ಸೋಮವಾರ, ಮೇ 17, 2021
22 °C

ಸಿದ್ದಾಪುರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಪ್ರಮುಖ ಆಕರವಾಗಿರುವ ಅರೆಂದೂರು ಹೊಳೆ ಸಂಪೂರ್ಣ ಬತ್ತಿ ಹೋಗಿದ್ದು, ಪಟ್ಟಣದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.ತಾಲ್ಲೂಕಿನ ಕಾಂವಚೂರು ಸಮೀಪದಲ್ಲಿರುವ ಅರೆಂದೂರು ಹೊಳೆಗೆ ಚೆಕ್‌ಡ್ಯಾಂ ನಿರ್ಮಿಸಲಾಗಿದ್ದು, ಅಲ್ಲಿಂದ ಬೃಹತ್ ಪಂಪ್‌ಗಳ ಮೂಲಕ ನೀರನ್ನು ಮೇಲೆತ್ತಿ ಪಟ್ಟಣದ ವಿವಿಧೆಡೆ ಇರುವ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಅದರಿಂದ ಪಟ್ಟಣದಲ್ಲಿ ಪೂರೈಕೆ ನೀರು ಮಾಡಲಾಗುತ್ತದೆ. ಈ ವರ್ಷ ಅರೆಂದೂರು ಹೊಳೆಯಲ್ಲಿ ನೀರು ಹರಿಯುವುದು ನಿಂತು ಹಲವು ವಾರಗಳೇ ಕಳೆದಿವೆ. ಆ ನಂತರ ಹೊಳೆಯಲ್ಲಿ ಅಲ್ಲಲ್ಲಿ ಕಾಣಸಿಗುತ್ತಿದ್ದ ನೀರಿನ ಹೊಂಡಗಳಿಗೆ ಪೈಪ್ ಹಾಕಿ, ನೀರು ಸಂಗ್ರಹ ಮಾಡಿ, ಸರಬರಾಜು ಮಾಡುವ ಪ್ರಯತ್ನವೂ  ನಡೆದಿದೆ. ಈಗ ಕೆಲವು ದಿನಗಳಿಂದ ಆ ಹೊಂಡಗಳಲ್ಲಿದ್ದ ನೀರು ಕೂಡ ಖಾಲಿಯಾಗಿದ್ದು, ಬಾಣಲೆಯಿಂದ ಬೆಂಕಿಗೆ ಬಿದ್ದ ಪರಿಸ್ಥಿತಿ ನಿರ್ಮಾಣಗೊಂಡಿದೆ.`ಮಳೆ ಬಾರದಿದ್ದರೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾಗುತ್ತದೆ. ಈ ವಿಷಯವನ್ನು ಉಪವಿಭಾಗಾಧಿಕಾರಿಗಳ ಗಮನಕ್ಕೆ ತರಲಾಗುವುದು. ಪಟ್ಟಣದ ಪುಟ್ಟಪ್ಪನ ಕೆರೆಯಿಂದಲಾದರೂ ನೀರು ಪೂರೈಕೆ ಮಾಡಬೇಕಾಗುತ್ತದೆ' ಎನ್ನುತ್ತಾರೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಜೆ.ಆರ್.ನಾಯ್ಕ.ಅರೆಂದೂರು ಹೊಳೆಯ ಮೂಲದಲ್ಲಿರುವ ಹಲಗೇರಿ ಕೆರೆಯಲ್ಲಿಯೇ ನೀರಿಲ್ಲ. ಆದ್ದರಿಂದ ಹೊಳೆಯಲ್ಲಿಯೂ ನೀರು ಬತ್ತಿದೆ ಎಂದು ಪಟ್ಟಣ ಪಂಚಾಯ್ತಿ ಮೂಲಗಳು ತಿಳಿಸುತ್ತವೆ.  

  

80ರ ದಶಕದಲ್ಲಿ ನಿರ್ಮಿಸಲಾದ ಅರೆಂದೂರು ನಾಲಾ ಯೋಜನೆ ಇಡೀ ಪಟ್ಟಣಕ್ಕೆ ವರ್ಷವಿಡಿ ನೀರು ಪೂರೈಕೆ ಮಾಡುವ ಉದ್ದೇಶ ಹೊಂದಿತ್ತು. ಪ್ರಾರಂಭದ ಕೆಲವು ವರ್ಷಗಳಲ್ಲಿ ಈ ಯೋಜನೆಯ ಪೈಪ್‌ಲೈನ್ ಆಗಾಗ ಸೋರುತ್ತಿದ್ದರಿಂದ ನೀರು ಪೂರೈಕೆ ವ್ಯತ್ಯಯಗೊಳ್ಳುತ್ತಿರುವುದು ಸಾಮಾನ್ಯವಾಗಿತ್ತು. 2007ರ ಮೇ ತಿಂಗಳಿನಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಟ್ಟಣಕ್ಕೆ ಆಗಮಿಸಿ, ಈ ಯೋಜನೆಯ ನವೀಕರಣಕ್ಕೆ ಶಂಕುಸ್ಥಾಪನೆ ಮಾಡಿದರು. ಸುಮಾರು  6.75 ಕೋಟಿ ರೂಪಾಯಿ ವೆಚ್ಚದಲ್ಲಿ ಅರೆಂದೂರು ಯೋಜನೆಗೆ ಹೊಸದಾಗಿ ಪೈಪ್‌ಲೈನ್ ಜೋಡಣೆಯ ಕಾರ್ಯವೂ ನಡೆಯಿತು. ಆ ಮೂಲಕ ಅರೆಂದೂರು ಯೋಜನೆ ಪಟ್ಟಣದ ಜನಸಂಖ್ಯೆಗೆ ನಿರಂತರ ನೀರು ಉಣಿಸುವುದಕ್ಕೆ ಸಿದ್ಧಗೊಂಡಿತು.`ಪಟ್ಟಣಕ್ಕೆ ಮುಂದಿನ 50 ವರ್ಷಗಳಲ್ಲಿ ನೀರಿನ ಕೊರತೆ ಉಂಟಾಗದು' ಎಂದು ಅರೆಂದೂರ ಯೋಜನೆ ನವೀಕರಣಗೊಂಡ ನಂತರ ಪಟ್ಟಣ ಪಂಚಾಯ್ತಿಯ ಆಡಳಿತಾರೂಢ ಜನಪ್ರತಿನಿಧಿಗಳು ಹೇಳಿಕೊಂಡಿದ್ದರು. ಈಗಲೇ ಅವರ ಲೆಕ್ಕಾಚಾರವನ್ನು ಮಳೆರಾಯ ತಲೆ ಕೆಳಗೆ ಮಾಡಿದ್ದಾನೆ. ಕಳೆದ ವರ್ಷ ಮಳೆ ಕಡಿಮೆಯಾಗಿದ್ದರಿಂದ ಈ ವರ್ಷ ಬೇಸಿಗೆಯಲ್ಲಿ ಅರೆಂದೂರು ಹೊಳೆ ಬತ್ತಿದೆ. ಹೆಚ್ಚಿನ ಸ್ವಾಭಾವಿಕ ಜಲಮೂಲವಿಲ್ಲದ ಅರೆಂದೂರು ಹೊಳೆ ಇಡೀ ಪಟ್ಟಣದ ನೀರಿನ ಅಗತ್ಯವನ್ನು ಭವಿಷ್ಯದಲ್ಲಿ ಪೂರೈಸಲಿದೆಯೆ ಎಂಬ ಅನುಮಾನವೂ ಇದರಿಂದ ಬರುವಂತಾಗಿದೆ. ಮುಂಗಾರು ಮಳೆಗಾಗಿ ಪಟ್ಟಣ ಪಂಚಾಯ್ತಿಯ ಆಡಳಿತ ವ್ಯವಸ್ಥೆ ಪ್ರಾರ್ಥಿಸತೊಡಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.