ಭಾನುವಾರ, ಜೂಲೈ 12, 2020
29 °C

ಸಿಬಿಐ ವಿರುದ್ಧ ಆರ್‌ಎಸ್‌ಎಸ್ ಕಾನೂನು ಸಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸಮ್‌ಜೌತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಪಂಥೀಯ ಕಾರ್ಯಕರ್ತ ಸ್ವಾಮಿ ಅಸೀಮಾನಂದ ತಪ್ಪೊಪ್ಪಿಗೆ ಹೇಳಿಕೆಯನ್ನು ಸಿಬಿಐ ಉದ್ದೇಶಪೂರ್ವಕವಾಗಿ ಬಹಿರಂಗಗೊಳಿಸಿದೆ ಎಂದು ಆರ್‌ಎಸ್‌ಎಸ್ ಆರೋಪಿಸಿದ್ದು, ಸಿಬಿಐ ವಿರುದ್ಧ ಕಾನೂನು ಸಮರಕ್ಕೆ ಸಿದ್ಧವಾಗಿದೆ. ಆರ್‌ಎಸ್‌ಎಸ್ ಈ ಸಂಬಂಧ ತನ್ನ ವಕೀಲರ ಮೂಲಕ ಸಿಬಿಐಗೆ ಜಾರಿ ಮಾಡಿರುವ ನೋಟಿಸ್‌ನಲ್ಲಿ, ‘ಸಿಬಿಐನ  ಕ್ರಮ ರಾಜಕೀಯ ದುರುದ್ದೇಶದಿಂದ ಕೂಡಿದೆ. ಅಸೀಮಾನಂದ ಘನತೆಗೆ ಕುಂದು ತರುವುದು ಇದರ ಹಿಂದಿನ ಉದ್ದೇಶವಾಗಿದೆ’ ಎಂದು ದೂರಿದೆ.ಗುಜರಾತ್‌ನ ವನವಾಸಿ ಕಲ್ಯಾಣ ಆಶ್ರಮದ ಸ್ವಾಮಿ ಅಸೀಮಾನಂದ ಅವರು ಗುರುವಾರ ನ್ಯಾಯಾಧೀಶರ ಮುಂದೆ ‘2007ರ ಸಮ್‌ಜೌತಾ ಎಕ್ಸ್‌ಪ್ರೆಸ್ ರೈಲು ಸ್ಫೋಟದಲ್ಲಿ ತಮ್ಮ ಕೈವಾಡ ಇತ್ತು’ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. 2007ರಲ್ಲಿ ಸಂಭವಿಸಿದ ಅಜ್ಮೀರ್, ಹೈದರಾಬಾದ್ ಮತ್ತು ಸಮ್‌ಜೌತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣಗಳಲ್ಲಿ ಅಸೀಮಾನಂದ ಅವರ ಕೈವಾಡ ಇರುವ ಶಂಕೆಯ ಆಧಾರದ ಮೇಲೆ 2010ರ ನವೆಂಬರ್ 19ರಂದು ಅವರನ್ನು ಸಿಬಿಐ ಬಂಧಿಸಿತ್ತು.ಅಸೀಮಾನಂದ ತಪ್ಪೊಪ್ಪಿಗೆ ಹೇಳಿಕೆಯನ್ನು ಬಹಿರಂಗಗೊಳಿಸುವ ಮೂಲಕ ಅವರ ಘನತೆಗೆ ಕುಂದು ತರಲಾಗಿದೆ ಮತ್ತು ಮುಕ್ತ ಅವಕಾಶವನ್ನು ನೀಡಿಲ್ಲ ಎನ್ನುವ ಅಂಶಗಳು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಸಿಬಿಐನ ಈ ನಡವಳಿಕೆ ಕಾನೂನು ಉಲ್ಲಂಘನೆ ಮಾತ್ರವಲ್ಲದೇ, ನ್ಯಾಯಾಂಗ ನಿಂದನೆಯೂ ಆಗುತ್ತದೆ ಎಂದು ಎಚ್ಚರಿಸಲಾಗಿದೆ. ಮೊಯಿಲಿ ಪ್ರತಿಕ್ರಿಯೆ

ಸಮ್‌ಜೌತಾ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತನಾದ ಸ್ವಾಮಿ ಅಸೀಮಾನಂದ ತಪ್ಪೊಪ್ಪಿಗೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕಾನೂನು ಸಚಿವ ವೀರಪ್ಪ ಮೊಯಿಲಿ, ಅದು  ಸಿಬಿಐಗೆ ಬಿಟ್ಟ ವಿಷಯವಾಗಿದ್ದು ಈ ತನಿಖೆಯಲ್ಲಿ ಸರ್ಕಾರ ಮಧ್ಯ ಪ್ರವೇಶಿಸುವುದಿಲ್ಲ ಎಂದರು. ‘ಹಿಂದೂ ಭಯೋತ್ಪಾದನೆಯಲ್ಲಿ ಶಂಕಿತ ಪಾತ್ರದ ಆರ್‌ಎಸ್‌ಎಸ್‌ನ್ನು ನಿಷೇಧಿಸಲಾಗುವುದೇ’ ಎಂಬ ಪ್ರಶ್ನೆಗೆ, ‘ಇಸ್ಲಾಂ ಭಯೋತ್ಪಾದನೆ, ಹಿಂದೂ ಭಯೋತ್ಪಾದನೆಂದು ವಿಂಗಡಣೆ ಮಾಡಲು ಬರುವುದಿಲ್ಲ. ಯಾವುದೇ ರೀತಿಯ ಭಯೋತ್ಪಾದನೆಯನ್ನು ಬೆಂಬಲಿಸಲು ಸಾಧ್ಯವಿಲ್ಲ’ ಎಂದೂ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.