ಸಿಪಿಎಂಗೆ ಜಿ.ಪಂ, ತಾ.ಪಂ. ಪ್ರಮುಖ ಸ್ಥಾನ

7

ಸಿಪಿಎಂಗೆ ಜಿ.ಪಂ, ತಾ.ಪಂ. ಪ್ರಮುಖ ಸ್ಥಾನ

Published:
Updated:

ಚಿಕ್ಕಬಳ್ಳಾಪುರ: ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಬಾಗೇಪಲ್ಲಿಯಲ್ಲಿ ನಿರಂತರ ಹೋರಾಟ ನಡೆಸಿದ ಫಲವಾಗಿ ಸಿಪಿಎಂ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಚಿಕ್ಕಬಳ್ಳಾಪುರ ಜಿ.ಪಂ. ಉಪಾಧ್ಯಕ್ಷ ಸ್ಥಾನ ಮತ್ತು ಬಾಗೇಪಲ್ಲಿ ತಾಲ್ಲೂಕು ಪಂಚಾಯಿತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ. ಇದು ಐತಿಹಾಸಿಕ ದಾಖಲೆಯಾಗಿದ್ದು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಯಲ್ಲಿ ಸಿಪಿಎಂ ಆಡಳಿತದ ಚುಕ್ಕಾಣಿ ಹಿಡಿದಿದೆ.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಬಿ.ಸಾವಿತ್ರಮ್ಮ ಆಯ್ಕೆಯಾದರೆ, ಬಾಗೇಪಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆಯಾಗಿ ಶೋಭಾರಾಣಿ ಮತ್ತು ಉಪಾಧ್ಯಕ್ಷೆಯಾಗಿ ಗೌರಮ್ಮ ಆಯ್ಕೆಯಾಗಿದ್ದಾರೆ. ಮೂವರು ಮಧ್ಯಮವರ್ಗದ ಕುಟುಂಬಗಳಿಗೆ ಸೇರಿದವರಾಗಿದ್ದು, ಮೊದಲ ಬಾರಿಗೆ ರಾಜಕೀಯ ಕ್ಷೇತ್ರ ಪ್ರವೇಶಿಸಿರುವುದು ವಿಶೇಷ. ಜಿಲ್ಲಾ ಪಂಚಾಯಿತಿಗೆ ಸಿಪಿಎಂನಿಂದ ಇಬ್ಬರು ಆಯ್ಕೆಯಾಗಿದ್ದು, ಅವರಲ್ಲಿ ಒಬ್ಬರು ಉಪಾಧ್ಯಕ್ಷ ಸ್ಥಾನ ಗಳಿಸಿದ್ದಾರೆ. ಬಾಗೇಪಲ್ಲಿ ತಾ.ಪಂ.ನಲ್ಲಿ 15 ಸ್ಥಾನಗಳಲ್ಲಿ 8 ಸ್ಥಾನ ಮತ್ತು ಗುಡಿಬಂಡೆ ತಾಲ್ಲೂಕಿನಲ್ಲಿ 11 ಸ್ಥಾನಗಳಲ್ಲಿ 5 ಸ್ಥಾನಗಳನ್ನು ಸಿಪಿಎಂ ಗಳಿಸಿದೆ.ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಯಾವುದೇ ರೀತಿಯ ಲಾಬಿಯನ್ನು ಮಾಡದೇ ಮತ್ತು ಅನಗತ್ಯ ದುಂದುವೆಚ್ಚ ಮಾಡದೇ ಪಂಚಾಯಿತಿಯಲ್ಲಿ ಪ್ರಮುಖ ಸ್ಥಾನಗಳಿಸಿರುವ ಸಿಪಿಎಂ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಗೊಳ್ಳುವ ಇಂಗಿತ ವ್ಯಕ್ತಪಡಿಸುತ್ತಿದೆ. ರಾಜ್ಯದ ಇತರ ಜಿಲ್ಲಾ ಪಂಚಾಯಿತಿಗಳಲ್ಲಿ ಒಂದು ಸ್ಥಾನವವನ್ನೂ ಸಹ ಗೆಲ್ಲಲು ಯಶಸ್ವಿಯಾಗದಿರುವ ಸಿಪಿಎಂ ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಪಂಚಾಯಿತಿ ವ್ಯವಸ್ಥೆಯಲ್ಲಿ ಕೆಲವಾರು ಬದಲಾವಣೆಗಳನ್ನು ತರುವ ನಿರೀಕ್ಷೆ ಹೊಂದಿದೆ.‘1952ರ ಸಮಯದಲ್ಲಿ ಜೋಡಿದಾರ ಜಮೀನು ಪದ್ಧತಿ (ಒಬ್ಬ ಜಮೀನುದಾರನ ಒಡೆತನದಲ್ಲಿ 10ರಿಂದ 20 ಹಳ್ಳಿಗಳು) ವಿರುದ್ಧ ಬಾಗೇಪಲ್ಲಿ, ಚಿಂತಾಮಣಿಯಲ್ಲಿ ಪ್ರಥಮ ಬಾರಿಗೆ ಹೋರಾಟ ಕೈಗೊಂಡೆವು. ಈ ಹೋರಾಟ ಕಾಗೋಡು ಸತ್ಯಾಗ್ರಹಕ್ಕೂ ಸ್ಫೂತಿರ್ಯಾಯಾಯಿತು. ನಿರಂತರ ಹೋರಾಟ ನಡೆಸಿದ ಪರಿಣಾಮ ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಮೀನು ಸಕ್ರಮ ಕಾಯ್ದೆ ಜಾರಿಗೆ ತರಲಾಯಿತು.ಕಾಯ್ದೆಯ ಅನುಷ್ಠಾನ ಸಮಿತಿಯ ಅಧ್ಯಕ್ಷನಾಗಿ ನೇಮಕಗೊಂಡ ನಾನು ಸುಮಾರು 14 ಸಾವಿರ ಕುಟುಂಬಗಳಿಗೆ ಜಮೀನು ವಿತರಿಸಲು ಕ್ರಮ ಕೈಗೊಂಡೆ. ಪ್ರತಿ ಕುಟುಂಬಕ್ಕೆ 5 ಎಕರೆ ಜಮೀನು ದೊರೆಯಿತು. ನಿರಂತರ ಹೋರಾಟ ಮತ್ತು ಜನಪರ ನಿಲುವಿನಿಂದ ಸಿಪಿಎಂಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಯಲ್ಲಿ ಪ್ರಮುಖ ಸ್ಥಾನ ಗಳಿಸಲು ಸಾಧ್ಯವಾಗಿದೆ’ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.‘ಹೋರಾಟ ನಡೆಸಿದಾಗಲೆಲ್ಲ ಜನರು ಜೊತೆಯಾದರು. ಚುನಾವಣೆ ಸಂದರ್ಭದಲ್ಲಿ ಸಿಪಿಎಂ ಅಭ್ಯರ್ಥಿಗಳ ಪರ ಮತ ಚಲಾಯಿಸಿದರು. ಪಂಚಾಯಿತಿಗಳಲ್ಲಿ ಆಗಾಗ್ಗೆ ಸ್ಥಾನಗಳನ್ನು ಗೆದ್ದರೂ ಆಡಳಿತ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಮೂವರು ಮಹಿಳೆಯರೇ ಪ್ರಮುಖ ಸ್ಥಾನಗಳನ್ನು ಗಳಿಸಿದ್ದು, ಸಿಪಿಎಂ ತನ್ನ ನೆಲೆಯನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದಲ್ಲದೇ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣೆಯಲ್ಲೂ ತನ್ನ ಪ್ರಭಾವ ಬೀರಲಿದೆ’ ಎಂದು ಅವರು ಹೇಳಿದರು.ಪ್ರಮುಖ ಸ್ಥಾನಗಳಿಗೆ ಆಯ್ಕೆಯಾದ ಸಂದರ್ಭದಲ್ಲಿ ಬಿ.ಸಾವಿತ್ರಮ್ಮ, ಶೋಭಾರಾಣಿ ಮತ್ತು ಗೌರಮ್ಮ ಅವರು ಹೇಳಿದ್ದು ಒಂದೇ ಮಾತು: ‘ಜನಪರ ಮತ್ತು ಅನ್ಯಾಯ ವಿರುದ್ಧದ ಹೋರಾಟಗಳಲ್ಲಿ ಸಿಪಿಎಂ ತನ್ನ ನಿಲುವು ಎಂದಿಗೂ ಬದಲಿಸಿಕೊಳ್ಳುವುದಿಲ್ಲ ಎಂಬ ನಂಬಿಕೆಯನ್ನು ಜನರು ಹೊಂದಿದ್ದಾರೆ. ಇದರ ಹಿನ್ನೆಲೆಯಲ್ಲಿ ನಮ್ಮನ್ನು ಅಯ್ಕೆ ಮಾಡಿದ್ದಾರೆ. ಅದೇ ವಿಶ್ವಾಸವನ್ನು ಉಳಿಸಿಕೊಂಡು ಮುಂದುವರಿಯಲು ಪ್ರಯತ್ನಿಸುತ್ತೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry