`ಸಿನಿಮೋತ್ಸವ ಹಳ್ಳಿ ಹಬ್ಬದಂತೆ'

7

`ಸಿನಿಮೋತ್ಸವ ಹಳ್ಳಿ ಹಬ್ಬದಂತೆ'

Published:
Updated:

ಬೆಂಗಳೂರು: ಪ್ರತಿ ವಾರ ಸಿನಿಮಾಗಳು ತೆರೆಗೆ ಬರುತ್ತವೆ. ಟಿವಿಗಳಲ್ಲೂ ಚಲನಚಿತ್ರಗಳ ಹೊಳೆಯೇ ಹರಿಯುತ್ತದೆ. ಕಂಪ್ಯೂಟರ್ ಯುಗದಲ್ಲಂತೂ ಬಯಸಿದ ಚಿತ್ರ ಕ್ಷಣಾರ್ಧದಲ್ಲಿ ಕಣ್ಣ ಮುಂದೆ. ಇಂಥ ಹೊತ್ತಿನಲ್ಲಿಯೂ ಚಿತ್ರೋತ್ಸವಗಳ ಸಂಖ್ಯೆ ಹೆಚ್ಚುತ್ತಿದೆ. ಒಂದು ಕಾಲಕ್ಕೆ ಕೇಂದ್ರ ಸರ್ಕಾರ ಮಾತ್ರ ನಡೆಸುತ್ತಿದ್ದ ಚಿತ್ರೋತ್ಸವಗಳು ಈಗ ರಾಜ್ಯ ಸರ್ಕಾರಗಳ ಹೆಮ್ಮೆಯ ಚಿಹ್ನೆಗಳು. ಸರ್ಕಾರವಲ್ಲದೆ ಖಾಸಗಿ ಸಮುದಾಯಗಳು ಕೂಡ ಲೆಕ್ಕವಿಲ್ಲದಷ್ಟು ಚಿತ್ರೋತ್ಸವಗಳನ್ನು ಹಮ್ಮಿಕೊಳ್ಳುತ್ತವೆ. ಇಂಥ ಚಿತ್ರೋತ್ಸವಗಳಿಂದ ಚಿತ್ರರಂಗಕ್ಕೆ, ಸಮಾಜಕ್ಕೆ ಅಷ್ಟೇ ಏಕೆ ಸಾಮಾನ್ಯ ಪ್ರೇಕ್ಷಕನಿಗೆ ಏನು ಲಾಭ?ನಿರ್ಮಾಪಕ, ನಿರ್ದೇಶಕ ಬಿ. ಸುರೇಶ್ ಅವರು ಎರಡು ಅಂಶಗಳ ಮೂಲಕ ಈ ಪ್ರಶ್ನೆಗೆ ಉತ್ತರಿಸುತ್ತಾರೆ. `ಸಿನಿಮೋತ್ಸವ ಎಂಬುದು ಒಂದು ಹಳ್ಳಿಯ ಹಬ್ಬದಂತೆ. ಅಲ್ಲಿ ಸಂಭ್ರಮದ ಜತೆಗೆ ಪರಸ್ಪರ ಕಷ್ಟ ಸುಖವನ್ನು ಕೂಡ ಹಂಚಿಕೊಳ್ಳಬಹುದು. ಉದಾಹರಣೆಗೆ ಇಟಲಿಯ ಚಿತ್ರೋದ್ಯಮ ಹಾಗೂ ಭಾರತೀಯ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳು ಒಂದೇ ಬಗೆಯವು. ದೇಶದ ಚಿತ್ರಗಳ ಮೇಲೆ ಹಾಲಿವುಡ್- ಬಾಲಿವುಡ್ ಭಾರವಿದ್ದರೆ ಇಟಲಿ ಚಿತ್ರ ಮಾರುಕಟ್ಟೆಯನ್ನು ಹಾಲಿವುಡ್ ಸಂಪೂರ್ಣವಾಗಿ ನುಂಗಿ ಹಾಕಿದೆ. ಇಂಥ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಸಿನಿಮೋತ್ಸವಗಳು ವೇದಿಕೆ ಕಲ್ಪಿಸುತ್ತವೆ.ಮತ್ತೊಂದೆಡೆ ಹೊಸ ಕಲ್ಪನೆ ಹೊಸ ನಿರೂಪಣೆಗಳ ಬಗ್ಗೆ ತಿಳಿಯಲು ಚಿತ್ರೋತ್ಸವ ಸಹಕಾರಿ. ಅಲ್ಲದೆ ತಮ್ಮ ಫಸಲು ಉಳಿದವರಿಗಿಂತ ಹೇಗೆ ಭಿನ್ನ ಎಂಬುದನ್ನೂ ಇದರಿಂದ ತಿಳಿಯಬಹುದು. ಇಂಥ ಬೆಳೆಗಾರರ ಜತೆ ನೋಡುಗನೂ ಇರುವುದರಿಂದ ಆತನಿಗೆ ಕೂಡ ಅದರ ಫಲ ದೊರೆಯುತ್ತದೆ' ಎನ್ನುವುದು ಅವರ ಅನಿಸಿಕೆ.ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್. ರಮೇಶ್ ಅವರಿಗೆ ಸಿನಿ ಹಬ್ಬಗಳ ಮಹತ್ವ ವಿಶಿಷ್ಟವಾಗಿ ಕಂಡಿದೆ. `ಟ್ರೆಂಡ್‌ಗಳ ಹಿಂಬಾಲಕರೇ ಹೆಚ್ಚಿರುವಾಗ ಸ್ವಂತ ಟ್ರೆಂಡ್ ರೂಪಿಸಲು ಸಿನಿಮೋತ್ಸವಗಳು ಸಹಾಯಕವಾಗುತ್ತವೆ. ಯಾರನ್ನು ಕೇಳಿದರೂ ತುಂಬಾ ರಿಚ್ ಆಗಿ ಸಿನಿಮಾ ಮಾಡಿದ್ದೇವೆ ಎನ್ನುತ್ತಾರೆ. ಅವರ ಶ್ರೀಮಂತ ನಿರ್ಮಾಣ ಕೇವಲ ಕಣ್ಣಿಗೆ ಮುಟ್ಟುತ್ತಿದೆ, ಮನಸ್ಸನ್ನು ತಟ್ಟುತ್ತಿಲ್ಲ. ನನ್ನನ್ನೂ ಸೇರಿಸಿಕೊಂಡು ಈ ಮಾತು ಹೇಳುತ್ತಿದ್ದೇನೆ. ಅಕಿರ ಕುರಸವಾ, ಪುಟ್ಟಣ್ಣ ಕಣಗಾಲ್‌ರಂಥ ನಿರ್ದೇಶಕರು ಜನರ ಮನಮುಟ್ಟುತ್ತಿದ್ದರು. ಅಂಥ ಮಹಾನ್ ವ್ಯಕ್ತಿಗಳ ಮಾರ್ಗದಲ್ಲಿ ನಡೆಯಲು ಚಿತ್ರೋತ್ಸವಗಳು ಸ್ಫೂರ್ತಿ ನೀಡುತ್ತವೆ' ಎನ್ನುವುದು ಅವರ ಪ್ರತಿಕ್ರಿಯೆ.ಸಿನಿಮೋತ್ಸವಗಳಿಂದ ಶೈಕ್ಷಣಿಕವಾಗಿಯೂ ಲಾಭವಿದೆ ಎಂಬುದು ನಿರ್ದೇಶಕ ಬರಗೂರು ರಾಮಚಂದ್ರಪ್ಪನವರ ಅಭಿಮತ. `ಬೇರೆ ಬೇರೆ ದೇಶದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಆಯಾಮಗಳನ್ನು ಚಿತ್ರೋತ್ಸವಗಳು ಪರಿಚಯಿಸುತ್ತವೆ. ಹೊಸದರ ಜೊತೆಗೆ ಹಳೆಯ ಚಿತ್ರಗಳನ್ನು, ಬೇರೆ ದೇಶಭಾಷೆಗಳ ಚಿತ್ರಗಳನ್ನು ನೋಡುವುದು ಸಾಧ್ಯವಾದ್ದರಿಂದ ಇದು ದೇಶ ಕಾಲ ಮೀರಿದ ಜ್ಞಾನವಾಹಿನಿಯಾಗಿ ಕೆಲಸ ಮಾಡುತ್ತದೆ. ಚಲನಚಿತ್ರಗಳಿಂದ ನೋಡಿ ಕಲಿಯುವುದು ಸಾಕಷ್ಟಿರುತ್ತದೆ' ಎನ್ನುವ ಅವರು ಎಲ್ಲರಿಗೂ ಚಿತ್ರೋತ್ಸವಗಳ ಲಾಭ ದಕ್ಕಬೇಕು ಎಂದು ಅಭಿಪ್ರಾಯಪಡುತ್ತಾರೆ.ಚಿತ್ರೋತ್ಸವಗಳ ಸಂಘಟಕ, ನಗರದ ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರದ ಸಂಚಾಲಕ ಗೋಪಿನಾಥ್‌ರ ಪ್ರಕಾರ, `ಚಲನಚಿತ್ರೋತ್ಸವಗಳು ಸಂಸ್ಕೃತಿ ವಾಹಕಗಳು. ವ್ಯಾಪಾರಿ ಚಿತ್ರಗಳಿಂದ ಸಾಧ್ಯವಾಗದ ಆಪ್ತತೆಯನ್ನು ಇಂಥ ಚಿತ್ರೋತ್ಸವಗಳಿಂದ ಪಡೆಯಲು ಸಾಧ್ಯ. ಯೂರೋಪ್ ಅಥವಾ ಅಮೆರಿಕದ ಜನರಿಗೆ ಮಲೆನಾಡನ್ನು ಕಣ್ಣಿಗೆ ಕಟ್ಟುವಂತೆ ಗಿರೀಶ್ ಕಾಸರವಳ್ಳಿ ಅವರ ಸಿನಿಮಾಗಳು ತೋರಿಸುತ್ತವೆ. ದೃಶ್ಯಗಳನ್ನು ಯಥಾವತ್ತಾಗಿ ಕಟ್ಟಿಕೊಡುವುದರಿಂದ ಪುಸ್ತಕಗಳಿಗಿಂತ ಸಿನಿಮಾ ಬೀರುವ ಪರಿಣಾಮ ಹೆಚ್ಚು. ಅಲ್ಲದೇ ಚಿತ್ರರಂಗದ ದಿಗ್ದರ್ಶಕರನ್ನು ಹತ್ತಿರದಿಂದ ನೋಡುವ, ಅವರ ಜತೆಗೆ ಅನುಭವ ಹಂಚಿಕೊಳ್ಳುವ ಅವಕಾಶ ದೊರೆಯುತ್ತದೆ'.`ಬೆಂಗಳೂರಿನಂಥ ನಗರಗಳಲ್ಲಿ ಹೆಚ್ಚೆಂದರೆ ಆರೇಳು ಭಾಷೆಗಳ ಚಿತ್ರಗಳನ್ನು ಸವಿಯಬಹುದು. ಆದರೆ ಜಗತ್ತಿನ ಮೂಲೆ ಮೂಲೆಯ ಸಿನಿಮಾಗಳನ್ನು ಒದಗಿಸುವುದು ಸಿನಿಮೋತ್ಸವಗಳು ಮಾತ್ರ. ತಾಂತ್ರಿಕತೆಯ ದೃಷ್ಟಿಯಿಂದ ಹಾಲಿವುಡ್‌ಗೆ ಹತ್ತಿರವಿರುವ ಭಾರತೀಯ ಚಿತ್ರರಂಗ, ಕಥನದ ದೃಷ್ಟಿಯಿಂದ ದೂರವೇ ಉಳಿದಿದೆ. ಚಿತ್ರದ ತಿರುಳನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಚಿತ್ರಹಬ್ಬಗಳು ಪರೋಕ್ಷವಾಗಿ ದುಡಿಯುತ್ತವೆ' ಎಂದು ಛಾಯಾಗ್ರಾಹಕ ಅಶೋಕ್ ಕಶ್ಯಪ್ ಹೇಳುತ್ತಾರೆ.ಪ್ರವಾಸೋದ್ಯಮ ಅಭಿವೃದ್ಧಿ, ಜಗತ್ತಿಗೆ ಸ್ಥಳೀಯ ಚಿತ್ರೋದ್ಯಮದ ಪರಿಚಯ, ತಂತ್ರಜ್ಞಾನಗಳ ಅರಿವು ಇತ್ಯಾದಿ ನೆಲೆಗಳಿಂದಲೂ ಸಿನಿಮೋತ್ಸವಗಳ ಮಹತ್ವ ದೊಡ್ಡದು ಎಂಬ ಮಾತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry