ಶುಕ್ರವಾರ, ಮೇ 7, 2021
19 °C

ಸಿನಿಮಾ ನಿರ್ದೇಶನವೆಂದರೆ ಸುಲಭದ ಮಾತಲ್ಲ

ಸುಮಲತಾ Updated:

ಅಕ್ಷರ ಗಾತ್ರ : | |

ಸ್ಟೀವನ್ ಸ್ಪಿಲ್‌ಬರ್ಗ್

ಸ್ಟೀವನ್ ಅಲನ್ ಸ್ಪಿಲ್‌ಬರ್ಗ್ ಜನಿಸಿದ್ದು 1946ರಲ್ಲಿ. ಸಾಹಸಮಯ ಸಿನಿಮಾಗಳಿಗೆ ಈತ ಹೆಸರು ವಾಸಿ. 11ನೇ ವಯಸ್ಸಿಗೇ ಚಿತ್ರ ನಿರ್ದೇಶನ ಮಾಡಿದ ಈತ ಅಮೆರಿಕದ ಪ್ರಸಿದ್ಧ ನಿರ್ದೇಶಕ, ಸ್ಕ್ರೀನ್ ರೈಟರ್, ನಿರ್ಮಾಪಕ, ವಿಡಿಯೋ ಗೇಮ್ ಡಿಸೈನರ್ ಕೂಡ ಹೌದು..ಸಿನಿಮಾ ಚರಿತ್ರೆಯಲ್ಲೇ ಸುಪ್ರಸಿದ್ಧ ಮತ್ತು ಅತಿ ಸ್ಪೂರ್ತಿದಾಯಕ ನಿರ್ದೇಶಕ ಎನಿಸಿಕೊಂಡವರು ಸ್ಪೀಲ್‌ಬರ್ಗ್. ಅವರ ಸಿನಿಮಾಗಳು ರೋಮಾಂಚನಕಾರಿ ಮಾತ್ರವಲ್ಲದೆ ಬಾಕ್ಸ್‌ಆಫೀಸ್ ಕೊಳ್ಳೆಹೊಡೆಯುವ ಮೂಲಕ ಹಣಗಳಿಸುವ ಸಿನಿಮಾಗಳೆಂಬ ಖ್ಯಾತಿ ಪಡೆದುಕೊಂಡಿವೆ.8 ಎಂಎಂನ ಒಂಭತ್ತು ನಿಮಿಷದ `ದಿ ಲಾಸ್ಟ್ ಗನ್ ಫೈಟ್~ ಚಿತ್ರ ನಿರ್ದೇಶಿಸಿ ಪ್ರಸಿದ್ಧಿ ಪಡೆದ ಸ್ಟೀವನ್ ತನ್ನ 13ನೇ ವಯಸ್ಸಿನಲ್ಲಿ 40 ನಿಮಿಷದ `ಎಸ್ಕೇಪ್ ಟು ನೌಹಿಯರ್~ ಚಿತ್ರ ನಿರ್ಮಿಸಿ ಪ್ರಶಸ್ತಿಯನ್ನೂ ಪಡೆದುಕೊಂಡ.`ಶಿಂಡ್ಲರ್ಸ್‌ ಲಿಸ್ಟ್ ಮತ್ತು ಸೇವಿಂಗ್ ಪ್ರೈವೇಟ್ ರಯಾನ್~ ಸಿನಿಮಾಗಳಿಗೆ ಉತ್ತಮ ನಿರ್ದೇಶಕ ಎಂದು ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿದೆ. `ಜಾಸ್~, `ಕ್ಯಾಚ್ ಮಿ ಇಫ್ ಯು ಕ್ಯಾನ್~, `ಡುಯಲ್~, `ವಾರ್ ಆಫ್ ದಿ ವರ್ಲ್ಡ್~, `ದಿ ಕಲರ್ ಪರ್ಪಲ್~, `ಮೈನಾರಿಟಿ ರಿಪೋರ್ಟ್~, `ಕ್ಲೋಸ್ ಎನ್‌ಕೌಂಟರ್ಸ್‌ ಆಫ್ ದಿ ಥರ್ಡ್ ಕೈಂಡ್~, `ಸೇವಿಂಗ್ ಪ್ರೈವೇಟ್ ರೆಯಾನ್~, `ಜುರಾಸಿಕ್ ಪಾರ್ಕ್~,  `ದಿ ಎಕ್ಸ್‌ಟ್ರಾ ಟೆರೆಸ್ಟ್ರಿಯಲ್~, `ರೈಡರ್ಸ್ ಆಫ್ ದಿ ಲಾಸ್ಟ್ ಆರ್ಕ್~ ಈತನ ಪ್ರಸಿದ್ಧ ಸಿನಿಮಾಗಳು.ಟಿಮ್ ಬರ್ಟನ್

ಟಿಮ್ ಬರ್ಟನ್‌ಗೆ ಆಗಿನ್ನೂ 13ನೇ ವಯಸ್ಸು. ಆದರೆ ಆತನ ಕ್ರಿಯಾಶೀಲತೆ ವಯಸ್ಸನ್ನು ಮೀರಿದ್ದಾಗಿತ್ತು. ಯಾವಾಗಲೂ ಏಕಾಂತವನ್ನು ಬಯಸುತ್ತಿದ್ದ ಟಿಮ್ ಬರ್ಟನ್ ತನ್ನ ಸ್ವಾತಂತ್ರ ಕಂಡುಕೊಂಡಿದ್ದು ರೇಖೆಗಳ ಮೂಲಕ. ಅಂದರೆ ಚಿತ್ರಕಲೆ ಈತನ ಮೆಚ್ಚಿನ ಹವ್ಯಾಸ. ತನ್ನ ಕಲೆಯ ಸಹಾಯದಿಂದ ಆತ ಕಂಡುಕೊಂಡಿದ್ದು ಇನ್ನೊಂದು ಹಾದಿ.ಟಿಮ್ ತನ್ನ 13 ವಯಸ್ಸಿನಲ್ಲಿಯೇ ಸೂಪರ್ 8 ಎಂಬ ಆನಿಮೇಷನ್ ಚಿತ್ರವನ್ನು ನಿರ್ದೇಶನ ಮಾಡಿದ್ದರು. `ಐಲ್ಯಾಂಡ್ ಆಫ್ ಡಾಕ್ಟರ್ ಅಗರ್~ ಎಂಬ ಸಿನಿಮಾ ನಿರ್ಮಿಸಿ ತಾನೇ ಅದರಲ್ಲಿ ಅಭಿನಯಿಸುವ ಮೂಲಕ ಇನ್ನಷ್ಟು ಖ್ಯಾತಿ ಪಡೆದುಕೊಂಡರು. ಅಮೆರಿಕದ ಟಿಮ್ ಬರ್ಟನ್ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಕತೆಗಾರ ಮತ್ತು ಕಲಾವಿದರಾಗಿ ಜಗತ್ತಿಗೆ ಪರಿಚಯವಾದರು. ಅತಿ ವಿಭಿನ್ನ ವಿಷಯಗಳನ್ನಿಟ್ಟುಕೊಂಡು ಸಿನಿಮಾ ಮಾಡುವುದು ಈತನ ವಿಶೇಷತೆ.`ಬೀಟಲ್ ಜ್ಯೂಸ್~, `ಎಡ್ವರ್ಡ್ ಸಿಸರ್‌ಹ್ಯಾಂಡ್ಸ್~, `ದಿ ನೈಟ್‌ಮೇರ್ ಬಿಫೋರ್ ಕ್ರಿಸ್‌ಮಸ್~, `ಎಡ್‌ವುಡ್~, `ಸ್ಲೀಪಿ ಹ್ಯಾಲೊ~, `ಕಾರ್ಪ್ಸ್ ಬ್ರೈಡ್~, `ಸ್ವೈನ್ ಟಾಡ್~, `ದಿ ಡೆಮನ್ ಬಾರ್ಬರ್ ಆಫ್ ಫ್ಲೀಟ್ ಸ್ಟ್ರೀಟ್~, `ಪ್ಲಾನೆಟ್ ಆಫ್ ದಿ ಏಪ್ಸ್~, `ಚಾರ್ಲಿ ಅಂಡ್ ದಿ ಚಾಕ್ಲೆಟ್ ಫ್ಯಾಕ್ಟರಿ~ ಮುಂತಾದವು ಬರ್ಟನ್ ಕುಲುಮೆಯಿಂದ ಹೊರಬಂದ ಪ್ರಸಿದ್ಧ ಚಿತ್ರಗಳು.ಇತ್ತೀಚಿನ ಚಿತ್ರ `ಅಲೀಸ್ ಇನ್ ವಂಡರ್‌ಲ್ಯಾಂಡ್~ 2010ರಲ್ಲಿ ಬಿಡುಗಡೆ ಕಂಡಿದೆ.  ಬರ್ಟನ್ ` ದಿ ವೆುಲಾಂಕಲಿ ಡೆತ್ ಆಫ್ ಆಯ್‌ಸ್ಟರ್ ಬಾಯ್ ಅಂಡ್ ಅದರ್ ಸ್ಟೋರೀಸ್~ ಎಂಬ ಪುಸ್ತಕವನ್ನೂ ರಚಿಸಿದ್ದಾರೆ.  ಇದುವರೆಗೂ 16 ಚಿತ್ರಗಳನ್ನು ನಿರ್ದೇಶಿಸಿದ್ದು, 12 ಚಿತ್ರಗಳನ್ನು ನಿರ್ಮಿಸಿದ್ದಾರೆ. ಈತನ ಮುಂದಿನ ಚಿತ್ರ `ಡಾರ್ಕ್ ಶಾಡೋಸ್~ ಮೇ 11 2012ರಂದು ತೆರೆಕಾಣಲಿದೆ.ಕಿಶನ್ ಶ್ರೀಕಾಂತ್

ಮಾಸ್ಟರ್ ಕಿಶನ್ ಎಂದೇ ಪ್ರಖ್ಯಾತವಾಗಿರುವ ಕನ್ನಡದ ಕಿಶನ್ ಶ್ರೀಕಾಂತ್ ಎಲ್ಲರಿಗೂ ಚಿರಪರಿಚಿತ. ತನ್ನ ವಯೋಮಾನದ ಮಕ್ಕಳಿಗಿಂತ ವಿಭಿನ್ನವಾಗಿ ಗುರುತಿಸಿಕೊಳ್ಳಲು ಕಿಶನ್ ಕಂಡುಕೊಂಡಿದ್ದು ಚಿತ್ರ ನಿರ್ದೇಶನದ ಹಾದಿ. ಕನ್ನಡದಲ್ಲಿ `ಕೇರ್ ಆಫ್ ಫುಟ್‌ಪಾತ್~ ಈತನ ನಿರ್ದೇಶನದ ಮೊದಲ ಸಿನಿಮಾ.ತನ್ನ 9ನೇ ವಯಸ್ಸಿನಲ್ಲಿಯೇ ಈ ಚಿತ್ರ ನಿರ್ದೇಶಿಸುವ ಮೂಲಕ ` ವಿಶ್ವದ ಅತಿ ಕಿರಿಯ ನಿರ್ದೇಶಕ~ ಎಂದು ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾನೆ.  ಬೆಂಗಳೂರಿನ ಕಿಶನ್ ಹುಟ್ಟಿದ್ದು 1996ರಲ್ಲಿ. ನಟನೆ ಮೂಲಕ ಚಿತ್ರರಂಗ ಪ್ರವೇಶಿಸಿದ ಕಿಶನ್ ಸುಮಾರು 24 ಚಿತ್ರಗಳಲ್ಲಿ ನಟಿಸಿದ್ದಾನೆ.ಕನ್ನಡದ `ಗ್ರಾಮದೇವತೆ~  ಎಂಬ ಚಿತ್ರ ಈತನ ನಟನೆಯ ಮೊದಲು ಸಿನಿಮಾ. ನಟನೆಯಷ್ಟೇ ಅಲ್ಲದೆ, ತನ್ನದೇ ಕನಸಿನ ಕತೆಗಳನ್ನು ಸಿನಿಮಾ ಮಾಡುವ ಹಂಬಲ ಹೊತ್ತ ಕಿಶನ್‌ನ ಸ್ಲಂ ಮಕ್ಕಳ ಕುರಿತಾದ `ಕೇರ್ ಆಫ್ ಫುಟ್‌ಪಾತ್~ ಚಿತ್ರವನ್ನು ನಿರ್ದೇಶಿಸಿದ. ಈ ಚಿತ್ರ 5 ಭಾಷೆಗಳಿಗೆ ಡಬ್ಬಿಂಗ್ ಆಗಿರುವುದು ಇದರ ಯಶಸ್ಸಿಗೆ ಸಾಕ್ಷಿ.

 

ಐದನೇ ತರಗತಿಯಲ್ಲಿದ್ದಾಗಲೇ ಚಿತ್ರ ನಿರ್ದೇಶನ ಮಾಡಿದ ಖ್ಯಾತಿ ಹೊಂದಿದ ಕಿಶನ್ ಇನ್ನೂ ಹಲವು ಸಿನಿಮಾಗಳನ್ನು ನಿರ್ದೇಶಿಸುವ ಕನಸನ್ನೂ ಹೊಂದಿದ್ದಾನೆ. ಹದಿಯರೆಯದವರ ಪ್ರೀತಿಯ ಸೆಳೆತವನ್ನು ಬಿಂಬಿಸುವ `ಟೀನೇಜ್~ ಚಿತ್ರದಲ್ಲಿ ಕಿಶನ್ ನಾಯಕನಾಗಿ ನಟಿಸುತ್ತಿದ್ದಾನೆ.ಇದಕ್ಕೆ ಆತನ ತಂದೆ ಶ್ರೀಕಾಂತ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶನ ಮಾತ್ರವಲ್ಲ ಛಾಯಾಗ್ರಹಣ, ಸಂಕಲನ ಮುಂತಾದ ಸಿನಿಮಾದ ವಿವಿಧ ವಿಭಾಗಗಳಲ್ಲಿಯೂ ಕಿಶನ್ ಪರಿಣತಿ ಗಳಿಸುತ್ತಿದ್ದಾನೆ.

ಜಾನ್ ಹಾವಾರ್ಡ್ ಕಾರ್ಪೆಂಟರ್

ತನ್ನ 14ನೇ ವಯಸ್ಸಿನಲ್ಲಿಯೇ ಕಿರು ಚಿತ್ರಗಳನ್ನು ತಯಾರಿಸುತ್ತಾ ಬಂದ ಕಾರ್ಪೆಂಟರ್‌ಗೆ ಹಾರರ್ ಮತ್ತು ವೈಜ್ಞಾನಿಕ ಚಿತ್ರಕತೆಗಳೆಂದರೆ ಅಚ್ಚುಮೆಚ್ಚು. ಆದ್ದರಿಂದ ಇವೇ ಕಾರ್ಪೆಂಟರ್‌ನ ಕತೆಯ ಸಾರಗಳಾದವು. ಪ್ರೌಢಶಾಲೆ ಮೆಟ್ಟಿಲೇರುವ ಮುನ್ನವೇ ಸಿನಿಮಾ ನಿರ್ದೇಶನ ಅವರನ್ನು ಸೆಳೆಯಿತು.ಅತಿ ಚಿಕ್ಕ ವಯಸ್ಸಿಗೇ ಸಿನಿಮಾ ಗೀಳು ಹಚ್ಚಿಕೊಂಡು ಹಲವು ಕಿರು ಚಿತ್ರಗಳನ್ನು ನಿರ್ಮಿಸಿದರು. ಮೈನವಿರೇಳಿಸುವ ಹಾರರ್ ಚಿತ್ರಗಳಿಂದಾಗಿ ಮಾಸ್ಟರ್‌ಆಫ್ ಹಾರರ್ ಎಂಬ ಬಿರುದು ಅವರಿಗೆ ಬಂತು.ನ್ಯೂಯಾರ್ಕ್ ಮೂಲದ ಕಾರ್ಪೆಂಟರ್ ಪ್ರಸಿದ್ಧ ಚಲನಚಿತ್ರ ನಿರ್ದೇಶಕ, ಸ್ಕ್ರೀನ್ ರೈಟರ್, ನಿರ್ಮಾಪಕ, ಸಂಪಾದಕ, ಕಂಪೋಸರ್ ಮತ್ತು ಕಲಾವಿದನಾಗಿ ಕೂಡ ಹೊರ ಹೊಮ್ಮಿದರು.`ಡಾರ್ಕ್ ಸ್ಟಾರ್~ ಕಾರ್ಪೆಂಟರ್‌ನ ಮೊದಲ ಸುಪ್ರಸಿದ್ಧ ಚಿತ್ರ. ಅವರ `ದಿ ರೆಸರಕ್ಷನ್ ಆಫ್ ಬ್ರೋಂಕೊ ಬಿಲ್ಲಿ~ ಸಿನಿಮಾಗೆ  `ಬೆಸ್ಟ್ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್~ ಎಂಬ  ಪ್ರಶಸ್ತಿಯೂ ಲಭಿಸಿದೆ. ಚಿತ್ರ ನಿರ್ಮಾಣಕ್ಕೆ ಕೈಹಾಕಿದ ಅವರು 1962ರಲ್ಲಿ `ರಿವೆಂಜ್ ಆಫ್ ಕೊಲೊಸಲ್ ಬೀಸ್ಟ್ಸ್~ ಚಿತ್ರ ನಿರ್ಮಿಸಿದರು.`ದಿ ಥಿಂಗ್~, `ಹ್ಯಾಲೊವೀನ್~, `ದಿ ವಾರ್ಡ್~, `ಎಸ್ಕೇಪ್ ಫ್ರಂ ದಿ ನ್ಯೂಯಾರ್ಕ್~, `ಬಿಗ್ ಟ್ರಬಲ್ ಇನ್ ಲಿಟಲ್ ಚೈನಾ~, `ವಾಂಪೈರ್ಸ್~, `ಪ್ರಿನ್ಸ್ ಆಫ್ ಡಾರ್ಕ್‌ನೆಸ್~, `ದಿ ಫಾಗ್~, `ದೆ ಲಿವ್~, `ಇನ್ ದಿ ಮೌತ್‌ಆಫ್ ಮ್ಯಾಡ್‌ನೆಸ್~, `ಟೆರರ್ ಫ್ರಂ ಸ್ಪೇಸ್~, `ಗೋರ್ಗೊ ವರ್ಸಸ್ ಗಾಡ್ಜಿಲ್ಲಾ ಅಂಡ್ ಗಾರ್ಗನ್~, `ಕ್ಯಾಪ್ಟನ್ ವೋಯರ್~, `ದಿ ಸ್ಪೇಸ್ ಮಾನ್ಸ್‌ಟರ್~ ಮುಂತಾದವು ಅವರ ಪ್ರಸಿದ್ಧ ಸಿನಿಮಾಗಳು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.