ಸಿನಿಮಾ ರಂಗ ನೂರರ ಶೃಂಗ

7

ಸಿನಿಮಾ ರಂಗ ನೂರರ ಶೃಂಗ

Published:
Updated:
ಸಿನಿಮಾ ರಂಗ ನೂರರ ಶೃಂಗ

ಹಲವು ಮೈಲಿಗಲ್ಲುಗಳನ್ನು ಕಂಡಿರುವ ಭಾರತೀಯ ಸಿನಿಮಾರಂಗ ಇದೀಗ ನೂರರ ಹೊಸ್ತಿಲಲ್ಲಿ ಬಂದು ನಿಂತಿದೆ.

ನೂರು ವಸಂತಗಳನ್ನು, ಏಳುಬೀಳುಗಳನ್ನು, ಹಲವು ಅನುಭವ, ಸವಾಲುಗಳನ್ನು ಕಂಡುಂಡಿರುವ ಚಿತ್ರರಂಗದ ಹಲವು ನೆನಪುಗಳಿಗೂ ಇದೇ ಶುಕ್ರವಾರ, ಡಿ.21ರಂದು ಶತಮಾನ ತುಂಬಿದೆ. ಕಪ್ಪು ಬಿಳುಪಿನ ಕಾಲದಿಂದ ಹಿಡಿದು ಬಣ್ಣಗಳು ಪರದೆ ಮೇಲೆ ಮೂಡಲು ಆರಂಭಿಸಿದ ಕಾಲಘಟ್ಟವೂ ಸೇರಿದಂತೆ ಶತಮಾನೋತ್ಸವ ಸಂಭ್ರಮವನ್ನು ಆಚರಿಸಲೆಂದೇ ನಗರದಲ್ಲಿ ವಿಶೇಷವಾದ ಪ್ರದರ್ಶನವೊಂದು ಆರಂಭವಾಗಿದೆ.ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಇಲಾಖೆ ಜತೆಗೂಡಿ ತೀರಾ ಅಪರೂಪವೆನಿಸುವಂತಹ ಹಳೆಯ ಸಿನಿಮಾ ಉಪಕರಣಗಳ ವಸ್ತು ಪ್ರದರ್ಶನವನ್ನು ಹಮ್ಮಿಕೊಂಡಿದೆ. `ಸಿನಿಮಾ ಎಕ್ವಿಪ್‌ಮೆಂಟ್ ಡೌನ್ ಟು ದಿ ಏಜಸ್' ಎಂಬ ಶೀರ್ಷಿಕೆಯೊಂದಿಗೆ ಪ್ರದರ್ಶನ ಆರಂಭಗೊಂಡಿದೆ.ಭಿತ್ತಿಚಿತ್ರ ಹಾಗೂ ಛಾಯಾಚಿತ್ರ ಪ್ರದರ್ಶನವೂ ಇಲ್ಲಿದ್ದು, ನ್ಯಾಷನಲ್ ಫಿಲ್ಮ್ ಆರ್ಕೈವ್ಸ್ ಆಫ್ ಇಂಡಿಯಾ ಈ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಪ್ರಸ್ತುತ ಸಿನಿಮಾ ರಂಗಕ್ಕೂ, ಆಗಿನ ಸಿನಿಮಾ ರಂಗಕ್ಕೂ ಇರುವ ವ್ಯತ್ಯಾಸಕ್ಕೆ ಕೈಗನ್ನಡಿಯಂತಿರುವ ಈ ಪ್ರದರ್ಶನವು ವಿರಳಾತಿವಿರಳವಾದ ತಾರೆಯರ ಛಾಯಾಚಿತ್ರಗಳನ್ನೂ ಒಳಗೊಂಡಿದೆ. ಕನ್ನಡ ಸಿನಿ ತಾರೆಗಳಾದ ರಾಜ್ ಕುಮಾರ್, ಭಾರತಿ, ಕಲ್ಪನಾ ಇವರ ಅಪರೂಪದ ಛಾಯಾಚಿತ್ರಗಳನ್ನು ಸಿನಿಪ್ರಿಯರು ನೋಡಿ ಇಲ್ಲಿ ಆನಂದಿಸಬಹುದು. ದೇವದಾಸ್, ಪುಕಾರ್, ರತ್ತನ್, ಜೋಗನ್, ಆವಾರಾ, ಗೆಜ್ಜೆಪೂಜೆ, ಶೋಲೆ, ಗಾಂಧಿ,  ಫಣಿಯಮ್ಮ , ಮೊದಲ ಬಣ್ಣದ ಚಿತ್ರ ಎಂಬ ಹೆಮ್ಮೆಗೆ ಪಾತ್ರವಾದ ಕುಂಕುಂ ಹೀಗೆ ಒಂದೇ ಎರಡೇ! ಹಾಗಿದ್ದರೆ ಆಗಿನ ಕಾಲದ ಪ್ರಚಾರ ವ್ಯವಸ್ಥೆ ಹೇಗಿತ್ತು ಎಂಬ ಕಾತರ ಸಹಜ. ಈ ಕುತೂಹಲಕ್ಕೂ ಉತ್ತರ ಇಲ್ಲಿದೆ.ಭಾರತದಲ್ಲಿ ಸಿನಿಮಾ ಪ್ರಾರಂಭವಾದ ಕಾಲದಲ್ಲಿ ತಾಂತ್ರಿಕತೆ ಹೇಗಿತ್ತು ಎಂಬುದರ ಸೂಕ್ಷ್ಮ ಪರಿಚಯ ಮಾಡಿಕೊಡುವ ಪ್ರಯತ್ನವನ್ನೂ ಮಾಡಿರುವುದು ಸ್ತುತ್ಯರ್ಹ. 40ರ ದಶಕ ಸಿನಿಮಾ ಉಪಕರಣಗಳ ತಾಂತ್ರಿಕತೆಯನ್ನು ನೋಡುವುದೇ ವಿಶೇಷ ಅನುಭವ. ಹಳೆಯ ಕ್ಯಾಮೆರಾ, ಪ್ರೊಜೆಕ್ಟರ್‌ಗಳು, ಸಿನಿಮಾ ರೆಕಾರ್ಡಿಂಗ್ ಮಾಡುತ್ತಿದ್ದ ವ್ಯವಸ್ಥೆ, ಮೈಕ್ರೋಫೋನ್, ಕ್ಯಾಮೆರಾ, ಸಿನಿಮಾ ರೀಲ್‌ಗಳು ಹೀಗೆ ಒಂದೊಂದು ಆಯಾಮದಲ್ಲೂ ಅಂದಿನ ಚಿತ್ರರಂಗವನ್ನು ಅರ್ಥೈಸಿಕೊಳ್ಳುವ ಅವಕಾಶವನ್ನು ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಕೇಂದ್ರ  ಒದಗಿಸಿದೆ.ವೆಬ್ಸ್‌ಟರ್ ರೆಕಾರ್ಡರ್, 1955ರ ಫೆರೋಗ್ರಾಫ್ ಮಾಟ್ರಾಕ್ ರೆಕಾರ್ಡರ್, 1965ರ ನಿಪ್ಪಾನ್ ಪೋರ್ಟೆಬಲ್ ರೆಕಾರ್ಡರ್, ಮೌರರ್ ಆಪ್ಟಿಕಲ್ ರೆಕಾರ್ಡರ್, ಪ್ಲೇಬ್ಯಾಕ್ ಮೆಷಿನ್, 1948ರ ಹೆರಾರ್ಡ್ ಆಟೊಮ್ಯಾಟಿಕ್ ರೆಕಾರ್ಡರ್, 1953ರಲ್ಲಿದ್ದ ಹಾಲೆನ್ ರೆಕಾರ್ಡರ್‌ಗಳನ್ನು ನೋಡುತ್ತಿದ್ದರೆ, ಹಿಂದಿನ ಕಾಲದಲ್ಲಿ ಒಂದು ಸಿನಿಮಾ ಮೂಡಿಬರಲು ಅವಶ್ಯಕವಾದ ಸಿದ್ಧತೆಯನ್ನು ತಿಳಿಸಿಕೊಡುತ್ತವೆ. ವಿಭಿನ್ನ ರೀತಿಯ ಸಿನಿಮಾ ರೀಲುಗಳೂ ನೋಡುಗರನ್ನು ಆಶ್ಚರ್ಯಗೊಳಿಸುತ್ತವೆ.ಕ್ಯಾಮೆರಾ ಲೋಕ: ಅತ್ಯಾಧುನಿಕ ತಂತ್ರಜ್ಞಾನಗಳುಳ್ಳ ಕ್ಯಾಮೆರಾಗಳ ಸಂಕ್ರಮಣ ಕಾಲವಿದು. ಈಗ ಛಾಯಾಗ್ರಹಣ, ಎಡಿಟಿಂಗ್, ಪ್ರೋಸೆಸಿಂಗ್ ಎಲ್ಲವನ್ನೂ ಡಿಜಿಟಲ್ ತಂತ್ರಜ್ಞಾನ ಸರಳವಾಗಿಸಿದೆ. ಆದರೆ ಆಗಿನ ಕ್ಯಾಮೆರಾಗಳು ಹೇಗಿದ್ದುವು? ಪ್ರದರ್ಶನದಲ್ಲಿರುವ ಕ್ಯಾಮೆರಾಗಳು, ಕಾಲದಿಂದ ಕಾಲಕ್ಕೆ ಬದಲಾದ ಸಿನಿಮಾಗಳಂತೆ ಕ್ಯಾಮೆರಾಗಳೂ ಅಭಿವೃದ್ಧಿಗೊಂಡಿರುವ ಪ್ರಕ್ರಿಯೆಯನ್ನು ತೆರೆದಿಟ್ಟಿವೆ.

  

1920ರ ಫೇರ್ ಚೈಲ್ಡ್ ಏರಿಯಲ್ ಕ್ಯಾಮೆರಾ, ಸ್ಟಿಲ್ ಕ್ಯಾಮೆರಾ, ಸ್ಟಿರಿಯೋ ಕ್ಯಾಮೆರಾ, 1927ರ ಬೋಲೆಕ್ಸ್ ಕ್ಯಾಮೆರಾ, 1919ರ ಮಿಛೆಲ್ ಮಾಡೆಲ್ ಎನ್‌ಸಿ ಕ್ಯಾಮೆರಾ ಹೀಗೆ ಒಂದೊಂದೂ ಅಪರೂಪದ ಕ್ಯಾಮೆರಾಗಳೇ. ಯಾವುದೋ ಹಳೆಯ ಯಂತ್ರ ಎಂಬಂತೆ ಕಾಣುತ್ತಿದ್ದ ಭಾರದ ಮೈಕ್ರೋಫೋನ್‌ಗಳು ಇಂದಿಗೂ ಅಂದಿಗೂ ಇದ್ದ ವ್ಯತ್ಯಾಸವನ್ನು ಒಮ್ಮೆಗೇ ತಿಳಿಸುತ್ತವೆ. ಕಾರ್ಬನ್ ಮೈಕ್ರೋಫೋನ್, ಶೂರ್ ಮೈಕ್ರೋಫೋನ್, ಆರ್‌ಸಿಎ ಮೈಕ್ರೋಫೋನ್‌ಗಳನ್ನು ಇಲ್ಲಿ ಕಾಣಬಹುದು.ವೀಕ್ಷಕರ ಪಾಲಿಗೆ ಹೆಜ್ಜೆ ಹೆಜ್ಜೆಗೂ ಕುತೂಹಲ, ಪುಳಕ. ನೀವೂ ಒಮ್ಮೆ ಭೇಟಿ ನೀಡಿ ಚಿತ್ರರಂಗದ ಇತಿಹಾಸವನ್ನು ಕಣ್ತುಂಬಿಕೊಳ್ಳಬಹುದು. ಇದೇ ಡಿ. 27ರವರೆಗೂ ಪ್ರದರ್ಶನ ನಡೆಯಲಿದೆ. ಸಮಯ: ದಿನಾ ಬೆಳಿಗ್ಗೆ 10ರಿಂದ ಸಂಜೆ 4.30

ಸ್ಥಳ: ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry