ಸಿಬಿಐಗೆ ವಹಿಸಲು ಹೈಕೋರ್ಟ್ ಇಂಗಿತ

ಗುರುವಾರ , ಜೂಲೈ 18, 2019
24 °C

ಸಿಬಿಐಗೆ ವಹಿಸಲು ಹೈಕೋರ್ಟ್ ಇಂಗಿತ

Published:
Updated:

ಬೆಂಗಳೂರು: ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕ ಸೇವಾ ಆಯೋಗವು 1998, 1999 ಹಾಗೂ 2004ರಲ್ಲಿ ನಡೆಸಿರುವ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳುತ್ತಿರುವ ಸಿಐಡಿ, ಈ ಕುರಿತು ಸ್ಪಷ್ಟ ಚಿತ್ರಣ ನೀಡದ ಕ್ರಮಕ್ಕೆ ಹೈಕೋರ್ಟ್ ಮಂಗಳವಾರ ಕಿಡಿ ಕಾರಿತು.`ಜಾತಿ ಪ್ರಮಾಣ ಪತ್ರದಲ್ಲಿ ಅವ್ಯವಹಾರ ನಡೆದಿದೆ, ಅವ್ಯವಹಾರ ಮೇಲ್ನೋಟಕ್ಕೆ ಸಾಬೀತಾಗಿದೆ ಇತ್ಯಾದಿಯಾಗಿ ಮಾತ್ರ ಸಿಐಡಿ ವರದಿ ನೀಡಿದೆ. ಇದನ್ನು ಗಮನಿಸಿದರೆ ಸರ್ಕಾರಕ್ಕೆ ಈ ಅವ್ಯವಹಾರದ ತನಿಖೆ ನಡೆಸಲು ಮನಸ್ಸು ಇದ್ದಂತೆ ತೋರುತ್ತಿಲ್ಲ. ಇದರಿಂದ ಇದನ್ನು ಸಿಬಿಐಗೆ ವಹಿಸಿಕೊಡುವುದೇ ಯೋಗ್ಯ ಎನಿಸುತ್ತಿದೆ~ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಹೇಳಿತು.`ನೇಮಕಾತಿಯಲ್ಲಿ ಭ್ರಷ್ಟಾಚಾರ, ಅವ್ಯವಹಾರ, ಸ್ವಜನಪಕ್ಷಪಾತ ನಡೆದಿರುವುದು ಮೇಲ್ನೋಟಕ್ಕೆ ಸಾಬೀತು ಆಗಿದೆ. ಈ ಅವ್ಯವಹಾರದಲ್ಲಿ ಆಯೋಗದ ಅಧಿಕಾರಿ ಹಾಗೂ ಅಧಿಕಾರೇತರ ವರ್ಗದವರು ಶಾಮೀಲಾಗಿರುವ ಸಾಧ್ಯತೆಗಳು ಇವೆ. ಸಂದರ್ಶನ ವೇಳೆ ಈ ಅವ್ಯವಹಾರ ನಡೆದಿರಬಹುದು. ಆದರೆ ಈ ಬಗ್ಗೆ ಇನ್ನೂ ನಿಖರವಾಗಿ ಯಾವುದೇ ತೀರ್ಮಾನಕ್ಕೆ ಬಂದಿಲ್ಲ~ ಎಂದು ಸಿಐಡಿಯ ಡಿಐಜಿ ಬಿ.ಎ. ಪದ್ಮನಯನ ಅವರು ಕೋರ್ಟ್‌ಗೆ ನೀಡಿರುವ ವರದಿಯಲ್ಲಿ ತಿಳಿಸಿದ್ದರು. ಆದರೆ ಯಾವುದೇ ನಿಖರ ಚಿತ್ರಣ ನೀಡದೆ ಇರುವುದು ಪೀಠದ ಅಸಮಾಧಾನಕ್ಕೆ ಕಾರಣವಾಯಿತು.`ಇಂತಹ ಅವ್ಯವಹಾರಗಳ ತನಿಖೆಯನ್ನು ಕೋರ್ಟ್ ಸಿಐಡಿಗೆ ವಹಿಸಿದರೆ ಈ ರೀತಿ ಬೇಜವಾಬ್ದಾರಿ ತೋರಿಸುವುದು ಸರಿಯಲ್ಲ. ಯಾವುದೇ ತನಿಖೆಯಾದರೂ ಅದನ್ನು ಪೂರ್ಣಗೊಳಿಸಬೇಕು. ಈ ಕ್ರಮ ನಮಗೆ ಬಹಳ ವಿಷಾದ ಎನಿಸುತ್ತಿದೆ~ ಎಂದು ಪೀಠ ಹೇಳಿತು.ವೇಳೆಯ ಕೊರತೆಯಿಂದ ತನಿಖೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಸರ್ಕಾರದ ಪರ ವಕೀಲರು ಹೇಳಿದರು. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಮುಂದುವರಿಸುವ ಆಸಕ್ತಿ ಸರ್ಕಾರಕ್ಕೆ ಇದೆಯೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದ ಪೀಠ ವಿಚಾರಣೆಯನ್ನು ಮುಂದೂಡಿತು.ಆಶಾ ಪರ್ವೀನ್ ಮನವಿ: ಈ ಮಧ್ಯೆ, ಕೆಎಎಸ್ ಅಧಿಕಾರಿ ಆಶಾ ಪರ್ವೀನ್ ಈ ಅರ್ಜಿ ಯಲ್ಲಿ ಪ್ರತಿವಾದಿಯನ್ನಾಗಿಸಲು ಮನವಿ ಸಲ್ಲಿಸಿದ್ದಾರೆ. ತಮ್ಮ ವಿರುದ್ಧ ವೃಥಾ ಆರೋಪ ಮಾಡಲಾಗಿದೆ ಎಂದು ಅರ್ಜಿಯಲ್ಲಿ ದೂರಿದ್ದಾರೆ. `ಆಶಾ ಅವರು `2ಬಿ~ ಗುಂಪಿನಡಿ ನೇಮಕಗೊಂಡಿದ್ದರು.ಆದರೆ ಇವರಿಗೆ `2ಬಿ~ ಜಾತಿ ಪ್ರಮಾಣ ಪತ್ರ ತಾವು ನೀಡಿಯೇ ಇಲ್ಲ ಎಂದು ಅಂದಿನ ತಹಶೀಲ್ದಾರರು ತನಿಖೆ ವೇಳೆ ತಿಳಿಸಿದ್ದಾರೆ~ ಎಂದು ಸಿಐಡಿ ವರದಿ ನೀಡಿತ್ತು. ಇದನ್ನು ಆಶಾ ಅರ್ಜಿಯಲ್ಲಿ ಅಲ್ಲಗಳೆದಿದ್ದಾರೆ.`ವಿನಾಕಾರಣ ನನ್ನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಕೋರ್ಟ್ ಅನುಮತಿ ಕೇಳಲಾಗುತ್ತಿದೆ~ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry