ಸಿದ್ದಗಂಗೆ: ಶಿವಲಿಂಗ ನಿರ್ಮಾಣಕ್ಕೆ ಚಾಲನೆ

7

ಸಿದ್ದಗಂಗೆ: ಶಿವಲಿಂಗ ನಿರ್ಮಾಣಕ್ಕೆ ಚಾಲನೆ

Published:
Updated:

ತುಮಕೂರು: ಪ್ರಪಂಚದ ಅತಿ ಎತ್ತರದ ಶಿವಲಿಂಗ ಇರುವ ಹೆಮ್ಮೆಗೆ ಸಿದ್ದಗಂಗಾ ಮಠ ಇನ್ನಾರು ತಿಂಗಳಲ್ಲಿ ಪಾತ್ರವಾಗಲಿದೆ. 111 ಅಡಿ ಅಗಲದ, 121 ಅಡಿ ಎತ್ತರದ ಬೃಹತ್ ಕೋಟಿಲಿಂಗೇಶ್ವರ ಸ್ಥಾಪನೆಗೆ ಸಿಎಂ ಡಿ.ವಿ.ಸದಾನಂದಗೌಡ ಸೋಮವಾರ ಶಿಲಾನ್ಯಾಸ ನೆರವೇರಿಸುತ್ತಿದ್ದಂತೆ ಆಕಾಶದಿಂದ ಹೆಲಿಕಾಫ್ಟರ್ ಮೂಲಕ ಪುಷ್ಪ ವೃಷ್ಟಿಯ ಸುರಿಮಳೆ ಆಯಿತು.ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್, ಶಾಸಕರಾದ ಅರವಿಂದ ಲಿಂಬಾವಳಿ, ಎಸ್.ಶಿವಣ್ಣ ಸೇರಿದಂತೆ ನಿರ್ಮಾಣದ ನೇತೃತ್ವ ವಹಿಸಿರುವ ಕೋಟಿ ಲಿಂಗೇಶ್ವರ ಪ್ರತಿಷ್ಠಾಪನಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.`ಹೂವಿನ ಮಳೆ~ಯೊಂದಿಗೆ ಶಿಲಾನ್ಯಾಸ ಕಾರ್ಯಕ್ರಮ ಕಳೆಗಟ್ಟಿತ್ತು. ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು.

ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮುಖ್ಯಮಂತ್ರಿ ಗದ್ದುಗೆ ಏರಿದ್ದು ಒಂದು ಯೋಗಾಯೋಗ. ಆದರೆ ವಿಶ್ವದ ಬೃಹತ್ ಲಿಂಗ ನಿರ್ಮಾಣಕ್ಕೆ ಶಿಲಾನ್ಯಾಸದ ಅವಕಾಶ ಒದಗಿಬಂದಿದ್ದು ದೇವರ ಅನುಗ್ರಹ. ಇಂಥ ಸುಯೋಗ ಎಲ್ಲರಿಗೂ ಬರುವುದಿಲ್ಲ ಎಂದರು.ಕೋಟಿಲಿಂಗೇಶ್ವರ ನಿರ್ಮಾಣಕ್ಕೆ ಜನರೇ ಸಹಕರಿಸುವ ವಿಶ್ವಾಸವಿದೆ. ಆದರೆ ಸಮಾಜಕ್ಕಾಗಿ ಮಂಚೂಣಿಯಲ್ಲಿ ಕೆಲಸ ಮಾಡುವ ಮಠಗಳಿಗೆ ಸಹಾಯ ಮಾಡುವುದು ಸರ್ಕಾರದ ಜವಾಬ್ದಾರಿಯೂ ಆಗಿದೆ. ರಾಜ್ಯದ ಕೀರ್ತಿಯನ್ನು ವಿಶ್ವದ ಮಟ್ಟಕ್ಕೆ ಎತ್ತರಿಸುವಂಥ ಕೆಲಸ ಇದಾಗಿದೆ. ಮುಂದಿನ ಬಜೆಟ್‌ನಲ್ಲಿ ರೂ. 3 ಕೋಟಿ ನೀಡಲಾಗುವುದು. ಹೆಚ್ಚಿನ ನೆರವು ಬೇಕಾದ್ದಲ್ಲಿ ಅದನ್ನು ನೀಡುವುದಾಗಿ ಭರವಸೆ ನೀಡಿದರು.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾತನಾಡಿ, ನುಡಿದಂತೆ ನಡೆಯುವ ಸ್ವಾಮೀಜಿಗಳ ಮೊದಲ ಸಾಲಿನಲ್ಲಿ ಸಿದ್ದಗಂಗಾ ಸ್ವಾಮೀಜಿ ನಿಲ್ಲುತ್ತಾರೆ. ಜಾತ್ಯತೀತತೆಯನ್ನು ರಾಜ್ಯಕ್ಕೆಲ್ಲ ಸಾರುತ್ತಿದ್ದಾರೆ. ಈಶ್ವರ ಜಾತ್ಯತೀತ ಸಿದ್ಧಾಂತ ಸಾರುವ ವ್ಯಕ್ತಿ. ಈಶ್ವರ ಲಿಂಗಾಯತರಿಗೆ ಎಂದೂ ಸೀಮಿತವಾಗಿಲ್ಲ ಎಂದರು.ಕೋಟಿಲಿಂಗೇಶ್ವರ ನಿರ್ಮಿಸುವ ಆಸೆಯನ್ನು ಸ್ವಾಮೀಜಿ ಬಳಿ ಹೇಳುತ್ತಿದ್ದಂತೆ ಕ್ಷಣಾರ್ಧದಲ್ಲಿ ಒಪ್ಪಿಗೆ ನೀಡಿದರು. ಇದಕ್ಕಾಗಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮಠದ ಜಾಗ ನೀಡಿದ್ದಾರೆ. ಇಲ್ಲಿ ಬೃಹತ್ ಲಿಂಗವನ್ನಷ್ಟೇ ನಿರ್ಮಿಸುತ್ತಿಲ್ಲ, 10 ಎಕರೆ ಜಾಗದಲ್ಲಿ ಈಶ್ವರ, ಲಿಂಗ ಕುರಿತ ಸಂಶೋಧನಾ ಕೇಂದ್ರ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.ಸಾನಿಧ್ಯ ವಹಿಸಿದ್ದ ಡಾ.ಶಿವಕುಮಾರ ಸ್ವಾಮೀಜಿ ಮಾತನಾಡಿ, ಈ ಹಿಂದೆ ಜನರಲ್ಲಿದ್ದ ಪರಸ್ಪರ ನಂಬಿಕೆ, ವಿಶ್ವಾಸರ್ಹತೆ, ಸಂಬಂಧ ಮರೆಯಾಗುತ್ತಿವೆ ಎಂದು ವಿಷಾದಿಸಿದರು. ಗೋ ಹತ್ಯೆ ನಿಷೇಧ ಮಸೂದೆ ಜಾರಿಗೆ ತರುವ ಭರವಸೆ ನೀಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಗೆ ಗೋವಿನ ಕೆತ್ತನೆಯ ಲೋಹದ ಶಿಲ್ಪಕೃತಿ ನೀಡಿ ಸನ್ಮಾನಿಸಲಾಯಿತು.ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್, ಶಾಸಕರಾದ ಅರವಿಂದ ಲಿಂಬಾವಳಿ, ಸೊಗಡು ಶಿವಣ್ಣ, ಉದ್ಯಮಿ ಆದಿಕೇಶವಲು, ಅಲಯನ್ಸ್ ವಿ.ವಿ. ಕುಲಪತಿ ಡಾ.ಅಯ್ಯಪ್ಪ, ಡಾ.ಸಿ.ಎಸ್.ವಿಶ್ವನಾಥ್ ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry