ಸಿದ್ಧರ ನೆನಪಿನ ಬೆಟ್ಟ!

7

ಸಿದ್ಧರ ನೆನಪಿನ ಬೆಟ್ಟ!

Published:
Updated:

ಸುವರ್ಣಮುಖಿ ನದಿ ಮೂಲವನ್ನು ತನ್ನೊಡಲಲ್ಲಿ ಅಡಗಿಸಿಕೊಂಡಿರುವ ಸಿದ್ಧರಬೆಟ್ಟ ಅಸೀಮ ಸಸ್ಯ ಸಂಪತ್ತಿನ ಸೊಬಗಿನ ರಾಶಿಯನ್ನೇ ಹೊಂದಿದೆ. ಜಾಲಾರಿ ಹೂವಿನ ಘಮಲು ಬೆಟ್ಟಕ್ಕೆ ಶೋಭೆ ನೀಡಿದೆ.ಔಷಧೀಯ ಗಿಡಮೂಲಿಕೆಗಳು ಸಿದ್ಧರಬೆಟ್ಟದ ವಿಶೇಷಗಳಲ್ಲೊಂದು. ಇದು ಅತ್ಯಂತ ಕಡಿದಾದ ಬೆಟ್ಟ. ಮೆಟ್ಟಿಲು ಬಿಟ್ಟು ಅಡ್ಡ ದಾರಿಗಿಳಿದರೆ ಬೆಟ್ಟ ಹತ್ತುವುದು ಕಷ್ಟ. ಅದು ಚಾರಣಿಗರಿಗೆ ಇಷ್ಟವಾದ ದಾರಿ. ನಸುಕಿನಲ್ಲೇ ಬೆಟ್ಟ ಹತ್ತುವುದು ಉತ್ತಮ. ಬಿಸಿಲಲ್ಲಿ ತ್ರಾಸು. ಬೆಟ್ಟದ ಅರ್ಧ ಭಾಗ ತಲುಪಿದರೆ ಗುಹೆಯೊಂದರ ದರ್ಶನ.ಕಿಷ್ಕಿಂಧೆಯಂತಹ ಜಾಗದಲ್ಲಿ ಗುಹೆ ಒಳ ಪ್ರವೇಶಿಸಿದ ತಕ್ಷಣ ಕಣ್ಣಿಗೆ ಮಬ್ಬು. ಅರೆಕ್ಷಣ ಏನೂ ಕಾಣಿಸುವುದಿಲ್ಲ. ಅಲ್ಲಿನ ಬೆಳಕಿಗೆ ಕಣ್ಣುಗಳು ಹೊಂದಿಕೊಂಡ ಮೇಲೆ ಗುಹೆಯ ಸೊಬಗು ಮನಸೆಳೆಯುತ್ತದೆ.ಒಂದರ ಮೇಲೊಂದನ್ನು ಜೋಡಿಸಿದಂತಿರುವ ಬೃಹತ್ ಬಂಡೆಗಳು. ಮೂಲೆಯಲ್ಲಿ ಉದ್ಭವ ಲಿಂಗ. ಅದರ ಎದುರು ಭಾಗದ ಪುಟ್ಟ ಕೊಳದಲ್ಲಿ ಉಕ್ಕುವ ಗಂಗೆಯ ತಣ್ಣನೆ ಕೊರೆತ. ಈ ಪವಿತ್ರ ಜಲದಲ್ಲಿ ಮಿಂದರೆ ಸರ್ವ ರೋಗಗಳು ಪರಿಹಾರ ಎನ್ನುವ ಪ್ರತೀತಿಯಿದೆ.

ರೋಗ ಪರಿಹಾರವನ್ನು ಬದಿಗಿಟ್ಟು ಆ ಶೀತಲ ಜಲವನ್ನು ಸ್ಪರ್ಶಿಸಿದರೆ ಮೈಮನ ರೋಮಾಂಚನ. ಮಿಂದರೆ ಪುಳಕ. ಅದ್ಭುತ ಅನುಭವ. ಅಲ್ಲಿಗೆ ಬೆಟ್ಟ ಹತ್ತಿದ ಆಯಾಸವೆಲ್ಲ ಪರಿಹಾರ. ಸಿದ್ಧರಬೆಟ್ಟ ಇರುವುದು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ತೋವಿನಕೆರೆ ಸಮೀಪದಲ್ಲಿ. ಈ ಬೆಟ್ಟದಲ್ಲಿ ಒಂದು ಬಗೆಯ ಅಪೂರ್ವ ಏಕಾಂತತೆಯಿದೆ.ಬೆಟ್ಟದ ಬುಡದಿಂದಲೇ ಅಲೌಕಿಕ ಲೋಕವೊಂದು ಅನಾವರಣಗೊಂಡಂತೆ ಭಾಸವಾಗುತ್ತದೆ.  ಉದ್ಭವಲಿಂಗದ ಎದುರು ಭಾಗದಲ್ಲೇ ಒಂದು ಗವಿಯಿದೆ. ಬ್ಯಾಟರಿ ಬೆಳಕಿನಲ್ಲಿ ಪಯಣ ಆರಂಭಿಸಬೇಕು. ಗವಿ ಒಳಭಾಗ ಒಂದು ಕಿಲೋ ಮೀಟರ್‌ಗೂ ಹೆಚ್ಚು ದೂರವಿದೆ. ಗುಹೆ ದೇವಾಲಯದೊಳಗೆ ಆರಂಭವಾಗಿ, ಹೊರಭಾಗದಲ್ಲಿ ಪೂರ್ಣಗೊಳ್ಳುತ್ತದೆ.ಬ್ಯಾಟರಿ ಬೆಳಕಿನಲ್ಲಿ ತೆವಳುತ್ತಾ, ನಡೆಯುತ್ತಾ, ಬಂಡೆಗಳನ್ನು ಹತ್ತಿ ಇಳಿಯುತ್ತಾ ಹೊರಟಾಗ ಮೈಮನವೆಲ್ಲ ರೋಮಾಂಚನ. ಸ್ಥಳೀಯರ ನೆರವಿಲ್ಲದೆ ಒಂದು ಹೆಜ್ಜೆಯೂ ಇಡಬಾರದು. ಕೆಲವೆಡೆ ಬಂಡೆಗಳ ನಡುವೆ ನುಸುಳಬೇಕು. ದೇಹವನ್ನು ಬಳುಕಿಸಿ ಸಾಗಬೇಕು.ಗವಿಯಲ್ಲಿ ಗಾಳಿಗೆ ಕೊರತೆಯಿಲ್ಲ. ಶುದ್ಧ ಗಾಳಿ. ಹೊರಗೆ ನೆತ್ತಿ ಸುಡುವ ಕೆಂಡದಂಥ ಬಿಸಿಲಿದ್ದರೂ; ಬಂಡೆಗಳ ಲೋಕದ ಗವಿಯೊಳಗೆ ತಣ್ಣನೆ ಅನುಭವ. ಕೆಲವೆಡೆ ಸೂರ್ಯನ ಬೆಳಕು ಸರಾಗ.ಕಾಡು ಮಾವು, ಕಾಡು ನೆಲ್ಲಿ, ಕಾಡು ನಿಂಬೆ, ಕಾಡು ದ್ರಾಕ್ಷಿ ಸೇರಿದಂತೆ ಸಸ್ಯವೈವಿಧ್ಯವೇ ಬೆಟ್ಟದಲ್ಲಿದೆ. ಅನೇಕ ಮರಗಳಿಗೆ ನೂರಾರು ವರ್ಷಗಳ ಚರಿತ್ರೆಯಿದೆ. ಅವುಗಳ ಬೇರು-ಬಿಳಲುಗಳು ಗವಿ ತುಂಬಾ ತುಂಬಿವೆ. ಬೃಹತ್ ಗಾತ್ರ ಹೊಂದಿವೆ.ಬೆಟ್ಟದ ತುದಿಗೆ ತಲುಪಿದರೆ ವಿಶಾಲ ಬಯಲು. ಹತ್ತು ಎಕರೆಗೂ ಹೆಚ್ಚಿನ ಸ್ಥಳ. ಸಮತಟ್ಟಾದ ಬಂಡೆ. ಸಾವಿರಾರು ಬಗೆಯ ಔಷಧಿ ಗಿಡಗಳು ಶತಮಾನಗಳಿಂದಲೂ ಇಲ್ಲಿ ಬೇರೂರಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry