ಸಿನಿಮಾ ಆರಾಮ ಅಲ್ಲ...

7

ಸಿನಿಮಾ ಆರಾಮ ಅಲ್ಲ...

Published:
Updated:

ಸ್ಫುಟವಾದ ಮಾತಿನ ನಟಿ ಅಕ್ಷತಾ ರಾವ್. ಪಿ ಶೇಷಾದ್ರಿ ನಿರ್ದೇಶನದ `ಚಕ್ರತೀರ್ಥ~ ಧಾರಾವಾಹಿಯಲ್ಲಿ ನಟಿಸಿ ಹೆಸರು ಮಾಡಿದ ಅವರು ಸದ್ಯ ಪಾತ್ರಗಳ ಹುಡುಕಾಟದಲ್ಲಿದ್ದಾರೆ.ಬೆಂಗಳೂರಿನ ಹುಡುಗಿ ಅಕ್ಷತಾಗೆ ಮೂರನೇ ತರಗತಿಯಲ್ಲಿ ಓದುವಾಗಲೇ ನಟಿಸುವ ಅವಕಾಶ ಸಿಕ್ಕಿತ್ತು. ಬಿ.ವಿ.ಕಾರಂತ ದಂಪತಿಗಳು ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ `ಅಳಿಲು ರಾಮಾಯಣ~ ನಾಟಕ ಆಡಿಸಿದ್ದರು. ಅದರಲ್ಲಿ ಅಕ್ಷತಾ ಪಾತ್ರ ನಿರ್ವಹಿಸಿದ್ದರು. ಆಗಲೇ ಅವರಲ್ಲಿ ನಟಿಯಾಗಬೇಕೆಂಬ ಬಯಕೆ ಚಿಗುರೊಡೆದಿತ್ತು.ಅಲ್ಲಿಂದ ವರ್ಷಕ್ಕೊಂದು ನಾಟಕದಲ್ಲಿ ಅಭಿನಯಿಸಬೇಕು ಎಂದು ಯೋಜನೆ ಹಾಕಿಕೊಂಡ ಅವರು ಬೀದಿ ನಾಟಕಗಳಿಗೂ ಬಣ್ಣ ಹಚ್ಚಿದರು. `ಮಾ ಮಾ ಮೋಶಿ~, `ಧಾಂ ಧೂಂ ಸುಂಟರಗಾಳಿ~, `ಹುಚ್ಚು ಕುದುರೆ, ಮೂರು ಮಕ್ಕಳು~, `ಕಮಲಮಣಿ ಕಾಮಿಡಿ ಕಲ್ಯಾಣ, `ಕಡಲ ಮೌನ~ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.ಪ್ರೇಮಾ ಕಾರಂತ, ಸುರೇಶ ಆನಗಳ್ಳಿ, ಪ್ರಮೋದ್ ಶಿಗ್ಗಾಂವ್, ಮಂಗಳಾ ರಘು, ಜೋಸೆಫ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ.

ನಟಿ ಜಯಲಕ್ಷ್ಮಿ ಪಾಟೀಲ್ ಅವರ ಒತ್ತಾಯದಿಂದ ಕಿರುತೆರೆಯತ್ತ ತಿರುಗಿ ನೋಡಿದ ಅವರಿಗೆ ಮೊದಲಿಗೇ ಪಿ.ಶೇಷಾದ್ರಿ ಅವರ ನಿರ್ದೇಶನದಲ್ಲಿ ನಟಿಸುವ ಅವಕಾಶ ಸಿಕ್ಕಿತು. `ಚಕ್ರತೀರ್ಥ~ ಧಾರಾವಾಹಿಯಲ್ಲಿ ತುಂಬಾ ಗಟ್ಟಿಯಾದ ಪಾತ್ರ ಸಿಕ್ಕಿತ್ತು.`ಆರಂಭದಲ್ಲಿ ತುಂಟಿಯಾಗಿ ಕಾಡುವ ನಾನು ನಂತರ ಅಕ್ಕನ ಮೇಲೆ ಹೊಟ್ಟೆಕಿಚ್ಚು ಪಡುತ್ತೇನೆ. ಅದು ನಿಧಾನವಾಗಿ ನೆಗೆಟಿವ್ ಶೇಡ್‌ಗೆ ಬದಲಾಗುತ್ತದೆ~ ಎನ್ನುವ ಅಕ್ಷತಾಗೆ ನಂತರ ಅದೇ ರೀತಿಯ ಪಾತ್ರಗಳಿಗೆ ಅವಕಾಶಗಳು ಬಂದವಂತೆ. ಅದನ್ನೆಲ್ಲಾ ಅವರು ನಿರಾಕರಿಸಿದ್ದಾರೆ.`ನನಗೆ ಒಂದೇ ರೀತಿಯ ಪಾತ್ರಗಳು ಬೇಡ. ನೆಗೆಟಿವ್, ಪಾಸಿಟಿವ್ ಜೊತೆಗೆ ಪ್ರಯೋಗಾತ್ಮಕ ಪಾತ್ರಗಳು ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ಸಮಸ್ಯೆಯಿಂದ ಬಳಲುವ ಪಾತ್ರವನ್ನು ನಿರ್ವಹಿಸಬೇಕು ಎಂಬಾಸೆ ಇದೆ~ ಎನ್ನುತ್ತಾರೆ.

ನಾಟಕಗಳಲ್ಲಿ ಸವಾಲಿನ ಪಾತ್ರಗಳನ್ನು ನಿರ್ವಹಿಸಿರುವ ಅವರಿಗೆ ಸಣ್ಣಪಾತ್ರವಾದರೂ ಜನರ ಮನಸ್ಸಿನಲ್ಲಿ ಉಳಿಯುವಂಥ ಪಾತ್ರ ನಿರ್ವಹಿಸುವ ಹಂಬಲವಿದೆ.`ಸಿನಿಮಾ ನನಗೆ ಕಂಫರ್ಟ್ ತಾಣವಲ್ಲ. ಕಿರುತೆರೆಯಲ್ಲಿ ನಾನು ಬಯಸುವಂಥ ಅವಕಾಶಗಳು ಬಂದರೆ ನಟಿಸುವೆ. ಆದರೆ ರಂಗಭೂಮಿಯ ನಂಟನ್ನು ಮಾತ್ರ ಎಂದಿಗೂ ತೊರೆಯುವುದಿಲ್ಲ. ನಟನೆಯೇ ನನ್ನ ಬದುಕು.ಅದನ್ನು ನಾನು ತುಂಬಾ ಪ್ರೀತಿಸುತ್ತೇನೆ~ ಎನ್ನುತ್ತಾರೆ ಅಕ್ಷತಾ. ಸಂಗೀತ ಕಲಿತಿರುವ ಅವರು ಸದ್ಯಕ್ಕೆ ನೃತ್ಯ ಅಭ್ಯಾಸ ಮಾಡುತ್ತಿದ್ದಾರೆ. ನಟನೆಯಲ್ಲಿ ಕಾಜೋಲ್ ಅವರನ್ನು ಮೆಚ್ಚುವ ಅಕ್ಷತಾಗೆ, ನಿರ್ದೇಶಕ ಪಿ.ಶೇಷಾದ್ರಿ ಅವರ ತಾಳ್ಮೆ ಮತ್ತು ಅವರು ನಟರಿಗೆ ನೀಡುತ್ತಿದ್ದ ಸ್ವಾತಂತ್ರ್ಯ ಗೌರವಕ್ಕೆ ಅರ್ಹ ಅನಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry