ಸಿನಿಮಾ ಹುಚ್ಚು ಫ್ಯಾಷನ್ ಮೆಚ್ಚು

7

ಸಿನಿಮಾ ಹುಚ್ಚು ಫ್ಯಾಷನ್ ಮೆಚ್ಚು

Published:
Updated:

ಹಸನ್ಮುಖಿ ನಟಿ ಹರ್ಷಿಕಾ ಪೂಣಚ್ಚ ಅವರ ಮೊಗದಲ್ಲಿ ಎಂದಿನ ನಗು ಲಾಸ್ಯವಾಡುತ್ತಿತ್ತು. ಆಕೆಯ ಹಣೆಯ ಮೇಲೆ ನಗುತ್ತಿದ್ದ ನೀಲಿ ಬಿಂದಿ, ಕತ್ತನ್ನು ಆವರಿಸಿಕೊಂಡಿದ್ದ ದೊಡ್ಡ ಕೆಂಪು ಪದಕದ ಸರ, ಎದೆಯ ಮೇಲೆ ಲಾಸ್ಯವಾಡುತ್ತಿದ್ದ ಮುಂಗುರುಳು ಆಕೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದವು. ಕಸೂತಿ ಮಾಡಿದ ನೀಲಿ ಸೀರೆ, ಕೆಂಪು ಮಿಶ್ರಿತ ಹಳದಿ ರವಿಕೆ ಧರಿಸಿದ್ದ ಹರ್ಷಿಕಾ ಮೊಗದ ಮೇಲೆ ಬಣ್ಣದ ಬೆಳಕು ಎರಗಿದಾಗ ಆಕೆ ಥೇಟ್‌ ರಾಜಕುಮಾರಿಯಂತೆಯೇ ಕಾಣಿಸುತ್ತಿದ್ದರು.ಸಂಪೂರ್ಣ್ ಸಂಸ್ಥೆ ಈಚೆಗೆ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ  ಆಯೋಜಿಸಿದ್ದ ‘ವಸ್ತ್ರಭೂಷಣ್’ ಫ್ಯಾಷನ್‌ ಶೋನಲ್ಲಿ ನಟಿ ಹರ್ಷಿಕಾ ಪೂಣಚ್ಚ ಪ್ರೇಕ್ಷಕರಿಗೆ ಮೊದಲ ನೋಟಕ್ಕೆ ದಕ್ಕಿದ್ದು ಹೀಗೆ. ಆಕೆ ಉಟ್ಟಿದ್ದ ಆಕರ್ಷಕ ವಿನ್ಯಾಸದ ನೀಲಿ ಬಣ್ಣದ ರಾಜಸ್ತಾನಿ ರೇಷ್ಮೆ ಸೀರೆಯ ಅಂಚು ಕೆಂಪು ಹೂವಿನ ಕಸೂತಿಯಲ್ಲಿ ಅರಳಿತ್ತು. ಕಣ್ಣಿಗೆ ಮುದನೀಡುವ ಬಣ್ಣದ ಸೀರೆಯುಟ್ಟು ರಾ್ಯಂಪ್‌ ವಾಕ್‌ ಮಾಡಿದ ಹರ್ಷಿಕಾ ಅವರನ್ನು ಕಂಡು ಅಭಿಮಾನಿಗಳು ಚಪ್ಪಾಳೆ ತಟ್ಟಿ ತಮ್ಮ ಮೆಚ್ಚುಗೆ ರುಜು ಹಾಕಿದರು.ಹರ್ಷಿಕಾ ಅವರ ಜತೆಗೆ ನಾಲ್ಕೈದು ರೂಪದರ್ಶಿಗಳು ವೇದಿಕೆ ಹಂಚಿಕೊಂಡರು. ಅವರು ಸಹ ಆಕರ್ಷಕ ವಿನ್ಯಾಸದ ಕುರ್ತಾ, ಚೂಡಿದಾರ್‌ ಧರಿಸಿ ರಾ್ಯಂಪ್‌ ವಾಕ್ ಮಾಡಿದರು. ಕರಕುಶಲದಿಂದ ಮೈದಳೆದಿದ್ದ ವಿವಿಧ ವಿನ್ಯಾಸದ ಸೀರೆ, ಫ್ಯಾನ್ಸಿ ವಸ್ತ್ರಗಳು, ಎಥ್ನಿಕ್‌ ಡಿಸೈನರ್‌ವೇರ್‌, ಬೆಳ್ಳಿ ಆಭರಣ ಮತ್ತು ಫಿಲಿಗಿರಿ ಆಭರಣಗಳನ್ನು ಧರಿಸಿದ್ದ ರೂಪದರ್ಶಿಗಳು ಮುಸ್ಸಂಜೆಗೆ ರಂಗು ತುಂಬಿದರು.‘ಭಾರತೀಯ ಹೆಣ್ಣು ಮಕ್ಕಳ ಸೌಂದರ್ಯವನ್ನು ಇಮ್ಮಡಿಗೊಳಿಸುವ ಕರಕುಶಲ ವಸ್ತ್ರಗಳು ಕಾಲೇಜು ಯುವತಿಯರನ್ನು ಈಗ ಹೆಚ್ಚಾಗಿ ಆಕರ್ಷಿಸುತ್ತಿವೆ. ಕಸೂತಿ ಮಾಡಿದ ಸೀರೆ, ಕುರ್ತಾಗಳಂತೂ ಹೆಣ್ಣು ಮಕ್ಕಳನ್ನು ಸಮ್ಮೋಹಗೊಳಿಸುತ್ತವೆ. ನನಗಂತೂ ಇಂಥ ವಸ್ತ್ರಾಭರಣಗಳನ್ನು ತೊಡುವುದೆಂದರೆ ಅಚ್ಚುಮೆಚ್ಚು’ ಎಂದು ತಮ್ಮ ಸೌಂದರ್ಯಾಭಿರುಚಿಯ ಬಗ್ಗೆ ಹೇಳಿಕೊಂಡರು ಹರ್ಷಿಕಾ.ಅಂದಹಾಗೆ, ನಟಿ ಹರ್ಷಿಕಾಗೆ ಸಿನಿಮಾ, ಫ್ಯಾಷನ್‌ ಎರಡೂ ರಂಗಗಳು ಅಚ್ಚುಮೆಚ್ಚಂತೆ. ಇವೆರಡರೊಂದಿಗೂ ಸಖ್ಯ ಬೆಳೆಸಿಕೊಂಡಿರುವ ಅವರಿಗೆ ಭಿನ್ನ ಅನುಭವಗಳು ದಕ್ಕಿವೆಯಂತೆ. ಸಿನಿಮಾಗಳಲ್ಲಿ ನಟಿಸುವುದರ ಜತೆಗೆ ರಾ್ಯಂಪ್‌ ಮೇಲೆ ಹೆಜ್ಜೆ ಹಾಕುವುದು ಖುಷಿ ಕೊಡುತ್ತದೆ ಎನ್ನುವ ಹರ್ಷಿಕಾ ಸದ್ಯಕ್ಕೆ ‘ಹುಬ್ಬಳ್ಳಿ ಹುಡುಗರು’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.‘‘ಫ್ಯಾಷನ್‌, ಸಿನಿಮಾ ಎರಡೂ ನನ್ನಿಷ್ಟದ ಕ್ಷೇತ್ರಗಳು. ಸಿನಿಮಾದಲ್ಲಿ ಪಾತ್ರಗಳನ್ನು ಪ್ರೀತಿಯಿಂದ ನಿರ್ವಹಿಸುವಂತೆಯೇ ರಾ್ಯಂಪ್‌ ಮೇಲೆ ಹೆಜ್ಜೆ ಹಾಕುವುದು ನನಗೆ ಅತ್ಯಂತ ಖುಷಿ ಕೊಡುವ ಸಂಗತಿ. ಒಂದೊಂದು ಕ್ಷೇತ್ರವೂ ನನಗೆ ಭಿನ್ನ ಅನುಭವ ಕೊಟ್ಟಿದೆ. ‘ಬಿ–3’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಉಳಿದಂತೆ ನಟ ಅಜಯ್‌ ರಾವ್‌ ಅವರ ಜತೆ ‘ಅದ್ವೈತ್‌’ ಸಿನಿಮಾಕ್ಕೆ ಬಣ್ಣ ಹಚ್ಚುತ್ತಿದ್ದೇನೆ. ಈ ಚಿತ್ರಕ್ಕೆ ವೀರ್‌ ಸಮರ್ಥ್‌ ಅವರ ಸಂಗೀತವಿದೆ’ ಎಂದು ಮಾತು ಸೇರಿಸುತ್ತಾರೆ ಅವರು. ನಿಮ್ಮ ಸೌಂದರ್ಯದ ಗುಟ್ಟೇನು ಎಂದು ಪ್ರಶ್ನಿಸಿದರೆ ಆಕೆ ನಗುತ್ತಾ ಉತ್ತರಿಸಿದ್ದು ಹೀಗೆ; ‘ಬಿಡುವಿಲ್ಲದ ಕೆಲಸಗಳ ನಡುವೆಯೂ ನಾನು ನಿತ್ಯ ತಪ್ಪದೇ ವ್ಯಾಯಾಮ ಮಾಡುತ್ತೇನೆ. ಎಷ್ಟೇ ಒತ್ತಡವಿದ್ದರೂ ಲವಲವಿಕೆಯಿಂದಿರಲು ಪ್ರಯತ್ನಿಸುತ್ತೇನೆ. ಅಪರೂಪಕ್ಕೊಮ್ಮೆ ಅನ್ನದ ರುಚಿ ನೋಡುವ ನನ್ನ ನಿತ್ಯದ ಮೆನುವಿನಲ್ಲಿ ಚಪಾತಿ ಇದ್ದೇ ಇರುತ್ತದೆ’.ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕು ಎಂದು ಆಸೆ ಇಟ್ಟುಕೊಂಡಿರುವ ಹರ್ಷಿಕಾಗೆ ಬಿಡುವಿಲ್ಲದ ಚಿತ್ರೀಕರಣ ತಡೆಯೊಡ್ಡುತ್ತಿದೆಯಂತೆ. ಆದರೂ ಪ್ರತಿವರ್ಷದಂತೆ ಈ ಬಾರಿಯೂ ಗಣೇಶ ಚತುರ್ಥಿಯನ್ನು ಖುಷಿಯಿಂದ ಆಚರಿಸುವ ಮೂಡ್‌ನಲ್ಲಿದ್ದಾರೆ ಹರ್ಷಿಕಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry