ಶುಕ್ರವಾರ, ಫೆಬ್ರವರಿ 26, 2021
22 °C

ಸಿದ್ದಲಿಂಗೇಶ್ವರ ರಥೋತ್ಸವಕ್ಕೆ ಜನಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಲಿಂಗೇಶ್ವರ ರಥೋತ್ಸವಕ್ಕೆ ಜನಸಾಗರ

ತುಮಕೂರು: ಸಿದ್ದಗಂಗೆಯ ಸಿದ್ದಲಿಂಗೇಶ್ವರ ರಥೋ­ತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಅದ್ದೂರಿಯಿಂದ ನಡೆಯಿತು.

ರಾಜ್ಯದ ವಿವಿಧ ಭಾಗಗಳ ಭಕ್ತರು ಗುರುವಾರ ರಾತ್ರಿಯೇ ಮಠಕ್ಕೆ ಆಗಮಿಸಿ, ಶಿವರಾತ್ರಿ ಜಾಗರಣೆ­ಯಲ್ಲಿ ಪಾಲ್ಗೊಂಡರು. ಮುಂಜಾನೆಯೇ ಧಾರ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ರಥೋತ್ಸವದಲ್ಲಿ ಭಾಗಿಯಾದರು.ರಥೋತ್ಸವ ವೀಕ್ಷಿಸಲು ಭಕ್ತರು ಬೆಳಿಗ್ಗೆ 10 ಗಂಟೆಯಿಂದಲೇ ಮಠದ ಆವರಣದಲ್ಲಿ ಜಮಾಯಿಸಿ­ದ್ದರು. ಎತ್ತ ನೋಡಿದರೂ ಜನ ಸಾಗರ. ಬೆಳಿಗ್ಗೆ 10.15ಕ್ಕೆ ಆರಂಭವಾದ ರಥಾಂಗ ಹೋಮ ಮಧ್ಯಾಹ್ನ 12.15ಕ್ಕೆ ಪೂರ್ಣಗೊಂಡಿತು.ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಜಿಲ್ಲಾಧಿಕಾರಿ ಕೆ.ಎಸ್‌.ಸತ್ಯಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಮಣ್‌ಗುಪ್ತ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿ­ಕಾರಿ ಕೆ.ಎಸ್.ಗೋವಿಂದರಾಜು ಇತರರು ಪಾಲ್ಗೊಂಡಿದ್ದರು.ಮಠದ ಆವರಣದಲ್ಲಿನ ಸಿದ್ದಲಿಂಗೇಶ್ವರ ದೇಗುಲ­ದಿಂದ ಸಿದ್ದಲಿಂಗೇಶ್ವರರ ಮೂರ್ತಿಯನ್ನು ಅಡ್ಡಪಲ್ಲಕ್ಕಿ ಉತ್ಸವದ ಮೂಲಕ ರಥದ ಸಮೀಪ ತರಲಾಯಿತು. ಮಧ್ಯಾಹ್ನ 12.05ಕ್ಕೆ ರಥಾರೋಹಣ ಮಾಡಲಾಯಿತು. ನಂತರ ಧಾರ್ಮಿಕ ವಿಧಿವಿಧಾನದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು.ಡಾ.ಶಿವಕುಮಾರ ಸ್ವಾಮೀಜಿ ಮಧ್ಯಾಹ್ನ 12.22ಕ್ಕೆ ರಥೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿ, ರಥದ ಮುಂದೆ ನಡೆದು ಬಂದರು. ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ಜಯಘೋಷ ಮೊಳಗಿಸಿದರು. ದವನ ಚುಚ್ಚಿದ್ದ ಬಾಳೆಹಣ್ಣುಗಳನ್ನು ರಥಕ್ಕೆ ತೂರಿದರು. 20 ನಿಮಿಷದ ಅವಧಿಯಲ್ಲಿ ಹಂತ ಹಂತವಾಗಿ ರಥ ಎಳೆಯಲಾಯಿತು.ನಂದಿ ಧ್ವಜ ಕುಣಿತ, ವೀರಭದ್ರರ ಕುಣಿತ, ಪಕ್ಕೇವು, ತೋರಣದ ಸ್ವಾಗತ, ಛತ್ರಿ, ಚಾಮರ, ಮಂಗಳವಾದ್ಯ, ನಾಗಸ್ವರ ವಾದ್ಯ, ಡೋಲು, ಕಹಳೆ ನಿನಾದ ರಥೋತ್ಸವಕ್ಕೆ ವಿಶೇಷ ಮೆರುಗು ನೀಡಿದ್ದವು. ಸುವರ್ಣ ಕಳಶ ಸೇರಿದಂತೆ ಧಾರ್ಮಿಕ ಲಾಂಛನಗಳಾದ ಮಕರ, ತೋರಣ, ಕಲಶ, ಕನ್ನಡಿ, ಬಾಳೆ ಕಂದು, ಮಾವಿನ ತೋರಣ, ವಿವಿಧ ಬಗೆಯ ಅಲಂಕಾರ ಪುಷ್ಪಗಳಿಂದ ರಥವನ್ನು ಅಲಂಕರಿಸಲಾಗಿತ್ತು.ರಥೋತ್ಸವ ಆರಂಭಕ್ಕೂ ಮುನ್ನವೇ ಮಠದ ವಿವಿಧ ಭಾಗಗಳಲ್ಲಿ ಕುಡಿಯುವ ನೀರು, ಮಜ್ಜಿಗೆ, ಪಾನಕ ವಿತರಿಸಲಾಯಿತು. ರಥೋತ್ಸವದ ನಂತರ ಮಠದ ಆವರಣದಲ್ಲಿ ದಾಸೋಹ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.