ಸಿಪಿಐ(ಎಂ) ನೇತೃತ್ವದಲ್ಲಿ ಪ್ರತಿಭಟನೆ

7

ಸಿಪಿಐ(ಎಂ) ನೇತೃತ್ವದಲ್ಲಿ ಪ್ರತಿಭಟನೆ

Published:
Updated:
ಸಿಪಿಐ(ಎಂ) ನೇತೃತ್ವದಲ್ಲಿ ಪ್ರತಿಭಟನೆ

ಹಾಸನ: ಅರಕಲಗೂಡು ತಾಲ್ಲೂಕು ರಾಮನಾಥಪುರ ಹೋಬಳಿಯ ಕೆರಗೋಡು ಗ್ರಾಮದಲ್ಲಿ ದಲಿತ ಕುಟುಂಬಗಳ ಮೇಲೆ ಸಾಮಾಜಿಕ ಬಹಿಷ್ಕಾರ ಹೇರಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ದಲಿತ ಕುಟುಂಬಗಳಿಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಸಿಪಿಐ(ಎಂ) ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

‘ಅರಕಲಗೂಡು ತಾಲ್ಲೂಕು ರಾಮನಾಥಪುರ ಹೋಬಳಿಯ ಕೆರಗೋಡು ಗ್ರಾಮದಲ್ಲಿ ದಲಿತರು ಜೀವ ಭಯ ಎದುರಿಸುತ್ತಿದ್ದಾರೆ. ಮೇಲ್ವರ್ಗದವರು ಇವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರಿಂದ ಯಾರೂ ಮಾತನಾಡಿಸುವವರೂ ಇಲ್ಲದಂತಾಗಿದೆ, ಜತೆಗೆ ಮೇಲ್ವರ್ಗದವರು ತಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇಲ್ಲಿಯ ದಲಿತ ಕುಟುಂಬಗಳಿಗೆ ಭದ್ರತೆ               ಒದಗಿಸಬೇಕು’ ಎಂದು ಆಗ್ರಹಿಸಿದರು.‘ಕುಲವಾಡಿಕೆ ಮಾಡಿಲ್ಲ, ಸತ್ತ ದನ ಹಾಗೂ ಇತರ ಪ್ರಾಣಿಗಳನ್ನು ಹೊರಹಾಕಲು ನಿರಾಕರಿಸಿದ್ದ ಕಾರಣಕ್ಕೆ ಕಳೆದ ದೀಪಾವಳಿ ಸಂದರ್ಭದಲ್ಲಿ ಗ್ರಾಮದ ದಲಿತ ಕುಟುಂಬಗಳನ್ನು ಬಹಿಷ್ಕರಿಸಲಾಗಿತ್ತು. ದಲಿತ ಬಸವರಾಜು ಅವರು ಮನೆ ಕಟ್ಟಲು ತಂದಿಟ್ಟಿದ್ದ ಸೈಜುಗಲ್ಲು ಹಾಗೂ ಇಟ್ಟಿಗೆಗಳನ್ನು ಗ್ರಾಮಸ್ಥರು ವಶಪಡಿಸಿಕೊಂಡಿದ್ದರು. ಕೇಳಲು ಹೋದರೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.‘ಈಚೆಗೆ ದಲಿತರಿಗೆ ದೇವಸ್ಥಾನ ಪ್ರವೇಶವನ್ನೂ ನಿರಾಕರಿಸಲಾಗಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಹೋದರೆ ಅಡ್ಡಿಪಡಿಸಲಾಗುತ್ತಿದೆ. ನ್ಯಾಯಬೆಲೆ ಅಂಗಡಿಯಲ್ಲೂ ದವಸ ಧಾನ್ಯ ನೀಡುತ್ತಿಲ್ಲ. ಊರವರು ಯಾರಾದರೂ ದಲಿತರೊಡನೆ ಮಾತನಾಡಿದರೆ ಅಥವಾ ಸಹಾಯ ಮಾಡಿದರೆ ಅವರಿಗೆ ದಂಡ ವಿಧಿಸಲಾಗುತ್ತಿದೆ. ಯುಗಾದಿ ದಿನದಂದು ಮುಜರಾಯಿ ಇಲಾಖೆಗೆ ಸೇರಿದ ಬಸವೇಶ್ವರ ದೇವರ ಮೆರವಣಿಗೆಯಲ್ಲಿ ಭಾಗವಹಿಸಲು ಬಿಡಲಿಲ್ಲ. ಅವರು ಪೂಜೆಗಾಗಿ ತಂದಿದ್ದ ಸಾಮಗ್ರಿಯನ್ನು ಪಡೆಯದೆಯೇ ಅವರನ್ನು ಅವಮಾನಿಸಲಾಯಿತು ಎಂದು ಪ್ರತಿಭಟನಾಕಾರರು ತಿಳಿಸಿದರು.ವಿಷಯ ತಿಳಿದು ಸಿಪಿಐ (ಎಂ)ನ ಕೆಲವು ಸದಸ್ಯರು ಊರಿಗೆ ಹೋಗಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ವಾತಾವರಣ ಬಿಗುವಿನಿಂದ ಕೂಡಿರುವುದನ್ನು ನೋಡಿ ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾದರು. ಆದರೆ ಪೊಲೀಸರು ದೂರು ದಾಖಲಿಸದೆ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದಾರೆ. ಈ ವಿಚಾರವಾಗಿ ಅರಕಲಗೂಡು ತಹಸೀಲ್ದಾರರಿಗೂ ಮನವಿ ಸಲ್ಲಿಸಲಾಗಿದೆ ಎಂದು ಸಿಪಿಐ (ಎಂ) ಕಾರ್ಯದರ್ಶಿ ಧರ್ಮೇಶ್ ತಿಳಿಸಿದರು.ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹೇರಿದವರ ವಿರುದ್ಧ ದೌರ್ಜನ್ಯ ವಿರೋಧಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ಬಂಧಿಸಬೇಕು, ದಲಿತ ಕುಟುಂಬದವರಿಗೆ ಜೀವಭಯವಿದ್ದು, ಅವರಿಗೆ ಸೂಕ್ತ ರಕ್ಷಣೆ ಒದ–ಗಿಸಬೇಕು, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಬೇಕು, ದೂರು ದಾಖಲಿಸಲು ನಿರಾಕರಿಸಿದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಬೇಕು, ಪರಿಶಿಷ್ಟ ಜಾತಿ/ಪಂಗಡ ಜಾಗೃತಿ ಸಭೆ, ಕುಂದು ಕೊರತೆ ಸಭೆಗಳಿಗೆ ಜಾತಿ ದೌರ್ಜನ್ಯ ವಿರೋಧಿ ಸಮಿತಿಗೂ ಆಹ್ವಾನ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಧರ್ಮೇಶ್, ಪೃಥ್ವಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry