ಶುಕ್ರವಾರ, ಮೇ 14, 2021
29 °C

ಸಿನಿಮಾ ಮತ್ತು ರಾಮು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಚಟಕ್ಕೆ ಬಿದ್ದೋನು...'

ನಿರ್ಮಾಪಕ ರಾಮು ಸಣ್ಣಗೆ ಗೊಣಗಿಕೊಂಡರು. ಅದು `ಶಿವಾಜಿನಗರ' ಚಿತ್ರದ ಶೂಟಿಂಗ್‌ಗೆ ಚಾಲನೆ ದೊರೆತ ಸಂದರ್ಭ. ತಮ್ಮ ಸಿನಿಮಾ ಪ್ರೀತಿ ಹಾಗೂ ಸಿನಿಮಾ ಮಾಡಲು ಇರಲಾಗದೆ ಇರುವ ತಮ್ಮ ತುಡಿತವನ್ನು ರಾಮು ಮೇಲಿನ ಎರಡೇ ಪದಗಳಲ್ಲಿ ಹಿಡಿದಿಟ್ಟರು.`ಕೋಟಿ ನಿರ್ಮಾಪಕ' ಎನ್ನುವ ವಿಶೇಷಣ ಕ್ಲೀಷೆ ಆಗಿರುವ ಸಂದರ್ಭದಲ್ಲಿ `ಚಟಕ್ಕೆ ಬಿದ್ದೋನು' ಎನ್ನುವುದು ರಾಮು ಪಾಲಿಗೆ ಅರ್ಥಪೂರ್ಣ. ಇದು ಋಣಾತ್ಮಕ ವಿಶೇಷಣವೇನೂ ಅಲ್ಲ.

ಬಹು ನಿರೀಕ್ಷೆಯಿಂದ ನಿರ್ಮಿಸಿದ ಚಿತ್ರಗಳು ಒಂದರ ಹಿಂದೊಂದು ಸೋತರೂ ನಿರ್ಮಾಪಕ ಆತ್ಮವಿಶ್ವಾಸ ಕಳೆದುಕೊಳ್ಳದೆ ಹೊಸ ಚಿತ್ರಗಳನ್ನು ನಿರ್ಮಿಸುವುದು ತಮಾಷೆಯ ಮಾತಲ್ಲ. ಈ ನಿರ್ಮಾಣದ ಶಕ್ತಿಗೆ ವ್ಯಸನದಂಥ ಒಂದು ಗುಂಗು ಬೇಕು. ಆ ಮಟ್ಟಿಗೆ ರಾಮು ಅವರ ಆತ್ಮವಿಶ್ವಾಸವನ್ನು ಮೆಚ್ಚಿಕೊಳ್ಳಲೇಬೇಕು.ರಾಮು ನಿರ್ಮಾಣದ ಈಚಿನ ಚಿತ್ರಗಳನ್ನು ನೆನಪಿಸಿಕೊಳ್ಳಿ. `ಶಕ್ತಿ', `ವೀರ', `ಎಲೆಕ್ಷನ್'- ಮೂರರಲ್ಲೂ ಅವರ ಪತ್ನಿ ಮಾಲಾಶ್ರೀ ಅವರೇ ವ್ಯಾಪಿಸಿಕೊಂಡಿದ್ದರು. ಗಾಂಧಿನಗರದ ಲೆಕ್ಕದಲ್ಲಿ ಈ ಚಿತ್ರಗಳ ಗಳಿಕೆ ಆಶಾದಾಯಕವೇನಲ್ಲ.

ಬೇರೆ ನಿರ್ಮಾಪಕರಾಗಿದ್ದರೆ ಸಿನಿಮಾದ ಸಹವಾಸವೇ ಸಾಕು ಎಂದು ಗಾಂಧಿನಗರದ ದಿಕ್ಕಿಗೆ ತಲೆಯನ್ನೇ ಹಾಕುತ್ತಿರಲಿಲ್ಲ. ಆದರೆ, ರಾಮು ಮರಳಿ ಯತ್ನವ ಮಾಡು ಗುಂಪಿಗೆ ಸೇರಿದವರು. ಅವರೀಗ `ಶಿವಾಜಿನಗರ'ದಲ್ಲಿ ಮಗ್ನರು.`ಶಿವಾಜಿನಗರ' ಪಿ.ಎನ್. ಸತ್ಯ ನಿರ್ದೇಶಿಸುತ್ತಿರುವ ಸಿನಿಮಾ. ವಿಜಯ್ ಚಿತ್ರದ ನಾಯಕ. ತಂದೆ ಪಾತ್ರದಲ್ಲಿ ಅವಿನಾಶ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಆರು ಸಾಹಸ ಸನ್ನಿವೇಶಗಳಿದ್ದು ಅವುಗಳು ಸಿನಿಮಾದ ಹೈಲೈಟ್ ಅಂತೆ.

ಸಾಹಸ ದೃಶ್ಯಗಳಿಗೆಂದೇ ಸಿನಿಮಾದ ಒಟ್ಟು ಬಜೆಟ್‌ನಲ್ಲಿ ಶೇ.40ರಷ್ಟು ಖರ್ಚು ಮಾಡುವ ಇರಾದೆ ರಾಮು ಅವರದು. ಸೆಲ್ವಂ ಛಾಯಾಗ್ರಹಣ ಮತ್ತು ಜೆಸ್ಸಿ ಗಿಫ್ಟ್ ಸಂಗೀತ ಈ ಚಿತ್ರಕ್ಕಿದೆ.ಸಾಹಸ ಪ್ರಧಾನ ಚಿತ್ರಗಳು ವಿಜಯ್‌ಗೆ ಹೊಸತೇನಲ್ಲ. ಆದರೆ, `ಶಿವಾಜಿನಗರ' ಚಿತ್ರದಲ್ಲಿನ ಅವರ ಪಾತ್ರಕ್ಕೆ ಸಾಹಸ ಪ್ರದರ್ಶನದೊಂದಿಗೆ ಅಭಿನಯದ ಅನಾವರಣಕ್ಕೂ ಅವಕಾಶ ಇದೆಯಂತೆ.`ಬದುಕಾಕ್ ಧಂ ಬೇಕು' ಎನ್ನುವುದು `ಶಿವಾಜಿನಗರ' ಸಿನಿಮಾದ ಆಶಯನುಡಿ. ಈ ಮಾತು ರಾಮು ಅವರ ವಿಷಯದಲ್ಲಿ `ಸಿನಿಮಾ ಮಾಡುವುದಕ್ಕೂ ಧಂ ಬೇಕು' ಎಂದು ಅನ್ವಯಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.