ಸಿನಿಮಾದಷ್ಟು ಕಿರುತೆರೆ ರಂಗಭೂಮಿ ಕೆಟ್ಟಿಲ್ಲ

7

ಸಿನಿಮಾದಷ್ಟು ಕಿರುತೆರೆ ರಂಗಭೂಮಿ ಕೆಟ್ಟಿಲ್ಲ

Published:
Updated:
ಸಿನಿಮಾದಷ್ಟು ಕಿರುತೆರೆ ರಂಗಭೂಮಿ ಕೆಟ್ಟಿಲ್ಲ

ಪ್ರೇಕ್ಷಕರ ಪ್ರೀತಿಯಲ್ಲಿ, ಶ್ರಮದಲ್ಲಿ ಹಾಗೂ ಪ್ರತಿಭೆಯನ್ನು ಅರಸುವಲ್ಲಿ ಖಂಡಿತಾ ಜಾತಿಯ ಕೆಲಸ ನಡೆಯದು. ಉದಾಹರಣೆಗೆ ವರನಟ ರಾಜ್‌ಕುಮಾರ್‌ರನ್ನು ಆರಾಧಿಸುವ ಅದೆಷ್ಟೋ ಮೇಲ್ಜಾತಿಯ ಪ್ರೇಕ್ಷಕರಿದ್ದಾರೆ.

ಹಾಗೆಯೇ ವಿಷ್ಣುವರ್ಧನ್‌ರನ್ನು ತಮ್ಮ ಆರಾಧ್ಯ ದೈವ ಎಂದುಕೊಳ್ಳುವ ಅಸಂಖ್ಯ ಕೆಳಜಾತಿಯ ಪ್ರೇಕ್ಷಕ ವರ್ಗವಿದೆ. `ಅಭಿಮಾನಿ ದೇವರುಗಳು' ಎಂದಿಗೂ ಜಾತಿ ಆಧರಿಸಿ ಪ್ರೀತಿ ವ್ಯಕ್ತಪಡಿಸುವುದಿಲ್ಲ. ಶಂಕರನಾಗ್, ಸದಾಶಿವ ಬ್ರಹ್ಮಾವರ, ಅಶ್ವತ್ಥ್ ಮುಂತಾದ ನಟರದು ಯಾವ ಜಾತಿ, ಯಾವ ಕುಲ?ಇನ್ನೂ ವಿಷದವಾಗಿ ಹೇಳುವುದಾದರೆ ರಾಜ್‌ಕುಮಾರ್ ರಾಯರ ಪಾತ್ರವಹಿಸುವವರೆಗೆ ಮಂತ್ರಾಲಯ ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ಆಮೇಲೆ ಅನೇಕರು ಆ ಪಾತ್ರ ವಹಿಸಿದರು. ಆದರೆ ಇವತ್ತಿಗೂ ರಾಜ್ ಜನಮಾನಸದಲ್ಲಿ ರಾಯರಾಗಿ ಚಿರಸ್ಥಾಯಿ. ಅವರು ಆ ಪಾತ್ರ ಮಾಡಬಾರದೆಂದು ತಡೆದವರು ಎಷ್ಟೋ ಮಂದಿ. ಆದರೆ ರಾಜ್‌ರ ಪ್ರತಿಭೆಯ ಮುಂದೆ ಜಾತಿ ಲೆಕ್ಕಕ್ಕೆ ಬರಲಿಲ್ಲ.ಪೀಟರ್ ಬ್ರೂಕ್ ತಮ್ಮ `ಮಹಾಭಾರತ' ಚಲನಚಿತ್ರದಲ್ಲಿ ಭೀಮನ ಪಾತ್ರಕ್ಕೆ ವಿದೇಶಿ ಕಪ್ಪು ವರ್ಣೀಯರಾಗಿದ್ದ ಮಮದಾವು ದಿಯೌಮೆ ಅವರನ್ನು ದುಡಿಸಿಕೊಂಡಿದ್ದರು. ಎಲ್ಲಿಯ ಭೀಮ... ಎಲ್ಲಿಯ  ಬ್ರೂಕ್... ಎಲ್ಲಿಯ ಮಹಾಭಾರತ... ಎಲ್ಲಿಯ ದಿಯೌಮೆ... ಕಲೆಗೆ ಜಾತಿ ಧರ್ಮವಿಲ್ಲ ಎನ್ನುವುದು ಇದಕ್ಕೇ.ಶ್ರಮದ ವಿಚಾರದಲ್ಲಿ ಕೂಡ ಜಾತಿ ಅಸ್ತಿತ್ವದಲ್ಲಿಲ್ಲ. ಎಲ್ಲ ಜಾತಿಯ ಜನರೂ ತಾಂತ್ರಿಕ ವರ್ಗ, ನಿರ್ದೇಶಕರು, ಛಾಯಾಗ್ರಾಹಕರು ಇರುವುದನ್ನು ನಾವೆಲ್ಲಾ ಕಂಡಿದ್ದೇವೆ. ಪ್ರತಿಭೆಯನ್ನು ಅರಸುವಾಗಲೂ ಜಾತಿಯ ಪಾತ್ರ ನಗಣ್ಯ. ಜಾತಿಯನ್ನು ಬಳಸಿ ಪ್ರತಿಭೆಗಳನ್ನು ಹುಡುಕುವುದು ಅಸಾಧ್ಯದ ಮಾತು. ಈ ನಿಟ್ಟಿನಲ್ಲಿ ಜಾತಿ ಇಲ್ಲವೆಂದೇ ಹೇಳಬಹುದು. ಆದರೆ...ಯಾವಾಗ ಪ್ರಶಸ್ತಿ, ಅಧಿಕಾರ, ಲಾಭ ಇತ್ಯಾದಿ ಆಮಿಷಗಳಿಗೆ ಮಹತ್ವ ದೊರೆಯಿತೋ ಆಗ ಜಾತಿಯ ಹಂಗು `ಕಲಾಕ್ಷೇತ್ರ'ಗಳನ್ನೂ ಆವರಿಸತೊಡಗಿತು. ಈ ಬಗೆಯ ರಾಜಕೀಯ ಪ್ರೇರಣೆ ದೊರೆತೊಡನೆ ಜಾತಿಯ ವಾಸನೆ ಬಡಿಯತೊಡಗಿತು. ಅವಕಾಶ ವಂಚಿತರಾದ ಕೆಲವರು `ತಮ್ಮವರಿಗೆ' ಲಾಭ ದೊರೆಯಬೇಕು ಎಂದು ಲಾಬಿ ಮಾಡತೊಡಗಿದರು. ಇದೆಲ್ಲ `ಕಲಿತ ಕಳ್ಳ'ರಿಂದಲೇ ಆದ ಅವಾಂತರ ಎಂದು ನನ್ನ ಭಾವನೆ. ಕಲಿತ ಕಳ್ಳರು ಶಿಕ್ಷಣ ಪಡೆದರೇ ವಿನಾ ಸಂಸ್ಕಾರಯುತ ವಿದ್ಯೆ ಪಡೆಯಲಿಲ್ಲ.ಅಕ್ಷರಸ್ಥರು ಜಾತಿಯ ವಿಷಬೀಜವನ್ನು ಕಲಾಕ್ಷೇತ್ರಗಳಲ್ಲಿ ಬಿತ್ತತೊಡಗಿದರು. ಯೋಗ್ಯತೆ ಇಲ್ಲದಿದ್ದರೂ ಘನತೆ ಬೇಕು ಎಂಬುದು ಅವರ ಮುಖ್ಯ ಬೇಡಿಕೆಯಾಗಿತ್ತು. ಯಾವ ಪ್ರದೇಶದಲ್ಲಿ ಯಾವ ಜಾತಿಯ ಜನರು ಹೆಚ್ಚಿದ್ದಾರೋ ಅವರ ಮಾತು ನಡೆಯತೊಡಗಿತು.ಜಾತಿ ಎಂಬುದು ಕೊಳ್ಳುಬಾಕ ಸಂಸ್ಕೃತಿಯ ಪ್ರತಿನಿಧಿಯಂತೆ ನನಗೆ ತೋರುತ್ತಿದೆ. ಅವರು ಇಷ್ಟು ಎಕರೆ ಜಮೀನು ಮಾಡಿಕೊಳ್ಳುತ್ತಾರೆ ತಾನು ಅವರಿಗಿಂತಲೂ ಹೆಚ್ಚು ಜಮೀನು ಮಾಡಿಕೊಳ್ಳಬೇಕು ಎಂದುಕೊಂಡ ಮಂದಿ ಚಿತ್ರರಂಗಕ್ಕೆ ಪ್ರವೇಶಿಸತೊಡಗಿದರು. ಕಪ್ಪು ಹಣವನ್ನು ಬಿಳಿ ಮಾಡುವ ನೆಪದಲ್ಲಿ, ತಮ್ಮ ಮಕ್ಕಳು ಮಾತ್ರ ನಾಯಕರಾಗಿ ಮಿಂಚಿಸುವ ನೆವದಲ್ಲಿ ಅವರು ದಾಂಗುಡಿಯಿಟ್ಟರು.ಆದರೆ ಪ್ರೇಕ್ಷಕರು ಇಂಥದ್ದನ್ನೆಲ್ಲಾ ತಿರಸ್ಕರಿಸತೊಡಗಿದರು. ಆಗ ಉಳಿಯಲೇ ಬೇಕೆಂಬ ಹಟದೊಂದಿಗೆ ಆ ವರ್ಗ `ನಮ್ಮವರು ತಮ್ಮವರು' ಎಂಬ ಜಾತಿಯ ವಿಷಬೀಜ ಬಿತ್ತತೊಡಗಿತು.ಹಿಂದೆ ಚಿತ್ರರಂಗದಲ್ಲಿ ಜಾತಿ ನಗಣ್ಯವಾಗಿತ್ತು. ಕ್ರಮೇಣ ಅಲ್ಲಲ್ಲಿ ಅಂಕುರಿಸಿತು. ಆಮೇಲೆ ಪ್ರಬಲವಾಗತೊಡಗಿತು. ಇದು ಉಲ್ಟಾ ಆಗಬೇಕಿತ್ತು. ಆದರೆ ಹಾಗಾಗಲು ಕಲಿತ ಕಳ್ಳರು ಅವಕಾಶ ಮಾಡಿಕೊಡಲಿಲ್ಲ.ಸಿನಿಮಾದಲ್ಲಿ ಎದ್ದು ತೋರುವ ಜಾತಿ, ಕಿರುತೆರೆಯ ವಿಚಾರದಲ್ಲಿ ಇಲ್ಲವೆಂದೇ ಹೇಳಬಹುದು. ಏಕೆಂದರೆ ಇಲ್ಲಿ ಅಧಿಕಾರ, ಲಾಭ, ಮನ್ನಣೆ ಇತ್ಯಾದಿ ಆಮಿಷಗಳಿಲ್ಲ. ಯಾರೋ ಹೇಳಿದರು: ಆತ ಜನಿವಾರದ ನಿರ್ದೇಶಕ. ನಿಮ್ಮನ್ನು ತಬ್ಬಿಕೊಂಡು ಪರೀಕ್ಷಿಸುತ್ತಾನೆ. ನೀವು ಜನಿವಾರ ತೊಟ್ಟಿದ್ದರೆ ಮಾತ್ರ ಪ್ರವೇಶ.ಆದರೆ ಆ ವ್ಯಕ್ತಿ ಹಾಗೇನೂ ಆಗಿರಲಿಲ್ಲ. ಮತ್ತೊಬ್ಬ ನಿರ್ದೇಶಕರು ಉಚ್ಛರಣೆಯ ಕಾರಣಕ್ಕೆ ಶೂದ್ರರು ದಲಿತರನ್ನು ತಿರಸ್ಕರಿಸುತ್ತಾರೆ ಎಂಬ ಮಾತಿತ್ತು. ಆದರೆ ಅವರು ಹೇಳಿದ್ದಿಷ್ಟು: ಕನ್ನಡ ಸರಿಯಾಗಿ ನುಡಿವವರನ್ನು ಹಾಕಿಕೊಂಡರೆ ತಪ್ಪೇನು? ಪ್ರತಿಯೊಬ್ಬರೂ ಕನ್ನಡ ಭಾಷೆಯ ಋಣದಲ್ಲಿರುವುದರಿಂದ ಆ ರೀತಿ ಅಪೇಕ್ಷಿಸುವುದು ತಪ್ಪೇ?ಸಿಹಿಕಹಿ ಚಂದ್ರು ಆಪತ್ತಿನಲ್ಲಿದ್ದ ಹೊತ್ತಿನಲ್ಲಿ ನಟ ಜಹಾಂಗೀರ್ ಅವರಿಗೆ ಬೆನ್ನೆಲುಬಾಗಿ ನಿಂತರು. ಜಹಾಂಗೀರ್ ಅವರು ಚಂದ್ರುವಿಗೆ ಮನೆ ಮಗನಿಗಿಂತಲೂ ಹೆಚ್ಚು. ಈಗ ಹೇಳಿ ಜಹಾಂಗೀರ್ ಅವರದು ಯಾವ ಜಾತಿ? ಚಂದ್ರು ಅವರದು ಯಾವ ಜಾತಿ? ಕೆಳಜಾತಿಯಿಂದ ಬಂದಂತಹ ಕಲಾ ನಿರ್ದೇಶಕ ಬಾದಲ್‌ರ ಕಲಾಕೃತಿಗಳಿಗೆ, ಪಿಚ್ಚಳ್ಳಿ ಶ್ರೀನಿವಾಸ್ ಹಾಡುಗಳಿಗೆ ಜಾತಿಯ ಸೋಂಕು ಹತ್ತಿಸಲು ಸಾಧ್ಯವೇ? ಕಿರುತೆರೆಯಲ್ಲಿ ಜಾತಿಯನ್ನು ಹುಡುಕುವುದು ಕುತ್ಸಿತ ಮನೋಭಾವದವರು ನಡೆಸುವ ಕಾಡುಹರಟೆ ಎಂದೇ ನನ್ನ ಭಾವನೆ. ಇಂತಹ ವಾದಗಳಿಗೆ ಬಲವಾದ ಪುರಾವೆಗಳಿಲ್ಲ.ಕಿರುತೆರೆಯಂತೆ ರಂಗಭೂಮಿಗೆ ಕೂಡ ಜಾತಿಯ ವಿಷ ಹತ್ತಿಲ್ಲ. ರಂಗಭೂಮಿ ಹೇಳಿಕೇಳಿ ಜಾನಪದದ ಕೂಸು. ಜಾನಪದ ಹುಟ್ಟಿಕೊಂಡದ್ದೇ ಜನರ ಮಧ್ಯೆ. ಅದರಲ್ಲಿಯೂ ಶ್ರಮಿಕ ಜನರ ಮಧ್ಯೆ. ವೃತ್ತಿ ರಂಗಭೂಮಿಯ ಆದ್ಯರು ಯಾರು ಎಂದು ಕೇಳಿಕೊಂಡರೆ ಮೊದಲು ಸಿಗುವ ಉತ್ತರವೇ ಪೀರ್ ಸಾಹೇಬ್. ಅವರು ಗೌತಮ ಬುದ್ಧನ ಪಾತ್ರ ಮಾಡುತ್ತಿದ್ದರೆ ಪ್ರೇಕ್ಷಕರು ಸಾಲುಸಾಲಾಗಿ ಉದ್ದಂಡ ನಮಸ್ಕಾರ ಮಾಡುತ್ತಿದ್ದರು.ಮಂಡ್ಯಂ ರಂಗಾಚಾರ್, ಕೊಟ್ಟೂರಪ್ಪ, ವರದಾಚಾರ್, ಗುಬ್ಬಿ ವೀರಣ್ಣ ಇವರದು ಯಾವ ಜಾತಿ ಎಂದು ಯಾರಾದರೂ ಕೇಳಲು ಬಯಸುವರೇ? ಮನೆ ಬಿಟ್ಟು ಓಡಿಬಂದ ಬಿ.ವಿ.ಕಾರಂತ ಎಂಬ ಹುಡುಗನಿಗೆ ಗುಬ್ಬಿ ವೀರಣ್ಣ ಜಾತಿಯ ಕಾರಣಕ್ಕೆ ಕೆಲಸ ನೀಡದಿದ್ದರೆ, ಅವರ ಹಿಂದಿ ಜ್ಞಾನವನ್ನು ಪ್ರೋತ್ಸಾಹಿಸಿ ಎನ್‌ಎಸ್‌ಡಿಗೆ ಕಳುಹಿಸದಿದ್ದರೆ ಎಂಥ ನಷ್ಟವಾಗುತ್ತಿತ್ತು. `ನೀನಾಸಂ' ಅನ್ನು ಬ್ರಾಹ್ಮಣರ ಸಂತೆ ಎನ್ನುವವರಿದ್ದಾರೆ. ಆದರೆ ಇಕ್ಬಾಲ್ ಅಹಮದ್ ಅಂತಹವರು ನೀನಾಸಂ ಪ್ರತಿಭೆಗಳಲ್ಲವೇ? ಬಿ.ವಿ. ಕಾರಂತ, ಕೆ.ವಿ. ಸುಬ್ಬಣ್ಣ ಅವರಂತೂ ಕನಸು ಮನಸ್ಸಿನಲ್ಲಿಯೂ ಜಾತಿ ನೆಚ್ಚಿಕೊಂಡವರಾಗಿರಲಿಲ್ಲ.ಆದರೆ ಯಾವಾಗ ವಿಶ್ವವಿದ್ಯಾಲಯ ಮಾದರಿಯ ಶಿಕ್ಷಣ ರಂಗಭೂಮಿಗೂ ಕಾಲಿಟ್ಟಿತೋ ಆಗ ರೆಪರ್ಟರಿಗಳಲ್ಲೂ ಜಾತಿಯ ಸೋಂಕು ಕಾಣಿಸಿಕೊಳ್ಳತೊಡಗಿತು. ಅವಕಾಶವಾದಿಗಳು ಜಾತಿಯ ಅಸ್ತ್ರ ಹಿಡಿದು ಓಡಾಡತೊಡಗಿದರು. ಆದರೆ ಇದರಿಂದ ಕಲೆಗೆ ದೊಡ್ಡ ಪ್ರಮಾಣದ ಹಾನಿ ಆಗಲಿಲ್ಲ. ದುರ್ಗಂಧದ ಅನುಭವವಾದರೂ ಅದರಿಂದ ಪರಿಮಳದ ಗಾಳಿಯನ್ನು ತಡೆಯಲು ಸಾಧ್ಯವಾಗಲಿಲ್ಲ ಎನ್ನುವುದು ಸಮಾಧಾನದ ಸಂಗತಿ. ಜಾತಿ ಎರಡು ಬಾರಿ ನನ್ನ ಅನುಭವಕ್ಕೆ ಬಂದಿದೆ. ನಾನಿನ್ನೂ ಆಗ ಚಿಕ್ಕವನು. ಯಾವುದೋ ಊರಿಗೆ ಸೈಕಲ್‌ನಲ್ಲಿ ಸ್ನೇಹಿತರೊಂದಿಗೆ ತೆರಳಿದ್ದೆ. ಆಗ ಅಲ್ಲಿದ್ದ ಮಠದಲ್ಲಿ ಊಟ ಏರ್ಪಾಟಾಗಿತ್ತು. ನಾನು ಮೇಲ್ಜಾತಿಗೆ ಸೇರಿದವನಲ್ಲ ಎಂಬ ಕಾರಣಕ್ಕೆ ಪಂಕ್ತಿ ಭೇದ ಅನುಸರಿಸಲಾಯಿತು. ಅಂದಿನಿಂದ ಜಾತಿಯ ಬಗ್ಗೆ ಅಸಹ್ಯ ಹುಟ್ಟಿತು.ಮತ್ತೊಂದು ಪ್ರಸಂಗ. ಜಾತಿಯ ಕಾರಣಕ್ಕೆ ನನ್ನನ್ನು ನಾಡಿನ ಮಹತ್ವದ ಹುದ್ದೆಯಿಂದ ದೂರ ಉಳಿಸಲಾಯಿತು. ಆಗ ನಕ್ಕು ಸುಮ್ಮನಾದೆ. ಪ್ರೇಕ್ಷಕರ ಪ್ರೀತಿ ನನ್ನೊಂದಿಗಿತ್ತು. ಅದಕ್ಕಿಂತಲೂ ದೊಡ್ಡ ಸ್ಥಾನಮಾನ ಯಾವುದಿದೆ ಹೇಳಿ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry