ಸಿದ್ಧಗೊಂಡ ವೇದಿಕೆ

7

ಸಿದ್ಧಗೊಂಡ ವೇದಿಕೆ

Published:
Updated:

ಕೂಡಲಸಂಗಮ: ಸುಕ್ಷೇತ್ರ ಕೂಡಲ­ಸಂಗಮ­ದಲ್ಲಿ ಇದೇ 11 ರಿಂದ 15ರವರೆಗೆ ನಡೆಯುವ 27ನೇ ಶರಣಮೇಳದ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು ಬೆಳಗ್ಗೆಯಿಂದಲೇ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಬರುತ್ತಿರುವರು ಎಂದು ಕೂಡಲಸಂಗಮ ಬಸವ ಧರ್ಮಪೀಠದ ಮಹಾದೇಶ್ವರ ಸ್ವಾಮೀಜಿ ಹೇಳಿದರು.ಶುಕ್ರವಾರ ಕೂಡಲಸಂಗಮ ಬಸವ ಧರ್ಮಪೀಠದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಶರಣ ಮೇಳಕ್ಕೆ ಬರುವ ಭಕ್ತರ ಅನುಕೂಲ­ಕ್ಕಾಗಿ ವಸತಿ ವ್ಯವಸ್ಥೆಯನ್ನು ಬಸವ ಧರ್ಮಪೀಠದ ಅಕ್ಕನಾಗಲಾಂಬಿಕಾ, ಸರ್ವಜ್ಞ, ಸಿದ್ಧರಾಮೇಶ್ವರ, ಅಕ್ಕ­ಮಹಾದೇವಿ, ಕಲ್ಯಾಣಮ್ಮ, ನೀಲಾಂಬಿಕೆ, ಹರಳಯ್ಯ, ಅಲ್ಲಮ­ಪ್ರಭು ಶರಣ ಧಾಮದಲ್ಲಿ 500 ಕೊಠಡಿಗಳು ಹಾಗೂ ಬಸವ ಧರ್ಮಪೀಠದ ಆವರಣದಲ್ಲಿ ಸುಮಾರು 3 ಸಾವಿರದಷ್ಟು ತಾತ್ಕಾಲಿಕ ವಸತಿ ಟೆಂಟ್‌ಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.ಬರುವ ಭಕ್ತರಿಗೆ ಉತ್ತರ ಕರ್ನಾಟಕದ ಬಿಳಿಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಲಾಡು, ಹುಗ್ಗಿ, ಶಾವಿಗೆ ಪಾಯಸ, ಕುಂಬಳಕಾಯಿ ಪಾಯಸ ಮುಂತಾದ ಸಿಹಿತಿಂಡಿಗಳ ಜೊತೆಗೆ ಮೊಸರು, ಮಜ್ಜಿಗೆ ಕೊಡಲಾಗು­ವುದು. ಕಳೆದ ಒಂದು ತಿಂಗಳಿಂದ ರೊಟ್ಟಿಗಳನ್ನು ತಯಾರಿಸಿದ್ದು ಸುಮಾರು 6 ಲಕ್ಷ ಬಿಳಿ ಜೋಳದ ರೊಟ್ಟಿ ಸಂಗ್ರಹವಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ಭಕ್ತರು ಅಪಾರ ಪ್ರಮಾಣದ ರೊಟ್ಟಿಗಳನ್ನು ತರುವರು ಎಂದು ದಾಸೋಹ ವ್ಯವಸ್ಥಾಪಕ ಮಲ್ಲಿಕಾರ್ಜುನ ಪಲದಿನ್ನಿ ಹೇಳುವರು.ಐದು ದಿನಗಳ ಕಾಲ ನಡೆಯುವ ಸಮಾರಂಭಕ್ಕೆ ವೇದಿಕೆ ಸಂಪೂರ್ಣ ಸಿದ್ಧಗೊಂಡಿದ್ದು ಕಳೆದ ಒಂದು ತಿಂಗಳಿಂದ ವೇದಿಕೆಯನ್ನು ತಯಾರು ಮಾಡಲಾಗಿದೆ. ಒಂದು ಲಕ್ಷ ಜನ ಏಕಕಾಲದಲ್ಲಿ ಕುಳಿತುಕೊಂಡು ನೋಡುವಂತಹ ವೇದಿಕೆ ನಿರ್ಮಾಣ­ವಾಗಿದೆ. ಬರುವ ಭಕ್ತಾದಿಗಳಿಗೆ ಬಾಗಲಕೋಟೆ, ಇಲಕಲ್ಲ, ಹುನಗುಂದ, ವಿಜಾಪುರ ದಿಂದ ರಾಜ್ಯ ರಸ್ತೆ ಸಾರಿಗೆ ಘಟಕದವರು ಅಧಿಕ ಪ್ರಮಾಣದಲ್ಲಿ ಬಸ್‌ಗಳನ್ನು ಬಿಡುವಂತೆ ತಿಳಿಸಿದೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ವ್ಯವಸ್ಥಾಪಕ ಚಂದ್ರಶೇಖರ ಹೇಳಿದರು.ಶರಣಮೇಳದ ಮೊದಲನೆಯ ದಿನ ಶನಿವಾರ ಚಿಂತನಗೋಷ್ಠಿ ಸಮಾರಂಭ ಬೆಳಗ್ಗೆ 10.30ಕ್ಕೆ ಆರಂಭವಾಗು­ವುದು. ಸಮಾರಂಭದ ಉದ್ಘಾಟನೆ­ಯನ್ನು ನೇಗಿನಹಾಳು ಗುರು ಮಡಿ­ವಾಳೇಶ್ವರ ಮಠದ ಬಸವ ಸಿದ್ಧಲಿಂಗ ಸ್ವಾಮೀಜಿ ನೆರವೇರಿಸು­ವರು. ಸಾನಿಧ್ಯ­ವನ್ನು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾ­ದೇವಿ ವಹಿಸುವರು. ಮುಖ್ಯ ಅಥಿತಿಗಳಾಗಿ ಸಂಕೇಶ್ವರ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಡಾ.ಶಿವನಗೌಡ ಪಾಟೀಲ, ಬೆಂಗಳೂರಿನ ವಕೀಲ ಜೆ.ಜೈರಾಜ್ ಆಗಮಿಸುವರು.ಚಿಂತನ ಗೋಷ್ಠಿ: ಮೊದಲ ದಿನದ ಚಿಂತನಗೋಷ್ಠಿಯಲ್ಲಿ ದಿನಕ್ಕೆ ಎಷ್ಟು ಸಲ ಇಷ್ಟಲಿಂಗ ಪೂಜೆ ವಿಹಿತ? ಬೆಳಗಿನ ಜಾವ ನೀರನ್ನು ಎಷ್ಟು ಸಮಯ­ದವರೆಗೆ ಕುಡಿಯಬಹುದು? ಪಾದ­ಪೂಜೆ ಇರಬೇಕೇ ಬೇಡವೇ, ಇದು ಮೂಡನಂಬಿಕೆಯೇ? ಮುಂತಾದ ವಿಷಯಗಳ ಕುರಿತು ಚಿಂತನಗೋಷ್ಠಿ ನಡೆಯುವುದು. ಸಂಜೆ 6.30ಕ್ಕೆ  ಮಹಿಳಾ ಗೋಷ್ಠಿ ಸಮಾರಂಭ ನಡೆಯುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry