ಭಾನುವಾರ, ಏಪ್ರಿಲ್ 18, 2021
25 °C

ಸಿಬಿಐ ದುರ್ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರು ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂದು  ಆರೋಪಿಸಲಾದ ಪ್ರಥಮ ಮಾಹಿತಿ ವರದಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವುದು ಕೇಂದ್ರ ತನಿಖಾ ದಳದ (ಸಿಬಿಐ) ಪಾಲಿಗೆ ಮುಖಭಂಗ. ವಿಧಾನಸಭಾ ಚುನಾವಣೆಯಲ್ಲಿನ ಸೋಲಿನಿಂದಾಗಿ ಹಿನ್ನಡೆ ಅನುಭವಿಸಬೇಕಾಗಿ ಬಂದಿರುವ ಮಾಯಾವತಿ ಪಾಲಿಗೆ ಇದು ರಾಜಕೀಯವಾಗಿ ಚೇತರಿಸಿಕೊಳ್ಳಲು ಒದಗಿ ಬಂದಿರುವ ಅವಕಾಶ. ತಾಜ್ ಕಾರಿಡಾರ್ ಹಗರಣದಲ್ಲಿ ನಡೆದಿದೆಯೆನ್ನಲಾದ ಹಣಕಾಸು ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ 2002ರಲ್ಲಿ ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ ನೀಡಿತ್ತು.  ತನಿಖೆಯನ್ನು ಆ ಪ್ರಕರಣಕ್ಕಷ್ಟೇ ಸೀಮಿತಗೊಳಿಸದ ಸಿಬಿಐ, ಸುಪ್ರೀಂಕೋರ್ಟ್ ಆದೇಶ ನೀಡದಿದ್ದರೂ  ಮಾಯಾವತಿ 1995ರಿಂದ 2003ರ ವರೆಗಿನ ಅವಧಿಯಲ್ಲಿ ಆದಾಯ ಮೀರಿದ ಆಸ್ತಿಗಳಿಸಿದ್ದಾರೆ ಎಂಬ ಆರೋಪ ಹೊರಿಸಿ ಪ್ರಕರಣವನ್ನು  ದಾಖಲಿಸಿತ್ತು. ಈ ಎರಡನೆ ಪ್ರಕರಣವನ್ನು ರದ್ದುಪಡಿಸಿರುವ ಸುಪ್ರೀಂಕೋರ್ಟ್ `ನ್ಯಾಯಾಲಯದ ಆದೇಶವನ್ನು ಮೀರಿ ಸಿಬಿಐ ವರ್ತಿಸಿದೆ~ ಎಂದು ತರಾಟೆಗೆ ತೆಗೆದುಕೊಂಡಿದೆ.  ಆದಾಯ ಮೀರಿ ಆಸ್ತಿ ಗಳಿಕೆಯ ಆರೋಪದ ಬಗ್ಗೆ ತನಿಖೆ ನಡೆಸಿದ್ದ ವರಮಾನ ತೆರಿಗೆ ನ್ಯಾಯಮಂಡಳಿ ಮತ್ತು ದೆಹಲಿ ಹೈಕೋರ್ಟ್ ಆ ಪ್ರಕರಣವನ್ನು ನಾಲ್ಕು ವರ್ಷಗಳ ಹಿಂದೆಯೇ ವಜಾ ಮಾಡಿದೆ. ಇದನ್ನುಉಲ್ಲೇಖಿಸಿ ಮಾಯಾವತಿ ಅವರು ತನ್ನ ವಿರುದ್ಧ ತನಿಖೆಯನ್ನು ಕೈಬಿಡುವಂತೆ ಸಿಬಿಐಗೆ ಆದೇಶ ನೀಡಬೇಕೆಂದು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದರು.ಆಡಳಿತಾರೂಢ ಪಕ್ಷಗಳು ರಾಜಕೀಯ ದ್ವೇಷಸಾಧನೆಗೆ ಸಿಬಿಐ ಅನ್ನು ದುರ್ಬಳಕೆ ಮಾಡುತ್ತಿದೆ ಎಂಬ ಆರೋಪವನ್ನು ಈ ಪ್ರಕರಣ ಪುಷ್ಟೀಕರಿಸಿದೆ. ವಿರೋಧಪಕ್ಷಗಳ ನಾಯಕರ ಮೇಲಿನ ಆರೋಪಗಳ ತನಿಖೆಗೆ ಅತ್ಯುತ್ಸಾಹವನ್ನು ಮತ್ತು ಆಡಳಿತಾರೂಢ ಪಕ್ಷಗಳ ನಾಯಕರ ತನಿಖೆಗೆ ನಿರುತ್ಸಾಹವನ್ನು ತೋರಿಸುತ್ತಾ ಬಂದಿರುವುದನ್ನು ಸಿಬಿಐ ಇತಿಹಾಸದುದ್ದಕ್ಕೂ ಕಾಣಬಹುದು. ಉತ್ತರಪ್ರದೇಶದಲ್ಲಿ ಚುನಾವಣಾ ರಾಜಕೀಯದ ನೇರ ಮಾರ್ಗದ ಮೂಲಕ ತಮ್ಮನ್ನು ಎದುರಿಸಲಾಗದ ಕಾಂಗ್ರೆಸ್ ಪಕ್ಷ ಇದಕ್ಕಾಗಿ ಸಿಬಿಐನ ದುರ್ಬಳಕೆ ಮಾಡಿದೆ ಎನ್ನುವ ಮಾಯಾವತಿ ಆರೋಪವನ್ನು ತಳ್ಳಿಹಾಕಲಾಗದು. ಈ ರೀತಿಯ ರಾಜಕೀಯ ದುರ್ಬಳಕೆಯಿಂದಾಗಿಯೇ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಾಗದ ಸಿಬಿಐ ಆಡಳಿತಾರೂಢರ ಕೈಗೊಂಬೆಯಂತೆ ಕೆಲಸ ಮಾಡಬೇಕಾಗಿ ಬಂದಿದೆ. ಇದನ್ನು ತಡೆಯಲು ಇರುವ ಏಕೈಕ ಮಾರ್ಗವೆಂದರೆ ಸುಪ್ರೀಂಕೋರ್ಟ್ ಆದೇಶದಂತೆ ಕೇಂದ್ರ ಜಾಗೃತ ಆಯೋಗಕ್ಕೆ ಸ್ವಾಯತ್ತತೆಯನ್ನು ನೀಡಿ ಸಿಬಿಐ ಅನ್ನು ಅದರ ಸುಪರ್ದಿಗೆ ಒಪ್ಪಿಸುವುದು. ಒಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಾಯಾವತಿ ಅವರ ಪರವಾಗಿ ಆದೇಶ ನೀಡಿದೆಯೆಂದ ಮಾತ್ರಕ್ಕೆ ಅವರು ನಿರಪರಾಧಿ ಎಂದು ಹೇಳಲಾಗುವುದಿಲ್ಲ. ತಾಜ್ ಕಾರಿಡಾರ್ ಹಗರಣದ ವಿಚಾರಣೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಈಗಲೂ ಮುಂದುವರಿದಿದೆ. ಅವರ ಆಡಳಿತದ ಕಾಲದಲ್ಲಿ ನಡೆದಿದೆಯೆನ್ನಲಾದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯಲ್ಲಿನ ಅವ್ಯವಹಾರ ಮತ್ತು ಪ್ರತಿಮೆಗಳ ಸ್ಥಾಪನೆಯ ಹಗರಣದ ವಿಚಾರಣೆಯಲ್ಲಿಯೂ ಅವರು ಆರೋಪಿ. ಈ ಹಗರಣಗಳ ತನಿಖೆಯನ್ನು ನಿಷ್ಪಕ್ಷಪಾತವಾಗಿ ಮತ್ತು ಸಂಶಯಕ್ಕೆ ಅವಕಾಶಕ್ಕೆಡೆ ನೀಡದಂತೆ ನಡೆಸಿದರೆ ಸಿಬಿಐ ಇತ್ತೀಚೆಗೆ ಕಳೆದುಕೊಳ್ಳುತ್ತಿರುವ ವಿಶ್ವಾಸಾರ್ಹತೆಯನ್ನು ಮರಳಿ ಗಳಿಸಲು ಸಾಧ್ಯ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.