ಗುರುವಾರ , ಏಪ್ರಿಲ್ 15, 2021
31 °C

ಸಿನಿ ಮಂದಿಯ ರಂಜಾನ್ ನೆನಪು

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಕೋಮುಸಾಮರಸ್ಯವನ್ನು ಚಳವಳಿ, ಹೋರಾಟಗಳ ಹಂಗಿಲ್ಲದೆ ಬಿಂಬಿಸಬಲ್ಲ ಸುಲಭ ಮಾರ್ಗ ಸಿನಿಮಾ. ನಿಜ. ತೆರೆಯ ಮೇಲೆ ಧರ್ಮ, ಜಾತಿ, ವರ್ಣ, ಅಂತಸ್ತುಗಳ ಭೇದವನ್ನು ನಿರಾಕರಿಸುವ ಬಣ್ಣದ ಲೋಕ, ಅಂತರಂಗದಲ್ಲಿಯೂ ಸೌಹಾರ್ದವನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿರುವ ಮಾಧ್ಯಮ.ರಂಜಾನ್ ಹಬ್ಬವೆಂದರೆ ಅನ್ಯ ಧರ್ಮೀಯರಿಗೆ ಬೆರಗು. ಸಿನಿಮಾ ಮಂದಿಗೂ ರಂಜಾನ್‌ಗೂ ಒಂದಿಲ್ಲೊಂದು ಬಗೆಯಲ್ಲಿ ನಂಟು ಬೆಸೆದಿರುತ್ತದೆ. ಸಿನಿಮಾ ಮಂದಿ ಹಂಚಿಕೊಂಡ ರಂಜಾನ್‌ನ ಕೆಲ ನೆನಪುಗಳಿವು
...ಇಫ್ತಾರ್ ಕೂಟವೆಂದರೆ ನನಗೆ ತಕ್ಷಣ ನೆನಪಿಗೆ ಬರುವುದು ಬಿರಿಯಾನಿ. ಮಂಗಳೂರಿನಲ್ಲಿದ್ದಾಗ ರಂಜಾನ್ ಆಚರಣೆ ಜೋರು. ಅಲ್ಲಿ ನನಗಿದ್ದ ಮುಸ್ಲಿಂ ಗೆಳೆಯರ ಬಳಗವೂ ದೊಡ್ಡದು. ಆದರೆ ನನಗೆ ರಂಜಾನ್ ಎಂದರೆ ಹಬ್ಬದೂಟದ ಬಿರಿಯಾನಿ.ಸ್ನೇಹಿತರ ಬಳಗದ ಐದಾರು ಮನೆಗಳಲ್ಲಿ ರಂಜಾನ್ ಹಬ್ಬದಲ್ಲಿ, ಅಂದರೆ ಊಟದಲ್ಲಿ ಪಾಲ್ಗೊಳ್ಳುವುದನ್ನು ತಪ್ಪಿಸುತ್ತಿರಲಿಲ್ಲ. ಊಟದ ಹೊರತಾಗಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿಲ್ಲ. ಮಂಗಳೂರಿನಲ್ಲಿದ್ದಾಗ ನಮಗೆ ಎಲ್ಲಾ ಧರ್ಮದವರ ಹಬ್ಬವೂ ನಮ್ಮದೇ. ದೀಪಾವಳಿ, ರಂಜಾನ್, ಕ್ರಿಸ್‌ಮಸ್ ಎಲ್ಲವನ್ನೂ ಆಚರಿಸುತ್ತಿದ್ದೆವು.ಉಪವಾಸ ಎಲ್ಲಾ ಧರ್ಮಗಳಲ್ಲೂ ಒಂದಲ್ಲ ಒಂದು ರೀತಿ ಆಚರಣೆಯಲ್ಲಿರುತ್ತದೆ. ಅದು ಆರೋಗ್ಯಕ್ಕೂ ಒಳ್ಳೆಯದು. ಆದರೆ ರಂಜಾನ್ ಆಚರಣೆ ಇನ್ನೂ ವಿಶಿಷ್ಟ. ಉಪವಾಸ ಒಳ್ಳೆಯದೆಂದು ಗೊತ್ತಿದ್ದರೂ ರಂಜಾನ್‌ನ ಊಟದ ಬಗ್ಗೆ ಮಾತ್ರ ನನ್ನ ಯೋಚನೆ ಇರುವುದು. ಈಗಲೂ ಬಿಡುವಿದ್ದರೆ ಹಬ್ಬದಲ್ಲಿ ಪಾಲ್ಗೊಳ್ಳುತ್ತೇನೆ. 

 -ಗುರುಕಿರಣ್,  ಸಂಗೀತ ನಿರ್ದೇಶಕನನ್ನ ಮೂಲ ಊರು ದಾವಣೆಗೆರೆ. ಅಲ್ಲಿ ರಂಜಾನ್ ಮಾಸಾಚರಣೆಯಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯದಿಂದ ಪಾಲ್ಗೊಳ್ಳುತ್ತಿದ್ದೆವು. ಆಗ ನಾನಿನ್ನೂ ಚಿಕ್ಕ ಹುಡುಗ. ಹೀಗಾಗಿ ಕೆಲವು ಸಂಗತಿಗಳಷ್ಟೇ ನೆನಪಿದೆ.ರಂಜಾನ್ ಮಾತ್ರವಲ್ಲ ಆಗ ಎಲ್ಲಾ ಹಬ್ಬಗಳಲ್ಲೂ ಊರಿಗೆ ಊರೇ ಒಟ್ಟಿಗೆ ಸೇರಿಕೊಳ್ಳುತ್ತಿತ್ತು. ದಾವಣಗೆರೆ ಬಿಟ್ಟು ಬೆಂಗಳೂರಿಗೆ ಬಂದ ನಂತರ ಆ ಸಂಪರ್ಕ ಕಡಿದುಹೋಯಿತು. ನನ್ನಲ್ಲಿ ಉಳಿದಿರುವ ಬಾಲ್ಯದ ಅಲ್ಪಸ್ವಲ್ಪ ನೆನಪುಗಳು ಆಗಾಗ್ಗೆ ಆ ದಿನಗಳನ್ನು ಕೆದಕುತ್ತಿರುತ್ತದೆ.

-ವಿ. ಚಿದಾನಂದ್, ನಟರಂಜಾನ್ ಬಗ್ಗೆ ಕೇಳಿದ್ದರೂ, ನೋಡಿದ್ದರೂ ಅದರಲ್ಲಿ ಪಾಲ್ಗೊಂಡಿದ್ದು ಒಮ್ಮೆ ಮಾತ್ರ. ಅದೂ ಕಾಲೇಜಿನಲ್ಲಿ ಓದುತ್ತಿದ್ದಾಗ. ನಾವು ಗೆಳತಿಯರೆಲ್ಲಾ ಒಟ್ಟಿಗೆ ಗೆಳತಿ ಅಲ್ಮಶಾಳ ಮನೆಗೆ ಹೋಗಿದ್ದೆವು. ಅದು ಉಪವಾಸದ ಕೊನೆಯ ದಿನ. ಅವರ ಮನೆ ಅಕ್ಕಪಕ್ಕದಲ್ಲೆಲ್ಲಾ ಹಬ್ಬದ ವಾತಾವರಣ ಕಳೆಕಟ್ಟಿತ್ತು.ಅವರದ್ದು ಹಬ್ಬದ ಸಂಭ್ರಮವಾದರೆ, ನಾವು ಗೆಳತಿಯರು ಹರಟೆಯಲ್ಲಿ ಮುಳುಗಿದ್ದೆವು. ಆಗಾಗ್ಗೆ ಅವರ ಚಟುವಟಿಕೆಗಳನ್ನು ನೋಡುತ್ತಿದ್ದರೂ ಅರ್ಥವಾಗಿರಲಿಲ್ಲ. ಊಟ ಮಾಡಿದ್ದು ಮಾತ್ರ ನೆನಪಿದೆ. ಆದರೆ ಏನೇನು ತಿಂದಿದ್ದೆವು ಎಂಬುದು ನೆನಪಿಲ್ಲ. ಹಬ್ಬದಂದು ನಮ್ಮ ಲೋಕವೇ ಬೇರೆಯದ್ದಾಗಿತ್ತು.

-ನೀತು, ನಟಿನಾನು ಚಿಕ್ಕಂದಿನಲ್ಲಿದ್ದಾಗ ಮುಸ್ಲಿಂ ಕುಟುಂಬದ ಮನೆಯಲ್ಲಿಯೇ ಬಾಡಿಗೆಗೆ ಇದ್ದದ್ದು. ಜೊತೆಗೆ ಅಲ್ಲಿ ನನ್ನ ಓರಿಗೆಯ ಮುಸ್ಲಿಂ ಹುಡುಗರೂ ತುಂಬಾ ಇದ್ದರು. ಹೀಗಾಗಿ ತೀರ್ಥಹಳ್ಳಿಯ ದೊಡ್ಡ ಗೆಳೆಯರ ವಲಯದಲ್ಲಿ ಮುಸ್ಲಿಂ ಗೆಳೆಯರೂ ಹೆಚ್ಚು. ರಂಜಾನ್ ಎಂದರೆ ಬಿರಿಯಾನಿ. ನಮ್ಮೂರಲ್ಲಿ ಬಿರಿಯಾನಿ ಸಿಗುವುದೇ ಅಪರೂಪ.ಹೀಗಾಗಿ ರಂಜಾನ್ ಹಬ್ಬವನ್ನು ಮಿಸ್ ಮಾಡಿಕೊಳ್ಳುವುದು ನನ್ನಿಂದ ಸಾಧ್ಯವಿರುತ್ತಿರಲಿಲ್ಲ. ನಮಗೆ ಹಬ್ಬದ ಆಚರಣೆಯೇನಿಲ್ಲ. ಆದರೆ ಬಿರಿಯಾನಿ ತಿನ್ನುವುದೇ ದೊಡ್ಡ ವಿಷಯ. ನಮಗೆ ಒಂದು ದಿನ ಉಪವಾಸ ಇರುವುದು ಸಾಧ್ಯವೇ ಇಲ್ಲ. ಆದರೆ ದಿನವಿಡೀ ಬೇಕಾದರೂ ತಿನ್ನುವ ಆ ಗೆಳೆಯರು ಒಂದು ತಿಂಗಳು ಕಟ್ಟುನಿಟ್ಟಾಗಿ ರೋಜಾ ಪಾಲಿಸುವುದು ಆಶ್ಚರ್ಯ ಮೂಡಿಸುತ್ತಿತ್ತು. ಅವರ ಆಚರಣೆಯ ಬದ್ಧತೆಯನ್ನು ನಿಜಕ್ಕೂ ಮೆಚ್ಚಬೇಕಾದ್ದೇ.

- ಕವಿರಾಜ್, ಗೀತರಚನೆಕಾರನಾವು ಆಚರಿಸುವುದೇ ರಂಜಾನ್ ಹಾಗೂ ಬಕ್ರೀದ್ ಹಬ್ಬಗಳನ್ನು. ಈ ಹಬ್ಬಗಳಂದು ಪ್ರಗತಿಪರರ ಚಿಂತಕರೆಲ್ಲಾ ಒಂದೆಡೆ ಸೇರುತ್ತೇವೆ. ಮಾತನಾಡುತ್ತೇವೆ. ವಿಚಾರಗಳನ್ನು ಹಂಚಿಕೊಳ್ಳುತ್ತೇವೆ. ಆರೋಗ್ಯಕರ ಚರ್ಚೆಗಳನ್ನು ನಡೆಸುತ್ತೇವೆ. ನಾನು `ಅಗ್ನಿ~ ಬಳಗವನ್ನು ಸೇರಿದ ಬಳಿಕವೆಂದಲ್ಲ ಕಾಲೇಜು ದಿನಗಳಿಂದಲೂ ಈ ರೀತಿ ರಂಜಾನ್ ಮತ್ತಿತರ ಹಬ್ಬಗಳಲ್ಲಿ ಪಾಲ್ಗೊಳ್ಳುತ್ತಿದ್ದೆ.ಗೆಳತಿಯರ ಗುಂಪಿನಲ್ಲಿ ಮುಸ್ಲಿಮರಿದ್ದರು. ಅವರೂ ನಮ್ಮ ಹಬ್ಬಗಳಲ್ಲಿ ಸೇರಿಕೊಳ್ಳುತ್ತಿದ್ದರು. ಮನೆಯಲ್ಲಿಯೂ ಅಂಥದ್ದೇ ವಾತಾವರಣವಿತ್ತು. ಆಚರಣೆಯೆಂದರೆ ಹಬ್ಬದ ಸಂಪ್ರದಾಯಗಳನ್ನು ಪಾಲಿಸುವುದಲ್ಲ. ಅದರ ಒಳಾರ್ಥಗಳನ್ನು ತಿಳಿದುಕೊಳ್ಳುವುದು.

 

ಹಿಂದೂ ಮುಸ್ಲಿಂ ಭೇದವಿಲ್ಲದೆ ಎಲ್ಲರೂ ಸೇರುವುದೇ ಹಬ್ಬ. ಹೀಗಾಗಿ ಹಬ್ಬವನ್ನು ಅರ್ಥವತ್ತಾಗಿ ಆಚರಿಸುವ ನಿಟ್ಟಿನಲ್ಲಿ ನಾವು ತೊಡಗಿಕೊಂಡಿದ್ದೇವೆ. ಇಂದೂ ಎಲ್ಲರೂ ಬೆರೆಯುತ್ತೇವೆ. ಒಟ್ಟಿಗೆ ಸೇರಿ ಅಡುಗೆ ಮಾಡಿ ಹಂಚಿಕೊಂಡು ತಿನ್ನುತ್ತೇವೆ.

-ಸುಮನಾ ಕಿತ್ತೂರು, ನಿರ್ದೇಶಕಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.