತೆ, ಹಾಡು, ಸಿನಿಮಾ) ಮಾರಾಟವಾಗುತ್ತಿರುವುದು ಇದನ್ನು ಪುಷ್ಟೀಕರಿಸುತ್ತದೆ.“ರಾಜ್‌ಕುಮಾರ್ ಅವರ ಸಿ.ಡಿ.ಗಳು ಎವರ್‌ಗ್ರೀನ್. ಮಾರುಕಟ್ಟೆಯಲ್ಲಿ ಇಂದಿಗೂ ಬೇಡಿಕೆ ಹೆಚ್ಚಿದೆ. ಮಕರ ಸಂಕ್ರಾಂತಿ ಸಂದರ್ಭದಲ್ಲಂತೂ ಅವರ ಹಿನ್ನೆಲೆ ಗಾಯನದ `ನೀಲಿಮಲೆಯ ಜೀವದ ಒಡೆಯ' (ಸಾಹಿತ್ಯ: ಹಂಸಲೇಖ) ಅಯ್ಯಪ್ಪ ಸ್ವಾಮಿ ಗೀತೆಯ ಸಿ.ಡಿ.ಗಳಿಗೆ ಬೇಡಿಕೆ ಹೆಚ್ಚಾಗಿದ್ದು, 5ರಿಂದ 10 ಸಾವಿರ ಸಿ.ಡಿ.ಗಳು ಖರ್ಚಾಗುತ್ತವೆ. 1970ರ ಕಾಲ ಸುವರ್ಣ ಕಾಲ. ಉತ್ತಮ ಸಾಹಿತ್ಯದ ಮಾಧುರ್ಯಭರಿತ ಗೀತೆಗಳು ಜನರಿಗೆ ಹತ್ತಿರವಾಗುತ್ತಿದ್ದವು. ಆದರೆ ಇವತ್ತಿನ ಸಿನಿಮಾಗಳ ಬಹುತೇಕ ಹಾಡುಗಳಲ್ಲಿ ಉತ್ತಮ ಸಾಹಿತ್ಯವಿಲ್ಲ, ಜೊಳ್ಳಾಗಿವೆ. ಜನರ ಅಭಿರುಚಿಯೂ ಬದಲಾಗುತ್ತಿದೆ. ರಾಜ್ ಚಿತ್ರಗಳ ಗೀತೆಗಳಿಗೆ ಸ್ವರ ಸಂಯೋಜನೆಯೂ ಅದ್ಭುತವಾಗಿತ್ತು. `ದೇವತಾ ಮನುಷ್ಯ' ಚಿತ್ರದ 6 ಲಕ್ಷ ಕ್ಯಾಸೆಟ್‌ಗಳು ವ್ಯಾಪಾರವಾಗಿರುವುದೇ ಅಂದಿನ ಸಂಗೀತದ ಗುಣಮಟ್ಟ ಹಾಗೂ ರಾಜ್ ಅವರ ಚಿತ್ರಕ್ಕಿರುವ ಬೇಡಿಕೆಗೆ ಕೈಗನ್ನಡಿ” ಎಂದು ಮಾಹಿತಿ ನೀಡುತ್ತಾರೆ ಲಹರಿ ರೆಕಾರ್ಡಿಂಗ್ ಕಂಪೆನಿಯ ವೇಲು (ತುಳಸೀದಾಸ ನಾಯ್ಡು).“ನಮ್ಮಲ್ಲಿ ರಾಜ್‌ಕುಮಾರ್ ಅವರಿಗಾಗಿ ಒಂದು ರ‍್ಯಾಂಕ್ ಮೀಸಲಿಟ್ಟಿದ್ದೇವೆ. ಅವರ ಭಕ್ತಿಗೀತೆ, ಸಿನಿಮಾ ಹಾಗೂ ಹಾಡುಗಳ ಸಿ.ಡಿ.ಗಳು ಒಂದು ದಿನಕ್ಕೆ ಸುಮಾರು ನೂರಕ್ಕೂ ಹೆಚ್ಚು ವ್ಯಾಪಾರವಾಗುತ್ತವೆ. ರಾಜ್ ಅಭಿನಯದ 180ಕ್ಕೂ ಹೆಚ್ಚಿನ ಚಿತ್ರಗಳ ಸಿ.ಡಿ./ಡಿವಿಡಿಗಳ ಸಂಗ್ರಹವಿದೆ. `ಬಬ್ರುವಾಹನ', `ಬಂಗಾರದ ಮನುಷ್ಯ', `ಶ್ರೀನಿವಾಸ ಕಲ್ಯಾಣ', `ಭಕ್ತ ಪ್ರಹ್ಲಾದ', `ಸತ್ಯ ಹರಿಶ್ಚಂದ್ರ', `ಕಸ್ತೂರಿ ನಿವಾಸ', `ಸಾಕ್ಷಾತ್ಕಾರ'... ಹೀಗೆ ಅತೀ ಹೆಚ್ಚು ಬೇಡಿಕೆ ಇರುವ ಚಿತ್ರಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.ಗಣೇಶ್, ಆನಂದ್, ನಾಕೋಡ ಕಂಪೆನಿಯ ರೂ 69, ರೂ 99, ರೂ 126 ಬೆಲೆಯ ಸಿ.ಡಿ./ಡಿವಿಡಿಗಳು ಹೆಚ್ಚು ವ್ಯಾಪಾರವಾಗುತ್ತಿವೆ. ಜೊತೆಗೆ ಆನಂದ್ ಕಂಪೆನಿಯ `ಬೆಸ್ಟ್ ಆಫ್ ರಾಜ್ ಕುಮಾರ್' ಎಂಬ ಐವತ್ತು ಹಾಡುಗಳಿರುವ ಸಿ.ಡಿ.ಗಳು ಹಾಗೂ ಭಕ್ತಿ ಗೀತೆಗಳ ಸಂಗ್ರಹಗಳು ಬಂದಿವೆ. ಈ ಸಂಗ್ರಹಗಳು ವಾರಕ್ಕೆ 50ರಿಂದ 60 ಬಿಕರಿಯಾಗುತ್ತವೆ. ಪಿ.ಬಿ.ಶ್ರೀನಿವಾಸ್ ಅವರ ನಿಧನದ ನಂತರ ರಾಜ್ ಹಾಗೂ ಪಿಬಿಎಸ್ ಗಾಯನದ ಸಿ.ಡಿ.ಗಳು ಹೆಚ್ಚಾಗಿ ವ್ಯಾಪಾರವಾಗುತ್ತಿವೆ. ಹೊಸ ಸಿನಿಮಾಗಳಿಗೆ ಆರ್ಡರ್ ಕೊಡುವಂತೆ ವರನಟ ರಾಜ್ ಅವರ ಸಿ.ಡಿ.ಗಳಿಗೂ ಆರ್ಡರ್ ಕೊಡುತ್ತೇವೆ” ಎಂದು ರಾಜ್ ಸಿ.ಡಿ.ಗಳ ವ್ಯಾಪಾರದ ಬಗ್ಗೆ ಮಾತು ಹಂಚಿಕೊಂಡರು ಮಲ್ಲೇಶ್ವರದಲ್ಲಿರುವ ಟೆಂಪ್ಟೇಷನ್ `ಎಂ' ಮಳಿಗೆಯ ವ್ಯವಸ್ಥಾಪಕ ಶ್ರೀಕಾಂತ್.`ರಸ್ತೆ ಬದಿಗಳಲ್ಲಿ ನಕಲಿ ಸಿ.ಡಿ.ಗಳು ಬಂದ ನಂತರ ಮಳಿಗೆಗಳಿಗೆ ಅದರಲ್ಲೂ ಕಂಪೆನಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಕಳೆದ ಐದು ವರ್ಷಗಳ ಹಿಂದೆ ದಿನಕ್ಕೆ ರಾಜ್ ಅವರ ಹಾಡು, ಸಿನಿಮಾಗಳ 300 ಸಿ.ಡಿ.ಗಳು ವ್ಯಾಪಾರವಾಗುತ್ತಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವೆಬ್‌ಸೈಟ್‌ಗಳಲ್ಲಿ ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವವರು ಹೆಚ್ಚಾಗುತ್ತಿದ್ದಾರೆ. ನಮ್ಮಲ್ಲಿ ಆಡಿಯೊ ಟ್ರ್ಯಾಕ್‌ಗಳನ್ನಷ್ಟೇ ಮಾರುತ್ತೇವೆ. ಅದರಲ್ಲೂ `ಲೆಜೆಂಡ್ ಮೈಲ್‌ಸ್ಟೋನ್ಸ್' ಸಂಗ್ರಹಗಳನ್ನಷ್ಟೇ ಇಟ್ಟಿದ್ದೇವೆ. ಸಿ.ಡಿ., ಡಿವಿಡಿ ನಂತರ ಈಗ ಬ್ಲ್ಯೂರೇ ತಂತ್ರಜ್ಞಾನ ಬಂದಿದೆ. ಹಿಂದಿ, ಇಂಗ್ಲಿಷ್ ಚಿತ್ರಗಳಲ್ಲಷ್ಟೇ ಬ್ಲೂ ರೇ ಲಭ್ಯವಿದ್ದು, ಕನ್ನಡ ಚಿತ್ರಗಳಿಗೆ ಇನ್ನು ಬಂದಿಲ್ಲ' ಎಂದು ತಂತ್ರಜ್ಞಾನ ಬದಲಾದ ಬಗ್ಗೆ ಹೇಳಿದರು ಬ್ರಿಗೇಡ್ ರಸ್ತೆಯಲ್ಲಿರುವ ಪ್ಲಾನೆಟ್ `ಎಂ' ರೀಟೇಲ್ ಮಳಿಗೆಯ ವ್ಯವಸ್ಥಾಪಕ ವಿವೇಕ್.“ರಾಜ್‌ಕುಮಾರ್ ಸಿನಿಮಾ ಅಂದ್ರೆ ಇಂದಿಗೂ ನೋಡುತ್ತೇನೆ. `ಸತ್ಯ ಹರಿಶ್ಚಂದ್ರ', `ಕಸ್ತೂರಿ ನಿವಾಸ', `ಹುಲಿಯ ಹಾಲಿನ ಮೇವು' ಚಿತ್ರಗಳು ನನಗೆ ಅಚ್ಚುಮೆಚ್ಚು. ಅಣ್ಣವ್ರ ಸಿನಿಮಾಗಳ ಕಂಪೆನಿ ಸಿ.ಡಿ.ಗಳನ್ನು ಕೊಂಡುಕೊಳ್ಳುತ್ತೇನೆ. ಅವರ ಅನೇಕ ಸಿನಿಮಾಗಳ ಸಂಗ್ರಹ ನಮ್ಮ ಮನೆಯಲ್ಲಿದೆ' ಎಂದು ಖುಷಿಯಿಂದ ಹೇಳಿಕೊಂಡರು ಗೊರಗುಂಟೆಪಾಳ್ಯದ ಜಾವೆದ್.`ರಾಜ್ ಅವರ ಕಪ್ಪು-ಬಿಳುಪು ಚಿತ್ರಗಳಿಗೆ ಇಂದಿಗೂ ಬೇಡಿಕೆ ಇದೆ. ಆದರೆ ಆಡಿಯೊ ಸಿ.ಡಿ.ಗಳ ವ್ಯಾಪಾರ ಕಡಿಮೆಯಾಗಿದೆ. ವೆಬ್‌ಸೈಟ್‌ಗಳಲ್ಲಿ ಹಾಡುಗಳು ಸಿಗತೊಡಗಿದ ಮೇಲೆ ಹಾಗೂ ನಕಲಿ ಸಿ.ಡಿ.ಗಳು ಬಿಕರಿಯಾಗಲು ಶುರುವಾದಾಗಿನಿಂದ ಎಂಪಿ3 ಸಿ.ಡಿ.ಗಳ ವ್ಯಾಪಾರ ಗಣನೀಯವಾಗಿ ಕಡಿಮೆಯಾಯಿತು. ಆದರೂ ದಿನಕ್ಕೆ 4ರಿಂದ 5 ರಾಜ್ ಅವರ ಸಿ.ಡಿ.ಗಳು ವ್ಯಾಪಾರ ಆಗುತ್ತವೆ' ಎಂದು ಬೇಸರ ವ್ಯಕ್ತಪಡಿಸುತ್ತಾರೆ 32 ವರ್ಷಗಳಿಂದ ಮಲ್ಲೇಶ್ವರದಲ್ಲಿ ವ್ಯಾಪಾರ ಮಾಡುತ್ತಿರುವ ಸಾಯಿಬಾಬಾ ಕ್ಯಾಸೆಟ್ ಸೆಂಟರ್‌ನ ರಾಜೇಶ್.ರಾಜ್ ಹುಟ್ಟುಹಬ್ಬದ ಸಂದರ್ಭದಲ್ಲಂತೂ (ಏ.24) ಅವರ ಸಿನಿಮಾ ಹಾಡುಗಳ ಸಿ.ಡಿ., ಡಿವಿಡಿಗಳಿಗೂ ಬೇಡಿಕೆ ಹೆಚ್ಚು. ಕ್ಯಾಸೆಟ್ ಕಾಲದಲ್ಲಾದರೆ ಒಂದು ಚಿತ್ರದ ಗೀತೆಗಳನ್ನಷ್ಟೇ ಕೇಳಬಹುದಿತ್ತು. ಆದರೆ ಇಂದು ತಂತ್ರಜ್ಞಾನ ಬದಲಾವಣೆಯಿಂದಾಗಿ ಸಿ.ಡಿ., ಡಿವಿಡಿಗಳು ಮಾರುಕಟ್ಟೆ ಪ್ರವೇಶ ಪಡೆದಿವೆ. ಒಂದು ಸಿ.ಡಿ. ಅಥವಾ ಡಿವಿಡಿಯಲ್ಲಿ 150ಕ್ಕೂ ಹೆಚ್ಚಿನ ಹಾಡುಗಳನ್ನು ಕೇಳಬಹುದು. ಯಶಸ್ವಿ ಚಿತ್ರಗಳ ಒಂದೊಂದು ಹಿಟ್ ಹಾಡುಗಳನ್ನು ಒಂದು ಸಿ.ಡಿ.ಯಲ್ಲಿ ಕೇಳುವಂತಾಗಿದೆ.ಅಂತರ್ಜಾಲದ ಬಳಕೆ ಹೆಚ್ಚಾದಂತೆ ತಮಗೆ ಬೇಕಾದ ಚಿತ್ರಗಳ ಹಾಡುಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯವೂ ಇರುವುದರಿಂದ ರಾಜ್ ಅವರ ಗೀತೆಗಳನ್ನು ವೆಬ್‌ಸೈಟ್‌ಗಳಲ್ಲೇ ಡೌನ್‌ಲೋಡ್ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಕೆಲ ವ್ಯಾಪಾರಿಗಳಿಗೆ, ಆಡಿಯೊ ಕಂಪೆನಿಗಳಿಗೂ ಹೊಡೆತ ಬಿದ್ದಿದೆ. ಇನ್ನು ಮೊಬೈಲ್‌ಗಳು ಬಂದ ನಂತರ ಮೆಮೊರಿ ಕಾರ್ಡ್‌ಗಳಿಗೆ ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು, ಸ್ನೇಹಿತರ ಮೊಬೈಲ್‌ನಿಂದ ಮೊಬೈಲ್‌ಗಳಿಗೆ ಬ್ಲೂಟೂತ್‌ನಿಂದ ಹಾಡುಗಳನ್ನು ವರ್ಗಾಯಿಸಿಕೊಳ್ಳುವ ಮೂಲಕ (ಖರ್ಚಿಲ್ಲದೇ) ಸಂಗೀತ ಆಲಿಸುವವರು ಹೆಚ್ಚಾಗುತ್ತಿದ್ದಾರೆ. ಇದು ಸಿ.ಡಿ. ವ್ಯಾಪಾರದ ಮೇಲೂ ಹೆಚ್ಚು ಪರಿಣಾಮ ಬೀರಿದೆ. ಈ ಎಲ್ಲಾ ತೊಡಕುಗಳ ನಡುವೆಯೂ ದಿನಕ್ಕೆ ಒಂದು ಮಾರಾಟ ಮಳಿಗೆಯಲ್ಲಿ ನಟನೊಬ್ಬನ ನೂರು ಸಿ.ಡಿ./ ಡಿವಿಡಿಗಳು ಖರೀದಿಯಾಗುತ್ತಿರುವುದು ರಾಜ್ ಅವರ `ಇಮೇಜ್' ಇಂದಿಗೂ ಗಟ್ಟಿಯಾಗಿರುವುದಕ್ಕೆ ಸಾಕ್ಷಿ.

 

ಪ್ರತಿಕ್ರಿಯಿಸಿ (+)