ಭಾನುವಾರ, ಮೇ 16, 2021
24 °C

ಸಿಬಿಐ ತನಿಖೆಗೆ ಸುಪ್ರೀಂ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕದ ಬಳ್ಳಾರಿ ಹಾಗೂ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಗಳಲ್ಲಿನ ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೆ ಇರುವ ಸಂಬಂಧವನ್ನು ತನಿಖೆಗೆ ಒಳಪಡಿಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಸಿಬಿಐಗೆ ನಿರ್ದೇಶನ ನೀಡಿದೆ.ಈ ಮೂಲಕ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಕೊರಳನ್ನು ಸುತ್ತಿಕೊಂಡಿರುವ ಗಣಿ ಉರುಳು ಇನ್ನಷ್ಟು ಬಿಗಿಯಾಗಿದೆ.

 

500ಕ್ಕೂ ಹೆಚ್ಚು ಅಧಿಕಾರಿಗಳಿಗೆ ನೋಟಿಸ್

ಬೆಂಗಳೂರು: ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಹೆಸರು ಮತ್ತು ಹುದ್ದೆ ಬಗ್ಗೆ ಉಲ್ಲೇಖ ಇರುವ ಹಲವು ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳು ಸೇರಿದಂತೆ ಇತರ ಇಲಾಖೆಗಳ 500ಕ್ಕೂ ಹೆಚ್ಚು ಅಧಿಕಾರಿಗಳಿಗೆ ಸರ್ಕಾರ ನೋಟಿಸ್ ಜಾರಿ ಮಾಡಿದೆ.ಬಳ್ಳಾರಿಯ ಎರಡು ಗಣಿ ಕಂಪೆನಿಗಳ ವ್ಯವಹಾರಗಳ ಕುರಿತು ಸಿಬಿಐ ತನಿಖೆಗೆ ವಹಿಸಿದ ಬೆನ್ನಲ್ಲೇ ಅಕ್ರಮ ಗಣಿಗಾರಿಕೆಗೆ ಪರೋಕ್ಷ ಸಹಕಾರ ನೀಡುತ್ತಿದ್ದರೆನ್ನಲಾದ ಅಧಿಕಾರಿಗಳ ವಿರುದ್ಧ ಸರ್ಕಾರ ಚಾಟಿ ಬೀಸಿದೆ.ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ನೇತೃತ್ವದ ಸಮಿತಿ ಸತತವಾಗಿ ಲೋಕಾಯುಕ್ತ ವರದಿಯನ್ನು ಪರಿಶೀಲಿಸುತ್ತಿದ್ದು, ಅದರಲ್ಲಿ ಉಲ್ಲೇಖ ಇರುವ 787 ಮಂದಿ ಅಧಿಕಾರಿಗಳನ್ನು ಪಟ್ಟಿ ಮಾಡಿ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ರವಾನಿಸುತ್ತಿದೆ. ವರದಿಯಲ್ಲಿ ಈ ಅಧಿಕಾರಿಗಳ ಪೈಕಿ 500 ಮಂದಿ ಮಾತ್ರ ಅಕ್ರಮದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ ಅವರೆಲ್ಲರಿಗೂ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.ಕಂದಾಯ, ಗೃಹ, ಸಾರಿಗೆ, ಗಣಿ, ಅರಣ್ಯ, ಕೈಗಾರಿಕೆ ಸೇರಿದಂತೆ ಇತರ ಇಲಾಖೆಗಳ ಕಾರ್ಯದರ್ಶಿಗಳು ಅಕ್ರಮ ನಡೆದ ಸಂದರ್ಭದಲ್ಲಿ ಯಾವ ಹುದ್ದೆಯಲ್ಲಿ ಯಾರ‌್ಯಾರು ಇದ್ದರು ಎಂಬುದನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದಾರೆ. ನೋಟಿಸ್ ಪಡೆದ ಅಧಿಕಾರಿಗಳಿಗೆ ಅ. 14ರೊಳಗೆ ವಿವರಣೆ ನೀಡಲು ಸೂಚಿಸಲಾಗಿದೆ.ಅವರು ಕೊಡುವ ಸಮಜಾಯಿಷಿ ನೋಡಿಕೊಂಡು ಅವರ ವಿರುದ್ಧ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎನ್ನಲಾಗಿದೆ.  ಅಕ್ರಮ ಗಣಿಗಾರಿಕೆಗೆ ಪ್ರೋತ್ಸಾಹ ನೀಡಿದ ಆರೋಪದ ಮೇಲೆ ಬಳ್ಳಾರಿ ಜಿಲ್ಲೆಯ 29 ಮಂದಿ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ.8ಕ್ಕೂ ಹೆಚ್ಚು ಮಂದಿ ಐಎಎಸ್, ಏಳಕ್ಕೂ ಹೆಚ್ಚು ಮಂದಿ ಐಎಫ್‌ಎಸ್ ಹಾಗೂ ನಾಲ್ಕಕ್ಕೂ ಹೆಚ್ಚು ಮಂದಿ ಐಪಿಎಸ್ ಅಧಿಕಾರಿಗಳು ಪಟ್ಟಿಯಲ್ಲಿದ್ದು, ಇವರೆಲ್ಲರ ವಿರುದ್ಧವೂ ಕ್ರಮ ತೆಗೆದುಕೊಳ್ಳುವುದು ಖಚಿತ. ಸಾರಿಗೆ ಇಲಾಖೆಯಲ್ಲಿ ಕೆಲ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎನ್ನಲಾಗಿದೆ.ಲೋಕಾಯುಕ್ತ ವರದಿ ಮಾತ್ರವಲ್ಲದೆ, ಸುಪ್ರೀಂಕೋರ್ಟ್ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿ ಕೂಡ ಕೆಲ ಐಎಎಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಶಿಫಾರಸು ಮಾಡಿದೆ.

ಆ ಪ್ರಕಾರ ರಾಜ್ಯ ಸರ್ಕಾರ ನೋಟಿಸ್ ಜಾರಿ ಮಾಡಿದ್ದು, ಉತ್ತರ ಬಂದ ನಂತರ ಕ್ರಮ ತೆಗೆದುಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಂದು ಗೊತ್ತಾಗಿದೆ.

ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ) ಹಾಗೂ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ (ಡಿಎಂಸಿ) ಅಕ್ರಮ ಗಣಿಗಾರಿಕೆಯಿಂದ ತೆಗೆದ ಅದಿರನ್ನು ಆಂಧ್ರ ಪ್ರದೇಶದ ಓಬಳಾಪುರಂ ಮೂಲಕ ಸಾಗಣೆ ಮಾಡಿವೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ, ಹಾಗಾಗಿ ಸಿಬಿಐ ತನಿಖೆಯನ್ನು ವಿಸ್ತರಿಸಬೇಕಾಗಿದೆ ಎಂದು ಕೋರ್ಟ್ ಹೇಳಿದೆ.ಎಎಂಸಿ ಕಂಪೆನಿ, ಬಿಜೆಪಿ ಮುಖಂಡ, ಕರ್ನಾಟಕದ ಮಾಜಿ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಜಿ.ಲಕ್ಷ್ಮಿ ಅರುಣಾ ಅವರಿಗೆ ಸೇರಿದ್ದರೆ, ಡಿಎಂಸಿ ಮತ್ತೊಬ್ಬ ಗಣಿ ದೊರೆ ಎಸ್.ಎಂ.ಜೈನ್ ಅವರಿಗೆ ಸೇರಿದ್ದಾಗಿದೆ ಎಂದು ಕೋರ್ಟ್‌ಗೆ ತಿಳಿಸಲಾಯಿತು.ಈ ಎರಡೂ ಕಂಪೆನಿಗಳು ಜೈಸಿಂಗಪುರ ಗ್ರಾಮದ 10.12 ಹೆಕ್ಟೇರ್ ವ್ಯಾಪ್ತಿ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿವೆ ಎಂದು ಸುಪ್ರೀಂಕೋರ್ಟ್‌ನ ಕೇಂದ್ರ ಉನ್ನತಾಧಿಕಾರ ಸಮಿತಿಯ (ಸಿಇಸಿ) ವರದಿಯಲ್ಲಿ ಉಲ್ಲೇಖಿಸಲಾಗಿದೆ.ರೆಡ್ಡಿ ಸಹೋದರರ ಎಎಂಸಿ ಕಂಪೆನಿಯು ಸರಣಿ ಅಕ್ರಮಗಳಲ್ಲಿ ಭಾಗಿಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯ ಅವರನ್ನು ಒಳಗೊಂಡ ಪೀಠ ಹೇಳಿದೆ.ಜನಾರ್ದನ ರೆಡ್ಡಿ ದಂಪತಿ ಅಕ್ರಮವಾಗಿ ಎಎಂಸಿ ಪಾಲುದಾರರಾಗಿ ಸೇರಿಕೊಂಡು ಮೂಲ ಪಾಲುದಾರರನ್ನು ನಿವೃತ್ತಿಗೊಳಿಸಿದ್ದಾರೆ ಎನ್ನುವುದನ್ನೂ ಸಿಇಸಿ ವರದಿಯಲ್ಲಿ ಹೇಳಲಾಗಿದೆ. ರೆಡ್ಡಿ ಸಹೋದರರ ವಿರುದ್ಧ ನಡೆಯುತ್ತಿರುವ ತನಿಖೆಯ ಸ್ಥಿತಿಗತಿಯನ್ನು ತಿಳಿಸುವಂತೆ, ಕಪಾಡಿಯ ಅವರನ್ನು ಒಳಗೊಂಡ ಅರಣ್ಯ ಪೀಠವು ಸಿಬಿಐಗೆ ನಿರ್ದೇಶನ ನೀಡಿದೆ.ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ಇದೇ ತಿಂಗಳ 5ರಂದು ಜನಾರ್ದನ ರೆಡ್ಡಿ ಹಾಗೂ ಅವರ  ಭಾವ, ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರನ್ನು ಬಂಧಿಸಿತ್ತು.ಇವರಿಬ್ಬರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 3 ರವರೆಗೆ ವಿಸ್ತರಿಸಲಾಗಿದ್ದು, ಪ್ರಸ್ತುತ ಇವರು ಹೈದರಾಬಾದ್‌ನ ಚಂಚಲಗುಡ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ.ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ನಡೆದ ಅಕ್ರಮ ಗಣಿಗಾರಿಕೆ ಕುರಿತಂತೆ ಸಿಇಸಿ ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸಿದ ಬಳಿಕ ಕೋರ್ಟ್ ಸಿಬಿಐ ತನಿಖೆ ವಿಸ್ತರಿಸಲು ಆದೇಶ ನೀಡಿದೆ.

ವಿಚಾರಣೆ ವೇಳೆ ಸರ್ಕಾರೇತರ ಸಂಸ್ಥೆ `ಸಮಾಜ ಪರಿವರ್ತನ ಸಮುದಾಯ~ದ ಪರ ಹಾಜರಿದ್ದ ವಕೀಲ ಪ್ರಶಾಂತ್ ಭೂಷಣ್, ಕರ್ನಾಟಕದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪಿಸಿದ ಅಂಶಗಳನ್ನು ಉಲ್ಲೇಖಿಸಿದರು.ಅಕ್ರಮ ಗಣಿಗಾರಿಕೆಯಿಂದ ತೆಗೆದ ಅದಿರನ್ನು ಇ- ಹರಾಜು ಮಾಡಬೇಕೆನ್ನುವ ಸಿಇಸಿ ಶಿಫಾರಸುಗಳನ್ನು ಅಟಾರ್ನಿ ಜನರಲ್ ಜಿ.ಇ.ವಹನ್ವತಿ ಅನುಮೋದಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.