ಸೋಮವಾರ, ಡಿಸೆಂಬರ್ 9, 2019
19 °C

ಸಿಬಿಐ: ಬಂಧನದಿಂದ ಬಿಡುಗಡೆಗೊಳಿಸಿ

Published:
Updated:
ಸಿಬಿಐ: ಬಂಧನದಿಂದ ಬಿಡುಗಡೆಗೊಳಿಸಿ

‘ವ್ಯಕ್ತಿಯನ್ನು ಸಾರ್ವಜನಿಕರ ದೃಷ್ಟಿಯಲ್ಲಿ ಅಪರಾಧಿ ಎಂದು ಬಿಂಬಿಸುತ್ತಾ ಪ್ರಚಾರ ವೈಭವದಲ್ಲಿ ಮೈ ಮರೆಯುವ ಸಿಬಿಐ ನಿಧಾನವಾಗಿ ನಿದ್ದೆಗೆ ಜಾರಿಬಿಡುವುದರಿಂದ  ಆರೋಪ ಪಟ್ಟಿ ಸಲ್ಲಿಸಲು ವರ್ಷಗಳು ಬೇಕಾಗುತ್ತವೆ. ಅದರ ನಂತರ ವಿಚಾರಣೆಯಲ್ಲಿ ಇನ್ನಷ್ಟು ವರ್ಷಗಳನ್ನು ಕಳೆಯುತ್ತದೆ. ಇಷ್ಟಾದ ಮೇಲೂ ಎಷ್ಟೋ ಬಾರಿ ನಿಜವಾದ ಅಪರಾಧಿ ಯಾರೆಂದು ಗೊತ್ತಾಗುವುದೇ ಇಲ್ಲ...’ ಇದು 2004ರ ಫೆಬ್ರುವರಿಯಲ್ಲಿ ಬೊಫೋರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನ ತೀರ್ಪಿನಲ್ಲಿ ನ್ಯಾಯಮೂರ್ತಿ ಜೆ.ಡಿ.ಕಪೂರ್ ಅವರು ಹೇಳಿರುವ ಮಾತುಗಳು. ನ್ಯಾಯಮೂರ್ತಿಗಳ ಅಭಿಪ್ರಾಯವನ್ನು ಇತ್ತೀಚೆಗೆ ಸುದ್ದಿಯಲ್ಲಿರುವ ಆರುಷಿ ಹತ್ಯೆ ಪ್ರಕರಣದ ಸಿಬಿಐ ತನಿಖೆಗೂ ಅನ್ವಯಿಸಬಹುದು. ಎರಡೂವರೆ ವರ್ಷಗಳ ತನಿಖೆಯ ಕಾಲದಲ್ಲಿ ವ್ಯವಸ್ಥಿತವಾದ ಸುದ್ದಿ ಸೋರಿಕೆಯ ಮೂಲಕ ಕಂಡಕಂಡವರನ್ನು ಅಪರಾಧಿಗಳೆಂದು ಬಿಂಬಿಸುತ್ತಾ ಬಂದ ಸಿಬಿಐ ಕೊನೆಗೂ ಆರುಷಿಯ ಕೊಲೆಗಡುಕರನ್ನು ಪತ್ತೆಹಚ್ಚಲಾಗದೆ ಕೈ ಎತ್ತಿ ಸಾರ್ವಜನಿಕರ ದೂಷಣೆಗೆ ಗುರಿಯಾಗಿದೆ.ಕೇಂದ್ರ ತನಿಖಾ ದಳ (ಸಿಬಿಐ) ತನ್ನ 47 ವರ್ಷಗಳ ಇತಿಹಾಸದಲ್ಲಿ ಅಭಿನಂದನೆಯ ಹೂ ಮಳೆಗಿಂತ ಹೆಚ್ಚಾಗಿ ದೂಷಣೆಯ ಕಲ್ಲೇಟುಗಳನ್ನು ಪಡೆದದ್ದೇ ಹೆಚ್ಚು. ಇವುಗಳಲ್ಲಿಯೂ ರಾಜಕಾರಣಿಗಳ ಭ್ರಷ್ಟಾಚಾರದ ಹಗರಣಗಳಲ್ಲಿಯೇ ಹೆಚ್ಚು ಕಲ್ಲಿನ ಏಟು ತಿಂದದ್ದು. ರಾಜಕಾರಣಿಗಳಿಗೆ ಸಂಬಂಧಿಸಿದ ಭ್ರಷ್ಟಾಚಾರದ ಪ್ರಕರಣಗಳನ್ನು ಹೊರತುಪಡಿಸಿದರೆ ಶೇಕಡಾ 70ರಷ್ಟು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿವೆ. ದೀರ್ಘ ಕಾಲ ತನಿಖೆ ನಡೆದ ರಾಜೀವ್‌ಗಾಂಧಿ ಹತ್ಯೆ ಪ್ರಕರಣದಲ್ಲಿ ಸಿಬಿಐ ನಾಲ್ಕು ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವಲ್ಲಿ ಯಶಸ್ವಿಯಾಗಿತ್ತು. ಇದೇ ರೀತಿ ಮುಂಬೈ ಬಾಂಬ್ ಸ್ಫೋಟ, ನ್ಯಾಯವಾದಿ ಅಂಜನಾ ಮಿಶ್ರಾ ಅತ್ಯಾಚಾರ ಮೊದಲಾದ ಪ್ರಕರಣಗಳಲ್ಲಿ ಆರೋಪಿಗಳಿಗೆ  ಶಿಕ್ಷೆಯಾಗಿದ್ದು ಸಿಬಿಐ ಸಾಧನೆ. ಈಗ ಸಿಬಿಐನ ಈ ಯಶಸ್ಸಿನ ಕಿರೀಟ ಕೂಡಾ ಕೆಳಗೆ ಬಿದ್ದಿದೆ. ತನ್ನ ಸಾಮರ್ಥ್ಯದ ಮೇಲೆಯೇ ವಿಶ್ವಾಸ ಇಲ್ಲದ, ನೈತಿಕವಾಗಿ ಕುಗ್ಗಿಹೋಗಿರುವ ಸಿಬಿಐ ಸಾರ್ವಜನಿಕರ ವಿಶ್ವಾಸವನ್ನೂ ಕಳೆದುಕೊಂಡಿದೆ. ಇದಕ್ಕೇನು ಕಾರಣ?ಸಿಬಿಐ ಎನ್ನುವುದು ಆಡಳಿತಾರೂಢರ  ‘ಸಾಕುನಾಯಿ’ ಎಂದು ದೂಷಿಸುತ್ತಾ ಬಂದಿವೆ ವಿರೋಧಪಕ್ಷಗಳು. ವಿರೋಧಿಗಳ ವಿರುದ್ಧ ಛೂ ಬಿಟ್ಟಾಗ ಉಗ್ರವಾಗಿ ಮೇಲೇರಿ ಹೋಗುವ ಈ ಕಾವಲು ನಾಯಿ ಆಡಳಿತ ಪಕ್ಷದವರು ಮನೆ ಲೂಟಿ ಮಾಡುತ್ತಿದ್ದರೂ ಬಾಲ ಮುದುರಿಕೊಂಡು ತೆಪ್ಪಗೆ ಬಿದ್ದಿರುತ್ತದೆ ಎನ್ನುವುದು ಸಿಬಿಐ ವಿರುದ್ದದ ಆರೋಪ. ಕಾಂಗ್ರೆಸ್, ಜನತಾ, ಬಿಜೆಪಿ ಹೀಗೆ ಎಲ್ಲ ಪಕ್ಷಗಳ  ಆಡಳಿತದ ಕಾಲದಲ್ಲಿಯೂ ಇಂತಹ ಆರೋಪಗಳು ಕೇಳಿ ಬಂದಿವೆ. ಅವಕಾಶ ಸಿಕ್ಕಾಗ ಸಿಬಿಐನ ದುರ್ಬಳಕೆಗೆ ಯಾವ ರಾಜಕೀಯ ಪಕ್ಷವೂ  ಹಿಂಜರಿದಿಲ್ಲ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ಹೊಂದಿರುವ ಸಿಬಿಐಅನ್ನು ಕಾಲದ ಅಗತ್ಯಕ್ಕೆ ತಕ್ಕಂತೆ ಬಲಪಡಿಸಬೇಕಾಗಿದ್ದ ಸರ್ಕಾರಗಳು ಒಂದೊಂದಾಗಿ ಅದರ ಹಲ್ಲುಗಳನ್ನು ಕಿತ್ತು ಹಾಕಿ ದುರ್ಬಲ ಮಾಡಿವೆ. ತನಿಖಾ ಸಂಸ್ಥೆಯೊಂದು ಮೂಲಭೂತವಾಗಿ ಹೊಂದಿರಬೇಕಾಗಿರುವ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿರುವ ಸಿಬಿಐ ಕಚ್ಚುವುದು ಬಿಡಿ, ಈಗ ಬೊಗಳುವ ಸ್ಥಿತಿಯಲ್ಲಿಯೂ ಇಲ್ಲ.1946ರ ದೆಹಲಿ ವಿಶೇಷ ಪೊಲೀಸ್ ಕಾಯಿದೆಯನ್ನೇ ಬಳಸಿಕೊಂಡು 1963ರಲ್ಲಿ ಸಿಬಿಐಅನ್ನು ಸ್ಥಾಪಿಸಿದ್ದೇ ರಾಜಕೀಯ ಮತ್ತು ಆಡಳಿತದಲ್ಲಿನ ಭ್ರಷ್ಟಾಚಾರದ ನಿಯಂತ್ರಣಕ್ಕಾಗಿ. ಆದರೆ ಇದರ ಜುಟ್ಟನ್ನು ಸರ್ಕಾರ ತನ್ನ ಕೈಯ್ಯಲ್ಲಿಯೇ  ಇಟ್ಟುಕೊಂಡದ್ದೇ ಸಿಬಿಐ ನಿರ್ವೀರ್ಯಗೊಳ್ಳಲು ಕಾರಣ. ರಾಜಕಾರಣಿಗಳು ಮತ್ತು ಅಧಿಕಾರಿಗಳ ನಿಯಂತ್ರಣಕ್ಕೆ ಸಿಕ್ಕ ಸಿಬಿಐ ಮೂಲ ಉದ್ದೇಶದ ರೂಪದಲ್ಲಿ ಉಳಿಯಲೇ ಇಲ್ಲ. ಇಂದಿರಾಗಾಂಧಿ, ರಾಜೀವ್‌ಗಾಂಧಿ, ವಿ.ಪಿ.ಸಿಂಗ್, ಪಿ.ವಿ.ನರಸಿಂಹರಾವ್, ಅಟಲ ಬಿಹಾರಿ ವಾಜಪೇಯಿ ಮೊದಲಾದ ಎಲ್ಲ ಪ್ರಧಾನಿಗಳೂ ಸಿಬಿಐ ಅನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ.  ಹೆಚ್ಚು ಕಾಲ ಆಳಿದವರು ಹೆಚ್ಚು ದುರುಪಯೋಗ ಮಾಡಿದ್ದಾರೆ, ಕಡಿಮೆ ಕಾಲ ಆಳಿದವರಿಂದ ಕಡಿಮೆ ದುರುಪಯೋಗ. ವ್ಯತ್ಯಾಸ ಪ್ರಮಾಣದಲ್ಲಿ ಅಷ್ಟೇ, ನೀತಿಯಲ್ಲಿ ಅಲ್ಲ.ಸಿಬಿಐ ದುರ್ಬಳಕೆಯ ಪರಂಪರೆಯನ್ನು ಪ್ರಧಾನಿ ಇಂದಿರಾಗಾಂಧಿ ಪ್ರಾರಂಭಿಸಿದ್ದರೆ ಅದನ್ನು ದುರ್ಬಲಗೊಳಿಸುವ ಪರಂಪರೆಗೆ ಚಾಲನೆ ನೀಡಿದವರು ಅವರ ಮಗ ರಾಜೀವ್‌ಗಾಂಧಿ. ಗೃಹ ಇಲಾಖೆಯಡಿಯಲ್ಲಿಯೇ ಇದ್ದ ಸಿಬಿಐ ಅನ್ನು ಬೋಪೋರ್ಸ್ ಹಗರಣದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡು ಭೀತಿಗೀಡಾಗಿದ್ದ ರಾಜೀವ್‌ಗಾಂಧಿ  ಸಿಬ್ಬಂದಿ ಇಲಾಖೆಗೆ ವರ್ಗಾವಣೆಗೊಳಿಸಿ ನೇರವಾಗಿ ಪ್ರಧಾನಿ ನಿಯಂತ್ರಣದಲ್ಲಿರುವಂತೆ ನೋಡಿಕೊಂಡರು. ಇದರಿಂದಾಗಿಯೇ ಬೋಪೋರ್ಸ್ ತನಿಖೆ ಹಾದಿ ತಪ್ಪಿದ್ದು. ಸಿಬಿಐ ಈ ಹಗರಣದ ಪ್ರಮುಖ ಆರೋಪಿ ಕ್ವಟ್ರೋಚಿ ಬೆನ್ನುಹತ್ತಿದ್ದಾಗಲೇ ‘ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಕೈಬಿಟ್ಟುಬಿಡಿ’ ಎಂದು ಕೇಂದ್ರ ಸರ್ಕಾರ ಸಿಬಿಐಗೆ ಶಿಫಾರಸು ಮಾಡಿತ್ತು. ಆ ಕಾಲದಲ್ಲಿ  ಭಾರತದಿಂದ ಪರಾರಿಯಾಗಿದ್ದ ಕ್ವಟ್ರೋಚಿಯನ್ನು ಇಂದು ಕೂಡಾ ಪತ್ತೆ ಮಾಡಲು ಸಾಧ್ಯವಾಗಿಲ್ಲ.ಈಗಿನ ವ್ಯವಸ್ಥೆಯಲ್ಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮಾತ್ರವಲ್ಲ, ಸಿಬಿಐ ವಿಶೇಷ ನ್ಯಾಯಾಲಯದ ಮೇಲ್ಮನವಿ ಸಲ್ಲಿಸಲು ಕೂಡಾ ಕೇಂದ್ರ ಸರ್ಕಾರದ ಅನುಮತಿ ಅಗತ್ಯ.  ಜೆಎಂಎಂ ಲಂಚ ಹಗರಣದಲ್ಲಿ ಪಿ.ವಿ.ನರಸಿಂಹರಾವ್ ಮತ್ತು ಬೂಟಾಸಿಂಗ್ ಅವರನ್ನು ದೆಹಲಿ ಹೈಕೋರ್ಟ್ ಖುಲಾಸೆಗೊಳಿಸಿದಾಗ ಅದರ ವಿರುದ್ಧ ಎನ್‌ಡಿಎ ಸರ್ಕಾರ ಮೇಲ್ಮನವಿ ಸಲ್ಲಿಸಲೇ ಇಲ್ಲ.

 

ಸಿಬಿಐ ನ್ಯಾಯಾಲಯ ಮೇವು ಖರೀದಿ ಹಗರಣದ ಆರೋಪಿ ಲಾಲುಪ್ರಸಾದ್ ಯಾದವ್ ಅವರನ್ನು ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿದಾಗಲೂ ಮೇಲ್ಮನವಿ ಸಲ್ಲಿಸಲು ಸಿಬಿಐಗೆ ಯುಪಿಎ ಸರ್ಕಾರದ ಕಾನೂನು ಇಲಾಖೆ ಅವಕಾಶ ನೀಡಲಿಲ್ಲ.  ನ್ಯಾಯಾಲಯಗಳಲ್ಲಿ ನಡೆಯುವ ವಿಚಾರಣೆಯಲ್ಲಿ ‘ವಿಶೇಷ ರಜಾ ಅರ್ಜಿ’ಗೆ (ಎಸ್‌ಎಲ್‌ಪಿ) ಮಹತ್ವದ ಪಾತ್ರ ಇದೆ. ಹೈಕೋರ್ಟ್ ಇಲ್ಲವೇ ನ್ಯಾಯಮಂಡಳಿಯ ತೀರ್ಪಿನ ವಿರುದ್ದದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಮಂಡನೆಗೆ ಅವಕಾಶ ನೀಡಬೇಕೆಂದು ಕಕ್ಷಿದಾರರು ಕೋರುವುದು ಎಸ್‌ಎಲ್‌ಪಿಯ ಉದ್ದೇಶ. ಆದರೆ ಸಿಬಿಐ ಎಸ್‌ಎಲ್‌ಪಿ ಸಲ್ಲಿಸಬೇಕಾದರೆ ಕೇಂದ್ರ ಕಾನೂನು ಇಲಾಖೆಯ ಅನುಮತಿ ಪಡೆಯಬೇಕು.ಸಿಬಿಐ ತನಿಖಾ ಕಾರ್ಯದಲ್ಲಿ ಎದುರಿಸುತ್ತಿರುವ ಇನ್ನೊಂದು ಅಡಚಣೆ ಅದರ ಕಾರ್ಯವ್ಯಾಪ್ತಿಯದು.  ಕೇಂದ್ರಾಡಳಿತ ಪ್ರದೇಶದಲ್ಲಿ ಮಾತ್ರ ನೇರವಾಗಿ ಪ್ರವೇಶಿಸಿ ಸಿಬಿಐ ತನಿಖೆ ಕೈಗೊಳ್ಳಬಹುದು. ಆದರೆ ರಾಜ್ಯಗಳಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ತನಿಖೆ ಮಾಡಬೇಕಾದರೆ ಅಲ್ಲಿನ ಸರ್ಕಾರದ ಪೂರ್ವಾನುಮತಿ ಬೇಕು, ಇಲ್ಲದಿದ್ದರೆ ಸುಪ್ರೀಂ ಕೋರ್ಟ್ ಇಲ್ಲವೇ ಹೈಕೋರ್ಟ್ ಆದೇಶ ನೀಡಬೇಕು. ವಿರೋಧಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ಸಾಮಾನ್ಯವಾಗಿ ಸಿಬಿಐಗೆ ತಮ್ಮಲ್ಲಿನ ಹಗರಣಗಳ ತನಿಖೆಯನ್ನು ಒಪ್ಪಿಸುವುದಿಲ್ಲ, ಮಾತ್ರವಲ್ಲ, ರಾಷ್ಟ್ರಮಟ್ಟದ ವ್ಯಾಪ್ತಿಯ ಹಗರಣಗಳ ತನಿಖೆಗೂ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ. ಈಗಿನ ದ್ವೇಷದ ರಾಜಕಾರಣದ ಕಾಲದಲ್ಲಿ ವಿರೋಧಪಕ್ಷಗಳ ಆತಂಕ ಆಧಾರರಹಿತ ಎಂದು ಹೇಳುವುದೂ ಸಾಧ್ಯ ಇಲ್ಲ.ಇದಕ್ಕೇನು ಪರಿಹಾರ?

‘ಕೇಂದ್ರ ಜಾಗೃತ ಆಯೋಗಕ್ಕೆ (ಸಿವಿಸಿ) ಶಾಸನಬದ್ಧ ಸ್ಥಾನಮಾನ ನೀಡಿ ಸಿಬಿಐ ಅನ್ನು ಅದರ ಮೇಲ್ವಿಚಾರಣೆಗೆ ಒಪ್ಪಿಸಬೇಕೆಂದು ವಿನೀತ್ ನಾರಾಯಣ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್  ತಿಳಿಸಿತ್ತು. ಇದರ ಜತೆಗೆ ‘ಜಂಟಿ ಕಾರ್ಯದರ್ಶಿಗಳಿಗಿಂತ ಮೇಲಿನ ಅಧಿಕಾರಿಗಳ ವಿರುದ್ಧ ಸಿಬಿಐ ಕ್ರಮಕೈಗೊಳ್ಳುವ ಮುನ್ನ ಸರ್ಕಾರದ ಪೂರ್ವಾನುಮತಿ ಅಗತ್ಯ’ ಎಂಬ ‘ಏಕ ನಿರ್ದೇಶನ’ವನ್ನು ಕೂಡ ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ಆದರೆ ನೂತನ ‘ಕೇಂದ್ರ ಜಾಗೃತದಳ ಆಯೋಗ ಕಾಯಿದೆ’ಯ ಮೂಲಕ ಹಿಂದೆ ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದ ‘ಏಕನಿರ್ದೇಶನ’ಕ್ಕೆ ಮತ್ತೆ ಜೀವ ತುಂಬಿದ ಎನ್‌ಡಿಎ ಸರ್ಕಾರ ಸಿಬಿಐ ಅನ್ನು ಇನ್ನಷ್ಟು ದುರ್ಬಲಗೊಳಿಸಿತು. ಈ ಎರಡು ಸುಧಾರಣಾ ಕ್ರಮಗಳ ಜತೆ ಸಿಬಿಐ ಅನ್ನು ಕೇಂದ್ರ ಸಿಬ್ಬಂದಿ ಸಚಿವಾಲಯದ ನಿಯಂತ್ರಣದಿಂದ ಮುಕ್ತಗೊಳಿಸಿ ದೇಶದ ಸಾಂವಿಧಾನಿಕ ಮುಖ್ಯಸ್ಥರಾದ ರಾಷ್ಟ್ರಪತಿಗಳ ನೇರ ಸುಪರ್ದಿಗೆ ವಹಿಸಬೇಕು, ಮಹಾಲೇಖಪಾಲ (ಸಿಎಜಿ)ರಂತೆ ಸಿಬಿಐ ನಿರ್ದೇಶಕರಿಗೆ ಸ್ವತಂತ್ರವಾದ ಸಾಂವಿಧಾನಿಕ ಸ್ಥಾನಮಾನ ನೀಡಬೇಕು. ಸಿಎಜಿ ರೀತಿಯ ಉತ್ತರದಾಯಿತ್ವವನ್ನು ಹೊರಿಸಿ ಸಿಬಿಐ ಅನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂಬ ಸಲಹೆಗಳು ಇವೆ.ಆದರೆ ಸಿಬಿಐ ಮೇಲಿನ ರಾಜಕೀಯ ನಿಯಂತ್ರಣವನ್ನು ತಪ್ಪಿಸಿ ಅದು ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಆಡಳಿತ ಪಕ್ಷದವರಿಗೆ ಮಾತ್ರವಲ್ಲ, ವಿರೋಧ ಪಕ್ಷಗಳಿಗೂ ಬೇಡ. ಸ್ವತಂತ್ರ ಸಿಬಿಐ ಎರಡೂ ವರ್ಗಗಳ ರಾಜಕಾರಣಿಗಳಿಗೆ ಅಪಾಯಕಾರಿಯಾಗಬಹುದೆಂಬ ಭೀತಿ ಇದಕ್ಕೆ ಕಾರಣ. ಆದ್ದರಿಂದ ಆಡಳಿತ ಪಕ್ಷ ದುರ್ಬಳಕೆ ಮಾಡುವ ಮೂಲಕ ಮತ್ತು ವಿರೋಧ ಪಕ್ಷಗಳು ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಮೂಲಕ ಸಿಬಿಐನ ಚಾರಿತ್ರ್ಯಹನನ ಮಾಡುತ್ತಿವೆ.

ಪ್ರತಿಕ್ರಿಯಿಸಿ (+)