ಸಿದ್ಧೇಶ್ವರ ಸ್ವಾಮೀಜಿ ಪ್ರವಚನಕ್ಕೆ ಜನಸಾಗರ.

7

ಸಿದ್ಧೇಶ್ವರ ಸ್ವಾಮೀಜಿ ಪ್ರವಚನಕ್ಕೆ ಜನಸಾಗರ.

Published:
Updated:

ಬಸವಕಲ್ಯಾಣ: ಬೆಳಿಗ್ಗೆ ಇಲ್ಲಿನ ಯಾರನ್ನಾದರೂ ‘ಸ್ನಾನ ಮಾಡಿದ್ರಾ’ ಎಂದು ಕೇಳಬೇಕಾದರೂ ಸ್ವಲ್ಪ ಯೋಚಿಸಬೇಕಾಗುತ್ತಿದೆ. ಏಕೆಂದರೆ ‘ಹುಚ್ಚಿದ್ದಿರೇನ್ರಿ, ಸಿದ್ಧೇಶ್ವರ ಅಪ್ಪವರ ಪ್ರವಚನಕ್ಕ ಹೋಗಿ ಬಂದೀನಿ ಅಂತ ಆವಾಗ್ಲೇ ಹೇಳಿಲ್ಲೇನು. ಸ್ನಾನ ಮಾಡದೆ ಪ್ರವಚನಕ್ಕ ಹೋಗ್ತಾರೇನು’ ಎಂದು ಮರುಪ್ರಶ್ನೆ ಹಾಕುವವರೇ ಹೆಚ್ಚಿನವರು ಸಿಗುತ್ತಿದ್ದಾರೆ. ‘ಎಲ್ಲರೂ ನಸುಕಿನಾಗೇ ಮೈ ತಕೊಂಡಿವಿ. ಪ್ರವಚನ ಕೇಳಿ ಬಂದು ಅಡಿಗಿ ಮಾಡಿ, ಆಗಲೇ ಊಟನೂ ಮಾಡೀವಿ’ ಎಂದು ಮಹಿಳೆಯರು ಚರ್ಚಿಸುತ್ತಿರುವುದು ಕಂಡು ಬರುತ್ತಿದೆ.ಒಟ್ಟಾರೆ, ಸದ್ಯ ಇಲ್ಲಿನ ಜನರು ವಿಜಾಪುರ ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಅವರ ಪ್ರವಚನದ ಗುಂಗಿನಲ್ಲಿ ಇದ್ದಾರೆ. ‘ಅಪ್ಪವರದು ಎಂಥ ಮಾತು. ಎಷ್ಟು ಸಾದಾ ಜೀವನ. ಇವರ ಪ್ರವಚನ ಕೇಳಿದರೆ ಖಂಡಿತವಾಗಿಯೂ ಎಂಥವರೂ ಸ್ವಲ್ಪವಾದರೂ ಬದಲಾಗುತ್ತಾರೆ’ ಎಂಬ ಅಭಿಪ್ರಾಯ ಎಲ್ಲರಿಂದ ವ್ಯಕ್ತವಾಗುತ್ತಿದೆ.

ಇಲ್ಲಿನ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಕಳೆದ ನಾಲ್ಕು ದಿನಗಳಿಂದ ಪ್ರವಚನ ನಡೆಯುತ್ತಿದ್ದು ಮಾರ್ಚ್ 10ರ ವರೆಗೆ ನಿರಂತರವಾಗಿ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 6.30 ರಿಂದ ಒಂದು ಗಂಟೆವರೆಗೆ ನಡೆಯುವ ಪ್ರವಚನ ಕೇಳಲು ಸಾವಿರಾರು ಜನರು ಸೇರುತ್ತಿದ್ದಾರೆ.ವೈದ್ಯರು, ಶಿಕ್ಷಕರು, ಎಂಜಿನಿಯರರು, ರಾಜಕಾರಣಿಗಳು, ವ್ಯಾಪಾರಸ್ಥರು ಹೀಗೆ ಎಲ್ಲ ವರ್ಗದ ಜನರು ಆಗಮಿಸುತ್ತಿದ್ದಾರೆ. ಸಮೀಪದ ಗ್ರಾಮಗಳಿಂದಲೂ ಜನರು ಬರುತ್ತಿದ್ದು ಮುಚಳಂಬದಿಂದ ಪ್ರತಿದಿನ ನೂರಕ್ಕೂ ಹೆಚ್ಚಿನ ಜನ ಆಗಮಿಸುತ್ತಿದ್ದಾರೆ ಎಂದು ಗ್ರಾಮಸ್ಥರಾದ ಕಾಶಿನಾಥಪ್ಪ ತಿಳಿಸಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇಲ್ಲಿನ ಪ್ರಸಿದ್ಧ ಬಸವೇಶ್ವರ ದೇವಸ್ಥಾನದ ಪಂಚ ಸಮಿತಿಯವರು ಪ್ರವಚನದ ವ್ಯವಸ್ಥೆ ಮಾಡಿದ್ದಾರೆ. ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಉಪಾಧ್ಯಕ್ಷ ಗದಗೆಪ್ಪ ಹಲಶೆಟ್ಟಿ ಹಾಗೂ ಸರ್ವ ನಿರ್ದೇಶಕರು ಕಾರ್ಯಕರ್ತರಂತೆ ದುಡಿದು ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ. ಜನರು ಸರಿಯಾದ ಸಮಯಕ್ಕೆ ಆಗಮಿಸಿ ವೇದಿಕೆಯ ಎದುರಿನಲ್ಲಿ ನೆಲದ ಮೇಲೆಯೇ ಶಿಸ್ತಾಗಿ, ಹಾಗೂ ಮೌನವಾಗಿ ಕದಲದೆ ಕುಳಿತು ಪ್ರವಚನ ಕೇಳುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry