ಸಿನಿಮೀಯ ಅವಕಾಶ ಪರಿಣೀತಿ `ವಿಕಾಸ'!

7

ಸಿನಿಮೀಯ ಅವಕಾಶ ಪರಿಣೀತಿ `ವಿಕಾಸ'!

Published:
Updated:
ಸಿನಿಮೀಯ ಅವಕಾಶ ಪರಿಣೀತಿ `ವಿಕಾಸ'!

ಯಶ್ ರಾಜ್ ಫಿಲ್ಮ್ಸ್ ಕಚೇರಿ. ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳಲು ಅಲ್ಲಿ ದೊಡ್ಡ ತಂಡ. ಅದರಲ್ಲಿ ಇಪ್ಪತ್ಮೂರರ ಸರಳ ಸುಂದರಿ. ಸಿನಿಮಾದವರನ್ನು ಕಂಡರೆ ಅವಳಿಗೆ ಅಷ್ಟಕ್ಕಷ್ಟೆ. `ಈ ಸ್ಟಾರ್‌ಗಳೆಲ್ಲಾ ಶೋಕೀಲಾಲರು. ಚೆಂದದ ಬಟ್ಟೆ ಹಾಕಿಕೊಂಡು ಸುತ್ತುತ್ತಾರೆ. ಎಲ್ಲಾ ದಿಖಾವೆ. ಇದೂ ಒಂದು ಬದುಕೇ' ಎಂದೆಲ್ಲಾ ತನ್ನಷ್ಟಕ್ಕೆ ತಾನು ದೂರುತ್ತಾ ಕೂರುವುದು ಕೆಲಸಕ್ಕೆ ಸೇರಿದ ಮೊದಲ ಕೆಲವು ದಿನಗಳಲ್ಲಿ ಮಾಮೂಲಾಗಿತ್ತು. ಹುಡುಗಿ ಕೆಲಸ ಮಾಡುತ್ತಿದ್ದ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ರುಚಿಯಾದ ತಿನಿಸುಗಳು ಸಿಗುವ ಹೋಟೆಲ್ ಇತ್ತು. ಆಗೀಗ ಅಲ್ಲಿಗೆ ಹೋಗುತ್ತಿದ್ದ ಅವಳು ಕ್ರಮೇಣ ತನ್ನ ಸಂಸ್ಥೆಯ ಮಾಲೀಕ ಉದಯ್ ಚೋಪ್ರಾ ಅವರಿಗೂ ರುಚಿ ಹತ್ತಿಸಿದಳು. ರಾಣಿ ಮುಖರ್ಜಿ, ಪ್ರಿಯಾಂಕಾ ಚೋಪ್ರಾ, ಶಾಹಿದ್ ಕಪೂರ್, ಅನುಷ್ಕಾ ಶರ್ಮ, ರಣವೀರ್ ಸಿಂಗ್ ಮೊದಲಾದ ನಟ ನಟಿಯರು ಪಟ್ಟ ಪಡಿಪಾಟಲನ್ನು ಹತ್ತಿರದಿಂದ ಕಂಡ ಹುಡುಗಿಗೆ ಜ್ಞಾನೋದಯವಾಯಿತು- ಸ್ಟಾರ್‌ಗಿರಿ ಕಷ್ಟ. ಅದುವರೆಗೆ ದೂರಿಕೊಳ್ಳುತ್ತಿದ್ದವಳು ದಿಢೀರನೆ ಕೆಲಸ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಳು. ರಾಜೀನಾಮೆ ಪತ್ರ ಕೊಡುವ ಮೊದಲೇ ಸಿನಿಮಾ ನಟನೆಯ ಅವಕಾಶ ಹುಡುಕಿಕೊಂಡು ಬಂದಿತು. ಇಲ್ಲಿಂದಾಚೆಗೆ `ಅವಳು' ಎನ್ನುವಂತಿಲ್ಲ; `ಅವರು' ಎನ್ನಬೇಕು. ಪರಿಣೀತಿ ಚೋಪ್ರಾ ಉತ್ತರ ಭಾರತದ ಹೆಣ್ಣುಮಕ್ಕಳಿಗೆ ಇರುವ ಧಾರ್ಷ್ಟ್ಯವನ್ನು ಬೆನ್ನಿಗೆ ಕಟ್ಟಿಕೊಂಡು, ಹೊಟ್ಟೆ ಹೊರೆಯಲೊಂದು ಕೆಲಸ ಹುಡುಕಿ, ಆಮೇಲೆ ಅಕಸ್ಮಾತ್ತಾಗಿ ನಟಿಯಾದ ಸಿನಿಮೀಯ ಸತ್ಯವಿದು. ಅಪ್ಪ-ಅಮ್ಮ ಒಂದು ಕಡೆ. ತಾನು ಮುಂಬೈನಲ್ಲಿ. ಸ್ವತಂತ್ರ ಹಕ್ಕಿಯಾಗಬಯಸಿ ಬಣ್ಣದ ಲೋಕದ ನಿರ್ಮಾಣ ಸಂಸ್ಥೆಯಲ್ಲಿ ಲೆಕ್ಕದ ವ್ಯವಹಾರ ನೋಡಿಕೊಂಡ ಪರಿಣೀತಾ ಈಗ ಒಳ್ಳೆಯ ಸ್ಕ್ರಿಪ್ಟ್‌ಗಾಗಿ ಎದುರುನೋಡುತ್ತಿದ್ದಾರೆ.`ಲೇಡೀಸ್ ವರ್ಸಸ್ ರಿಕಿ ಬೆಹ್ಲ್' ಬಯಸದೇ ಬಂದ ಸಿನಿಮಾ ಅವಕಾಶ. ಅದರಲ್ಲಿನ ಅಭಿನಯ `ಇಶ್ಕ್‌ಜಾದೆ' ಚಿತ್ರದಲ್ಲೂ ನಟಿಸುವ ಭಾಗ್ಯ ಕರುಣಿಸಿತು. ಮೊದಲ ಚಿತ್ರದಲ್ಲಿ ಸ್ಕ್ರೀನ್ ಟೆಸ್ಟ್‌ನ ಅಗತ್ಯವೇ ಎದುರಾಗಲಿಲ್ಲ. ಆದರೆ `ಇಶ್ಕ್‌ಜಾದೆ' ವಿಷಯದಲ್ಲಿ ಹಾಗಾಗಲಿಲ್ಲ. ಪದೇಪದೇ ಮೇಕಪ್ ಹಾಕಿಸಿ, ತರಹೇವಾರಿ ಉಡುಗೆಗಳನ್ನು ತೊಡಿಸಿ, ಮುಖದಲ್ಲಿ ಬಗೆಬಗೆಯ ಭಾವಗಳನ್ನು ಮೂಡಿಸಿ, ನಟಿಸಬಲ್ಲ ಸಾಮರ್ಥ್ಯವಿದೆ ಎಂದು ಒರೆಗೆಹಚ್ಚಿ ನೋಡಿದ ಮೇಲಷ್ಟೇ ಆಯ್ಕೆ ಮಾಡಿದ್ದು.ಎರಡು ಚಿತ್ರಗಳು ತೆರೆಮೇಲೆ ಬಂದಮೇಲೆ ಪರಿಣೀತಾ ಬದುಕಿನಲ್ಲಿ ಮಹತ್ವದ ಬದಲಾವಣೆಗಳಾದವು. ಯಾವುದೋ ಒಂದು ಜೀನ್ಸ್- ಟಾಪ್, ಗಂಜಿ ಹಾಕಿದ ಬಟ್ಟೆಗಳನ್ನು ತೊಟ್ಟು, ಇಷ್ಟ ಬಂದಕಡೆ ಓಡಾಡುತ್ತಿದ್ದ ಅವರು ಮೊದಲಿನಂತೆ ಇರಲಾಗುತ್ತಿಲ್ಲ. ವಸ್ತ್ರ ವಿನ್ಯಾಸಕಿಯರು ಅವರಿಗೊಪ್ಪುವ ಒಂದಷ್ಟು ಉಡುಗೆಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಅವನ್ನು ಹಾಕಿಕೊಳ್ಳುವುದು ಕಡ್ಡಾಯ. ಮೇಕಪ್ ಇಲ್ಲದೆ ಹೊರಗೆ ಹೋಗುವುದು ಸಲ್ಲ ಎಂದು ಅವರ ಅಮ್ಮನೇ ಆಜ್ಞೆ ಮಾಡಿದ್ದಾರೆ. ಉದಯ್ ಚೋಪ್ರಾ ಹಾಗೂ ಮನೀಷ್ ಶರ್ಮ ಜೊತೆ ಸಂಬಂಧವಿದೆ ಎಂಬ ಗಾಸಿಪ್‌ಗಳನ್ನು ಓದಿ ಬೇಸರಗೊಂಡಿದ್ದಲ್ಲದೆ, ಅವು ಪ್ರಕಟವಾದ ಪತ್ರಿಕೆಗಳನ್ನೆಲ್ಲಾ ಸುಟ್ಟುಹಾಕಿ, ಕಣ್ಣೀರು ಹಾಕಿ, ಈಗ ಸಮಾಧಾನದಿಂದ ಇದ್ದಾರೆ ಪರಿಣೀತಾ.ಯಶ್ ರಾಜ್ ಫಿಲ್ಮ್ಸ್‌ನಲ್ಲಿ ಕೆಲಸಕ್ಕೆ ಸೇರಿದಾಗ ಪಾಸ್‌ಪೋರ್ಟ್ ಫೋಟೊ ತೆಗೆಸಿಕೊಳ್ಳಲು ಅಗತ್ಯವಿದ್ದ ನಗು ಉಕ್ಕಿಸಲು ಹೆಣಗಾಡಿದ್ದ ಪರಿಣೀತಾ ಈಗ ಸಾಲುಸಾಲು ಫೋಟೋಶೂಟ್‌ಗಳಿಗೆ ಹೋಗುವುದಿದೆ. ಸಿನಿಮಾ ನಿರ್ಮಾಣದ ಲೆಕ್ಕಗಳು ಈಗಲೂ ಅವರ ಬಾಯಲ್ಲಿವೆ. ಸ್ಟಾರ್‌ಗಳನ್ನು ಇನ್ನು ಕನಸಲ್ಲಿಯೂ ಅವರು ದೂರುವುದಿಲ್ಲ. ತಾವೂ ಸ್ಟಾರ್ ಆದರೆ ಪರಿಸ್ಥಿತಿ ಇನ್ನಷ್ಟು ಕಷ್ಟವಾಗುತ್ತದಲ್ಲ ಎಂಬ ಆತಂಕವೂ ಇದೆ. ಮಗಳ ಏಳಿಗೆ ಕಂಡು ಸುಖ ಪಡಲು ಈಗ ಅಪ್ಪ-ಅಮ್ಮ ಕೂಡ ಅವರ ಜೊತೆಗೇ ಬಂದು ಇದ್ದುಬಿಟ್ಟಿದ್ದಾರೆ.

   

                      

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry