ಸಿನಿಮಾ ನಿರ್ದೇಶಿಸುವಾಸೆ

7

ಸಿನಿಮಾ ನಿರ್ದೇಶಿಸುವಾಸೆ

Published:
Updated:

ಬೆಂಗಳೂರು ನಮ್ಮೂರು. ನನ್ನಜ್ಜಿಗೆ `ಪ್ರಜಾವಾಣಿ', `ಸುಧಾ' ಪತ್ರಿಕೆಗಳನ್ನು ಓದುವುದೆಂದರೆ ಖುಷಿ. ನಾನೂ ಅವರೊಟ್ಟಿಗೆ ಪತ್ರಿಕೆಗಳನ್ನು ಓದುತ್ತಲೇ ಬೆಳೆದೆ. ಅದರಿಂದಲೇ ಸಾಹಿತ್ಯ, ಕಲೆ, ಸಂಸ್ಕೃತಿ ಕಡೆಗೆ ಆಸಕ್ತಿ ಬೆಳೆಯಿತು. ಶಾಲಾ ದಿನಗಳಲ್ಲಂತೂ ಪಠ್ಯಕ್ಕಿಂತಲೂ ಸಾಂಸ್ಕೃತಿಕ ಚಟುವಟಿಕಗಳ ಕಡೆಗೇ ನನ್ನ ಒಲವು. ನಮ್ಮದು ಸಂಪ್ರದಾಯಸ್ಥ ಕುಟುಂಬವಾದರೂ, ತೀರಾ ಕಟ್ಟುನಿಟ್ಟು ಇರಲಿಲ್ಲ. ನನ್ನ ಚಟುವಟಿಕೆಗಳಿಗೆ ತಂದೆ ತಾಯಿ ಇಬ್ಬರೂ ನಂಬುಗೆಯಿಂದಲೇ ನೀರೆರೆದರು. ಈಗಲೂ ನನ್ನ ಪತಿ, ಅತ್ತೆ, ಮಾವ, ಮಕ್ಕಳು ನನ್ನ ಬೆನ್ನಿಗಿರುವುದು ನನ್ನ ಅದೃಷ್ಟ.ಪಿಯುಸಿ ಮುಗಿಸಿದ ನಂತರ ಮಹಾರಾಣಿ ಕಾಲೇಜಿನಲ್ಲಿ  ಪದವಿ ಕಲಿಯಲು ಸೇರಿದೆ. ಕನ್ನಡ ನನ್ನಿಷ್ಟದ ವಿಷಯವಾದ್ದರಿಂದ ಐಚ್ಛಿಕ ವಿಷಯವಾಗಿ ಅದನ್ನೇ ಆಯ್ದುಕೊಂಡೆ. ಆಗ ನನ್ನ ಅಂತರಂಗದಲ್ಲಿ ಅಡಗಿದ್ದ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರಿದವು. ಅದಕ್ಕೆ ಸರಿಯಾಗಿ ಕಾಲೇಜಿನಲ್ಲಿ ವಿಫುಲ ಅವಕಾಶಗಳೂ ಸಿಕ್ಕಿದವು.ಪ್ರಥಮ ಪದವಿ ಕಲಿಯುವಾಗ ಭಾರತ ಯುವ ಕೇಂದ್ರದಿಂದ ಹಮ್ಮಿಕೊಂಡಿದ್ದ `ರಂಗ ತರಬೇತಿ ಶಿಬಿರ'ದಲ್ಲಿ ಭಾಗವಹಿಸಿದ್ದೆ. ಅಲ್ಲಿ ಹಾಸ್ಯ ಸಾಹಿತಿ ಅ.ರಾ.ಮಿತ್ರ ಹಾಗೂ ಉಪನ್ಯಾಸಕರಾದ ಎಂ.ಎಚ್.ಕೃಷ್ಣಯ್ಯ ನನಗೆ ಬಹಳಷ್ಟು ಪ್ರೋತ್ಸಾಹ ನೀಡಿದರು. ಅಂದಿನಿಂದ ರಂಗಭೂಮಿಯಲ್ಲಿ ತೊಡಗಿಕೊಂಡವಳು ಇಂದಿಗೂ ಹಿಂದಿರುಗಿ ನೋಡಿಲ್ಲ. ಹವ್ಯಾಸಿ ರಂಗಭೂಮಿಯಲ್ಲಿ ನಟಿಯಾಗಿ, ನಿರ್ದೇಶಕಿಯಾಗಿ ನಿರಂತರವಾಗಿ ತೊಡಗಿಕೊಂಡಿರುವೆ. ನಾನು ಅಭಿನಯಿಸಿದ ನಾಟಕಗಳು ದೆಹಲಿ, ಮುಂಬೈ, ಒಡಿಶಾಗಳಲ್ಲೂ ಪ್ರದರ್ಶನ ಕಂಡಿವೆ.ನಾಟಕ ಪ್ರದರ್ಶನಕ್ಕಾಗಿ ದೂರದೂರಿಗೆ ಪ್ರಯಾಣಿಸುವಾಗ ಸಮಾನಮನಸ್ಕರಾದ ಕಲಾವಿದ ಪ್ರಕಾಶ್ ಶೆಟ್ಟಿ ಅವರ ಪರಿಚಯವಾಯಿತು. ಆ ಪರಿಚಯ ಪ್ರೀತಿಯಾಯಿತು. ಬಳಿಕ ಮದುವೆಯಲ್ಲಿ ಸಂಬಂಧ ಸಫಲವಾಯಿತು. ಮನೆಯವರು ವಿರೋಧಿಸುತ್ತಾರೇನೋ ಎನಿಸಿ ವಿದ್ಯಾರ್ಥಿಗಳಾಗಿದ್ದಾಗಲೇ ಇಬ್ಬರೂ ಮದುವೆಯಾದೆವು. ಇದೀಗ ಎರಡೂ ಕುಟುಂಬಗಳು ಸಮ್ಮತಿ ನೀಡಿವೆ. ನಮಗೆ ಇಬ್ಬರು ಚೆಂದದ ಹೆಣ್ಣು ಮಕ್ಕಳಿದ್ದಾರೆ.ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ನನಗೆ ಮೊದಲು `ಭೂಮಿಗೀತ' ಚಿತ್ರದಲ್ಲಿ ದನಿಯಾಗುವ ಅವಕಾಶ ಸಿಕ್ಕಿತು. ಅದಾದ ನಂತರ `ಎ' ಚಿತ್ರದಿಂದ ಕರೆ ಬಂತು. ಅದರಲ್ಲಿ ನಟಿಸಿದ್ದ ನಟಿ ಅರ್ಚನಾಗೆ ದನಿ ನೀಡಿದೆ. ಇದುವರೆಗೂ `ದೇವೀರಿ', `ಕುಟುಂಬ', `ಹಬ್ಬ', ತೀರಾ ಇತ್ತೀಚೆಗೆ `ಕಠಾರಿವೀರ ಸುರಸುಂದರಾಂಗಿ' ಸಿನಿಮಾ ಸೇರಿ 700ಕ್ಕೂ ಹೆಚ್ಚು ಸಿನಿಮಾದ ನಾಯಕಿಯರಿಗೆ ದನಿ ನೀಡಿರುವೆ. ವಿಜಯಲಕ್ಷ್ಮಿ, ಚಾರುಲತಾ, ದಾಮಿನಿ ನನ್ನ ದನಿ ಪಡೆದ ನಟಿಯರಲ್ಲಿ ಕೆಲವರು.ಸಿನಿಮಾ ನಟಿಯರಿಗೆ ಮಾತ್ರವಲ್ಲ ಧಾರಾವಾಹಿ ನಟಿಯರಿಗೂ ಧ್ವನಿ ನೀಡಿರುವೆ. `ರಂಗೋಲಿ' ಧಾರಾವಾಹಿಯ ನಾಯಕಿ ಸಿರಿಗೆ 1500 ಎಪಿಸೋಡು ದನಿ ಒದಗಿಸಿದೆ. `ಬಂಗಾರ'ದ ರತಿ, `ಜೋಕಾಲಿ'ಯ ಅರ್ಚನಾ ಅವರಿಗೂ ನನ್ನದೇ ದನಿ. ಮಾತು ನೀಡುವುದರ ಜೊತೆಜೊತೆಗೆ ಉದಯ ವಾಹಿನಿಯಲ್ಲಿ ಮೂರು ವರ್ಷ ನ್ಯೂಸ್ ರೀಡರ್ ಆಗಿ, ಆಕಾಶವಾಣಿಯಲ್ಲಿ `ಬಿ' ಶ್ರೇಣಿಯ ಕಲಾವಿದೆಯಾಗಿಯೂ ಕೆಲಸ ಮಾಡಿದೆ.ಆಗ ನನಗೆ ಜಿ.ಮೂರ್ತಿ ನಿರ್ದೇಶನದ ಕಲಾತ್ಮಕ ಚಿತ್ರ `ಕುರುನಾಡು'ನಲ್ಲಿ ಅವಕಾಶ ದೊರಕಿತು. ಅದರ ನಾಯಕಿ ಲಕ್ಷ್ಮಿ ಹೆಗಡೆ ಅವರಿಗೆ ಧ್ವನಿ ನೀಡಿದ್ದೆ. ಅದಕ್ಕೆ 2008ರಲ್ಲಿ ರಾಜ್ಯ ಪ್ರಶಸ್ತಿ ಬಂತು. ಇದಕ್ಕಿಂತ ದೊಡ್ಡ ಸಂತೋಷ ಬೇರೇನಿದೆ. ಚಿಕ್ಕಂದಿನಿಂದಲೂ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದನ್ನು ರೂಢಿಸಿಕೊಂಡಿದ್ದ ನನಗೆ ಅದಕ್ಕೆ ಸಿಕ್ಕ ಮಾನ್ಯತೆ ದೊಡ್ಡ ಸಂತಸ ತಂದಿತ್ತು. ರಾಜ್ಯ ಪ್ರಶಸ್ತಿ ಸಿಕ್ಕಿದ್ದು ಆ ಹಾದಿಯಲ್ಲಿ ನನ್ನನ್ನು ಉತ್ತೇಜಿಸಿದಂತಾಗಿದೆ.`ಕುರುನಾಡು' ಸಿನಿಮಾ ನಾಯಕಿಯದು ಜಾತಿ, ಮತ, ಮೌಢ್ಯಗಳ ವಿರುದ್ಧ ಬಂಡಾಯ ಏಳುವ ಪಾತ್ರ. ನನ್ನ ಮನೋಭಾವವೂ ಇದೇ ರೀತಿಯಾದ್ದರಿಂದ ಸಹಜವಾಗಿ ದನಿ ನೀಡಲು ಸಾಧ್ಯವಾಯಿತು. ನನ್ನ ಮೂಲ ದನಿಯನ್ನು ಯಾವ ನಾಯಕಿಗೂ ನೀಡಿಲ್ಲ. ಹಾಗಾದಲ್ಲಿ ನಟಿಯರೆಲ್ಲರೂ ಚಂಪಾ ಆಗಿ ತಮ್ಮ ವೈಶಿಷ್ಟ್ಯ ಕಳೆದುಕೊಳ್ಳುತ್ತಾರೆ. ಶೂಟಿಂಗ್ ವೇಳೆಯಲ್ಲಿ ನಟಿಯರ ಪೈಲೆಟ್ ವಾಯ್ಸ ತೆಗೆದುಕೊಂಡಿರ‌್ತಾರೆ. ಅದನ್ನು ಅನುಸರಿಸಿ ದನಿ ನೀಡುತ್ತೇನೆ. ನಾನು ತುಂಬಾ ದೊಡ್ಡ ಸವಾಲು ಎದುರಿಸಿದ್ದು `ಶ್ರೀಮಂಜುನಾಥ' ಚಿತ್ರದಲ್ಲಿ. ಈ ಚಿತ್ರದಲ್ಲಿ ಮಹಾರಾಣಿ ಪಾತ್ರದಲ್ಲಿ ಅಭಿನಯಿಸಿದ್ದ ಸುಮಲತಾ ಹಾಗೂ ಸೌಂದರ್ಯ ಅವರ ಮಗುವಿನ ಪಾತ್ರಕ್ಕೂ ನನ್ನದೇ ದನಿ. ಒಂದೇ ಚಿತ್ರದಲ್ಲಿ ಎರಡು ಪಾತ್ರಗಳಿಗೆ ಭಿನ್ನವಾಗಿ ದನಿ ನೀಡುವುದು ನಿಜಕ್ಕೂ ದೊಡ್ಡ ಸವಾಲಾಗಿತ್ತು. ಬೇರೆ ಬೇರೆ ಭಾಷೆಗಳ ನಟಿಯರಿಗೆ ದನಿ ನೀಡುವುದು ಅಷ್ಟು ಸುಲಭವಲ್ಲ. ಆದರೂ ಈವರೆಗೆ ಯಶಸ್ಸಿನ ದಾರಿಯಲ್ಲೇ ಸಾಗುತ್ತಿದ್ದೇನೆ.ರಂಗಭೂಮಿ ಹಾಗೂ ಕಂಠದಾನ ಕಲಾವಿದೆಯಾಗಿದ್ದ ನನಗೆ ಮೊದಲ ಬಾರಿಗೆ ಕೇಸರಿ ಹರವು ನಿರ್ದೇಶನದ `ಸುಷ್ಮಾ' ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ದೊರೆಯಿತು. ಆದರೆ ಅಭಿನಯಕ್ಕಿಂತ ಕಂಠದಾನದಲ್ಲೇ ಹೆಚ್ಚು ಆತ್ಮವಿಶ್ವಾಸ ಹೊಂದಿದ್ದ ನಾನು ಅಭಿನಯದತ್ತ ಹೆಚ್ಚು ಒಲವು ತೋರಿರಲಿಲ್ಲ.ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ವೈಯಕ್ತಿಕವಾಗಿ ಭೇಟಿ ಮಾಡಿ ತಮ್ಮ `ಕಾವೇರಿ' ಧಾರಾವಾಹಿಯಲ್ಲಿ ಅಭಿನಯಿಸಲು ಹೇಳಿದಾಗ ಒಲ್ಲೆ ಎನ್ನಲಾಗದೆ ಒಪ್ಪಿದೆ. ಆ ಧಾರಾವಾಹಿಯಲ್ಲಿ `ಸರಸ್ವತಿ' ಪಾತ್ರ ನಿರ್ವಹಿಸಿದ್ದೆ. ಆ ಪಾತ್ರ ನನ್ನನ್ನು ನಟಿಯಾಗಿ ಗುರುತಿಸಿಕೊಳ್ಳುವಂತೆ ಮಾಡಿತು. ಎಲ್ಲೇ ಹೋದರೂ ಜನ `ನೀವು ಸರಸ್ವತಿ ಅಲ್ವಾ?' ಎಂದು ಕೇಳುವಂತಾಯಿತು.ಆನಂತರ ಯೋಗರಾಜ್ ಭಟ್ ನಿರ್ದೇಶನದ `ಪರಮಪದ', ಬಿ.ಸುರೇಶ್ ನಿರ್ದೇಶನದ `ನಾಕುತಂತಿ', ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ `ವಠಾರ' ಧಾರಾವಾಹಿಗಳಲ್ಲಿ ಅಭಿನಯಿಸಿದೆ. ಪ್ರಸ್ತುತ ಟಿ.ಎನ್.ಸೀತಾರಾಮ್ ನಿರ್ದೇಶನದ `ಮುಕ್ತ' ಧಾರಾವಾಹಿಯಲ್ಲಿ ಶಿವಕೃಷ್ಣ ದೇಸಾಯಿ ಅವರ ಪತ್ನಿ ಗೀರವಾಣಿಯಾಗಿ ಅಭಿನಯಿಸುತ್ತಿದ್ದೇನೆ.ಅಭಿನಯಕ್ಕೆ ಸಾಕಷ್ಟು ಅವಕಾಶಗಳಿದ್ದರೂ ಕಂಠದಾನ ಮತ್ತು ರಂಗಭೂಮಿ ಚಟುವಟಿಕೆಗಳೇ ನನಗೆ ಅಚ್ಚುಮೆಚ್ಚು. ನಾಟಕವನ್ನು ಅಕಾಡೆಮಿಕ್ಕಾಗಿ ಅಧ್ಯಯನ ಮಾಡುವ ಆಸೆಯಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಾಟಕ ವಿಷಯದಲ್ಲಿ ಎಂ.ಎ ಪದವಿ ಪಡೆದೆ. ಐವರು ಸಮಾನಮನಸ್ಕರು ಸೇರಿ `ರಂಗ ಮಂಟಪ' ಎಂಬ ತಂಡ ಕಟ್ಟಿದ್ದೇವೆ. ಅದು ನಿರಂತರವಾಗಿ ರಂಗಭೂಮಿಯಲ್ಲಿ ಇರುವಂತೆ ಮಾಡಿದೆ.ನಾನು `ಹಯವದನ', `ಜೋಕುಮಾರಸ್ವಾಮಿ', `ಮಂಟೆಸ್ವಾಮಿ ಕಥಾ ಪ್ರಸಂಗ', `ನಾಗಮಂಡಲ' ಹೀಗೆ 50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಕಾದಂಬರಿ ಆಧಾರಿತ `ಗಾಂಧಿ ಬಂದ' ನಾಟಕವನ್ನು ನಾನೇ ನಿರ್ದೇಶಿಸಿದ್ದೇನೆ. ಅದು ದೇಶದಾದ್ಯಂತ 31ಕ್ಕೂ ಹೆಚ್ಚು ಪ್ರದರ್ಶನ ಕಂಡಿತು. ಹೆಸರನ್ನೂ ತಂದುಕೊಟ್ಟಿತು.ಸಾಮಾನ್ಯವಾಗಿ ಮಹಿಳೆಯರು ಯಶಸ್ಸಿನ ಹಾದಿಯಲ್ಲಿ ಸಾಗುವಾಗ ನಾನಾ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ನನ್ನ ಮಟ್ಟಿಗೆ ಕಹಿಗಿಂತಲೂ ಸಿಹಿ ಅನುಭವಗಳೇ ಹೆಚ್ಚು. ನನ್ನ ತಂದೆ ತಾಯಿಗೆ ನನ್ನ ಮೇಲೆ ನಂಬಿಕೆ ಇದ್ದಿದ್ದರಿಂದ ತಿಂಗಳುಗಟ್ಟಲೆ ಹೊರಗೆ ತೆರಳಿದರೂ, ರಾತ್ರಿ ತಡವಾಗಿ ಮನೆಗೆ ಬಂದರೂ ದೂಷಿಸುತ್ತಿರಲಿಲ್ಲ. ನನ್ನ ಪತಿಯೂ ಉತ್ತಮ ಹಾಡುಗಾರ ಮತ್ತು ರಂಗ ಕಲಾವಿದ. ನಮ್ಮಿಬ್ಬರ ನಡುವೆ ಪರಸ್ಪರ ನಂಬುಗೆ ಇರುವ ಕಾರಣ ಜೀವನ ಹಾಗೂ ನಾಟಕ ರಂಗಗಳಲ್ಲಿ ಬರುವ ಸುಖ- ದುಃಖಗಳನ್ನು ಸಮಾನವಾಗಿ ಹಂಚಿಕೊಂಡು ಎದುರಿಸುತ್ತಿದ್ದೇವೆ.ರಂಗಭೂಮಿಯಲ್ಲಿ ನಾನು ನಿರ್ದೇಶಕಿಯಾಗಿದ್ದರೆ ಯಾರೂ ಜರಿಯಲಿಲ್ಲ. ಮತ್ತಷ್ಟು ಪ್ರೋತ್ಸಾಹಿಸುತ್ತಿದ್ದಾರೆ. ನಾನು ಯಾಕಾದರೂ ಮಹಿಳೆಯಾಗಿ ಹುಟ್ಟಿದೆನೋ ಎಂಬ ಭಾವನೆ ನನ್ನನ್ನು ಎಂದಿಗೂ ಕಾಡಲಿಲ್ಲ. ಬದಲಿಗೆ ಹೆಮ್ಮೆ ಇದೆ. ನನ್ನಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಗುಣವೂ ಇರುವುದರಿಂದ ಏನೇ ಸಮಸ್ಯೆಗಳು ತಲೆದೋರಿದರೂ ಎದುರಿಸಿ ಮುನ್ನಡೆಯುತ್ತಿದ್ದೇನೆ.ಮೊದಲು ನಾಟಕವೆಂದರೆ ಮೂಗು ಮುರಿಯುವವರೆ ಹೆಚ್ಚು ಇದ್ದರು. ಆದರೆ ಇಂದು ಐಟಿ, ಬಿಟಿ, ಸಾಫ್ಟ್‌ವೇರ್ ಕ್ಷೇತ್ರದವರು `ರಂಗ ಶಂಕರ'ದಲ್ಲಿ ಯಾವ ನಾಟಕದ ಪ್ರದರ್ಶನವಿದೆ ಎಂದು ಚರ್ಚಿಸುವಂತಾಗಿದೆ. ಅದರಿಂದ ನಮ್ಮ ಕಲೆಗೆ ಗೌರವ ದೊರಕುವ ಕಾಲ ಬಂದಂತಾಗಿದೆ.ಈ ಎಲ್ಲಾ ಚಟುವಟಿಕೆಗಳ ನಡುವೆ ನನಗಿದ್ದ ಭರತನಾಟ್ಯ ಕಲಿಯಬೇಕು ಎಂಬ ಮಹದಾಸೆ ಈಡೇರಲೇ ಇಲ್ಲ. ಇದೀಗ ನನ್ನ ಮಕ್ಕಳಿಗೆ ನಾಟ್ಯ ಕಲಿಸಿ ತೃಪ್ತಿ ಪಡುತ್ತಿದ್ದೇನೆ. ನನಗೆ ಸಿನಿಮಾವೊಂದನ್ನು ನಿರ್ದೇಶಿಸುವಾಸೆ ಇದೆ. ಆ ದಿನಗಳಿಗಾಗಿ ಕಾಯುತ್ತಿದ್ದೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry