ಸೋಮವಾರ, ಜನವರಿ 27, 2020
21 °C

ಸಿದ್ಧಪ್ಪಜ್ಜನಿಗೆ ಬೆಳ್ಳಿರಥ ಅರ್ಪಣೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ಧಪ್ಪಜ್ಜನಿಗೆ ಬೆಳ್ಳಿರಥ ಅರ್ಪಣೆ ಇಂದು

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಬೆಳ್ಳಿಯ ರಥ ಹೊಂದಿದ ಗರಿಮೆ ಇಲ್ಲಿನ ಸಿದ್ಧಪ್ಪಜ್ಜನ ಮೂಲ ಮಠಕ್ಕೆ ಗುರುವಾರದಿಂದ ಸಲ್ಲುತ್ತಿದೆ.ಜಗದ ಏಳಿಗೆಗಾಗಿ ಎಲ್ಲ ಐಭೋಗಗಳನ್ನು ಧಿಕ್ಕರಿಸಿ ನಿಂತ ಅನುಭಾವಿ ಸಿದ್ಧಪ್ಪಜ್ಜನಿಗೆ ಭಕ್ತ ಸಾಗರ­ದಿಂದ ಸಲ್ಲುತ್ತಿರುವ ಈ ಅಪೂರ್ವ ಕಾಣಿಕೆಗೆ ಎರಡು ದಿನ ಕಾಲ ಉಣಕಲ್ ಗ್ರಾಮ ಸಾಕ್ಷಿಯಾಗಲಿದೆ.ಸಿದ್ಧಾರೂಢ ಸ್ವಾಮಿಗಳು, ಸಂತ ಶಿಶುನಾಳ ಶರೀಫ ಸಾಹೇಬರು, ಶಿರಹಟ್ಟಿ ಫಕ್ಕೀರೇಶ್ವರರು, ಕಡ­ಕೋಳ ಮಡಿವಾಳಪ್ಪನವರು, ಶಿರಡಿ ಸಾಯಿ­ಬಾಬಾ ಅವರ ಸಮಕಾಲೀನರಾದ ಸಿದ್ಧಪ್ಪಜ್ಜ ಹಠಯೋಗಿ ಎಂದೇ ಪ್ರಸಿದ್ಧರಾದವರು.ಆಂಧ್ರಪ್ರದೇಶದ ಆಲೂರು ತಾಲ್ಲೂಕಿನ ಹೊಳಲ­ಗುಂದಿಯಲ್ಲಿ ಜನಿಸಿದ ಅವಧೂತ ಸಿದ್ಧಪ್ಪಜ್ಜ, ಬಾಲ್ಯದಿಂದಲೂ ಆಧ್ಯಾತ್ಮದಲ್ಲಿ ಆಸಕ್ತ­ರಾದವರು. ಹರೆಯಕ್ಕೆ ಕಾಲಿಡುತ್ತಲೇ ವೈರಾಗ್ಯ ತಾಳಿ ಹಲವು ಪವಾಡಗಳನ್ನು ಮಾಡುತ್ತಾ ಹೊಳ­ಲ­ಗುಂದಿಯಿಂದ ಬಳ್ಳಾರಿ ಮೂಲಕ ಗದಗಕ್ಕೆ ಬರುತ್ತಾರೆ.ಮುಂದೆ ಹೊಂಬಳ, ಎಚ್.ಎಸ್.ವೆಂಕಟಾಪುರ, ಲಿಂಗದಾಳ, ಕಿತ್ತೂರ, ಇಬ್ರಾಹಿಂಪುರ, ನವಲ­ಗುಂದ, ಬಲ್ಲರವಾಡ, ಶಲವಡಿ, ಅಣ್ಣಿಗೇರಿ ಭಾಗ­Sದಲ್ಲಿ ಸಂಚರಿಸಿ ಹುಬ್ಬಳ್ಳಿಗೆ ಬರುತ್ತಾರೆ. ಸಿದ್ಧಪ್ಪಜ್ಜ ಅಡ್ಡಾಡಿದಲ್ಲೆಲ್ಲಾ ಆತನ ಅನು­ಯಾಯಿಗಳು ದೊಡ್ಡ ಪ್ರಮಾಣದಲ್ಲಿ ಇದ್ದಾರೆ.ಮುಂದೆ ಹುಬ್ಬಳ್ಳಿಯ ಉಣಕಲ್ ಪ್ರದೇಶವನ್ನು ತನ್ನ ಕಾರ್ಯಕ್ಷೇತ್ರವಾಗಿಸಿಕೊಂಡ ಸಿದ್ಧಪ್ಪಜ್ಜ ತನ್ನ ಬೋಧನೆ ಹಾಗೂ ಮಾರ್ಗದರ್ಶನಗಳ ಮೂಲಕ ಭಕ್ತರನ್ನು ಉದ್ಧರಿಸುವ ಕಾರ್ಯದಲ್ಲಿ ನಿರತ­ರಾದರು. ‘ಸಾಕಂದವ ಸಾಹುಕಾರ, ಬೇಕ ಬೇಕಂದವ ಭಿಕಾರಿಲೇ ಸೂಳೇತಮ್ಮ’ ಎಂಬ ಸಿದ್ಧಪ್ಪಜ್ಜನ ನುಡಿ ಭೋಗ ಬದುಕಿನ ಬಗ್ಗೆ ಇದ್ದ ವ್ಯಂಗ್ಯ­ವನ್ನು ಬಿಂಬಿಸುತ್ತದೆ. ಧಾರವಾಡ, ಮನ­ಸೂರ, ನವನಗರ, ಅಮರಗೋಳ, ಗೋಪನ­ಕೊಪ್ಪ, ದೇವಿನಗರ, ತೋಪಗಲಟ್ಟಿ, ಶೆರೆವಾಡ ಪ್ರದೇಶ­ಗಳಲ್ಲಿ ಅಜ್ಜ ಸಂಚರಿಸಿದ್ದರು. ಅಲ್ಲೆಲ್ಲಾ ಈಗಲೂ ಭಕ್ತರು ಪೂಜಾ ಕೇಂದ್ರಗಳನ್ನು ನಿರ್ಮಿಸಿ ಅಜ್ಜನನ್ನು ಆರಾಧಿಸುತ್ತಿದ್ದಾರೆ.ಒಂದು ಬದಿಯಲ್ಲಿ ನೃಪತುಂಗಬೆಟ್ಟ, ಇನ್ನೊಂ­ದೆಡೆ ವಿಶಾಲ ಕೆರೆಯ ನಡುವೆ ಹರಡಿ­ಕೊಂಡಿದ್ದ ಉಣಕಲ್‌ ಗ್ರಾಮದ ಬಗ್ಗೆ ವಿಶೇಷ ಪ್ರೀತಿ ಇಟ್ಟು­ಕೊಂಡಿದ್ದ ಸಿದ್ಧಪ್ಪಜ್ಜ ಇಲ್ಲಿಯೇ ಹೆಚ್ಚು ಕಾಲ ನೆಲೆಸಿದ್ದು, ಕೊನೆಗೆ ಗ್ರಾಮದಲ್ಲಿಯೇ ಐಕ್ಯರಾಗು­ತ್ತಾರೆ.ಸಿದ್ಧಪ್ಪಜ್ಜನ ಸ್ಮರಣೆಯಾಗಿ ಈಗಲೂ ಅಲ್ಲಿ ಮೂಲ­ಮಠ ಹಾಗೂ ಆರಾಧನಾ ಮಂದಿರವನ್ನು ಕಾಣಬಹುದು. ಬೆಳ್ಳಿರಥದ ಸಮರ್ಪಣೆ ಕಾರ್ಯಕ್ರಮ ಎರಡು ದಿನ ವೈಭವೋಪೇತವಾಗಿ ನಡೆಯಲಿದ್ದು, ಸಾವಿರಾರು ಭಕ್ತರು ಪಾಲ್ಗೊಳ್ಳುವ ಸಮಾ­ರಂಭಕ್ಕೆ ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಗದಗ ವೀರೇಶ್ವರ ಪುಣ್ಯಾಶ್ರ­ಮದ ಕಲ್ಲಯ್ಯಜ್ಜನವರು ಸಾಕ್ಷಿಯಾಗಲಿದ್ದಾರೆ. ಗುರು­ವಾರ ಬೆಳಿಗ್ಗೆ 8 ಗಂಟೆಗೆ ದಿಂಗಾಲೇಶ್ವರ ಸ್ವಾಮೀಜಿ ಪಾದಯಾತ್ರೆ ಹಾಗೂ ಪ್ರವಚನದ ಮೂಲಕ ಸಮಾರಂಭಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.ಬೆಳ್ಳಿರಥದ ವಿಶೇಷಗಳು..

ಸಿದ್ಧಪ್ಪಜ್ಜನ ಸೇವಾ ಸಮಿತಿಯ ಭಕ್ತರಿಂದ ದೇಣಿಗೆ ಸಂಗ್ರಹಿಸಿ 94 ಕಿಲೋ ಬೆಳ್ಳಿ ಬಳಸಿ  ₨65 ಲಕ್ಷ ವೆಚ್ಚದಲ್ಲಿ 11.4 ಅಡಿ ಎತ್ತರದ ರಥ ನಿರ್ಮಿಸಿದೆ. ರಾಜ್ಯ ಪ್ರಶಸ್ತಿ ವಿಜೇತ ಶಿಲ್ಪಿ ಉತ್ತರಕನ್ನಡ ಜಿಲ್ಲೆ ಸಿದ್ದಾಪುರದ ಶಂಕರಶೇಟ್‌ ಅವರ ಶಿಷ್ಯ ಕುಮಟಾ ಬಳಿಯ ಹೊಂಡದಕಲ್‌ ನಿವಾಸಿ ಸತೀಶ್ ಶೇಟ್ ನೇತೃತ್ವದಲ್ಲಿ ಮೂವರು ಕಲಾವಿದರು ಸತತ ಆರು ತಿಂಗಳು ಶ್ರಮವಹಿಸಿ ರಥ ಸಿದ್ಧಗೊಳಿಸಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಉಳಿವಿ ಶ್ರೀಕ್ಷೇತ್ರದಲ್ಲೂ ಬೆಳ್ಳಿರಥದ ನಿರ್ಮಾಣ ಪ್ರಗತಿಯಲ್ಲಿದ್ದು, ಇದರಿಂದ ಈ ಭಾಗದಲ್ಲಿ ಮೊದಲ ಬೆಳ್ಳಿರಥ ಹೊಂದಿದ ಶ್ರೇಯಸ್ಸು ಉಣಕಲ್‌ನ ಸಿದ್ಧಪ್ಪಜ್ಜನ ಮೂಲಮಠಕ್ಕೆ ಸಲ್ಲುತ್ತದೆ. ರಥದ ಮುಂಭಾಗದಲ್ಲಿ ವಿಘ್ನವಿನಾಶಕ ಗಣಪನ ಆಕರ್ಷಕ ಮೂರ್ತಿ, ಹಾರುವ ಸಿಂಹಗಳು, ಹಂಸಗಳು, ನಂದಿಯ ವಿಗ್ರಹಗಳನ್ನು ಕಾಣಬಹುದಾಗಿದೆ.

ಪ್ರತಿಕ್ರಿಯಿಸಿ (+)