ಮಂಗಳವಾರ, ಜೂನ್ 15, 2021
22 °C

ಸಿದ್ದೇಶ್ವರಸ್ವಾಮಿ ರಥೋತ್ಸವ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕನಾಯಕನಹಳ್ಳಿ:  ಭಕ್ತರ ಪ್ರಶ್ನೆಗಳಿಗೆ `ಉತ್ತರ ಬರೆಯುವ~ ತಾಲ್ಲೂಕಿನ ಹಂದನಕೆರೆ ಗುರುಗಿರಿ ಸಿದ್ದೇಶ್ವರಸ್ವಾಮಿ ಮಹಾ ರಥೋತ್ಸವ ಮಾ. 10ರಂದು ನಡೆಯಲಿದೆ. ಜಾತ್ರೆಗೆ ಕ್ಷೇತ್ರದಲ್ಲಿ ಸಕಲ ಸಿದ್ಧತೆ ನಡೆದಿದೆ.ಕ್ಷೇತ್ರದ ಹಿನ್ನಲೆ: ಗುರುಗಿರಿ ಸಿದ್ದೇಶ್ವರ ದೇವಾಲಯ ತನ್ನೊಡಲಲ್ಲಿ ಸುರಂಗವನ್ನ ಅಡಗಿಸಿಕೊಂಡಿದೆ. ದೇವಾಲಯದೊಳಗಿನಿಂದ ಸುಮಾರು ಮೂರು ಕಿ.ಮೀ. ದೂರದವರೆಗಿದ್ದು, ಅಲ್ಲಿನ ಸಿದ್ದರಗುಡ್ಡಕ್ಕೆ ಸಂಪರ್ಕಿಸುತ್ತದೆ. ತಪಸ್ವಿ ಸಿದ್ದೇಶ್ವರರು ಈ ಸುರಂಗದ ಮೂಲಕ ಹಾದು ಸಿದ್ದರಗುಡ್ಡ ತಲುಪಿ ತಪಸ್ಸನ್ನಾಚರಿಸಿ, ಈಗಿರುವ ದೇವಾಲಯದಲ್ಲಿ ಐಕ್ಯರಾದರೆಂಬ ಐತಿಹ್ಯವಿದೆ. ಈಗ ಈ ಸುರಂಗವನ್ನು ಮುಚ್ಚಲಾಗಿದೆ.`ಜಾಂಡೇವು~ ಮಹತ್ವ: ಸಿದ್ದರಗುಡ್ಡದಲ್ಲಿ ಸಿದ್ದೇಶ್ವರರು ತಪಸ್ಸನ್ನಾಚರಿಸುವಾಗ ಹೆಬ್ಬುಲಿ ಒಂದು ದಿನದಲ್ಲಿ ಆರು ಗೋವು ಕೊಂದು ರಕ್ತ ಹೀರಿ, ಏಳನೆ ಹಸುವಿಗೆ ಬಾಯಿ ಹಾಕಿದ್ದು, ಹಸುವಿನ ಅಂಬಾ ಕೂಗಿಗೆ ತಪ್ಪಸ್ಸಿನಲ್ಲಿದ್ದ ಸಿದ್ದೇಶ್ವರರು ಕಣ್ಣು ತೆರೆದ ಕ್ಷಣಕ್ಕೆ ಹಸು ಹಾಗೂ ಹುಲಿ ಪ್ರಾಣ ಬಿಟ್ಟಿತಂತೆ. ನಂತರ ಗೋವು ಗಳಿಗೆ ಶಕ್ತಿ ದೇವತೆಗಳನ್ನು ಆವಾಹನೆಗೈದು ಅದಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿದರು ಎಂಬ ಪುರಾಣವಿದೆ. ಇದನ್ನೆ ಜಾಂಡೇವು ಎಂದು ಕರೆಯುತ್ತಾರೆ.ಭವಿಷ್ಯ ಬರೆಯುವ ದೇವರು


ಈ ದೇವಾಲಯಕ್ಕೆ ಸಿದ್ದರ ಮಠ ಎಂದು ಕರೆಯುವರು. ಪೂಜಾ ಕೈಂಕರ್ಯವನ್ನು ವಂಶ ಪಾರಂಪರಿಕವಾಗಿ ದಿ.ಮುದ್ವೀರಯ್ಯ ಕುಟುಂಬ ಮಾಡುತ್ತಿದ್ದು, ಈಗ ಅವರ ಮಗ ರುದ್ರೇಶ್ ನಡೆಸುತ್ತಿದ್ದಾರೆ. ಭಕ್ತರ ಪ್ರಶ್ನೆಗಳಿಗೆ ಸಿದ್ದಪ್ಪದೇವರ ಪೀಠಕ್ಕೆ ಒಂದು ಬಳಪ ಕಟ್ಟಲಾಗುತ್ತದೆ. ದೇವರನ್ನು ಹಿಡಿದಿರುವ ಅರ್ಚಕರು ಭಕ್ತರ ಕೋರಿಕೆಗೆ ಉತ್ತರವನ್ನು ಸ್ಲೇಟಿನ ಮೇಲೆ ಮೋಡಿ ಅಕ್ಷರದಲ್ಲಿ ಬರೆಯುತ್ತಾರೆ. ಸಿದ್ದಪ್ಪ ದೇವರು ಬರೆದ ಬರಹದ ಆಧಾರದ ಮೇಲೆ ಭಕ್ತರ ಭವಿಷ್ಯ ನಿರ್ಧಾರವಾಗುತ್ತದೆ ಎಂಬ ನಂಬಿಕೆ ಇದೆ.ಈಚೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇಲ್ಲಿಗೆ ಬಂದು ಹೋಮ ನಡೆಸಿ ಹೋಗಿದ್ದಾರೆ. ಪ್ರಮುಖ ರಾಜಕೀಯ ಮುಖಂಡರು ಇಲ್ಲಿಗೆ ಆಗಾಗ್ಗೆ ಭೇಟಿ ನೀಡುವುದು ಸಾಮಾನ್ಯ.ಧಾರ್ಮಿಕ ಕಾರ್ಯಕ್ರಮ ಇಂದಿನಿಂದ

ತಾಲ್ಲೂಕಿನ ಹಂದನಕೆರೆ ಗುರುಗಿರಿಸಿದ್ದೇಶ್ವರಸ್ವಾಮಿ ಮಹಾರಥೋತ್ಸವ ಅಂಗವಾಗಿ ಮಾ. 9ರಿಂದ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. 9ರಂದು ಮೂಲ ಸನ್ನಿಧಿಯಲ್ಲಿ ಮಹಾ ರುದ್ರಾಭಿಷೇಕ, ಅಷ್ಟೋತ್ತರ ಬಿಲ್ವಾರ್ಚನೆ, ರುದ್ರಾಭಿಷೆಕ, ಗಣಪತಿ ಹೋಮ, ನವಗ್ರಹ ಹೋಮ, ಬೆಳಿಗ್ಗೆ 11 ಗಂಟೆಗೆ ಬೆಳ್ಳಾವಿ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಹಾಗೂ ಗುರುವಿನಪುರ ಜಗದೀಶ ಶಿವಾಚಾರ್ಯ ಸ್ವಾಮೀಜಿ ಮಹೋತ್ಸವಕ್ಕೆ ಚಾಲನೆ ನೀಡುವರು.ಮಧ್ಯಾಹ್ನ ರಥದಬೀದಿಯಲ್ಲಿ ಧ್ವಜಾರೋಹಣ ಹಾಗೂ ನೂರೊಂದೆಡೆ ಸೇವೆ ನಡೆಯಲಿದೆ. ಸಂಜೆ 6.30ಕ್ಕೆ ರಥಕ್ಕೆ ಪುಣ್ಯಸ್ವಸ್ತಿ ವಾಚಕ, ಗಣಪತಿ ಹೋಮ, ಕಳಹ ಹೋಮ ಹಾಗೂ ಬಲಿಪ್ರಧಾನ ನಡೆಯಲಿದೆ. 7.30ಕ್ಕೆ ಮುತ್ತೈದೆಯರಿಂದ ಅಗ್ರೋದಕ ಪ್ರವೇಶ, ಪಂಚಾಮೃತ ಸ್ನಾನ, ಅಷ್ಟೋತ್ತರ ಬಿಲ್ವಾರ್ಚನೆ ಹಾಗೂ ಸ್ವಾಮಿಗೆ  ವಸ್ತ್ರಧಾರಣೆ ನಂತರ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.9 ಗಂಟೆಗೆ ಗುರುಪರವು  ಸೇವೆ ಏಳು ಹಳ್ಳಿ  ಗ್ರಾಮಸ್ಥರಿಂದ ನಡೆಯುತ್ತದೆ. ರಾತ್ರಿ 10ಕ್ಕೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. 10ರಂದು ಬೆಳಿಗ್ಗೆ 6.30ರಿಂದ 12 ಗಂಟೆಯವರೆಗೆ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಸಂಜೆ 5ಕ್ಕೆ ಧ್ವಜ ಅವರೋಹಣ. ರಾತ್ರಿ 8ಗಂಟೆಗೆ ದುರ್ಗಿ ಸೇವೆ ನಡೆಯಲಿದೆ. 11ರಂದು ಸಬ್ಬೇನಹಳ್ಳಿ ಗ್ರಾಮದಲ್ಲಿ ಸ್ವಾಮಿ ಉತ್ಸವ ಹಾಗೂ ಪೂಜಾ ಕಾರ್ಯಕ್ರಮ ನಡೆಯಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.