ಸಿನಿಮಾ ಪಾತ್ರಗಳಲ್ಲಿ ನಾನು ನಾನಲ್ಲ

7
ರಿಯಾಲಿಟಿ ಷೋಗಳಲ್ಲಿ ನಕಲಿಯಲ್ಲ

ಸಿನಿಮಾ ಪಾತ್ರಗಳಲ್ಲಿ ನಾನು ನಾನಲ್ಲ

Published:
Updated:

‘ಡ್ಯಾನ್ಸಿಂಗ್ ಸ್ಟಾರ್‌ 2’ ಜರ್ನಿ ಹೇಗಿತ್ತು?

ಇದು ಕೇವಲ ಒಬ್ಬರ ವರ್ಕ್ ಅಲ್ಲ. ಒಂದು ಟೀಂ ವರ್ಕ್‌. ‘ಡ್ಯಾನ್ಸಿಂಗ್ ಸ್ಟಾರ್‌ 2’ ಭಿನ್ನ ಮತ್ತು ಮಧುರ ಅನುಭವವನ್ನು ನೀಡಿದೆ. ನನ್ನ ಮಟ್ಟಿಗೆ ಅದು ನನಗೇ ಸವಾಲಾಗಿತ್ತು. ನನ್ನ ಭಾಗದ ಕೆಲಸವನ್ನು ನಾನು ಮಾಡಬೇಕು ಅಷ್ಟೇ. ಈ ಜರ್ನಿ ತುಂಬಾ ಖುಷಿ ನೀಡಿತು. ಈ ಹಿಂದೆ ಸುವರ್ಣ ವಾಹಿನಿಯ ‘ಸೈ’ ಡ್ಯಾನ್ಸಿಂಗ್ ಷೋನಲ್ಲಿ ತೀರ್ಪುಗಾರಳಾಗಿ ಪಾಲ್ಗೊಂಡಿದ್ದೆ.ಆದರೆ ಇಲ್ಲಿ ನಾನೇ ಸ್ಪರ್ಧಿಯಾಗಿ ಪಾಲ್ಗೊಂಡೆ. ತೀರ್ಪುಗಾರಳಾಗಿ ನೃತ್ಯವನ್ನು ನೋಡಿ ತೀರ್ಪು ಕೊಡುವುದೂ ಒಂದು ಅನುಭವ. ಆದರೆ ಸ್ಪರ್ಧಿಯಾಗಿ ನಾನೇ ಪಾಲ್ಗೊಳ್ಳುವುದರಿಂದ ಆ ಸ್ಪರ್ಧೆಯ ಹಿಂದಿನ ಕಷ್ಟಗಳು, ಕೆಲಸಗಳು ಯಾವ ರೀತಿ ಇರುತ್ತವೆ ಎನ್ನುವುದು ಅರ್ಥವಾಗುತ್ತದೆ. ಫೈನಲ್‌ ತಲುಪುವೆ ಎನ್ನುವ ನಿರೀಕ್ಷೆ ಇತ್ತು.

‘ಬಿಗ್‌ಬಾಸ್‌’ ಮೊದಲ ಆವೃತ್ತಿಯಲ್ಲಿ ಹೆಚ್ಚು ಜನರನ್ನು ತಲುಪಿದಿರಿ. ಎರಡನೇ ಆವೃತ್ತಿಯಲ್ಲೂ ಕಾಣಿಸಿಕೊಳ್ಳಬೇಕು ಎನ್ನುವ ಅಭಿಲಾಷೆ ಇತ್ತೇ?

‘ಬಿಗ್‌ಬಾಸ್‌’ ಮೊದಲ ಆವೃತ್ತಿಯಲ್ಲಿ ನಟಿ ಚಂದ್ರಿಕಾ ನೈಜ ಬದುಕಿನಲ್ಲಿ ಯಾವ ರೀತಿ ಇರುತ್ತಾಳೆ, ಇವಳ ವರ್ತನೆ ಇದು ಎಂದು ಜನರು ನೋಡಿದರು. ನನ್ನನ್ನು ಇಷ್ಟಪಟ್ಟರು. ನಾನು ಗೆಲ್ಲುವ ವಿಶ್ವಾಸ ಜನರಲ್ಲಿತ್ತು. ಅದು ಸಾಧ್ಯವಾಗದಿದ್ದಾಗ ‘ಚಂದ್ರಿಕಾ ಎರಡನೇ ಆವೃತ್ತಿಯ ಬಿಗ್‌ಬಾಸ್‌ನಲ್ಲಿ ಪಾಲ್ಗೊಳ್ಳಲಿ, ಅನ್ಯಾಯ ಸರಿ ಹೋಗಲಿ’ ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದರು.ನಾನು ‘ಬಿಗ್‌ಬಾಸ್‌’ ಬಗ್ಗೆ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಂಡು ಹೋಗಿರಲಿಲ್ಲ. ನನ್ನ ಮಗನ ಸಲುವಾಗಿ ಪಾಲ್ಗೊಂಡಿದ್ದು. ಆನಂತರ ಅಲ್ಲಿ ತೊಡಗಿದಾಗ ಚಾಲೆಂಜ್ ಎನಿಸಿತು. ಈ ಚಾಲೆಂಜ್‌ ಅನ್ನು ಸಮರ್ಥವಾಗಿ ಎದುರಿಸುವ ಮನಸ್ಸು ಬಂದಿತು. ಪ್ರೇಕ್ಷಕರು ನನ್ನ ಡ್ರೆಸ್‌ ಮತ್ತು ಕನ್ನಡ ಸಂಸ್ಕೃತಿಯ ಹುಡುಗಿ ಎಂದು ಇಷ್ಟಪಟ್ಟರು, ಮನ್ನಣೆ ಕೊಟ್ಟರು.‘ಬಿಗ್‌ಬಾಸ್‌’ನಿಂದ ಹೊರಬಂದಾಗ ಸಾಕಷ್ಟು ಸಿನಿಮಾ ಅವಕಾಶಗಳು ಬಂದಿರಬೇಕು?

ಹೌದು. 15 ಚಿತ್ರಗಳಲ್ಲಿ ಅವಕಾಶ ಬಂದಿತ್ತು. ಕೆಲವು ಚಿತ್ರಗಳಲ್ಲಿ ಮಾತ್ರ ತೊಡಗಿಸಿಕೊಂಡೆ. ಕಥೆ ಇಷ್ಟವಾಗಲಿಲ್ಲ ಎಂದಲ್ಲ. ಕಥೆ, ಚಿತ್ರಕಥೆ ನಿರ್ದೇಶಕರಿಗೆ ಮತ್ತು ನಾಯಕ–ನಾಯಕಿಗೆ ಸಂಬಂಧಿಸಿದ್ದು. ನನ್ನ ಪಾತ್ರದ ಪ್ರಾಮುಖ್ಯವೇನು? ನನ್ನ ಪಾತ್ರಕ್ಕೆ ಎಷ್ಟು ತೂಕವಿದೆ ಎನ್ನುವುದರ ಮೇಲೆ ನಾನು ಪಾತ್ರಗಳನ್ನು ಒಪ್ಪಿಕೊಳ್ಳುವೆ. ಅಂಥವುಗಳು ಹೆಚ್ಚಿನದಾಗಿ ಕಾಣಲಿಲ್ಲ. ಸಿಕ್ಕಿದ್ದು ಬೆರಳಣಿಕೆಯಷ್ಟು. ಆದರೆ ‘ಬಿಗ್‌ಬಾಸ್‌’ ಮೂಲಕ ನನ್ನ ರಿಯಲ್ ಲೈಫ್ ಪಾತ್ರವನ್ನು ಪ್ರೇಕ್ಷಕ ನೋಡುವಂತಾಯಿತು. ಚಂದ್ರಿಕಾ ನಿಜ ಜೀವನದಲ್ಲಿ ಈ ರೀತಿ ಗುಣವುಳ್ಳವಳು ಎನ್ನುವುದು ಅವರಿಗೆ ಅರ್ಥವಾಯಿತು.ಈಗ ನಿಮ್ಮ ಸಿನಿಮಾ ಬದುಕು ಹೇಗಿದೆ?

ಇಲ್ಲಿವರೆಗೂ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ, 100ಕ್ಕೂ ಹೆಚ್ಚು ಹಾಡುಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಪೂರ್ಣವಾಗಿ ಸಿನಿಮಾ ಬದುಕನ್ನು ನಂಬಿಕೊಂಡವಳಲ್ಲ. ಒಳಾಂಗಣ ವಿನ್ಯಾಸ, ನಿರ್ಮಾಣ ಇತ್ಯಾದಿ ವ್ಯಾಪಾರ–ವ್ಯವಹಾರಗಳಿವೆ, ಅಲ್ಲೂ ಸಕ್ರಿಯವಾಗಿದ್ದೇನೆ. ನನಗೆ ಹೊಂದುವ, ಕಿಮ್ಮತ್ತಿರುವ ಪಾತ್ರಗಳು ಸಿಕ್ಕರೆ ಮಾತ್ರ ಅಭಿನಯಿಬೇಕು ಎನ್ನುವುದು ನನ್ನ ನಿಲುವು. ಎಲ್ಲ ಚಿತ್ರವನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ನನಗಿಲ್ಲ.‘ಕೆಂಡಸಂಪಿಗೆ’ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದೇನೆ. ‘ನೀವು ಈ ಪಾತ್ರ ಮಾಡಿದರೆ ಚೆಂದ’ ಎಂದು ಸೂರಿ ಹೇಳಿದರು. ಆ ತಕ್ಷಣವೇ ಏನನ್ನೂ ಕೇಳದೆ ‘ಆಯಿತು’ ಎಂದೆ. ಅದಕ್ಕೆ ಕಾರಣ ನಾನು ಆ ಪಾತ್ರಕ್ಕೆ ಹೊಂದಿಕೊಳ್ಳುವೆ ಎನ್ನುವ ನಿರ್ದೇಶಕರ ಅಭಿಪ್ರಾಯ. ನಿರ್ದೇಶಕರಿಗೆ ಚಂದ್ರಿಕಾ ಕೈಯಲ್ಲಿ ಈ ಪಾತ್ರ ಮಾಡಿಸಬಹುದು, ಸೂಕ್ತ ಎನ್ನುವ ಮನಸ್ಸು ಬಂದರೆ ಆ ಪಾತ್ರದಲ್ಲಿ ತೊಡಗಿಕೊಳ್ಳುವೆ. ‘ದೊಡ್ಮನೆ ಹುಡುಗ’ ಚಿತ್ರದಲ್ಲೂ ಒಳ್ಳೆಯ ಪಾತ್ರವಿದೆ, ನಟಿಸಿ ಎಂದಿದ್ದಾರೆ. ಉಳಿದಂತೆ ಯಾವುದೇ ಚಿತ್ರಗಳಲ್ಲೂ ನಟಿಸುತ್ತಿಲ್ಲ.‘ಚತುರ್ಭಜ’ ಚಿತ್ರದಲ್ಲಿ ಐಟಂ ಹಾಡಿಗೂ ಹೆಜ್ಜೆ ಹಾಕಿದ್ದೀರಿ. ಆ ಅನುಭವ ಹೇಗಿತ್ತು?

ಅದು ಐಟಂ ಡ್ಯಾನ್ಸ್ ಅಲ್ಲ– ಸ್ಪೆಷಲ್ ಡ್ಯಾನ್ಸ್‌. ಆ ಚಿತ್ರ ಯಶಸ್ಸು ಗಳಿಸಲಿಲ್ಲ. ಆದರೆ ನನ್ನ ಡ್ಯಾನ್ಸ್‌ಗೆ ಒಳ್ಳೆಯ ಪ್ರಶಂಸೆ ಸಿಕ್ಕಿತು. ಮುಂದೆ ಆ ರೀತಿಯ ಅವಕಾಶಗಳು ಸಿಕ್ಕರೆ ಖಂಡಿತಾ ಕಾಣಿಸಿಕೊಳ್ಳುವೆ. ಆದರೆ ಎಲ್ಲವೂ ಒಳ್ಳೆಯ ರೀತಿಯಲ್ಲಿರಬೇಕು ಅಷ್ಟೇ.ಎರಡು ರಿಯಾಲಿಟಿ ಷೋಗಳಲ್ಲಿ ಪಾಲ್ಗೊಂಡಿದ್ದೀರಿ. ಆ ಅನುಭವದಲ್ಲಿ ನಿಮಗೆ ಕಾಣಿಸಿದ್ದೇನು?

ಸಿನಿಮಾ ಪಾತ್ರದಲ್ಲಿ ನಾನು ನಾನಲ್ಲ. ಆ ಪಾತ್ರಕ್ಕೆ ತಕ್ಕಂತೆ ನಟಿಸಬೇಕಿರುತ್ತದೆ. ಆದರೆ ರಿಯಾಲಿಟಿ ಷೋಗಳಲ್ಲಿ ಡ್ರಾಮಾ, ನಕಲಿ ಇರುವುದಿಲ್ಲ. ಅಲ್ಲಿ ಚಂದ್ರಿಕಾ, ಚಂದ್ರಿಕಾ ಆಗಿಯೇ ಇರುತ್ತಾಳೆ; ಜನರು ಇಷ್ಟಪಡುತ್ತಾರೆ. ಒಂದು ರಸ್ತೆಯಲ್ಲಿ ಅಪಘಾತ ನಡೆದಾಗ ಕೆಲವು ಜನರು ಸಹಾಯಕ್ಕೆ ಬಂದರೆ, ಮತ್ತೆ ಕೆಲವರುಕುತೂಹಲಕ್ಕಾಗಿ ಬರುತ್ತಾರೆ. ಅದೇ ರೀತಿ ಸ್ಟಾರ್ ಕಲಾವಿದರು ಹೇಗಿರುತ್ತಾರೆ ಎನ್ನುವ ಕುತೂಹಲದಲ್ಲೂ ಜನರು ಬರುತ್ತಾರೆ. ಇತ್ತೀಚೆಗೆ ಸಿನಿಮಾಕ್ಕಿಂತ ಹೆಚ್ಚಿನ ಮನ್ನಣೆ ಯನ್ನು ರಿಯಾಲಿಟಿ ಷೋಗಳು ದೊರಕಿಸಿಕೊಡುತ್ತಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry