ಸಿನಿಮಾ ಸರ್ವಶ್ರೇಷ್ಠ ಭಾಷೆ:ಮಂಡ್ಯ ರಮೇಶ್

7

ಸಿನಿಮಾ ಸರ್ವಶ್ರೇಷ್ಠ ಭಾಷೆ:ಮಂಡ್ಯ ರಮೇಶ್

Published:
Updated:

ಮೈಸೂರು: ಸಿನಿಮಾ ವಿಶ್ವದ ಸರ್ವ ಶ್ರೇಷ್ಠ ಭಾಷೆಯಾಗಿದೆ. ಆದ್ದರಿಂದ ಈ ಮಾಧ್ಯಮದಲ್ಲಿ ಕೆಲಸ ಮಾಡುವವರು ಸದಾ ಕಲಿಕೆ ಮತ್ತು ಅಧ್ಯಯನಶೀಲರಾಗಿರಬೇಕು ಎಂದು ರಂಗ ನಿರ್ದೇಶಕ ಮಂಡ್ಯ ರಮೇಶ್ ಬುಧವಾರ ಸಲಹೆ ನೀಡಿದರು.

ಟೀಮ್ ಡ್ಯುಯಲ್ ಥಾಟ್ಸ್‌ನವರು ಎಸ್‌ಜೆಸಿಇನ ಐಎಸ್‌ಇ ಸೆಮಿನಾರ್ ಹಾಲ್‌ನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿನಿಮಾ ಮತ್ತು ಕಿರುಚಿತ್ರಗಳು ವಿಶ್ವದ ಮೂಲೆ ಮೂಲೆಯಲ್ಲಿರುವ ಕೋಟ್ಯಂತರ ಜನರನ್ನು ಏಕಕಾಲಕ್ಕೆ ತಲುಪುವ ಗುಣವನ್ನು ಹೊಂದಿವೆ. ಸಶಕ್ತವಾದ ಕಿರುಚಿತ್ರಗಳು ರಾಜಕೀಯ ಕ್ರಾಂತಿಗೆ ಕಾರಣವಾಗಿವೆ. ಆದ್ದರಿಂದ ಇಂತಹ ಮಾಧ್ಯಮ ಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ನೆನಪಿನಲ್ಲಿ ಉಳಿಯುವಂತಹ ಚಿತ್ರಗಳು ಮೂಡಿಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಸಮಾಜದಲ್ಲಿರುವ ಸಂಕೀರ್ಣ ವಿಷಯವನ್ನು ಕಿರುಚಿತ್ರಗಳ ಮೂಲಕ ಸರಳವಾಗಿ ಹೇಳಲು ಸಾಧ್ಯವಿದೆ. ಸಿನಿಮಾ, ಕಿರುಚಿತ್ರಗಳನ್ನು ಸೃಷ್ಟಿ ಸುವವರು ಸಂವೇದನಶೀಲರಾ ಗಿರಬೇಕು. ಕವಿಯ ಮನೋಭಾವನ ಹೊಂದಿರಬೇಕು. ಆಗ ಮಾತ್ರ ಸಂಕೀರ್ಣ ವಿಷಯವನ್ನು ಸರಳವಾಗಿ ಜನರ ಮನಸ್ಸಿಗೆ ಮುಟ್ಟುವಂತೆ ಮಾಡಬಹುದು ಎಂದ ಅವರು, ಯುವಜನಾಂಗ ಹೊಸ ಕಲ್ಪನೆ, ಅನುಭವದೊಂದಿಗೆ ಹೊಸತನ ಕೊಡುವತ್ತ ಗಮನ ಹರಿಸಬೇಕು ಎಂದು ಹೇಳಿದರು.ರಂಗ ಕಲಾವಿದ ವಿನಯ್‌ಕುಮಾರ್ ಮಾತನಾಡಿ, ಪ್ರತಿಯೊಂದು ಸಿನಿಮಾ, ಕಿರುಚಿತ್ರ ನಿರ್ಮಾಣವೂ ಪ್ರಯೋಗವೇ ಆಗಿರುತ್ತದೆ. ಆದ್ದರಿಂದ ಯುವಕರು ಯಾವುದೇ ಅಂಜಿಕೆ ಇಲ್ಲದೆ ನಿರ್ಮಾಣಕ್ಕೆ ಮುಂದಾಗಬೇಕು. ತಪ್ಪು ಹೆಜ್ಜೆಯನ್ನು ಇಡುತ್ತಲೇ ಮುಂದೆ ಸಾಗಬೇಕು. ಕಿರುಚಿತ್ರ ಕಾಲವನ್ನು ದಾಟಿ ಹೋದಾಗ ಅಪ್ರಸ್ತುತ ಅನಿಸುತ್ತದೆ. ಸಿನಿಮಾ ಮಾಡುವವರಿಗೆ ನಿರ್ದೇಶಕರದು. ಆನಂತರದ ಅದು ಪ್ರೇಕ್ಷಕರದೇ ಆಗಿರುತ್ತದೆ. ಒಂದೇ ಸಿನಿಮಾ ಎಲ್ಲ ವರ್ಗದವರನ್ನೂ ತಟ್ಟುವಂತೆ ಇರಬೇಕು ಎಂದು ಹೇಳಿದರು.ಚಲನಚಿತ್ರ ನಿರ್ಮಾಪಕ ಯೋಗೇಶ್ ನಾರಾಯಣ್ ಮಾತನಾಡಿ, ನಾನು ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್, ಪ್ರವೃತ್ತಿಯಲ್ಲಿ ಸಿನಿಮಾ ನಿರ್ಮಾಪಕ. ಎಂಜಿನಿಯರ್, ವೈದ್ಯರಾಗಲು ಹೇಗೆ ಶಿಕ್ಷಣದ ಅವಶ್ಯಕತೆ ಇದೆಯೋ ಅದೇ ರೀತಿ ಸಿನಿಮಾ ಮಾಡುವವರಿಗೂ ಶಿಕ್ಷಣ ಬೇಕು. ಆದ್ದರಿಂದ ಯುವಕರು ಚಲನಚಿತ್ರ ನಿರ್ಮಾಣಕ್ಕೆ ಇಳಿಯುವ ಮುನ್ನ ಶಾಸ್ತ್ರೀಯವಾಗಿ ಅಧ್ಯಯನ ಮಾಡುವುದು ಮುಖ್ಯ ಎಂದು ಪ್ರತಿಪಾದಿಸಿದರು.ರೂಪದರ್ಶಿ ಶ್ರುತಿ, ದತ್ತ ಆ್ಯಡ್ಸ್‌ನ ಮಾಲೀಕ ಎನ್.ಆರ್.ಧ್ರುವರಾಜ್, ಎಸ್‌ಜೆಸಿಇ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ.ಶಕೀಬ್ ಉರ್ ರೆಹಮಾನ್ ಉಪಸ್ಥಿತರಿದ್ದರು. ಪ್ರಮೋದ್ ಸ್ವಾಗತಿಸಿದರು. ಸಮಾರಂಭದ ನಂತರದಲ್ಲಿ ಕಿರುಚಿತ್ರಗಳ ಪ್ರದರ್ಶನವಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry