ಸಿಬ್ಬಂದಿಯಿಂದ ಅರೆಬೆತ್ತಲೆ ಮುಷ್ಕರ

7
ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿ ಮೇಲೆ ಹಲ್ಲೆ

ಸಿಬ್ಬಂದಿಯಿಂದ ಅರೆಬೆತ್ತಲೆ ಮುಷ್ಕರ

Published:
Updated:

ಬೆಳಗಾವಿ: ಅತಿಕ್ರಮಣ ತೆರವುಗೊಳಿಸಲು ಹೋಗಿದ್ದ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತರು ಹಾಗೂ ಅಧಿಕಾರಿಯೊಬ್ಬರ ಮೇಲೆ ಶನಿವಾರ ನಡೆದ ಹಲ್ಲೆ ಘಟನೆ ಖಂಡಿಸಿ ಹಾಗೂ ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯದಿಂದ ದೂರ ಉಳಿದು ಸೋಮವಾರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೆಲವು ಸಿಬ್ಬಂದಿ ಅರೆಬೆತ್ತಲೆ ಮುಷ್ಕರ ನಡೆಸಿದರು.ಪಾಲಿಕೆ ಸಹಾಯಕ ಆಯುಕ್ತ ರಮೇಶ ನ್ಯಾಮಗೌಡರ ಹಾಗೂ ಅತಿಕ್ರಮಣ ತೆರವು ಕಾರ್ಯಾಚರಣೆ ಅಧಿಕಾರಿ ಅರ್ಜುನ ದೇಮಟ್ಟಿ ಅವರ ಮೇಲೆ ಹಲ್ಲೆ ಮಾಡಿರುವ ಶಿವಾ ಚೌಗುಲೆ ಹಾಗೂ ಮಹಮ್ಮದ್ ರಫೀಕ್ ದೇಸಾಯಿ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಹಲ್ಲೆ ನಡೆಸಿದವರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಪಾಲಿಕೆ ಸದಸ್ಯೆ ಮೈನಾಬಾಯಿ ಚೌಗುಲೆ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.ಪಾಲಿಕೆ ಸದಸ್ಯರ ಪತಿ ಹಾಗೂ ಸಂಬಂಧಿಕರು ಕಚೇರಿ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಪಾಲಿಕೆ ನೌಕರರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಇದರಿಂದಾಗಿ ನೌಕರರಿಗೆ ನೆಮ್ಮದಿಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಶಿವಾ ಚೌಗುಲೆ ಹಾಗೂ ಮಹಮ್ಮದ್ ರಫೀಕ್ ದೇಸಾಯಿ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಅಲ್ಲಿಯವರೆಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.ಪೊಲೀಸರ ವಶಕ್ಕೆ: ಪಾಲಿಕೆ ಸಹಾಯಕ ಆಯುಕ್ತರು ಹಾಗೂ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಶಿವಾ ಚೌಗುಲೆ ಹಾಗೂ ಮಹಮ್ಮದ್ ರಫೀಕ್ ದೇಸಾಯಿ ಅವರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಮಹಮ್ಮದ್ ರಫೀಕ್ ದೇಸಾಯಿ ಅವರನ್ನು ಪೊಲೀಸರು ಬಂಧಿಸಿದ್ದು, ಶಿವಾ ಚೌಗಲೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ.`ಗ್ಯಾಂಗವಾಡಿಯಲ್ಲಿ ಕಳೆದ 50 ವರ್ಷಗಳಿಂದ ಕೊಳಗೇರಿ ನಿವಾಸಿಗಳು ವಾಸವಾಗಿದ್ದಾರೆ. ನಾನು ಅವರ ಹಕ್ಕಿಗಾಗಿ ಹೋರಾಡಿದ್ದೇನೆ, ಹೊರತು ಹೆಂಡತಿಯ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ' ಎಂದು ಶಿವಾ ಚೌಗುಲೆ ತಿಳಿಸಿದರು.`ಪಾಲಿಕೆಯ ಸಹಾಯಕ ಆಯುಕ್ತರು ಹಾಗೂ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಿಗಳಾದ ಶಿವಾ ಚೌಗುಲೆ ಹಾಗೂ ಮಹಮ್ಮದ್ ರಫೀಕ್ ದೇಸಾಯಿ ಅವರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಅವರನ್ನು ಮಾಳಮಾರುತಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು' ಎಂದು ಡಿಎಸ್‌ಪಿ ಎಂ.ಮುತ್ತಾರಾಜ ತಿಳಿಸಿದರು.ಖಂಡನೆ: ಅತಿಕ್ರಮಣ ತೆರವುಗೊಳಿಸಲು ಹೋಗಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಂಡಿಸಿದೆ.ದಲಿತ ಸಮಾಜದವಾರ ಅರ್ಜುನ ದೇಮಟ್ಟಿ ಅವರ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ ಸಮಿತಿ ಪದಾಧಿಕಾರಿಗಳು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ದಲಿತರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟಬೇಕು. ಈ ಬಗ್ಗೆ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಮಿತಿ ಪದಾಧಿಕಾರಿಗಳು ಪಾಲಿಕೆ ಆಯುಕ್ತರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry