ಸಿದ್ಧಾರೂಢರಿಗೆ ಸಂಭ್ರಮದ ಲಕ್ಷದೀಪೋತ್ಸವ

7

ಸಿದ್ಧಾರೂಢರಿಗೆ ಸಂಭ್ರಮದ ಲಕ್ಷದೀಪೋತ್ಸವ

Published:
Updated:

ಹುಬ್ಬಳ್ಳಿ: ಗುರುವಾರ ಸೂರ್ಯ ಮುಳುಗಿದಾಕ್ಷಣ ನಗರದ ಸಿದ್ಧಾರೂಢಮಠದ ಅಂಗಳದಲ್ಲಿ ಹಾಗೂ ಮುಖ್ಯದ್ವಾರದವರೆಗೂ ಎಣ್ಣೆ ಹಾಕಿ ಜೋಡಿಸಿಟ್ಟಿದ್ದ ಹಣತೆಗಳನ್ನು ಕೆಲವರು ಬೆಳಗಿಸಿದರು. ಇದಕ್ಕೆ ಮಠದ ಆವರಣದ ಮರಗಳಲ್ಲಿಯ ಗೂಡು ಸೇರಿದ್ದ ಹಕ್ಕಿಗಳು ಕಲರವ ಮೂಲಕ ಸಾಕ್ಷಿಯಾದವು. ಆದರೆ ಅಸಂಖ್ಯರು ಅಧಿಕೃತ ಚಾಲನೆ ಸಿಕ್ಕ ಮೇಲೆ ದೀಪ ಬೆಳಗಿಸೋಣ ಎಂದು ಕಾದರು. ಹೀಗೆ ಕಾಯ್ದು ಕುಳಿತವರನ್ನು ಮತ್ತೆ  ಕಾಯಿಸಲು ಹೋಗದ ಮಠದ ಮುಖ್ಯಸ್ಥರು, ಸಿದ್ದಾರೂಢರಿಗೆ ಮಹಾ ಮಂಗಳಾರತಿ ಮಾಡಲು ಮುಂದಾದರು.`ಗುರುರಾಜ ಸಿದ್ಧಾರೂಢ ಸಮರ್ಥ ಬೆಳಗುವೆ ಆರತಿಯ'

ಎಂದು ಕೆಲವರು ಹಾಡಿದರೆ, ನೆರೆದ ಭಕ್ತರು `ಶಿವಾಯ ನಮಃ' ಎಂದು ಕೈ ಮುಗಿದರು. ಹೀಗೆ ಸಿದ್ಧಾರೂಢರಿಗೆ ಮಹಾಮಂಗಳಾರತಿಯಾದ ತಕ್ಷಣ ಕಾರ್ತಿಕ ಮಾಸದ ಅಂಗವಾಗಿ ಏರ್ಪಡಿಸಿದ್ದ 18ನೇ ಲಕ್ಷ ದೀಪೋತ್ಸವಕ್ಕೆ ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಧರ ರಾವ್ ಹಾಗೂ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ನಟರಾಜನ್ ಚಾಲನೆ ನೀಡಿದರು. ಸಿಡಿಮದ್ದುಗಳು ಆಕಾಶದಲ್ಲಿ ಚಿತ್ತಾರ ಮೂಡಿಸಿದವು.  ಭಕ್ತರು ಇದನ್ನು ಹಾಗೂ ದೀಪ ಹಚ್ಚುವ ದೃಶ್ಯಗಳನ್ನು ಕಣ್ಣುಗಳಲ್ಲಿ ತುಂಬಿಕೊಂಡಿದ್ದಲ್ಲದೆ ಮೊಬೈಲುಗಳಲ್ಲಿ ಚಿತ್ರೀಕರಿಸಿಕೊಂಡರು.ನಂತರ ಸಿದ್ಧಾರೂಢ ಪ್ರೌಢಶಾಲೆಯ ವಿದ್ಯಾರ್ಥಿನಿಯರು, ಗೋಕುಲ ರಸ್ತೆಯ ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಕೈಲಾಸ ಮಂಟಪದ ಎದುರಿದ್ದ ದೀಪಗಳನ್ನು ಬೆಳಗಿದರು. ನಗರದ ರೈಲ್ವೆ ವರ್ಕ್‌ಶಾಪ್‌ನಲ್ಲಿ ಕಾರ್ಪೆಂಟರ್ ಆಗಿದ್ದ ಹನುಮಂತಪ್ಪ ಕಟ್ಟಿಮನಿ ಇದನ್ನು ಕಂಡು ಕೈ ಮುಗಿದರು. 79 ವರ್ಷದ ಕಟ್ಟಿಮನಿ, 17 ವರ್ಷಗಳ ಹಿಂದೆ ಲಕ್ಷ ದೀಪೋತ್ಸವ ದೊಡ್ಡ ಮಟ್ಟದಲ್ಲಿ ನಡೆಯಲು ಕಾರಣರಾದವರು. ಅವರ ಸುತ್ತ ಇದ್ದವರು ಅವರಿಗೆ ಗುರುಗಳು ಎಂದು ಕೈ ಮುಗಿದರು. ಸಿದ್ಧಾರೂಢರೇ ಗುರುಗಳು ಎಂದು ಅವರು ಮಠದತ್ತ ಕೈ ಮುಗಿದರು. ಅವರ ಹಾಗೆ ನೆರೆದ ಭಕ್ತರು ಕೈ ಮುಗಿಯುತ್ತ, ದೀಪಗಳನ್ನು ಹಚ್ಚಿದರು. ಕೆಲವರು ನಿಜಗುಣ ಶಿವಯೋಗಿಗಳ ರಚನೆಯ ಜ್ಯೋತಿ ಬೆಳಗುತಿದೆ

ವಿಮಲ ಪರಂಜ್ಯೋತಿ ಬೆಳಗುತಿದೆಎಂದು ಹಾಡಿದರು. ಅನೇಕರು ಐದು ಹಣತೆಗಳನ್ನು ಕೂಡಿಸಿ, ಜ್ಯೋತಿ ಬೆಳಗಿಸಿದರು. ಆಮೇಲೆ ಚುರುಮುರಿಯ ಪನಿವಾರ ಇಟ್ಟು, ಊದಿನಕಡ್ಡಿಗಳಿಂದ ಸಿದ್ಧಾರೂಢರು ಹಾಗೂ ಗುರುನಾಥರತ್ತ ಬೆಳಗಿ ಶರಣೆಂದರು. ನಂತರ ಸಿದ್ಧಾರೂಢರ ಅಂಗಾರ ಬಂಗಾರವೆಂದು ಹಣೆಗೆ ಹಚ್ಚಿಕೊಂಡರು. ಇನ್ನು ಕೆಲವರು ಆರಿದ ದೀಪಗಳನ್ನು ಮತ್ತೆ ಉರಿಸಿದರು. ಅನೇಕ ಮಹಿಳೆಯರು ಕಡಿಮೆ ಎಣ್ಣೆಯಿರುವ ಹಣತೆಗಳನ್ನು ಹುಡುಕಾಡಿ ಸುರಿದರು.ಇದರೊಂದಿಗೆ ಮುಖ್ಯದ್ವಾರದ ಬಳಿ ಪಾಣಿ ಪೀಠದ ಮೇಲೆ ಶಿವಲಿಂಗದ ಚಿತ್ರ ಹಾಗೂ ಸುತ್ತ ಸ್ವಸ್ತಿಕ್, ಓಂ ಎಂದು ಬರೆದಿರುವ ಕಡೆಯೆಲ್ಲ ದೀಪಗಳನ್ನು ಬೆಳಗಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry