ಸಿನಿಮಾಮುಖಿ ಬ್ಲ್ಯಾಕ್‌ಬೆಲ್ಟ್ ಹುಡುಗಿ

7

ಸಿನಿಮಾಮುಖಿ ಬ್ಲ್ಯಾಕ್‌ಬೆಲ್ಟ್ ಹುಡುಗಿ

Published:
Updated:
ಸಿನಿಮಾಮುಖಿ ಬ್ಲ್ಯಾಕ್‌ಬೆಲ್ಟ್ ಹುಡುಗಿ

ಈ ಕ್ಷೇತ್ರದಲ್ಲಿ ಯಾರನ್ನೂ ಕೂಡಲೇ ನಂಬಬಾರದು. ಸರಿಹೊಂದುವ ಅವಕಾಶ ಸಿಗುವವರೆಗೆ ಕಾಯಬೇಕು ಎನ್ನುವ ಉತ್ತರ ಕರ್ನಾಟಕ ಹುಡುಗಿ ಸೌಮ್ಯ ಮಾಡೆಲಿಂಗ್ ಕ್ಷೇತ್ರದ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಮಾಡೆಲಿಂಗ್ ಕೇತ್ರದಲ್ಲಿ ಆಸಕ್ತಿ ಬೆಳೆಯಲು ಕಾರಣ?

ಚಿಕ್ಕಂದಿನಿಂದ ಮೇಕಪ್ ಅಂದರೆ ಇಷ್ಟ. ಧಾರಾವಾಹಿ, ಸಿನಿಮಾಗಳನ್ನು ನೋಡಿ ನಾನೂ ಟೀವಿಯಲ್ಲಿ ಕಾಣಿಸಿಕೊಳ್ಳಬೇಕು ಎಂದುಕೊಳ್ಳುತ್ತಿದ್ದೆ. ಕಾಲೇಜು ಮುಗಿಸಿ ಗಗನಸಖಿಯಾಗಿ ಸೇರಿಕೊಂಡೆ. ಮುಂಬೈನಲ್ಲೇ ಮಾಡೆಲಿಂಗ್‌ಗೆ ಅವಕಾಶಗಳು ಸಿಕ್ಕಿದವು.ಮನೆಯಲ್ಲಿ ಬೆಂಬಲ ಹೇಗಿತ್ತು?

ಅಪ್ಪ ಹಾವೇರಿಯವರು. ಸಂಪ್ರದಾಯಸ್ಥ ಕುಟುಂಬ. ಮೊದಮೊದಲಿಗೆ ಅಪ್ಪ ವಿರೋಧ ವ್ಯಕ್ತಪಡಿಸಿದರು. ಅವಕಾಶಗಳು ಸಿಕ್ಕಮೇಲೆ ಇಲ್ಲೂ ಒಳ್ಳೆಯವರಿರುತ್ತಾರೆ ಎಂದು ಮನವರಿಕೆ ಮಾಡಿಕೊಟ್ಟೆ. ಕೊನೆಗೂ ಒಪ್ಪಿಕೊಂಡರು.ನಿಮಗಾದ ಸಂತೋಷದ ಅನುಭವ?

ಮೊದಲ ಬಾರಿಗೆ ಪ್ರಾಜೆಕ್ಟ್ ಒಂದರಲ್ಲಿ ನನ್ನನ್ನು ಮಾಡೆಲ್ ಆಗಿ ಆಯ್ಕೆ ಮಾಡಿದಾಗ ಸಂತೋಷವಾಯಿತು. ಈ ಕೇತ್ರದ ಕೆಲವೇ ಕೆಲವು ಒಳ್ಳೆಯವರಲ್ಲಿ ಒಬ್ಬರಾದ ರಾಜೇಶ್ ಜವೇರಿ ಸಂಯೋಜಕರಾಗಿ ಸಿಕ್ಕಾಗ ಮತ್ತಷ್ಟು ಸಂತೋಷವಾಯಿತು.ಕಹಿ ಅನುಭವ?

ಇಂಟರ್‌ನೆಟ್‌ನಲ್ಲಿ ಮಾಡೆಲ್ ಬೇಕಾಗಿದ್ದಾರೆ ಎಂಬ ಜಾಹೀರಾತು ನೋಡಿ ಕರೆ ಮಾಡಿದೆ. ಆ ಕಡೆ ಧ್ವನಿ ಕನ್ನಡಿಗರದ್ದೇ; ಬೆಂಗಳೂರಿನವರು. `ಮಾಡೆಲ್ ಆಗಬೇಕು ಎಂದರೆ ಎಲ್ಲಾ ವಿಷಯದಲ್ಲೂ ರಾಜಿ ಆಗಲೇಬೇಕು; ಸಿದ್ಧರಿದ್ದರೆ ಬನ್ನಿ~ ಎಂದರು.ತುಂಬಾ ಕಡೆ ಪ್ರಯತ್ನಿಸಿದಾಗ ತಿರಸ್ಕೃತಳಾಗಿದ್ದೆ. ಹಿಂದಿ ಧಾರಾವಾಹಿಯಲ್ಲಿ ಅಭಿನಯಿಸಲು ಕೆಲವು ಸುತ್ತುಗಳಲ್ಲಿ ಆಯ್ಕೆಯಾದೆ. ಆಮೇಲೆ 2 ಲಕ್ಷ ರೂ. ಕೊಟ್ಟರೆ ನಿನ್ನನ್ನೇ ಈ ಪಾತ್ರಕ್ಕೆ ಆಯ್ಕೆ ಮಾಡ್ತೀನಿ ಅಂದ್ರು. ನಾನೇ ದುಡಿಯೋಕೆ ಬಂದಿರೋಳು. ಅವರಿಗೆಲ್ಲಿಂದ ದುಡ್ಡು ಕೊಡಲಿ. ಬೇಜಾರಾಯ್ತು. ಅವಕಾಶ ಬರುವವರೆಗೆ ಸರಿದಾರಿಯಲ್ಲೇ ಕಾಯಬೇಕು ಎಂದು ನಿರ್ಧರಿಸಿದೆ.ಈ ಕೇತ್ರದಲ್ಲಿರುವ ಸವಾಲು?

ಯಾರನ್ನೂ ಬೇಗ ನಂಬಬಾರದು. ಒಳ್ಳೆ ಮನಸ್ಸಿಟ್ಟುಕೊಂಡು ಮಾಡೆಲಿಂಗ್‌ಗೆ ಕರೆಯೋರು ತುಂಬಾ ಕಡಿಮೆ. ಥಟ್ಟಂತ ಅವಕಾಶ ಕೊಟ್ಟು, ವಿನಾಕಾರಣ ಹೊಗಳುತ್ತಿದ್ದರೆ ನಮ್ಮಿಂದ ಬೇರೇನನ್ನೋ ಬಯಸುತ್ತಿದ್ದಾರೆ ಎಂದೇ ಅರ್ಥ.ತಪ್ಪಾಗಿ ನಡೆದುಕೊಳ್ಳುವುದು, ಯಾವುದೋ ಸಮಯಕ್ಕೆ `ಅಲ್ಲಿ ಬಾ ಇಲ್ಲಿ ಬಾ~ ಎಂದು ಕರೆಯುವ ಸಂದರ್ಭಗಳು ಸಾಕಷ್ಟಿವೆ. ಅವಕಾಶ ತಪ್ಪಿದರೆ ತಪ್ಪಲಿ. ಹಣ ಬೇಕು ಎಂಬ ಕಾರಣಕ್ಕೆ ಹೇಳಿದಂತೆ ಮಾಡಿ ನಮ್ಮತನ ಕಳೆದುಕೊಂಡರೆ ತೊಂದರೆ ಕಟ್ಟಿಟ್ಟಬುತ್ತಿ. ಉತ್ತರ ಭಾರತದಿಂದ ಬಂದ ಹುಡುಗಿಯರು ಥಟ್ಟನೆ ಈ ಕೂಪದಲ್ಲಿ ಸಿಕ್ಕಿಬೀಳುವುದನ್ನೂ ಕಣ್ಣಾರೆ ಕಂಡಿದ್ದೇನೆ.ಡಯೆಟಿಂಗ್?


ಮಾಡಲ್ಲ. ಎಲ್ಲ ಆಹಾರವನ್ನೂ ತಿನ್ನುತ್ತೇನೆ. ಮಿತಿಮೀರಿ ತಿನ್ನುವುದಿಲ್ಲ. ಮಾಡೆಲ್ ಅಂದಮೇಲೆ ತೆಳ್ಳಗಿರಬೇಕು, ಎತ್ತರವಾಗಿರಬೇಕು, ಚರ್ಮದ ಕಾಂತಿ ಕಾಯ್ದುಕೊಳ್ಳಬೇಕು. ಆ ಬಗ್ಗೆ ಸ್ವಲ್ಪ ಕಾಳಜಿ ಇದ್ದರೆ ಸಾಕು. ಇನ್ನಾದರೂ ಜಿಮ್‌ಗೆ ಹೋಗಿ ವ್ಯಾಯಾಮ ಮಾಡಬೇಕು ಎಂದುಕೊಳ್ಳುತ್ತಿದ್ದೇನೆ.ನಿಮ್ಮ ಸ್ಫೂರ್ತಿ?

ದೀಪಿಕಾ ಪಡುಕೋಣೆ ನನಗೆ ಸ್ಫೂರ್ತಿ. ಅವರು ಕನ್ನಡಿಗರು. ಬೆಂಗಳೂರಿನವರು. ಕಡಿಮೆ ಸಮಯದಲ್ಲಿ ಜನಪ್ರಿಯರಾದರು. ಅವರ ಸಿನಿಮಾಗಳು ಹಿಟ್ ಆದವು. ಕೆಲವರು ನನಗೆ ದೀಪಿಕಾ ಹೋಲಿಕೆ ಇದೆ ಎನ್ನುತ್ತಾರೆ. ಆಗ ತುಂಬಾ ಖುಷಿಯಾಗುತ್ತೆ. (ನಗು)ಅಂದರೆ ನಿಮಗೂ ಸಿನಿಮಾ ಮಾಡುವ ಬಯಕೆ ಇದೆ, ಅಲ್ಲವೇ?

ಖಂಡಿತ. ಸಿನಿಮಾ, ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇದೆ. ಒಳ್ಳೆಯ ಅವಕಾಶ ಸಿಕ್ಕರೆ ಅಭಿನಯಿಸುತ್ತೇನೆ. ಯಾವ ಥರದ ಉಡುಪು ಇಷ್ಟ?

ಸೀರೆ ಇಷ್ಟ. ಜೀನ್ಸ್, ಶಾರ್ಟ್ಸ್ ಎಲ್ಲ ಧರಿಸುತ್ತೇನೆ. ಆದರೆ ನಮ್ಮ ದೇಹವನ್ನು ಅಸಹ್ಯವಾಗಿ ತೋರಿಸುವಂತೆ ಅರೆಬರೆ ಉಡುಪುಗಳು ಇಷ್ಟವಾಗೊಲ್ಲ. ಬಿಗಿಯಾದ ಬಟ್ಟೆಯಾದರೂ ಪರವಾಗಿಲ್ಲ. ಆದರೆ, ಜಾಸ್ತಿ `ಎಕ್ಸ್‌ಪೋಸ್~ ಆಗುವಂತಿರಬಾರದು.ಮುಂದಿನ ಗುರಿ?

ನನಗೀಗ 22 ವರ್ಷ. ದೂರಶಿಕ್ಷಣದಲ್ಲಿ ಬಿ.ಎಸ್ಸಿ ಮಾಡುತ್ತಿದ್ದೇನೆ. ಸಂಬಂಧಿಕರಿಗೂ ನಮ್ಮ ಕಡೆಯವಳೊಬ್ಬಳು ಟೀವಿಯಲ್ಲಿ ಕಾಣಿಸಿಕೊಳ್ಳುತ್ತಾಳೆ ಎಂಬ ಖುಷಿ ಇದೆ.ಈಗಾಗಲೇ ಮದುವೆಯ ಪ್ರಸ್ತಾಪಗಳು ಬರುತ್ತಿವೆ. ಮೂರ‌್ನಾಲ್ಕು ವರ್ಷದೊಳಗೆ ಮದುವೆ ಆಗೇ ಆಗುತ್ತೆ. ಅಲ್ಲಿಯವರೆಗೆ ಮಾಡೆಲಿಂಗ್ ಹಾಗೂ ಅಭಿನಯ ಕ್ಷೇತ್ರದಲ್ಲಿ ಮನಃಪೂರ್ತಿ ತೊಡಗಿಸಿಕೊಳ್ಳುತ್ತೇನೆ. ಮುಂದಿನದು ಗೊತ್ತಿಲ್ಲ. ಡಿಗ್ರಿ ಅಂತೂ ಇರುತ್ತಲ್ಲ.ಅಭಿನಯಕ್ಕೆ ಸಂಬಂಧಿಸಿದಂತೆ ತರಬೇತಿ ಪಡೆದಿದ್ದೀರಾ?

ಕ್ಲಾಸ್‌ಗೆ ಹೋಗಿ ತರಬೇತಿ ಏನೂ ಪಡೆದಿಲ್ಲ. ಪಾಶ್ಚಾತ್ಯ ನೃತ್ಯ ಮಾಡುತ್ತೇನೆ. ಟೀವಿ ನನ್ನ ಗುರು. ಸಮಕಾಲೀನ ನೃತ್ಯ, ಇಂಡಿಯನ್ ಡಾನ್ಸ್ ಎಂದರೆ ಇಷ್ಟ. ಯಕ್ಷಗಾನ ಕಲಿತಿದ್ದೇನೆ. ನಾನು ಕರಾಟೆ ಬ್ಲ್ಯಾಕ್ ಬೆಲ್ಟ್!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry