ಗುರುವಾರ , ಮಾರ್ಚ್ 4, 2021
18 °C

ಸಿನಿಮಾ ನೋಡಿ ಸಾಹಸಕ್ಕಿಳಿದರು!

ಸಿದ್ಧಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಸಿನಿಮಾ ನೋಡಿ ಸಾಹಸಕ್ಕಿಳಿದರು!

ಇವರೆಲ್ಲಾ ಸಿನಿಮಾ ಅಭಿಮಾನಿಗಳೇ. ಜಾಕಿ ಚಾನ್‌ನಿಂದ ಆರಂಭಿಸಿ ತೆಲುಗು, ಕನ್ನಡ, ಹಿಂದಿ ತಮಿಳು ಚಿತ್ರಗಳ ಅಭಿಮಾನಿಗಳು. ಆದರೆ ಇವರ ಅಭಿಮಾನ ಕೇವಲ ಸಿನಿಮಾ ನೋಡುವ ಮಟ್ಟಕ್ಕೆ ಸೀಮಿತವಾಗಿಲ್ಲ. ತಮ್ಮ ಅಭಿಮಾನದ ಹೀರೊ ಡ್ಯೂಪ್ ಬಳಸಿ ಮಾಡುವ ಕೆಲಸವನ್ನೆಲ್ಲಾ ಈ ಬಳ್ಳಾರಿಯ ಹುಡುಗರು ಯಾವ ಡ್ಯೂಪ್ ಇಲ್ಲದೆ ಮಾಡಿ ತೋರಿಸುತ್ತಾರೆ.ಇವರಿಗೆ ಸಿನಿಮಾ ನಾಯಕನೇ ಮಾದರಿ. ನೆಚ್ಚಿನ ನಾಯಕನಂತೆ ಇವರೂ ಆಗಸದಲ್ಲಿ ತೇಲುವುದನ್ನು ರೂಢಿಸಿಕೊಂಡಿದ್ದಾರೆ. ಅದಕ್ಕಂದೇ ತಿಂಗಳುಗಳ ಕಾಲ ಕಠಿಣ ಅಭ್ಯಾಸ ನಡೆಸಿ, ದೇಹದಲ್ಲಿರುವ ಮೂಳೆಗಳು ಹೇಳಿದಂತೆ ಕೇಳುವಂತೆ ಮಾಡಿದ್ದಾರೆ. ಕುಂತಲ್ಲಿ, ನಿಂತಲ್ಲಿ ಪಲ್ಟಿ ಹೊಡೆಯುತ್ತಾರೆ.

ನಿತ್ಯ ಅಭ್ಯಾಸ

ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಿತ್ಯ ವ್ಯಾಯಾಮ ಮಾಡಲು ಬರುವವರ ದಂಡು ಕಾಲಿಗೆ ಶೂ ಹಾಕಿಕೊಂಡು ಸಿಂಡರ್‌ ಟ್ರ್ಯಾಕ್‌ಗುಂಟ ಓಡುತ್ತ ಬೆವರಿಳಿಸುತ್ತಿದ್ದರೆ, ಕೆಲವರು ವಾಲಿಬಾಲ್‌, ಫುಟ್‌ಬಾಲ್‌, ಕ್ರಿಕೆಟ್‌ ಆಡುವುದರಲ್ಲಿ ತಲ್ಲೀನರಾಗಿರುತ್ತಾರೆ. ಇನ್ನು ಕೆಲವರು ಕರಾಟೆ ಮತ್ತು ಹಗ್ಗದಾಟದೊಂದಿಗೆ ಕಸರತ್ತು ನಡೆಸುತ್ತಿರುತ್ತಾರೆ.ಇದ್ಯಾವುದರ ಗೊಡವೆಯೇ ಇಲ್ಲದೆ, ಮೂಲೆಯಲ್ಲಿರುವ ಲಾಂಗ್‌ಜಂಪ್‌ ಅಂಕಣದಲ್ಲಿನ ಮರಳಿನ ಮೇಲೆ ನಾಲ್ಕಾರು ಯುವಕರ ಪ್ರತ್ಯೇಕ ಪಡೆಯೊಂದು ಪಲ್ಟಿ ಹೊಡೆಯುವುದನ್ನೇ ಅಭ್ಯಾಸ ಮಾಡುತ್ತಿರುತ್ತದೆ.ಅವರಿಗೆ ಕರಾಟೆಯೂ ಗೊತ್ತು, ಡಬಲ್ ಲಾಂಗ್ ಚೈನ್ ವರಸೆಯೂ ಗೊತ್ತು, ಉದ್ದನೆಯ ಎರಡೆರಡು ಕೋಲುಗಳನ್ನು ಕೈಗಳಲ್ಲಿ ಹಿಡಿದು ಅತ್ತಿಂದಿತ್ತ ಸುತ್ತಾಡಿಸುವುದೂ ಗೊತ್ತು. ಹಾಗೆ ಸುತ್ತುವ ಕೋಲು ಸ್ವಲ್ಪ ಆಚೀಚೆಯಾದರೂ ಇವರ ಮುಖಕ್ಕೆ ರಪ್ಪನೆ ಬಡಿಯುವ ಅಪಾಯ ಇದೆಯಾದರೂ ಇವರ ಚಾಕಚಕ್ಯತೆ ಮಾತ್ರ ಅಚ್ಚರಿ ಮೂಡಿಸುತ್ತದೆ. ಅದೇ ರೀತಿ, ಹತ್ತು ಹೆಜ್ಜೆ ಓಡಿಬಂದು ಪಲ್ಟಿ ಹೊಡೆಯುವವರ ವರಸೆ ವಾಕಿಂಗ್‌ ಮಾಡುವವರು ಕಣ್ಣರಳಿಸಿ ನೋಡುವಂತೆ ಮಾಡುತ್ತದೆ. ಅನೇಕರ ಗಮನವನ್ನು ಸೆಳೆಯುತ್ತದೆ.

ನಿರಂತರ ಪರಿಶ್ರಮ

ನೋಡನೋಡುತ್ತಿದ್ದಂತೆಯೇ ಪಲ್ಟಿ ಹೊಡೆಯುವುದು ಸುಲಭದ ಮಾತಲ್ಲ. ಅದಕ್ಕೆ ಕಠಿಣ ಪರಿಶ್ರಮ ಬೇಕು. ಮೊದಲು ಆರು ತಿಂಗಳ ಕಾಲ ಸತತವಾಗಿ 400 ಮೀಟರ್‌ ಟ್ರ್ಯಾಕ್‌ನಲ್ಲಿ ಹತ್ತಾರು ಸುತ್ತು ಓಡಬೇಕು. ನಂತರ ಬಸ್ಕಿ ಹೊಡೆದು, ಕೈ, ಕಾಲುಗಳ ಮೂಳೆಗಳನ್ನು ಗಟ್ಟಿಯಾಗಿಸಿಕೊಳ್ಳಬೇಕು. ತದನಂತರ ತಲೆಯನ್ನು ನೆಲಕ್ಕಿಟ್ಟು ಲಗಾಟಿ ಹೊಡೆಯಬೇಕು. ಒಂದು.. ಎರಡು... ಮೂರು.... ಹೀಗೆ ಐದಾರು ಸುತ್ತು ಲಗಾಟಿ ಹೊಡೆಯುತ್ತಲೇ ಆಕಾಶದಲ್ಲಿ ತೇಲಲು ಅಣಿಯಾಗಬೇಕು. ಆರಂಭದಲ್ಲಿ, ರೂಢಿ ಆಗುವವರೆಗೂ ಸ್ವಲ್ಪ ಆಚೀಚೆ ಆದರೂ ಮುಗಿಯಿತು, ಮೂಳೆಗಳು ಮುರಿಯುವುದು ಗ್ಯಾರಂಟಿ. ‘ಹೀಗೆ ಕಠಿಣ ಅಭ್ಯಾಸ ಮಾಡಿ ಪಲ್ಟಿ ಹೊಡೆಯುವುದನ್ನು ಕರಗತ ಮಾಡಿಕೊಂಡಿದ್ದೇವೆ. ಅನೇಕರು ನಮ್ಮತ್ತ ಆಕರ್ಷಿತರಾಗುತ್ತಾರಾದರೂ, ಅಭ್ಯಾಸದ ಕೊರತೆಯಿಂದಾಗಿ ಗುರಿ ತಲುಪದೆ ಹಿಂದೇಟು ಹಾಕುತ್ತಾರೆ’ ಎಂದು ತಿಳಿಸುತ್ತಾರೆ ನಗರದ ಮುನಿಸಿಪಲ್‌ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಅನಿಲ್‌ಕುಮಾರ್‌.‘ಜಿಮ್ನಾಸ್ಟಿಕ್‌, ಸ್ಟಂಟ್‌ ಮಾದರಿಯ ಈ ಕಲೆಯನ್ನು ತರಬೇತುದಾರರ ಸಹಾಯವಿಲ್ಲದೆ ಕಲಿತಿದ್ದೇವೆ. ಸಿನಿಮಾ ನೋಡಿ ನೋಡಿಯೇ ಅಭ್ಯಾಸ ಮಾಡುತ್ತಿದ್ದೇವೆ’ ಎಂದು ಹೇಳುತ್ತಾರೆ ನಗರದ ಬಂಡಿಮೋಟ್‌ ಪ್ರದೇಶದಲ್ಲಿ ಚಹಾದಂಗಡಿಯಲ್ಲಿ ಕೆಲಸ ಮಾಡುವ ಯುವಕ ರಾಜು.‘ಸಿನಿಮಾ ನಾಯಕರು, ಸ್ನೇಹಿತರಿಂದ ಪ್ರಭಾವಿತನಾಗಿ ನಾನು ನಿತ್ಯ ಅಭ್ಯಾಸಕ್ಕೆ ಬರುತ್ತಿದ್ದೇನೆ. ದೇಹವನ್ನು ಮಣಿಸುವುದು ಸುಲಭವಾಗಿದೆ. ಇದರಿಂದ ಕೆಲಸ ಮಾಡುವುದಕ್ಕೂ ಸಹಕಾರಿಯಾಗಿದೆ’ ಎನ್ನುತ್ತಾರೆ ಕೌಲ್‌ಬಜಾರ್‌ನಲ್ಲಿರುವ ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ಸಮೀರ್‌.‘ವಿವಿಧ ಕಾರ್ಯಕ್ರಮಗಳಲ್ಲಿ ಡಾನ್ಸ್‌ ಮಾಡುವ ಯುವಕರು ಜಂಪ್‌ ಮಾಡುವುದನ್ನು ನೋಡಿ ನಾನೂ ಅವರಂತೆಯೇ ಜಂಪ್‌ ಮಾಡಬೇಕೆಂಬ ಆಸೆಯಿಂದ ಅಭ್ಯಾಸ ಮಾಡಿ ಕಲಿತಿದ್ದೇನೆ. ಅಲ್ಲಲ್ಲಿ ಕಾರ್ಯಕ್ರಮಗಳಿದ್ದರೆ ಭಾಗವಹಿಸಿ ಪ್ರದರ್ಶನ ನೀಡುತ್ತೇನೆ’ ಎಂದು ಬಂಡಿಮೋಟ್‌ ಭಾಗದ ಯುವಕ ಗೋಪಿ ಹೇಳುತ್ತಾರೆ.‘ನೋಡುಗರಿಗೆ ತಕ್ಷಣಕ್ಕೆ ಮನರಂಜನೆ ನೀಡುವುದೇ ನಮ್ಮ ಆಶಯ’ ಎಂದು ತಿಳಿಸುತ್ತ ಮುನ್ನುಗ್ಗುತ್ತಿರುವ ಈ ಯುವಕರಿಗೆ ಯಾವುದೇ ಫಲಾಪೇಕ್ಷೆಯಿಲ್ಲ. ನಿತ್ಯವೂ ಸಾಕಷ್ಟು ಅಭ್ಯಾಸದಲ್ಲಿ ತೊಡಗಿದರೂ ಈ ಕಲೆಯನ್ನೇ ಬಳಸಿಕೊಂಡು ನಿರ್ದಿಷ್ಟ ಗುರಿ ಸಾಧಿಸುವ ಇರಾದೆಯೂ ಇವರಿಗಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.