ಬುಧವಾರ, ನವೆಂಬರ್ 13, 2019
18 °C

ಸಿನಿಮಾ ನಿರ್ಮಾಣ 'ಉದ್ಯಮ'

Published:
Updated:

ಭಾರತದ ಚಲನಚಿತ್ರ ರಂಗಕ್ಕೆ ಶತಮಾನದ ಸಂಭ್ರಮ. ಭಾರತದ ಮೊದಲ ಸಿನಿಮಾ `ರಾಜಾ ಹರಿಶ್ಚಂದ್ರ'ವನ್ನು 1913ರಲ್ಲಿ ನಿರ್ಮಿಸಿದ್ದು ಧುಂಡಿರಾಜ್ ಗೋವಿಂದ್ ಫಾಲ್ಕೆ (ದಾದಾ ಸಾಹೆಬ್ ಫಾಲ್ಕೆ).ಇತ್ತೀಚೆಗೆ ಫಾಲ್ಕೆ ಅವರ ಬದುಕು, ಸಿನಿಮಾ ಕನಸು ಕುರಿತ `ಹರಿಶ್ಚಂದ್ರ ಚಿ ಫ್ಯಾಕ್ಟರಿ' ಚಿತ್ರ ನಿರ್ಮಾಣಗೊಂಡಿತ್ತು. ಸಿನಿಮಾ ನಿರ್ಮಾಣ ಕಷ್ಟ-ಸುಖ ಕುರಿತೇ ಕಥೆ ಹೇಳಿತ್ತು.ಸಿನಿಮಾ ನಿರ್ಮಾಣವೂ ಉದ್ಯಮವೇ ಆಗಿದೆ. ಹಾಲಿವುಡ್‌ನಲ್ಲಿ `ವಾರ್ನರ್ ಬ್ರದರ್ಸ್', `ಟ್ವೆಂಟಿಯತ್ ಸೆಂಚುರಿ ಫಾಕ್ಸ್', ಬಾಲಿವುಡ್‌ನಲ್ಲಿ ರಾಜ್ ಕಪೂರ್ ಕುಟುಂಬದ `ಆರ್.ಕೆ ಪಿಕ್ಚರ್ಸ್‌' ಸಿನಿಮಾ ತಯಾರಿಸುವುದನ್ನೇ ಉದ್ಯಮವಾಗಿಸಿಕೊಂಡಿವೆ. ಇತ್ತೀಚೆಗೆ `ರಿಲಯನ್ಸ್' ಕಂಪೆನಿ `ಬಿಗ್ ಸಿನಿಮಾಸ್' ಆರಂಭಿಸಿದೆ. `ಯುಟಿವಿ ಮೂವೀಸ್' ಮತ್ತಿತರ ಕಂಪೆನಿಗಳೂ ಕಾರ್ಪೊರೇಟ್ ಶೈಲಿಯಲ್ಲಿ ಚಿತ್ರ ನಿರ್ಮಿಸುತ್ತಿವೆ. ಅಮಿತಾಭ್ ಬಚ್ಚನ್ ಈ ಹಿಂದೆ `ಎಬಿಸಿಎಲ್' ಕಂಪೆನಿ ಹುಟ್ಟುಹಾಕಿದ್ದರು.ಕನ್ನಡ ಚಿತ್ರ ಜಗತ್ತು

ಕನ್ನಡದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರ `ವಜ್ರೇಶ್ವರಿ ಕಂಬೈನ್ಸ್', ವೀರಸ್ವಾಮಿ ಅವರ `ಈಶ್ವರಿ ಕಂಬೈನ್ಸ್', ಸಿದ್ದಲಿಂಗಯ್ಯ ಅವರ `ಕಾಮಧೇನು ಮೂವೀಸ್' ಹಾಗೂ `ಕೆ.ಸಿ.ಎನ್ ಮೂವೀಸ್', `ದ್ವಾರಕೀಶ್ ಚಿತ್ರ', `ರಾಕ್‌ಲೈನ್ ಪ್ರೊಡಕ್ಷನ್ಸ್', `ರಾಮು ಎಂಟರ್ ಪ್ರೈಸಸ್'ಗೂ ಚಿತ್ರನಿರ್ಮಾಣವೊಂದು `ಉದ್ಯಮ'. ಅದರಲ್ಲೇ ಲಾಭ-ನಷ್ಟ ಅನುಭವಿಸಿವೆ. `ಸ್ಯಾಂಡಲ್‌ವುಡ್' ಮಾತ್ರ ಹಾಲಿವುಡ್, ಬಾಲಿವುಡ್‌ನಂತೆ ಕಾರ್ಪೊರೇಟ್ ಶೈಲಿ ಅನುಸರಿಸುತ್ತಿಲ್ಲ, ನಿರ್ಮಾಣ-ಮಾರುಕಟ್ಟೆ ವಹಿವಾಟು ಅಷ್ಟು ವ್ಯವಸ್ಥಿತವಾಗಿಲ್ಲ.ಮಾರುಕಟ್ಟೆ ಹೇಗಿದೆ?

ರಾಜ್ಯದಲ್ಲಿ 650 ಚಿತ್ರಮಂದಿರಗಳಿದ್ದು, ದಶಕಗಳಿಂದೀಚೆಗೆ ಕನ್ನಡ ಚಿತ್ರನಿರ್ಮಾಣ ಸಂಖ್ಯೆ ದುಪ್ಪಟ್ಟಾಗಿದೆ. ಇತ್ತೀಚೆಗೆ ವರ್ಷಕ್ಕೆ ಸರಾಸರಿ 100 ಚಿತ್ರ ತಯಾರಾಗುತ್ತಿವೆ. ಕನಿಷ್ಠ ರೂ2 ಕೋಟಿಯಿಂದ ರೂ10 ಕೋಟಿ ಬಜೆಟ್‌ವರೆಗಿನ ಚಿತ್ರಗಳಿವೆ. ಕನ್ನಡ ಚಿತ್ರರಂಗದ ವಾರ್ಷಿಕ ವಹಿವಾಟು ಸುಮಾರು ರೂ600 ಕೋಟಿ. ಬಿಡುಗಡೆಯಾದ ಶೇ 90ರಷ್ಟು ಚಿತ್ರಗಳು ಗಲ್ಲಾಪೆಟ್ಟಿಗೆ ದೃಷ್ಟಿಯಿಂದ ಯಶಸ್ವಿಯಾಗುತ್ತಿಲ್ಲ ಎನ್ನುವುದು ವಾಸ್ತವ. ಇದರಿಂದಾಗಿ ಚಿತ್ರರಂಗದ ಒಟ್ಟಾರೆ ಲಾಭ ಅಂದಾಜು ರೂ300 ಕೋಟಿ.ಹಿರಿಯ ವಿತರಕ ಕೆ.ವಿ.ಗುಪ್ತ ಅವರ ಪ್ರಕಾರ, ದೊಡ್ಡ ಪ್ರಮಾಣದಲ್ಲಿ ಚಿತ್ರ ನಿರ್ಮಾಣ ಒಳಿತು-ಕೆಡುಕು ಎರಡಕ್ಕೂ ಎಡೆಮಾಡಿಕೊಟ್ಟಿದೆ. ಚಿತ್ರೋದ್ಯಮಿಗೆ ಸವಾಲು-ಸ್ಪರ್ಧೆ-ಸಮಸ್ಯೆಗಳ ಸರಮಾಲೆ ಕಟ್ಟಿಟ್ಟ ಬುತ್ತಿ. ಕಲಾವಿದರು, ತಂತ್ರಜ್ಞರ ದೃಷ್ಟಿಯಿಂದ ಈ ಬೆಳವಣಿಗೆ ಒಳ್ಳೆಯದೆ. ಉದಾ: 100 ಚಿತ್ರ ತಯಾರಾಗುತ್ತಿದ್ದರೂ    `ತಾರಾಪಟ್ಟ' ಪಡೆದ ನಟರಿರುವುದು 10ರಿಂದ 15 ಮಂದಿ. ಹೀಗಾಗಿ ನಾಯಕ ನಟ-ನಟಿಯರಿಗಂತೂ ಸುಗ್ಗಿ ಕಾಲ. ಅಲ್ಲದೆ, 30ರಿಂದ 40ಸಾವಿರ ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರನ್ನೂ ಕನ್ನಡ ಚಿತ್ರರಂಗ ಸಲಹುತ್ತಿದೆ.ಕನ್ನಡ ಸಿನಿಮಾಗಳಿಗೂ ಜಾಗತಿಕ ಮಾರುಕಟ್ಟೆಯಲ್ಲಿ ಅನೇಕ ಸಾಧ್ಯತೆಗಳಿವೆ. ವಿವಿಧ ದೇಶ, ರಾಜ್ಯಗಳಲ್ಲಿರುವ ಕನ್ನಡಿಗರಿಗೆ ಸಿನಿಮಾ ತಲುಪಿಸುವತ್ತ ಚಿತ್ರ ತಯಾರಕರು ಗಮನ ಹರಿಸಬಹುದಾಗಿದೆ. ಅಂತರ್ಜಾಲ ಬಳಸಿ ವಿಶ್ವ ಮಾರುಕಟ್ಟೆಗೆ ಸಿನಿಮಾ ಬಿಡುಗಡೆ ಮಾಡುವ ವಿದ್ಯಮಾನವೂ ಆರಂಭಗೊಂಡಿದೆ.1ಚಿತ್ರ-ಹಲವು ನಿರ್ಮಾಪಕರು

`ಒಬ್ಬ ನಿರ್ಮಾಪಕ-ಹಲವು ಸಿನಿಮಾ' ಹಿಂದಿದ್ದ ಮಂತ್ರ. ಈಗ `ಹಲವು ನಿರ್ಮಾಪಕರು-ಒಂದು ಸಿನಿಮಾ' ಕಾಲ! ಈ ತತ್ವದಿಂದಾಗಿ ಚಿತ್ರ ಯಶಸ್ವಿ ಆಗದಿದ್ದರೂ ಒಬ್ಬರಿಗೇ ಹೆಚ್ಚು ನಷ್ಟವಾಗದು. ಲಾಭವಾದರೆ ಎಲ್ಲರೂ ಹಂಚಿಕೊಳ್ಳಬಹುದು.ಕೆಲವು ನಿರ್ಮಾಪಕರಂತೂ ಪ್ರೇಕ್ಷಕರ ಬಂಡವಾಳವನ್ನೂ ಆಹ್ವಾನಿಸಿ, `ನೀವೂ ಲಾಭ ಮಾಡಿಕೊಳ್ಳಿ' ಎಂಬ ಆಕರ್ಷಣೆ ಮುಂದೊಡ್ಡಿದ್ದ ಉದಾಹರಣೆ ಇದೆ.ಕಾರ್ಪೊರೇಟ್ ಸಂಸ್ಥೆಗಳು ಸಿನಿಮಾ ನಿರ್ಮಿಸುತ್ತಿರುವುದು ಇತ್ತೀಚಿನ ವಿದ್ಯಮಾನ. ಇವುಗಳಿಂದ ಸಾಂಪ್ರದಾಯಿಕ ನಿರ್ಮಾಪಕರು ಪೈಪೋಟಿ ಎದುರಿಸುತ್ತಿದ್ದಾರೆ. ಆದರೆ ಹೂಡಿಕೆಗೆ ಇಂಥ ಸಂಸ್ಥೆಗಳು ಹಿಂದೇಟು ಹಾಕದೇ ಇರುವುದರಿಂದ ಗುಣಮಟ್ಟದ ಚಿತ್ರ ನಿರ್ಮಾಣ ಸಾಧ್ಯವಾಗುತ್ತಿದೆ. ಬಾಲಿವುಡ್‌ನಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಅಬ್ಬರ ಹೆಚ್ಚಿದೆ. ಆ ಗಾಳಿ ಗಾಂಧಿನಗರಕ್ಕೂ ಬೀಸುತ್ತಿದೆ.ನಿರ್ಮಾಣ-ವಿತರಣೆ

ಸಿನಿಮಾ ವಿತರಣೆ ವಿಭಾಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೊದಲೆಲ್ಲಾ ಕಮಿಷನ್ ಮೇಲೆ ಚಿತ್ರ ಹಂಚಿಕೆಯಾಗುತ್ತಿತ್ತು. ಹಕ್ಕುಗಳನ್ನು ವಿತರಕರು ಖರೀದಿಸುತ್ತಿದ್ದರು. ಈಗ ನಿರ್ಮಾಪಕರೇ ವಿತರಣೆ ನಿರ್ವಹಿಸುತ್ತಿದ್ದಾರೆ. ಕೇಂದ್ರೀಕೃತ ವಿತರಣಾ ವ್ಯವಸ್ಥೆ ಈಗಿಲ್ಲ. ಕನ್ನಡ ಚಿತ್ರಗಳನ್ನು ಪ್ರದರ್ಶಿಸಲೇಬೇಕು ಎಂದು 80ರ ದಶಕದಲ್ಲಿದ್ದ ನಿಯಮ ಈಗಿಲ್ಲ. ಪರಭಾಷೆ ವಿತರಕರೇ ಕರ್ನಾಟಕ ಮಾರುಕಟ್ಟೆ ಮೇಲೂ ಪ್ರಾಬಲ್ಯ ಸಾಧಿಸಿದ್ದಾರೆ.ಆಡಿಯೊ ಮಾರುಕಟ್ಟೆ

ಆಡಿಯೊ ಮಾರುಕಟ್ಟೆಯನ್ನು ತಂತ್ರಜ್ಞಾನ ಕಿರಿದಾಗಿಸಿದೆ. ಕ್ಯಾಸೆಟ್‌ಗಳ ಕಾಲದಲ್ಲಾದರೆ ಸಿನಿಮಾದಲ್ಲಿ ಕನಿಷ್ಠ 6 ಹಾಡು ಇರುತ್ತಿದ್ದವು. ಧ್ವನಿಮುದ್ರಿಕೆ ಬಂದ ಮೇಲೆ 2 ಹಾಡಿದ್ದರೂ ಸಿ.ಡಿ ಬಿಡುಗಡೆ ಮಾಡಬಹುದು. ಇದು ಆಡಿಯೊ ಮಾರುಕಟ್ಟೆಯನ್ನೇ ನೆಚ್ಚಿಕೊಂಡ ಸಂಗೀತ ನಿರ್ದೇಶಕರು, ಗಾಯಕರು, ಹಿನ್ನೆಲೆ ವಾದ್ಯದವರಿಗೆ ಪೆಟ್ಟು ನೀಡಿದೆ. ಸಾಮಾಜಿಕ ಜಾಲತಾಣದ ಪ್ರಾಬಲ್ಯ ಆಡಿಯೊ ಕಂಪೆನಿಗಳ ಪಾಲಿಗೆ ಸವಾಲೆನಿಸಿದೆ. ನೆಪಕ್ಕಷ್ಟೇ ಚಿತ್ರದ ಧ್ವನಿಮುದ್ರಿಕೆ ಬಿಡುಗಡೆಯಾಗುತ್ತಿವೆ.ಪರಭಾಷೆ-ಪೈರಸಿ ಸಮಸ್ಯೆ

ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಮುಂತಾದೆಡೆ ಪರಭಾಷಾ ಚಿತ್ರಗಳ ಪ್ರಾಬಲ್ಯ ಮೊದಲಿನಂತೆ ಢಾಳಾಗಿಯೇ ಇದೆ. ಪೈರಸಿ, ಡಬ್ಬಿಂಗ್ ಪೆಡಂಭೂತವನ್ನೂ ಕನ್ನಡ ಚಿತ್ರರಂಗ ಎದುರಿಸುತ್ತಿದೆ. ಡಬ್ಬಿಂಗ್ ಅಡಿಯಿಟ್ಟರೆ ಸಾವಿರಾರು ಕಾರ್ಮಿಕರ ಅನ್ನ ಕಿತ್ತುಕೊಂಡಂತಾಗುತ್ತದೆ ಎಂಬ ಆತಂಕ ಇದೆ. ಪೈರಸಿ ತಡೆಗೆ ಗೂಂಡಾ ಕಾಯ್ದೆ ಜಾರಿಯಾಗಬೇಕೆಂಬ ಒತ್ತಾಯ ಬಹುದಿನಗಳದ್ದು.ಕಲಾತ್ಮಕ ಸಿನಿಮಾ

ಕಲಾತ್ಮಕ ಸಿನಿಮಾ ವ್ಯಾಪಾರ ಉತ್ತಮವಾಗಿದೆ. ಕಡಿಮೆ ಬಂಡವಾಳದಲ್ಲಿ ಲಾಭ ಗಳಿಸುವ ಯತ್ನ ಪರ್ಯಾಯ ಚಿತ್ರಗಳ ನಿರ್ಮಾಪಕರದು. ಚಲನಚಿತ್ರಗಳಿಗೆ ಸರ್ಕಾರ 75 ಚಿತ್ರಗಳಿಗೆ ರೂ10 ಲಕ್ಷ ಗೌರವಧನ ನೀಡುತ್ತದೆ. ನಿರ್ಮಾಪಕರಿಗಿದು ನಿಶ್ಚಿತ ಆದಾಯ. ಕಲಾತ್ಮಕ ಚಿತ್ರದವರು ಹೆಚ್ಚು ಇದರ ಲಾಭ ಪಡೆಯುತ್ತಾರೆ.ರಾಷ್ಟ್ರ ಪ್ರಶಸ್ತಿ ಮೊತ್ತ ರೂ1.5 ಲಕ್ಷ. ಈ ಚಿತ್ರಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲು `ಸ್ವರ್ಣ ಕಮಲ' ಪ್ರಶಸ್ತಿ ಚಿತ್ರಕ್ಕೆ ರೂ8 ಲಕ್ಷ, `ರಜತ ಕಮಲ' ಪ್ರಶಸ್ತಿ ಚಿತ್ರಕ್ಕೆ ರೂ5 ಲಕ್ಷ ಸಂಭಾವನೆ ನೀಡುತ್ತದೆ. ಪನೋರಮಾ, ರಾಜ್ಯ ಪ್ರಶಸ್ತಿ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪ್ರಶಸ್ತಿ ಮೊತ್ತ ಪಡೆಯುವ ಅವಕಾಶವಿದೆ.ಕಲಾತ್ಮಕ ಚಿತ್ರಗಳ ಡಿ.ವಿ.ಡಿ, ಸಿ.ಡಿ.ಗೆ ಮಾರುಕಟ್ಟೆ ಬೇಡಿಕೆಯೂ ಉಂಟು. ರೂ1 ಲಕ್ಷದಿಂದ ರೂ3 ಲಕ್ಷದವರೆಗೆ ದೃಶ್ಯಮುದ್ರಿಕೆ ಕಂಪೆನಿಗಳು ಸಂಭಾವನೆ ನೀಡುತ್ತವೆ. ಶಾಲಾ-ಕಾಲೇಜು, ಸಂಘಟನೆಗಳಲ್ಲಿ ಕಲಾತ್ಮಕ ಚಿತ್ರ ಪ್ರದರ್ಶನಕ್ಕೆ ಕೋರಿಕೆ ಬರುತ್ತದೆ. ಪ್ರದರ್ಶನವೊಂದಕ್ಕೆ ಕನಿಷ್ಠ ರೂ5,000 ಇದೆ. 100 ಬಾರಿ ಪ್ರದರ್ಶಿಸಿದರೆ ರೂ5 ಲಕ್ಷ ಲಾಭ.ಕಲಾತ್ಮಕ ಚಿತ್ರಗಳ ನಿರ್ದೇಶಕ ಪಿ.ಶೇಷಾದ್ರಿ ಅವರ ಪ್ರಕಾರ, ಪರ್ಯಾಯ ಚಿತ್ರಗಳಿಗೆ ಇದು ಹದವಾದ ಕಾಲ. `ಮಲ್ಟಿಪ್ಲೆಕ್ಸ್' ಬಂದ ನಂತರ ಬಾಡಿಗೆ ಕಟ್ಟಿ ಸಿನಿಮಾ ತೋರಿಸುವ ಪ್ರಮೇಯ ಬಂದಿಲ್ಲ!`ವ್ಯಾಪಾರಿ ಚಿತ್ರಗಳಿಗೆ ಹೋಲಿಸಿದರೆ ಕಲಾತ್ಮಕ ಚಿತ್ರಗಳಿಗೆ ದೀರ್ಘಾಯಸ್ಸು. 13 ವರ್ಷ ಹಿಂದೆ ತೆರೆಕಂಡ     `ಮುನ್ನುಡಿ' ಈಗಲೂ ಶಾಲಾ-ಕಾಲೇಜುಗಳಲ್ಲಿ ಪ್ರದರ್ಶಿತವಾಗುತ್ತಿದೆ' ಎನ್ನುವ ಶೇಷಾದ್ರಿ ಅವರಿಗೆ, ಕೋಟಿಗಟ್ಟಲೆ ಹಣ ಸುರಿದು ವ್ಯಾಪಾರಿ ಚಿತ್ರ ತಯಾರಿಸುವುದು ಜೂಜಿನಂತೆ ಕಾಣುತ್ತದೆ.`ಸಾಲ'ದ ಹಣ

ಹಣ ಎಷ್ಟಿದ್ದರೂ ಒಮ್ಮಮ್ಮೆ ಸಾಲುವುದಿಲ್ಲ. ಸಿನಿಮಾಕ್ಕಾಗಿ ಸಾಲ ಮಾಡುವವರಿಗೆ ಸ್ಥಿರಾಸ್ತಿ ಆಧಾರವಿಲ್ಲದೆ ಸಾಲ ದೊರೆಯುವುದು ವಿರಳ. ಆಗ ಚಿತ್ರೋದ್ಯಮದವರ ಹಣಕಾಸಿನ ಬೆಂಬಲ ಕೇಳಬಹುದು. ಉದ್ಯಮ ಎಂದು ಪರಿಗಣಿತವಾದ ನಂತರ ಕೆಲವು ಬ್ಯಾಂಕ್‌ಗಳೂ ಸಾಲ ನೀಡುವ ಧೈರ್ಯ ತೋರಿವೆ.ಚಕ್ರಬಡ್ಡಿ: ಚಕ್ರಬಡ್ಡಿ, ಮೀಟರ್ ಬಡ್ಡಿ ಎಂದೆಲ್ಲಾ ಹೋಗಿ ಕಷ್ಟಕ್ಕೆ ಸಿಲುಕದಂತೆ ಜಾಗ್ರತೆ ವಹಿಸಬೇಕು.ಚಿತ್ರ ಆರಂಭಿಸಿದ ನಂತರ ಕಲಾವಿದರು ದುರ್ಮರಣಕ್ಕೀಡಾದ, ಜೈಲು ಸೇರಿದ ಉದಾಹರಣೆಗಳಿವೆ. ನಿರ್ದೇಶಕರೇ ಅನಾರೋಗ್ಯಕ್ಕೆ ತುತ್ತಾಗಿ ಮರಳಿ ಬಾರದ ಲೋಕಕ್ಕೆ ತೆರಳಿದ್ದಿದೆ. ಕಲಹ, ಭಿನ್ನಾಭಿಪ್ರಾಯ, ಮನಸ್ತಾಪ ಕಾರಣಕ್ಕೆ ಚಿತ್ರ ತಯಾರಿ ಅರ್ಧಕ್ಕೇ ಕೈ ಬಿಟ್ಟವರ ಸಂಖ್ಯೆ ಕಡಿಮೆಯೇನೂ ಇಲ್ಲ. ಇದನ್ನೆಲ್ಲಾ ನಿಭಾಯಿಸುವ ಸಂಯಮ ನಿರ್ಮಾಪಕನಿಗೆ ಬೇಕು.

`ನಿರ್ಮಾಪಕರು ಬಿಚ್ಚು ಮನಸ್ಸಿನಿಂದ ಕೆಲಸ ಮಾಡಿದಷ್ಟೂ ಉತ್ತಮ ಚಿತ್ರ ಹುಟ್ಟುತ್ತದೆ' ಎಂದು ಹಿರಿಯ ನಟ ಲೋಕನಾಥ್ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಹೇಳಿದ್ದು ಇದೇ ಅರ್ಥದಲ್ಲಿ.ಪ್ರಚಾರ ಬಹಳ ಮುಖ್ಯ

ಸಿನಿಮಾ ನಿರ್ಮಾಣದ ಬಹುಮುಖ್ಯ ಅಂಗ ಪ್ರಚಾರ. ಎಲ್ಲ ವಸ್ತುಗಳಿಗೆ ಜಾಹೀರಾತು ನೀಡುವಂತೆ ಇಲ್ಲಿಯೂ ಪ್ರಚಾರ ಮುಖ್ಯ. ಮುಹೂರ್ತದಿಂದ ಚಿತ್ರ ಬಿಡುಗಡೆಯಾಗಿ ಶತಕ ಆಚರಿಸಿಕೊಳ್ಳುವವರೆಗೂ ಪ್ರಚಾರ ಕಡೆಗಣಿಸುವಂತಿಲ್ಲ. ಪತ್ರಿಕೆ-ಟಿವಿ ಜಾಹೀರಾತು, ಟ್ರೇಲರ್, ಪೋಸ್ಟರ್, ಬ್ಯಾನರ್, ಸ್ಟಿಕ್ಕರ್ ಜಾಹೀರಾತು ಸಾಮಗ್ರಿಗಳ ತಯಾರಿ, ಮಾಧ್ಯಮಚರ್ಚೆಯಲ್ಲಿ ಕಲಾವಿದರು ನಿರ್ದೇಶಕರೊಡನೆ ಭಾಗವಹಿಸುವುದು. ಧ್ವನಿಮುದ್ರಿಕೆ ಬಿಡುಗಡೆ, ಸಾಮಾಜಿಕ ಜಾಗೃತಿಯಂತಹ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳುವುದೂ ಮುಖ್ಯ.ವಿವಾದಗಳೂ ಹಲವು ಬಾರಿ ಚಿತ್ರದ ಅಸ್ತಿತ್ವ ಸಾರುತ್ತ ಜನರ ಗಮನ ಸೆಳೆಯುವುದುಂಟು. ಆದರೆ ಅದರಿಂದಲೇ ಚಿತ್ರ ಯಶಸ್ವಿಯಾಗುತ್ತದೆ ಎಂಬ ಭಾವನೆ ತಪ್ಪು. ಚಿತ್ರದ ಹೂರಣದ ಮೇಲೆಯೇ ಎಲ್ಲವೂ ನಿಂತಿದೆ. ಹೂರಣವಿಲ್ಲದಿದ್ದರೂ ವಿವಾದವನ್ನೇ ನೆಚ್ಚಿದ ಸಿನಿಮಾಗಳು ಮೊದಲ ದಿನದ ಪ್ರಥಮ ಪ್ರದರ್ಶನದಲ್ಲಿ ಹೌಸ್‌ಫುಲ್ ಆಗಿ ಅದೇ ದಿನ ಸಂಜೆ ಪ್ರದರ್ಶನದಲ್ಲಿ ಖಾಲಿ ಹೊಡೆದದ್ದೂ ಇದೆ.ಸಿನಿಮಾ ವಿತರಣೆ

ವಿತರಣೆ ವಿಚಾರದಲ್ಲಿ ನಿರ್ಮಾಪಕರು ಗಮನಿಸಬೇಕಾದ ಅಂಶಗಳಿವೆ. ಚಿತ್ರ ಚೆನ್ನಾಗಿದ್ದರೆ ನಿರ್ಮಾಪಕರೇ ಹಣ ನೀಡಿ ಚಿತ್ರದ ಹಕ್ಕು ಖರೀದಿಸಬಹುದು, ಇಲ್ಲವೇ ವಿತರಣೆಗೆ ಸಂಭಾವನೆ ಪಡೆಯಬಹುದು.ಎ, ಬಿ, ಸಿ, ಶ್ರೇಣಿ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ಬಿಡುಗಡೆ, ಚಿತ್ರಮಂದಿರ ಬಾಡಿಗೆ, ನಿರ್ವಹಣೆ ವೆಚ್ಚ ಕಳೆದು ಹಣ ಪಡೆಯುವುದು ಒಂದು ವಿಧ. ಮತ್ತೊಂದು ಚಿತ್ರದ ಡಿ.ವಿ.ಡಿ, ಸಿ.ಡಿ.ಗಳ ಮೂಲಕ ಚಿತ್ರ ವಿತರಣೆ. ತಂತ್ರಜ್ಞಾನದ ಆವಿಷ್ಕಾರದಿಂದಾಗಿ ಇದೀಗ ಸಿನಿಮಾಗಳನ್ನು ಅಂತರ್ಜಾಲದಲ್ಲಿಯೂ ಬಿಡುಗಡೆ ಮಾಡಿ ವಿಶ್ವ ಮಾರುಕಟ್ಟೆ ಸೃಷ್ಟಿಸಿಕೊಳ್ಳಬಹುದು. ಇಷ್ಟಾದರೂ ಚಿತ್ರ ಗೆಲ್ಲದಿರಬಹುದು. ಏಕೆಂದರೆ ಪ್ರೇಕ್ಷಕರ ಮನಸ್ಸು ಮೀನಿನ ಹೆಜ್ಜೆಯಂತೆ. ಎಷ್ಟೇ ಚಂದದ ಚಿತ್ರ ಮಾಡಿದರೂ ನೋಡುಗರು ಒಪ್ಪದಿರಬಹುದು. ಆಗ ಒಂದು ಕೃತಿ ರಚಿಸಿದ್ದೇವೆ ಎಂಬ ತೃಪ್ತಿಯೊಂದಿಗೆ ಮರಳಿ ಯತ್ನ ಮಾಡಬಹುದು. ಸೋಲೇ ಗೆಲುವಿನ ಮೆಟ್ಟಿಲು!ಚಲನಚಿತ್ರ ವಾಣಿಜ್ಯ ಮಂಡಳಿ

`ಮೈಸೂರು ಚಲನಚಿತ್ರ ವಾಣಿಜ್ಯ ಮಂಡಳಿ' ಹೆಸರಿನಲ್ಲಿ 1944ರಲ್ಲಿ ಆರಂಭವಾದ ಸಂಸ್ಥೆ ಇದು. ಅಬ್ದುಲ್ ವಜೀದ್ ಪ್ರಥಮ ಅಧ್ಯಕ್ಷರು. 1972ರಲ್ಲಿ `ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ' ಎಂದು ಮರು ನಾಮಕರಣಗೊಂಡಿತು. ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕರು ಸಂಘದ ಸದಸ್ಯರು. ಈ ಮೂರೂ ವಲಯಗಳ ಸಮಸ್ಯೆ ಬಗೆಹರಿಸುವುದಕ್ಕೆ, ಉದ್ಯಮಕ್ಕೆ ಸಂಬಂಧಿಸಿ ಮಹತ್ವದ ನಿರ್ಧಾರ ಕೈಗೊಳ್ಳುವುದಕ್ಕೆ, ಸಮಸ್ಯೆಗಳ ಪರಿಹಾರಕ್ಕೆ ಮಂಡಳಿಯ ಚಟುವಟಿಕೆ ಮೀಸಲಾಗಿದೆ.`ವರ್ಷದಲ್ಲಿ 12 ವಾರ ಕನ್ನಡ ಸಿನಿಮಾ ಪ್ರದರ್ಶನ ಕಡ್ಡಾಯ, ಹೊರ ರಾಜ್ಯಗಳಲ್ಲಿ ಕನ್ನಡ ಚಿತ್ರೋತ್ಸವ ಮತ್ತು ಕನ್ನಡ ಚಲನಚಿತ್ರ ಸಾಹಿತ್ಯ ಕಮ್ಮಟ ಆಯೋಜಿಸುವುದು, ಪೋಸ್ಟರ್ ಮೇಲೆ ನಿಯಂತ್ರಣ, ಪ್ರಾದೇಶಿಕ ಸೆನ್ಸಾರ್ ಮಂಡಳಿ ರಚನೆಗೆ ಪರೋಕ್ಷ ಸಹಕಾರ, ಚಿತ್ರರಂಗದ ಪ್ರಮುಖ ಮೈಲುಗಲ್ಲುಗಳ ಸ್ಮರಣೆ ಇದರ ಸಾಧನೆಗಳು' ಎನ್ನುತ್ತಾರೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಸಿ.ಎನ್. ಚಂದ್ರಶೇಖರ್. ಸಂಘದಲ್ಲಿ 3000 ಸದಸ್ಯರಾಗಿದ್ದಾರೆ. ಅಧ್ಯಕ್ಷರು, ಪದಾಧಿಕಾರಿ ಆಯ್ಕೆಗೆ ವರ್ಷಕ್ಕೊಮ್ಮೆ ಚುನಾವಣೆ. ಒಬ್ಬರು ಅಧ್ಯಕ್ಷ, ಮೂರು ವಲಯಗಳಿಂದ ಮೂವರು ಉಪಾಧ್ಯಕ್ಷರು, ಮೂವರು ಕಾರ್ಯದರ್ಶಿ, ಒಬ್ಬ ಖಜಾಂಚಿ. 36 ಮಂದಿ ಕಾರ್ಯಕಾರಿ ಮಂಡಳಿ ಸದಸ್ಯರಿರುತ್ತಾರೆ. ನಿರ್ಮಾಪಕರು, ವಿತರಕರು ಪ್ರದರ್ಶಕರು ಆವರ್ತನೆಯಂತೆ ಅಧ್ಯಕ್ಷ ಪದವಿ ಅಲಂಕರಿಸುತ್ತಾರೆ.ನಿರ್ಮಾಪಕರ ಸಂಘ

1982ರಲ್ಲಿ ಸಂಘ ಹುಟ್ಟಿತು. ಸ್ಥಾಪಕ ಅಧ್ಯಕ್ಷ ಎಚ್.ಎಂ.ಕೆ.ಮೂರ್ತಿ. ಮೊದಲು ವಾಣಿಜ್ಯ ಮಂಡಳಿಯಲ್ಲಿ ವಿತರಕರು, ಪ್ರದರ್ಶಕರೇ ಸದಸ್ಯರಾಗಿರುತ್ತಿದ್ದರು. ನಿರ್ಮಾಪಕರ ಸಂಘ ಹುಟ್ಟಿದ ಬಳಿಕ ಮಂಡಳಿಯಲ್ಲಿ ನಿರ್ಮಾಪಕರಿಗೂ ಸ್ಥಾನ ದೊರೆಯಿತು.

ಸದಸ್ಯತ್ವ ಶುಲ್ಕ ರೂ50 ಸಾವಿರ. ಇದರಲ್ಲಿ ರೂ20 ಸಾವಿರವನ್ನು ಕಲ್ಯಾಣನಿಧಿಯಲ್ಲಿ ಇರಿಸಲಾಗುತ್ತದೆ.ಒಂದು ಸಿನಿಮಾ ನಿರ್ಮಿಸಿದ ನಂತರವಷ್ಟೇ ಸಂಘದ ಚುನಾವಣೆಯಲ್ಲಿ ಭಾಗವಹಿಸಲು ಅರ್ಹತೆ ದೊರೆಯುತ್ತದೆ ಎನ್ನುತ್ತದೆ ಸಂಘದ ಬೈಲಾ. ಸದಸ್ಯರಿಗೆ ರೂ2 ಲಕ್ಷ ಮೊತ್ತದ ವೈದ್ಯಕೀಯ ವಿಮೆ ಹಾಗೂ ರೂ3 ಲಕ್ಷ ಮೌಲ್ಯದ ಜೀವವಿಮೆ ಇದೆ. `ಸದ್ಯ ಸಂಘದಲ್ಲಿ 1050 ಸದಸ್ಯರಿದ್ದಾರೆ. ಸಕ್ರಿಯ ನಿರ್ಮಾಪಕರು 200 ಇರಬಹುದು. 30 ವರ್ಷದಿಂದ ಬಾಕಿ ಉಳಿದಿದ್ದ ನೋಂದಣಿ ಪ್ರಕ್ರಿಯೆ ನವೀಕರಿಸಲಾಗಿದೆ' ಎನ್ನುತ್ತಾರೆ ಸಂಘದ ಕಾರ್ಯದರ್ಶಿ ಸೂರಪ್ಪಬಾಬು.ಇವರಿಂದಲೇ ಸಿನಿಮಾ...

ನಿರ್ಮಾಣ: ನಿರ್ಮಾಪಕರು, ಕಾರ್ಯಕಾರಿ ನಿರ್ಮಾಪಕರು, ನಿರ್ಮಾಣ ವ್ಯವಸ್ಥಾಪಕರು, ನಿರ್ಮಾಣ ಸಂಯೋಜಕರು, ನಿರ್ಮಾಣೋತ್ತರ ಮೇಲ್ವಿಚಾರಕರು, ಪ್ರೊಡಕ್ಷನ್ ಬಾಯ್

ನಿರ್ದೇಶನ: ನಿರ್ದೇಶಕರು, ಸಹಾಯಕ ನಿರ್ದೇಶಕರು ಕಥಾ ವಿಭಾಗ: ಕಥೆಗಾರರು, ಚಿತ್ರಕತೆ ಬರಹಗಾರರು, ಸಂಭಾಷಣೆಕಾರರು, ಸ್ಕ್ರಿಪ್ಟ್ ಮೇಲ್ವಿಚಾರಕರು, ನಟನಾ ವಿಭಾಗ: ನಾಯಕ ನಟ- ನಟಿ, ಹಾಸ್ಯ ನಟ, ಖಳನಟ, ಪೋಷಕ ನಟ-ನಟಿಯರು

ಲೊಕೇಶನ್ ವಿಭಾಗ: ಲೊಕೇಶನ್ ವ್ಯವಸ್ಥಾಪಕರು, ಸಹಾಯಕರು, ಕಲಾ ವಿಭಾಗ: ಕಲಾ ನಿರ್ದೇಶಕರು, ಸಹಾಯಕ ಕಲಾ ನಿರ್ದೇಶಕರು, ಚಿತ್ರಕಲಾವಿದರು, ಸೆಟ್ ವಿಭಾಗ: ಸೆಟ್ ವಿನ್ಯಾಸಕ, ಸೆಟ್ ಸಿಂಗರಿಸುವವರು, ಅಗತ್ಯ ವಸ್ತುಗಳನ್ನು ಖರೀದಿಸುವವರು, ಕನ್‌ಸ್ಟ್ರಕ್ಷನ್ ಸಂಯೋಜಕರು, ಮುಖ್ಯ ಬಡಗಿ, ಉಡುಪು ವಿಭಾಗ: ವಸ್ತ್ರವಿನ್ಯಾಸಕರು, ಸಂಯೋಜಕರು, ಟೈಲರ್, ಪ್ರಸಾಧನ: ಪ್ರಸಾಧನ ಕಲಾವಿದರು, ಕೇಶ ವಿನ್ಯಾಸಕರು. ಸ್ಪೆಷಲ್  ಎಫೆಕ್ಟ್: ದೃಶ್ಯ ಹಾಗೂ ಶ್ರವ್ಯ ವಿಭಾಗಕ್ಕೆ ಪ್ರತ್ಯೇಕವಾದ ಸಂಯೋಜಕರು ಹಾಗೂ ಸಹಾಯಕರು, ಅನಿಮೇಷನ್ ಕಲಾವಿದರು, ಸ್ಟಂಟ್ ವಿಭಾಗ: ಸಾಹಸ ನಿರ್ದೇಶಕರು, ಸಹಾಯಕರು ಹಾಗೂ ಸ್ಟಂಟ್ ಕಲಾವಿದರು, ಆಯುಧಗಳ ನಿರ್ವಾಹಕರು.ನೃತ್ಯ ವಿಭಾಗ: ನೃತ್ಯ ನಿರ್ದೇಶಕರು, ನರ್ತಕರ ತಂಡ. ಛಾಯಾಗ್ರಹಣ: ಛಾಯಾಗ್ರಾಹಕ, ಸಹಾಯಕ ಛಾಯಾಗ್ರಾಹಕ, ಡಿಜಿಟಲ್ ಕ್ಯಾಮೆರಾ ತಂತ್ರಜ್ಞ, ಧ್ವನಿ ನಿರ್ಮಾಣ: ಸೌಂಡ್ ಮಿಕ್ಸರ್, ಧ್ವನಿವರ್ಧಕ ತಂತ್ರಜ್ಞರು, ಶಬ್ದ ವಿನ್ಯಾಸಕರು, ಡಿಟಿಎಸ್ ಮುಂತಾದ ಪರಿಣಾಮಗಳನ್ನು ಒದಗಿಸುವವರುಸಂಕಲನ: ದೃಶ್ಯ ಸಂಕಲನಕಾರರು, ಸಂಭಾಷಣೆ ಸಂಕಲನಕಾರರು, ನೆಗೆಟೀವ್ ಕಟ್ಟರ್, ಕಲರಿಸ್ಟ್ಸಂಗೀತ: ಸಂಗೀತ ನಿರ್ದೇಶಕರು, ಗಾಯಕರು, ವಾದ್ಯವೃಂದ, ರೀರೆಕಾರ್ಡಿಂಗ್ ಮಿಕ್ಸರ್ಬೆಳಕು: ಬೆಳಕು ವಿನ್ಯಾಸಕರು, ಲೈಟ್‌ಬಾಯ್‌ಗಳು, ಎಲೆಕ್ಟ್ರಿಕ್ ವಸ್ತುಗಳನ್ನು ನಿರ್ವಹಿಸುವವರುಇತರೆ: ಕಾನೂನು ಸಲಹೆಗಾರರು, ವಿಮೆ ಏಜೆಂಟ್‌ಗಳು, ಲೆಕ್ಕಪತ್ರ ನಿರ್ವಾಹಕರು

ಒಂದು ಚಿತ್ರದ ನಿರ್ಮಾಣ ಕಾರ್ಯದಲ್ಲಿ ಇದಿಷ್ಟೂ ಕೆಲಸಗಾರರು, ತಂತ್ರಜ್ಞರು, ಸಹಾಯಕರು ಸಾಮಾನ್ಯವಾಗಿ ಇರುತ್ತಾರೆ. ಆರ್ಟ್ ಫಿಲಂ ನಿರ್ಮಿಸುವಾಗ ಇವರಲ್ಲಿ ಹಲವರ ಸೇವೆಯ ಅಗತ್ಯ ಇರುವುದಿಲ್ಲ.ಸೆನ್ಸಾರ್ ಮಂಡಳಿ

ಇದು ಕೇಂದ್ರ ವಾರ್ತಾ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಸಾಂವಿಧಾನಿಕ ಸಂಸ್ಥೆ. ಇದರ ಅನುಮತಿ ಪಡೆದ ನಂತರವಷ್ಟೇ ದೇಶದಲ್ಲಿ ಚಲನಚಿತ್ರಗಳ ಸಾರ್ವಜನಿಕ ಪ್ರದರ್ಶನ ಸಾಧ್ಯ. ಕೇಂದ್ರ ಸರ್ಕಾರದಿಂದ ನೇಮಕಗೊಂಡ ಅಧ್ಯಕ್ಷರು, ಸದಸ್ಯರನ್ನು ಮಂಡಳಿ ಒಳಗೊಂಡಿದೆ.ಮುಂಬೈನಲ್ಲಿ ಕೇಂದ್ರ ಕಚೇರಿ. ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ತಿರುವನಂತಪುರ, ಹೈದರಾಬಾದ್, ನವದೆಹಲಿ, ಕಟಕ್, ಗುವಾಹಟಿಯಲ್ಲಿ ಪ್ರಾದೇಶಿಕ ಕಚೇರಿಗಳಿವೆ. ಸಲಹಾ ಸಮಿತಿಗಳು ಸಿನಿಮಾ ಪರಾಮರ್ಶಿಸಲು ಪ್ರಾದೇಶಿಕ ಕಚೇರಿ ಸಹಾಯ ಮಾಡುತ್ತದೆ. ವಿವಿಧ ಕ್ಷೇತ್ರಗಳ ಸಾಧಕರನ್ನು ಕೇಂದ್ರ ಸರ್ಕಾರ ಸಲಹಾ ಸಮಿತಿಗೆ ನೇಮಿಸುತ್ತದೆ. ಕಾರ್ಯಾವಧಿ ಎರಡು ವರ್ಷ.ಸಿನಿಮಾಟೋಗ್ರಾಫ್ ಕಾಯ್ದೆ(1952), ಸಿನಿಮಾಟೋಗ್ರಾಫ್ ನಿಯಮ(1983), ಕೇಂದ್ರ ಸರ್ಕಾರದ ಯು/ಎಸ್ 5(ಬಿ) ಗೊತ್ತುವಳಿಯಂತೆ ಮಂಡಳಿ ಕಾರ್ಯ ನಿರ್ವಹಿಸುತ್ತದೆ.ಸಿನಿಮಾ ಪರಿಭಾಷೆ ಎಂಟರ್‌ಟೇನ್‌ಮೆಂಟ್..

`ಎಂಟರ್‌ಟೇನ್‌ಮೆಂಟ್... ಎಂಟರ್‌ಟೇನ್‌ಮೆಂಟ್... ಎಂಟರ್‌ಟೇನ್‌ಮೆಂಟ್...' ಎನ್ನುತ್ತಾಳೆ `ಡರ್ಟಿ ಪಿಕ್ಚರ್' ಹಿಂದಿ ಚಿತ್ರದ ನಾಯಕಿ.

ಸಿನಿಮಾಗೆ ಗೊತ್ತಿರುವ ಭಾಷೆ ಒಂದೇ, ಮನರಂಜನೆ. ಕಥೆ ಏನೇ ಇದ್ದರೂ ರಂಜನೆ ಮೂಲಕವೇ ಹೇಳಬೇಕು. ಪಂಚತಂತ್ರ.. ನೀತಿಕತೆ. ಆದರೆ, ಎಲ್ಲಿಯೂ ನೀತಿ ಎಂಬುದು ಬೋಧನೆ ಆಗುವುದಿಲ್ಲ. ರಂಜನೆ ಸೂತ್ರದಲ್ಲೇ ನೀತಿಯನ್ನೂ ದಾಟಿಸಲಾಗಿದೆ.`ಹೊಸ ಸೀಸೆಯಲ್ಲಿ ಹಳೆ ಮದ್ಯ'ದಂತೆ ಕತೆ ಇದ್ದರೂ ಅನೇಕ ಬಾರಿ ಯಶಸ್ವಿಯಾಗಿವೆ. ಕಾರಣ, ಕತೆ ಹೇಳುವ ಕ್ರಮದಲ್ಲಿ ಭಿನ್ನತೆ.ಭಯೋತ್ಪಾದನೆ ವಸ್ತುವನ್ನು `ವಿಶ್ವರೂಪಂ'ನಲ್ಲಿ ಕಮಲಹಾಸನ್ ನೋಡುವ ಪರಿ, ಹಾಲಿವುಡ್‌ನ `ಫೇರ್‌ಗೇಮ್' ನಿರ್ದೇಶಕ ನೋಡುವ ರೀತಿಯೇ ಬೇರೆ. ಕತೆಯ ಜತೆಗೇ ಹೇಳುವ ಕ್ರಮವೂ ಅಷ್ಟೇ ಮುಖ್ಯ.ಸತ್ಯಕತೆ, ತನ್ನೊಳಗೇ ಹುಟ್ಟಿದ ಕತೆ, ಪುಸ್ತಕ ಆಧರಿಸಿದ್ದು, ಕತೆಗಾರ ಸಿನಿಮಾಕ್ಕೆಂದು ಬರೆದದ್ದು, ನಾಟಕ ಆಧಾರಿತ ಹೀಗೆ ಯಾವುದೇ ಮೂಲದಿಂದ ಬಂದ ಕತೆ ಸಿನಿಮಾ ಆಗಬಹುದು. ಒಂದು ಸಿನಿಮಾ ಕತೆಯೇ ಮತ್ತೊಂದು ಸಿನಿಮಾಕ್ಕೆ (ಎ-ಝೆಡ್..) ಹೂರಣವಾದ, ದಶಕಗಳ ಹಿಂದಿನ ಸಿನಿಮಾ ಮರು ನಿರ್ಮಾಣಗೊಂಡ(ಗಂಧದಗುಡಿ, ಬೇಡರಕಣ್ಣಪ್ಪ..) ಉದಾಹರಣೆಗಳಿವೆ.ಚಿತ್ರಕತೆ

ಕತೆಗೆ ಎಲ್ಲೆಗಳಿಲ್ಲ. ನಂತರ ಅದನ್ನು ಸಿನಿಮಾಕ್ಕೆ ಹೊಂದಿಸುವುದು ಹೇಗೆ? ಮಾರ್ಪಾಟು ಮಾಡಿಕೊಳ್ಳಬಹುದೇ? ಇತ್ಯಾದಿ ಸಮಾಲೋಚನೆ, ಕತೆಯನ್ನು ಸಾರರೂಪಕ್ಕಿಳಿಸುವುದು, ಮುಂದಿನ ಹಂತ ಚಿತ್ರಕತೆಯದ್ದು. ಇಲ್ಲಿ ಚಿತ್ರಕತೆ ಬರೆಯುವವರು ಕತೆಯ ಸ್ವರೂಪವನ್ನು ಬದಲಿಸಬಹುದು. ಕತೆಯ ಎಳೆ ಇಟ್ಟುಕೊಂಡು ಹೊಸ ಕತೆ ಹೆಣೆಯಬಹುದು.ನಿರ್ಮಾಪಕರು ಮೂಲಕತೆಗೇ ಪಟ್ಟು ಹಿಡಿಯಬಹುದು, ಸಣ್ಣ ಬದಲಾವಣೆ ಮಾಡಿಕೊಳ್ಳಬಹುದು. ಆಮೇಲೆ ಹಣ ಹೂಡಿಕೆ ಅಂದಾಜು, ಎಲ್ಲೆಲ್ಲಿ ಖರ್ಚಾಗಲಿದೆ, ಎಲ್ಲಿ ಉಳಿತಾಯ ಸಾಧ್ಯ ಎಂಬ ಲೆಕ್ಕಾಚಾರ. ಉದಾ: ತಾರಾನಟರು ಹೆಚ್ಚು ಸಂಭಾವನೆ ಬೇಡಿದರೆ ಯುವನಟರು ಕಡಿಮೆ ಹಣಕ್ಕೆ ಒಪ್ಪಿಕೊಳ್ಳುತ್ತಾರೆ. ಚಿತ್ರೀಕರಣಕ್ಕೆ ಹೆಲಿಕಾಪ್ಟರ್ ಬಳಸುವುದಕ್ಕಿಂತ  ಕ್ರೇನ್‌ನಲ್ಲಿಯೇ ಚಿತ್ರೀಕರಿಸಿದರೂ ಚೆಂದಗಾಣಿಸಬಹುದು... ಇತ್ಯಾದಿ.ಸಿನಿಮಾದಲ್ಲಿ ಆರಂಭವನ್ನು ಹೇಳಬಹುದೇ ವಿನಃ ಅಂತ್ಯ ಮೊದಲೇ ಹೇಳಲು ಸಾಧ್ಯವಿಲ್ಲ. ಆರು ತಿಂಗಳಿಗೇ ಸಿನಿಮಾ ನಿರ್ಮಾಣ ಮುಗಿಯಬಹುದು ಎಂದುಕೊಂಡರೆ, ಸೂಕ್ತ ಯೋಜನೆ ಇಲ್ಲದ ಕಾರಣ ಆರು ವರ್ಷವಾದರೂ ಪೂರ್ಣಗೊಳ್ಳದಿರಬಹುದು. ಚಿತ್ರೀಕರಣ ಮುಗಿವವರೆಗೂ `ಇದೇ ದಿನ ಬಿಡುಗಡೆ' ಎಂದು ಮುಂಚಿತವಾಗಿಯೇ ಹೇಳಲಾಗದು.ಚಿತ್ರೀಕರಣ ಪೂರ್ಣಗೊಂಡ ಬಳಿಕ ಒಂದು ನಿಯಂತ್ರಣ ಸಾಧ್ಯವಾಗುತ್ತದೆ. ಹಾಗೆಂದೇ ಕೆಲ ನಿರ್ಮಾಪಕರು ಚಿತ್ರೀಕರಣಕ್ಕಿಂತ ಸಂಕಲನ, ಧ್ವನಿ ಜೋಡಣೆ, ಹಿನ್ನೆಲೆ ಸಂಗೀತ, ಡಿಟಿಎಸ್ ಅಳವಡಿಕೆ ಮೊದಲಾದ ನಿರ್ಮಾಣೋತ್ತರ ಕಾರ್ಯಗಳೇ ಸುಲಭ ಎಂದು ಅಭಿಪ್ರಾಯಪಡುವುದುಂಟು.4 ಬಗೆ ಪ್ರಮಾಣಪತ್ರ

ಯು: ಅನಿರ್ಬಂಧಿತ ಸಾರ್ವಜನಿಕ ಪ್ರದರ್ಶನ

ಯು/ಎ: ಅನಿರ್ಬಂಧಿತ ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶವಿದ್ದರೂ 12 ವರ್ಷದೊಳಗಿನವರಿಗೆ ಈ ಚಿತ್ರ ತೋರಿಸುವುದು ಪೋಷಕರ ವಿವೇಚನೆಗೆ ಬಿಟ್ಟದ್ದು.

ಎ: ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ

ಎಸ್: ವಿಶೇಷ ವರ್ಗದವರಿಗೆ ಮಾತ್ರ (ಉದಾ: ವೈದ್ಯರು, ವಿಜ್ಞಾನಿಗಳಿಗೆ ತೋರಿಸುವಂತಹ ಚಿತ್ರ).ನಿರ್ಮಾಣ-ವಿಭಾಗಾವಾರು ವೆಚ್ಚ?

ಸಿನಿಮಾ ನಿರ್ಮಾಣಕ್ಕೂ ಮುನ್ನ ವಿವಿಧ ವಿಭಾಗಗಳಿಗೆ ಇಂತಿಷ್ಟೇ ಎಂದು ಹಣ ಮೀಸಲಿಟ್ಟು ಯೋಜಿತ ರೀತಿ ಕೆಲಸ ಮಾಡಿದರೆ `ನಿರ್ಮಾಣ ವೆಚ್ಚ' ಮಿತಿಯಲ್ಲಿಯೇ ಇರುತ್ತದೆ. ಇಲ್ಲವಾದರೆ ಮಧ್ಯದಲ್ಲಿ ಹಣ ಸಾಲದೇ ಚಿತ್ರ ನಿರ್ಮಾಣ ನಿಲ್ಲಿಸಬೇಕಾಗುತ್ತದೆ. ಈವರೆಗೆ ಹಾಕಿದ್ದ ಹಣವೆಲ್ಲಾ ಮುಳುಗಿ ಹೋಗುತ್ತದೆ. ರೂ1 ಕೋಟಿ ವೆಚ್ಚದ ಸಿನಿಮಾ ಎಂದರೆ ವಿವಿಧ ವಿಭಾಗಗಳಿಗೆ ಮೀಸಲಿಡಬಹುದಾದ ಅಂದಾಜು ಹಣ:ಚಿತ್ರೀಕರಣ: ರೂ50 ಲಕ್ಷ

ಕಲಾವಿದರು: ರೂ20 ಲಕ್ಷ

ತಂತ್ರಜ್ಞರು:  ರೂ15 ಲಕ್ಷ

ನಿರ್ಮಾಣೋತ್ತರ ವೆಚ್ಚ; ರೂ5 ಲಕ್ಷ

ಪ್ರಚಾರ: ರೂ10 ಲಕ್ಷ

ತಾರಾನಟರ ಆಯ್ಕೆ, ವಿದೇಶದಲ್ಲಿ ಚಿತ್ರೀಕರಣ, ವಿಶೇಷ ತಂತ್ರಜ್ಞಾನ ಬಳಕೆ, ವೈಭವೋಪೇತ ಪ್ರಚಾರ ಇತ್ಯಾದಿಗೆ ರೂ1ಕೋಟಿಗಿಂತ ಹೆಚ್ಚು ಹಣ ಅಗತ್ಯವಿದೆ.ವಿತರಣೆ ವಿಭಾಗಗಳು

ಸಿನಿಮಾ ವಿತರಕರು ಚಿತ್ರ ಹಂಚಿಕೆಯ ಅನುಕೂಲಕ್ಕೆಂದು ಕೆಲವು ವಿಭಾಗಗಳನ್ನು ಮಾಡಿಕೊಂಡಿದ್ದಾರೆ.

ಬಿ.ಕೆ.ಟಿ: ಬೆಂಗಳೂರು, ಕೋಲಾರ, ತುಮಕೂರು

ಎಂ.ಎಂ.ಸಿ.ಎಚ್: ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ, ಹಾಸನ

ಎಸ್.ಸಿ: ಶಿವಮೊಗ್ಗ ಚಿಕ್ಕಮಗಳೂರು

ಸಿ.ಬಿ: ಚಿತ್ರದುರ್ಗ, ಬಳ್ಳಾರಿಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ

ಮುಂಬೈ ಕರ್ನಾಟಕ: ಕಾರವಾರ, ಹುಬ್ಬಳ್ಳಿ, ಬೆಳಗಾವಿ  ಬಿಜಾಪುರ

ಹೈ.ಕ: ರಾಯಚೂರು, ಗುಲ್ಬರ್ಗ, ಬೀದರ್(ಹೈದರಾಬಾದ್ ಕರ್ನಾಟಕ)

ಚಿತ್ರರಂಗದ ಆದಾಯದ ಬಹುಭಾಗ ಬರುವುದು ಬಿ.ಕೆ.ಟಿ, ಎಂ.ಎಂ.ಸಿ.ಎಚ್ ವಿಭಾಗಗಳಿಂದ. ನಂತರದ ಸ್ಥಾನದಲ್ಲಿ ಮುಂಬೈ ಕರ್ನಾಟಕ ಇದೆ.ಸಾಲ ವ್ಯವಸ್ಥೆ

ಸಿನಿಮಾ ಉದ್ಯಮ ಸಾಲಕ್ಕಾಗಿ ಹೆಚ್ಚು ಅವಲಂಬಿಸಿರುವುದು ಖಾಸಗಿ ಫೈನಾನ್ಷಿಯರ್‌ಗಳನ್ನು.ನೆಗೆಟಿವ್(ಸಿನಿಮಾ ಮೂಲಪ್ರತಿ) ಹಕ್ಕು ಅಥವಾ ವಿತರಣಾ ವಿಭಾಗಗಳನ್ನು ಆಧರಿಸಿ ಸಾಲ ನೀಡುವ ಪರಿಪಾಠ ಫೈನಾನ್ಷಿಯರ್‌ಗಳಲ್ಲಿದೆ. ಸ್ಥಿರಾಸ್ಥಿ ಆಧರಿಸಿಯೂ ಸಾಲ ನೀಡುತ್ತಾರೆ.ಬ್ಯಾಂಕ್ ಸಾಲ!  ಉದ್ಯಮಗಳಿಗೆ ಸಾಲ ನೀಡುವ ಬ್ಯಾಂಕ್‌ಗಳು ಸಿನಿಮಾ ನಿರ್ಮಿಸುವವರಿಗೂ ಈ ಮೊದಲು ಸಾಲ ನೀಡಿದ್ದವು. ಕೆಲವು ನಿರ್ಮಾಪಕರು ಬ್ಯಾಂಕ್ ಸಾಲ ಪಡೆದು ಚಿತ್ರ ನಿರ್ಮಿಸಿದ್ದರು. ಆದರೆ ನಿಗದಿತ ಸಮಯದಲ್ಲಿ ಹಣ ಮರುಪಾವತಿ ಅಸಾಧ್ಯವಾಗಿದ್ದರಿಂದ ಈಗ ಸಿನಿಮಾ ನಿರ್ಮಾಣಕ್ಕೆ ಸಾಲ ನೀಡುವುದಕ್ಕೆ ಬ್ಯಾಂಕ್‌ಗಳು ಇಚ್ಛಿಸುತ್ತಿಲ್ಲ. 

ಪ್ರತಿಕ್ರಿಯಿಸಿ (+)