ಸಿಪಿಐನಿಂದ 24 ಗಂಟೆ ಉಪವಾಸ ಸತ್ಯಾಗ್ರಹ

7

ಸಿಪಿಐನಿಂದ 24 ಗಂಟೆ ಉಪವಾಸ ಸತ್ಯಾಗ್ರಹ

Published:
Updated:

ನವದೆಹಲಿ (ಪಿಟಿಐ): ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಲೋಕಪಾಲ ಮಸೂದೆಯ ಅಂಗೀಕಾರ ಮತ್ತು ಬೆಲೆ ಏರಿಕೆ ನಿಯಂತ್ರಣಕ್ಕೆ ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಪಿಐ ಪ್ರಧಾನ ಕಾರ್ಯದರ್ಶಿ ಎ.ಬಿ.ಬರ್ಧನ್ ಮತ್ತು ಪಕ್ಷದ ಹಿರಿಯ ಮುಖಂಡರು ನವದೆಹಲಿಯಲ್ಲಿ 24 ಗಂಟೆಗಳ ಉಪವಾಸ ಸತ್ಯಾಗ್ರಹವನ್ನು ಶುಕ್ರವಾರ ಆರಂಭಿಸಿದರು.ನವದೆಹಲಿಯ ಜಂತರ್ ಮಂತರ್‌ನಲ್ಲಿ ಆಯೋಜಿಸಲಾಗಿದ್ದ ಉಪವಾಸ ಸತ್ಯಾಗ್ರಹದಲ್ಲಿ ಎ.ಬಿ.ಬರ್ಧನ್, ಅಮರ್‌ಜೀತ್ ಕೌರ್ ಮತ್ತು ಅತುಲ್ ಕುಮಾರ್ ಸೇರಿದಂತೆ ಸಿಪಿಐನ ಮುಖಂಡರು ಪಾಲ್ಗೊಂಡಿದ್ದರು.

ಹಲವು ಪ್ರತಿಭಟನಾ ವಿಧಾನಗಳಲ್ಲಿ ಉಪವಾಸ ಸತ್ಯಾಗ್ರಹವೂ ಒಂದು ಎಂದಿರುವ ಸಿಪಿಐ ಮುಖಂಡರು ತಮ್ಮ ಸತ್ಯಾಗ್ರಹ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.ಕಾರ್ಯಕ್ರಮದಲ್ಲಿ ಸೇರಿದ್ದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಬರ್ಧನ್, `ಕೇವಲ ಲೋಕಪಾಲ ಮಸೂದೆಯಿಂದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಿಲ್ಲ. ಆದರೆ ಸಂಬಂಧಿಸಿದವರನ್ನು ಹೊಣೆಗಾರರನ್ನಾಗಿಸಲು ಮಸೂದೆ ನೆರವಾಗಲಿದೆ~ ಎಂದು ಹೇಳಿದರು.ಮುಂಬರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಲೋಕಪಾಲ ಮಸೂದೆಯನ್ನು ಸರ್ಕಾರ ಅಂಗೀಕರಿಸಬೇಕು ಎಂದು ಅವರು ಆಗ್ರಹಿಸಿದರು.ಮಸೂದೆಯನ್ನು ಅಂಗೀಕರಿಸಬೇಕು ಎಂಬ ಕೇಂದ್ರ ಸರ್ಕಾರದ ಉದ್ದೇಶ ಪ್ರಾಮಾಣಿಕವಾಗಿದೆಯೇ ಎಂದು ಎಂಬ ಪ್ರಶ್ನೆಗೆ ಉತ್ತರಿಸಿದ ಬರ್ಧನ್, ಕಳೆದ 42 ವರ್ಷಗಳಲ್ಲಿ ಆ ರೀತಿ ಕಂಡು ಬಂದಿಲ್ಲ~ ಎಂದರು.`ಆದರೆ, ಈಗ ಅಣ್ಣಾ ಹಜಾರೆ ಅವರ ಪ್ರತಿಭಟನೆಯಿಂದ ಸರ್ಕಾರ ಕೆಲವು ಪಾಠಗಳನ್ನು ಕಲಿತಿರುವಂತಿದೆ~ ಎಂದು ಹೇಳಿದರು.`ಸಂಸತ್ ಅಧಿವೇಶನ ಸುಗಮವಾಗಿ ನಡೆಯಬೇಕಾದರೆ ಸರ್ಕಾರ ಮಸೂದೆಯನ್ನು ಅಂಗೀಕರಿಸಲೇ ಬೇಕು~ ಎಂದು ಬರ್ಧನ್ ತಿಳಿಸಿದರು.`ಬಿಲ್‌ಗಳನ್ನು ಸೃಷ್ಟಿಸುವ ಚಾಳಿ ನಮಗಿಲ್ಲ~

ಹೊಸ ವಿವಾದದಲ್ಲಿ ಸಿಲುಕಿರುವ ಅಣ್ಣಾ ತಂಡದ ಸದಸ್ಯೆ ಕಿರಣ್ ಬೇಡಿ ಅವರನ್ನು ಟೀಕಿಸಿರುವ ಎ.ಬಿ. ಬರ್ಧನ್, ಭ್ರಷ್ಟಾಚಾರದಲ್ಲಿ ಮುಳುಗಿರುವವರೇ ತಮ್ಮನ್ನು ತಾವೇ ಸಮರ್ಥಿಸಿಕೊಂಡರೆ ಮುಂದೆ ಏನಾಗಬಹುದು ಎಂದು ಪ್ರಶ್ನಿಸಿದ್ದಾರೆ.ಈ ವಿವಾದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬರ್ಧನ್, `ಅವರನ್ನೇ ಕೇಳಿ.. ಅವರೇ ಅಧಿಕ ಮೊತ್ತದ ಬಿಲ್‌ಗಳನ್ನು ಸೃಷ್ಟಿಸಿರುವುದು. ನಮಗೆ ಅಂತಹ ಚಾಳಿಗಳಿಲ್ಲ~ ಎಂದು ಹೇಳಿದರು.ತಮ್ಮ ಪ್ರಯಾಣ ವೆಚ್ಚವನ್ನು ಹೆಚ್ಚಿಸುವ ಮೂಲಕ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರು ಕಂಪೆನಿಗಳಿಗೆ ಮತ್ತು ಸಂಘ ಸಂಸ್ಥೆಗಳಿಂದ ಹೆಚ್ಚಿನ ಹಣವನ್ನು ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜೊತೆಗೆ ತಮಗೆ ದೊರೆತ ಶೌರ್ಯ ಪದಕವನ್ನು ಬಳಸಿಕೊಂಡು ಅವರು ರಿಯಾಯಿತಿ ಪಡೆಯುತ್ತಿದ್ದಾರೆ ಎಂದೂ ಆರೋಪಿಸಲಾಗಿದೆ.ಆದರೆ ಈ ಆರೋಪಗಳನ್ನು ತಳ್ಳಿ ಹಾಕಿರುವ ಬೇಡಿ, ತಮ್ಮನ್ನು ಸಮರ್ಥಿಸಿಕೊಂಡಿದ್ದರು. ಆ ಹಣವು ತಾವು ನಡೆಸುತ್ತಿರುವ ಇಂಡಿಯಾ ವಿಷನ್ ಫೌಂಡೇಶನ್‌ಗೆ ಹೋಗಿದ್ದು, ಅದನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡಿಲ್ಲ ಎಂದು ಹೇಳಿದ್ದರು.

 

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry