ಬುಧವಾರ, ಆಗಸ್ಟ್ 21, 2019
25 °C
ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಪ್ರಮಾಣಪತ್ರ ಸಲ್ಲಿಕೆ

ಸಿಬಿಐಗೆ ಪರಮಾಧಿಕಾರ ಬೇಡ

Published:
Updated:

ನವದೆಹಲಿ:  ಸಿಬಿಐ ನಿರ್ದೇಶಕರಿಗೆ ಯಾವುದೇ ನಿಯಂತ್ರಣವಿಲ್ಲದೆ ಸಂಪೂರ್ಣ ಅಧಿಕಾರ ನೀಡುವುದು ಅಪಾಯಕಾರಿಯಾಗಿದ್ದು, ಅದರಿಂದ ಸ್ಥಾನ ದುರುಪಯೋಗವಾಗುವ ಸಾಧ್ಯತೆ ಇದೆ' ಎಂದು ಸರ್ಕಾರ ಎಚ್ಚರಿಸಿದೆ. ತನಿಖಾ ಸಂಸ್ಥೆಗೆ ತನ್ನ ಕಾರ್ಯನಿರ್ವಹಣೆಯಲ್ಲಿ ಪರಮಾಧಿಕಾರ ನೀಡುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿರುವ ಸರ್ಕಾರವು ಈ ಎಚ್ಚರಿಕೆಯನ್ನು ನೀಡಿದೆ.`ಸಿಬಿಐ ಮುಖ್ಯಸ್ಥರಿಗೆ ಯಾವುದೇ ಅಡೆತಡೆ ಮತ್ತು ಸಮತೋಲನವಿಲ್ಲದೆ ಎಲ್ಲ ಅಧಿಕಾರಗಳನ್ನು ನೀಡುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದು' ಎಂದು ಸರ್ಕಾರ ತನ್ನ 22 ಪುಟಗಳ ಪ್ರಮಾಣಪತ್ರದಲ್ಲಿ ಹೇಳಿದೆ.ಸಿಬಿಐ ನಿರ್ದೇಶಕರು ನಿವೃತ್ತಿಯ ನಂತರ ಯಾವುದೇ ಹುದ್ದೆ ವಹಿಸಿಕೊಳ್ಳುವುದನ್ನು ನಿಷೇಧಿಸುವ ಪ್ರಸ್ತಾವವನ್ನು ಪರಿಶೀಲಿಸಲು ಸರ್ಕಾರ ಆಸಕ್ತಿ ಆಸಕ್ತಿ ತೋರಿದೆ. ಆದರೆ ತನ್ನ ನಿರ್ದೇಶಕರ ಅಧಿಕಾರಾವಧಿಯನ್ನು ಎರಡು ವರ್ಷಗಳಿಂದ ಕನಿಷ್ಟ ಮೂರು ವರ್ಷಗಳವರೆಗೆ ವಿಸ್ತರಿಸಬೇಕೆಂಬ ಸಿಬಿಐ ಮನವಿಯನ್ನು ತಿರಸ್ಕರಿಸಿದೆ.ತನಿಖಾ ಆಯೋಗದ ನಿಯಂತ್ರಣ ಮತ್ತು ನಿರ್ವಹಣೆಗೆ ನ್ಯಾಯಾಂಗದ ಸದಸ್ಯರು ಮತ್ತು ಮುಖ್ಯ ಜಾಗೃತ ಆಯುಕ್ತರನ್ನು (ಸಿವಿಸಿ) ಒಳಗೊಂಡ ಕಾರ್ಯಬದ್ಧತಾ ಆಯೋಗವೊಂದನ್ನು ರಚಿಸುವುದಕ್ಕೆ ಸಿಬಿಐ ವ್ಯಕ್ತಪಡಿಸಿದ್ದ ವಿರೋಧವನ್ನು ಕೇಂದ್ರ ತಳ್ಳಿಹಾಕಿದೆ. `ಸಿಬಿಐ ನಿಯಂತ್ರಣ ಮತ್ತು ನಿರ್ವಹಣೆಗೆ ಬಾಹ್ಯ, ಸ್ವತಂತ್ರ ಹಾಗೂ ಪ್ರಬಲ ಕಾವಲುಪಡೆ ಅತ್ಯಗತ್ಯ' ಎಂದೂ ಸರ್ಕಾರ ತಿಳಿಸಿದೆ.ಹಿರಿಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಧಿಕಾರವನ್ನು ಸಿವಿಸಿ ನೇತೃತ್ವದ ಸ್ವತಂತ್ರ ಸಮಿತಿಗೆ ವಹಿಸಬೇಕೆಂಬ ಸಿಬಿಐ ಮನವಿ ಬಗ್ಗೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸಹ ಕಠಿಣ ನಿಲುವು ತಾಳಿದ್ದು, ಅಂತಹ ಅಧಿಕಾರವನ್ನು ತಾನೇ ಉಳಿಸಿಕೊಳ್ಳುವುದಾಗಿ ಸ್ಪಷ್ಟಪಡಿಸಿದೆ.

ರಾಜಕೀಯ ಕಾರ್ಯನಿರ್ವಾಹಕರು ಮತ್ತು ಬಾಹ್ಯ ಪ್ರಭಾವಗಳಿಂದ ಹಸ್ತಕ್ಷೇಪ ನಡೆಯುವುದನ್ನು ತಪ್ಪಿಸಲು `ಪಂಜರದೊಳಗಿನ ಗಿಳಿ' ಆಗಿರುವ ಸಿಬಿಐಯನ್ನು ಪತ್ಯೇಕಿಸಿ ಸ್ವತಂತ್ರಗೊಳಿಸುವ ಇರಾದೆಯನ್ನು ಸರ್ಕಾರ ವ್ಯಕ್ತಪಡಿಸಿದೆ.ಪ್ರಮಾಣಪತ್ರದ ಮುಖ್ಯಾಂಶಗಳು

*ಪ್ರಧಾನಿ, ಲೋಕಸಭೆ ಪ್ರತಿಪಕ್ಷ ನಾಯಕರು, ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿ ಸಿಬಿಐ ನಿರ್ದೇಶಕರನ್ನು ನೇಮಿಸಲಿದೆ. ಹೊಸ ಲೋಕಪಾಲ ಮಸೂದೆಯನ್ವಯ     ಅಧಿಕಾರದಿಂದ ನಿರ್ಗಮಿಸುವ ಸಿಬಿಐ ನಿರ್ದೇಶಕರೊಡನೆ ಸಮಾಲೋಚಿಸುವ ಅವಶ್ಯಕತೆ ಇಲ್ಲ.

*ವಿನೀತ್ ನಾರಾಯಣ್ ತೀರ್ಪಿನಲ್ಲಿ        ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದಂತೆ ಸಿಬಿಐ ನಿರ್ದೇಶಕರಿಗೆ ಎರಡು ವರ್ಷಗಳ ಅಧಿಕಾರಾವಧಿ ಮಾತ್ರ ಇದ್ದು, ಕನಿಷ್ಟ ಮೂರು ವರ್ಷಗಳವರೆಗೆ ವಿಸ್ತರಿಸುವ ಅಗತ್ಯವಿಲ್ಲ.  *ಸಿಬಿಐ ನಿರ್ದೇಶಕರಿಗೆ ನಿವೃತ್ತಿಯ ನಂತರ ಯಾವುದೇ ಜವಾಬ್ದಾರಿಯುತ ಉದ್ಯೋಗ ಸ್ಥಾನಮಾನ ನೀಡುವುದನ್ನು ನಿಷೇಧಿಸುವ ಪ್ರಸ್ತಾವವನ್ನು ಸರ್ಕಾರ ಪರಿಗಣಿಸಬಹುದು.

*ಸಿಬಿಐ ನಿರ್ದೇಶಕರಿಗೆ `ಗ್ರೂಪ್ ಎ' ಅಧಿಕಾರಿಗಳ ಮೇಲೆ ಸಂಪೂರ್ಣ ಶಿಸ್ತುಬದ್ಧ ನಿಯಂತ್ರಣ   ಕಲ್ಪಿಸುವುದು ಆಡಳಿತಾತ್ಮಕ ತತ್ವಗಳಿಗೆ ವಿರುದ್ಧ  ವಾದುದು.*ಸಿಬಿಐ ನಿರ್ದೇಶಕರಿಗೆ ಎಲ್ಲ ಅಧಿಕಾರಿಗಳನ್ನು ವಹಿಸುವುದು ಆಡಳಿತಾತ್ಮಕ ಸಿದ್ಧಾಂತಗಳಿಗೆ ವಿರುದ್ಧವಾದುದು.

*ಜಂಟಿ ಕಾರ್ಯದರ್ಶಿ ಮತ್ತು ಅದಕ್ಕೂ ಮೇಲ್ಪಟ್ಟ ದರ್ಜೆಯ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಲು ಯಾವುದೇ ಸ್ವತಂತ್ರ ಸಮಿತಿಯ ಅಗತ್ಯವಿಲ್ಲ.

*ಸಿಬಿಐ ಅಧಿಕಾರಿಗಳ ಅನುಚಿತ ವರ್ತನೆ, ಅಸಭ್ಯತೆ ಮತ್ತಿತರ ನಡವಳಿಕೆಯ ಆರೋಪಗಳ ಬಗ್ಗೆ ಸಿವಿಸಿ ಮತ್ತು ನ್ಯಾಯಾಂಗ ಸದಸ್ಯರನ್ನು ಒಳಗೊಂಡ ಕಾರ್ಯಬದ್ಧತಾ ಆಯೋಗ ತನಿಖೆ ನಡೆಸುವುದು.

*ಸಂಸ್ಥೆಯೊಳಗೆ ಶಿಸ್ತಿನೊಂದಿಗೆ ರಾಜಿ ಮಾಡಿಕೊಳ್ಳುವುದು ದೊಷಪೂರಿತ ಎಂದು ಸಿಬಿಐ ಪರಿಗಣಿಸಲಿದೆ.

Post Comments (+)