ಸಿಬಿಐನಿಂದ ಇಂದು ಕೆಂಪಯ್ಯ, ಓಂಪ್ರಕಾಶ್ ವಿಚಾರಣೆ

ಬೆಂಗಳೂರು: ರಾಜ್ಯದೆಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿರುವ ಒಂದಂಕಿ ಲಾಟರಿ ಹಗರಣದಲ್ಲಿ ಇದೀಗ ಡಿಜಿಪಿ ಓಂಪ್ರಕಾಶ್ ಹೆಸರು ಕೇಳಿ ಬಂದಿದ್ದು, ಈ ಸಂಬಂಧ ಅವರು ಶುಕ್ರವಾರ ಸಿಬಿಐ ವಿಚಾರಣೆ ಎದುರಿಸಲಿದ್ದಾರೆ. ಇದೇ ವೇಳೆ ತನಿಖಾ ತಂಡವು, ಗೃಹಸಚಿವರ ಸಲಹೆಗಾರ ಕೆಂಪಯ್ಯ ಅವರ ಹೇಳಿಕೆಯನ್ನೂ ದಾಖಲು ಮಾಡಿಕೊಳ್ಳಲಿದೆ.
‘ಪ್ರಕರಣದ ಆರೋಪ ಹೊತ್ತಿರುವ ಕೆಲ ಅಧಿಕಾರಿಗಳು, ವಿಚಾರಣೆ ವೇಳೆ ಈ ಇಬ್ಬರ ಹೆಸರುಗಳನ್ನು ಹೇಳಿದ್ದಾರೆ. ಹೀಗಾಗಿ, ದೆಹಲಿಯ ಕೇಂದ್ರ ಕಚೇರಿಗೆ ಬಂದು ಹೇಳಿಕೆ ನೀಡುವಂತೆ ಕೆಂಪಯ್ಯ ಹಾಗೂ ಓಂಪ್ರಕಾಶ್ ಅವರಿಗೆ ನೋಟಿಸ್ ನೀಡಲಾಗಿದೆ. ಶುಕ್ರವಾರ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ’ ಎಂದು ಸಿಬಿಐ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರಕರಣದ ಕಿಂಗ್ಪಿನ್ ಪಾರಿ ರಾಜನ್ ಜತೆ ಸಂಪರ್ಕ ಹೊಂದಿದ್ದ ಆರೋಪದಡಿ ಎಡಿಜಿಪಿ ಸುನೀಲ್ ಕುಮಾರ್, ಐಜಿಪಿಗಳಾದ ಅಲೋಕ್ ಕುಮಾರ್, ಪಿ.ಹರಿಶೇಖರನ್, ಅರುಣ್ ಚಕ್ರವರ್ತಿ, ಪದ್ಮನಯನ, ಡಿಸಿಪಿ ಸತೀಶ್ಕುಮಾರ್, ಧರಣೇಶ್ ಸೇರಿದಂತೆ 35ಕ್ಕೂ ಹೆಚ್ಚು ಅಧಿಕಾರಿಗಳನ್ನು ವಿಚಾರಣೆ ನಡೆಸಲಾಯಿತು. ಈ ವೇಳೆ ಓಂಪ್ರಕಾಶ್ ಹಾಗೂ ಕೆಂಪಯ್ಯ ಅವರ ಹೆಸರುಗಳೂ ಕೇಳಿ ಬಂದವು’ ಎಂದು ಮಾಹಿತಿ ನೀಡಿದರು.
ಐಜಿಪಿಗೆ ಬೈದಿದ್ದೇಕೆ?: ‘ಕೆಂಪಯ್ಯ ಅವರ ಸೂಚನೆಯಂತೆ 2015ರ ಏಪ್ರಿಲ್ 30ರಂದು ನನ್ನನ್ನು ಕಚೇರಿಗೆ ಕರೆಸಿಕೊಂಡಿದ್ದ ಡಿಜಿಪಿ, ಲಾಟರಿ ಹಗರಣದ ವಿಚಾರವಾಗಿ ಬೈದಿದ್ದರು. ಅಲ್ಲದೆ, ಪಾರಿರಾಜನ್ ವಿರುದ್ಧ ತಕ್ಷಣ ಎಫ್ಐಆರ್ ಮಾಡುವಂತೆ ಸೂಚಿಸಿದ್ದರು. ಇಷ್ಟು ದಿನ ಸುಮ್ಮನಿದ್ದ ಅವರು, ಕೆಂಪಯ್ಯ ಹೇಳಿದ ಬಳಿಕ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಅಚ್ಚರಿಯಾಗಿತ್ತು’ ಎಂದು ಐಜಿಪಿ ದರ್ಜೆಯ ಅಧಿಕಾರಿಯೊಬ್ಬರು ಹೇಳಿಕೆ ಕೊಟ್ಟಿದ್ದಾಗಿ ಸಿಬಿಐ ಮೂಲಗಳು ತಿಳಿಸಿವೆ.
‘ವಿನಾ ಕಾರಣ ಐಜಿಪಿಗೆ ಬೈದಿದ್ದೇಕೆ? ಪಾರಿ ರಾಜನ್ ಜತೆ ಮಾತುಕತೆ ನಡೆಸಿರುವ ಉದ್ದೇಶವೇನು? ಆತ ಲಾಟರಿ ದಂಧೆಯಲ್ಲಿ ತೊಡಗಿರುವ ವಿಷಯ ಗೊತ್ತಿರಲಿಲ್ಲವೇ? ಎಂಬುದೂ ಸೇರಿದಂತೆ ಹಲವು ಪ್ರಶ್ನೆಗಳಿಗೆ ಓಂಪ್ರಕಾಶ್ ಅವರಿಂದ ಉತ್ತರ ಪಡೆಯಬೇಕಿದೆ’ ಎಂದು ಮೂಲಗಳು ಹೇಳಿವೆ.
ವಿಜಯನಗರದಲ್ಲಿ ವಿಚಾರಣೆ: ‘ಲಾಟರಿ ಹಗರಣದ ಬೆಳವಣಿಗೆಗಳು ನಡೆದಾಗ ಈಗಿನ ನಗರ ಪೊಲೀಸ್ ಕಮಿಷನರ್ ಎನ್.ಎಸ್.ಮೇಘರಿಕ್ ಅವರು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಗಿದ್ದರು. ಹೀಗಾಗಿ, ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆಯುತ್ತಿದ್ದ ಎಲ್ಲ ವಿದ್ಯಮಾನಗಳು ಅವರಿಗೆ ಗೊತ್ತಿದ್ದವು.’
‘ಈ ಕಾರಣಕ್ಕೆ ಸಿಬಿಐ ತನಿಖಾ ತಂಡದಲ್ಲಿ ಅವರನ್ನೂ ತನಿಖಾಧಿಕಾರಿ ಯಾಗಿ ಬಳಸಿಕೊಳ್ಳಲಾಗಿದೆ. ಆರೋಪ ಎದುರಿಸುತ್ತಿರುವ ಕೆಲ ಪೊಲೀಸರನ್ನು ಕಳೆದ ತಿಂಗಳು ವಿಜಯನಗರ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರತಿಕ್ರಿಯೆ ಪಡೆಯಲು ಹಲವು ಬಾರಿ ಕರೆ ಮಾಡಿದರೂ, ಕೆಂಪಯ್ಯ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಆದರೆ, ಪ್ರಕರಣ ಸಂಬಂಧ ಹೇಳಿಕೆ ನೀಡಲು ಅವರು ದೆಹಲಿಗೆ ತೆರಳುತ್ತಿರುವುದನ್ನು ಗೃಹಕಚೇರಿ ಸಿಬ್ಬಂದಿ ಖಚಿತಪಡಿಸಿದರು.
*
ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಕೆಲ ಮಾಹಿತಿ ಕೇಳಿದ್ದಾರೆ. ಹೀಗಾಗಿ ಶುಕ್ರವಾರ (ಆಗಸ್ಟ್ 5) ದೆಹಲಿಗೆ ತೆರಳಿ ಹೇಳಿಕೆ ನೀಡಿ ಬರುತ್ತೇನೆ.
ಓಂಪ್ರಕಾಶ್,
ಡಿಜಿಪಿ
*
ವಿಚಾರಣೆ ಏಕೆ?
‘ಅಕ್ರಮದಲ್ಲಿ ಭಾಗಿಯಾಗಿದ್ದ ಕೆಲವು ಅಧಿಕಾರಿಗಳನ್ನು ಕೆಂಪಯ್ಯ ರಕ್ಷಿಸಲು ಯತ್ನಿಸಿದ್ದರು ಎಂದು ವಿಚಾರಣೆ ವೇಳೆ ಐಜಿಪಿಯೊಬ್ಬರು ಹೇಳಿದ್ದಾರೆ. ಅದರ ಬಗ್ಗೆ ವಿವರಣೆ ಕೇಳಬೇಕಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.