ಸಿಬ್ಬಂದಿಯಿಲ್ಲದೆ ಅನಾಥ ಈ ನಿರಾಶ್ರಿತರ ಕೇಂದ್ರ

7

ಸಿಬ್ಬಂದಿಯಿಲ್ಲದೆ ಅನಾಥ ಈ ನಿರಾಶ್ರಿತರ ಕೇಂದ್ರ

Published:
Updated:
ಸಿಬ್ಬಂದಿಯಿಲ್ಲದೆ ಅನಾಥ ಈ ನಿರಾಶ್ರಿತರ ಕೇಂದ್ರ

ಶಿವಮೊಗ್ಗ: ಅಲ್ಲಿ ಗುಮಾಸ್ತ, ವಾರ್ಡರ್ ಮತ್ತು ವಾಹನ ಚಾಲಕ ಹಾಗೂ ಸಫಾಯಿವಾಲ, ಕಾವಲುಗಾರ ಎಲ್ಲವೂ ಒಬ್ಬನೇ. ರಾತ್ರಿ ವೇಳೆ ಅಪ್ಪಿತಪ್ಪಿ ನಿರಾಶ್ರಿತರು ಸಿಬ್ಬಂದಿ ಮೇಲೆ ದಾಳಿ ಮಾಡಿದರೆ ಸಹಾಯ ಮಾಡಲು ಯಾರೂ ಇಲ್ಲ!ನಗರದ ತ್ಯಾವರೆಕೊಪ್ಪದ ಬಳಿ ಇರುವ ನಿರಾಶ್ರಿತರ ಕೇಂದ್ರದ ಸ್ಥಿತಿ ಇದು. ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಸುಮಾರು 84 ಭಿಕ್ಷುಕರಿದ್ದಾರೆ. ಆದರೆ, ನಿರಾಶ್ರಿತರ ಕೇಂದ್ರವನ್ನು ನಿರ್ವಹಣೆ ಮಾಡಲು ಇರುವ ಸಿಬ್ಬಂದಿ ಮಾತ್ರ ಕೇವಲ 4.   ನಿರಾಶ್ರಿತರ ಜೀವಕ್ಕೆ ಮಾನವೀಯ ದೃಷ್ಟಿಯಿಂದ ಆಸರೆ ನೀಡುವ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ರಾಜ್ಯದಲ್ಲಿ 14 ನಿರಾಶ್ರಿತ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅದರಂತೆ 1984ರಲ್ಲಿ ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರ ಆರಂಭಿಸಲಾಗಿದೆ. 2006-7ನೇ ಸಾಲಿನಿಂದ ನಿರಾಶ್ರಿತರ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿ ಕಾಡುತ್ತಿದೆ.ನಿರಾಶ್ರಿತರ ಕೇಂದ್ರದಲ್ಲಿ ಪ್ರಥಮ ದರ್ಜೆ ಸಹಾಯಕ-2, ವಾರ್ಡರ್-3, ಶುಚಿಗಾರ-1, ವಾಹನ ಚಾಲಕ -1 ಹಾಗೂ ಅಡಿಗೆ ಸಹಾಯಕ ಹುದ್ದೆ -1 ಸೇರಿದಂತೆ ಒಟ್ಟು 10ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಕೇಂದ್ರದಲ್ಲಿ 84ಭಿಕ್ಷುಕರು ಆಶ್ರಯ ಪಡೆದಿದ್ದು, ಇವರಲ್ಲಿ ಹೆಚ್ಚಿನವರು ಹೊರ ರಾಜ್ಯದವರೇ ಇದ್ದು, ಹಲವರು ತೀವ್ರತರವಾದ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇವರ ಚಿಕಿತ್ಸೆಗೆ 3 ತಿಂಗಳ ಹಿಂದೆ ಮೆಗ್ಗಾನ್ ಆಸ್ಪತ್ರೆ ಮನೋವೈದ್ಯರನ್ನು ನಿಯೋಜನೆ ಮಾಡಲಾಗಿದೆ.ನಿರಾಶ್ರಿತರ ಕೇಂದ್ರಕ್ಕೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದರೂ, ಅಗತ್ಯ ಇರುವಷ್ಟು ಸಿಬ್ಬಂದಿಗಳನ್ನು ಮಾತ್ರ ನೇಮಕ ಮಾಡಿಲ್ಲ. ಇದರಿಂದ ನಿರಾಶ್ರಿತರ ನಿರ್ವಹಣೆ ಮಾಡಲು ಇರುವ ಕೆಲವೇ ಕೆಲವು ಸಿಬ್ಬಂದಿ ಹೆಣಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. 

    

ಪ್ರಸ್ತುತ ಈ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ 25 ವರ್ಷದಿಂದ 80 ವರ್ಷದವರೆಗಿನ 84 ಭಿಕ್ಷುಕರಿದ್ದು, ಎಲ್ಲರಿಗೂ ಕೇವಲ ಮೂರು ಕೊಠಡಿಗಳಲ್ಲಿ ಆಶ್ರಯ ನೀಡಿದ್ದು, ನಿರಾಶ್ರಿತರಿಗೆ ಸ್ಥಳದ ಕೊರತೆ ಉಂಟಾಗಿದೆ. ನಿರಾಶ್ರಿತ ಕೇಂದ್ರ ಗ್ರಾಮಾಂತರ ಪ್ರದೇಶದಲ್ಲಿದೆ. ಆದ್ದರಿಂದ, ಈ ಭಾಗದಲ್ಲಿ ವಿದ್ಯುತ್ ಕಡಿತ ಹೆಚ್ಚಾಗಿದೆ. ಹಾಗಾಗಿ ಕೊಳವೆ ಬಾವಿಯಿಂದ ಸಮರ್ಪಕವಾಗಿ ನೀರು ಸಂಗ್ರಹಿಸಲು ಸಾಧ್ಯವಾಗದೆ, ಆಗಾಗ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ.ನಿಯಮಗಳ ಪ್ರಕಾರ ಈ ನಿರಾಶ್ರಿತರಿಂದ ಜಮೀನಿನಲ್ಲಿ ಕೃಷಿ ಚಟುವಟಿಕೆ ಮತ್ತು ಮ್ಯಾಟ್ ಹೆಣೆಯುವ ಕೆಲಸಗಳನ್ನು ಮಾಡಿಸಬೇಕು. ಪುನರ್ವಸತಿ ಕೇಂದ್ರದ ವ್ಯಾಪ್ತಿ 39ಎಕರೆ ಜಮೀನಿದ್ದು, ನೀರಿನ ಅಭಾವ ಇದೆ. ಆದ್ದರಿಂದ, ಕೃಷಿ ಕೆಲಸಗಳನ್ನು ಮಾಡಿಸುತ್ತಿಲ್ಲ. ಮ್ಯಾಟ್ ಹೆಣೆಯಲು ಅವಶ್ಯವಿರುವ ಕಚ್ಚಾ ಸಾಮಗ್ರಿ ಸರಬರಾಜು ಇಲ್ಲದಿರುವುದರಿಂದ, ಇತ್ತ ಮ್ಯಾಟ್ ಹೆಣೆಯುವ ಕೆಲಸ ಸಹ ನಿಂತು ಹೋಗಿದೆ. 

ಅಸಹಾಯಕ ಮತ್ತು ನಿರ್ಗತಿಕ ಭಿಕ್ಷುಕರಿಗೆ ಈ ಕೇಂದ್ರದಲ್ಲಿ ಆಶ್ರಯ ನೀಡಿ; ಅವರಿಗೆ 1ವರ್ಷದವರೆಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.ಹೀಗೆ ಚಿಕಿತ್ಸೆ ನೀಡುವಾಗ ಕೆಲ ಮಾನಸಿಕ ಅಸ್ವಸ್ಥರು ನಮ್ಮ ಮೇಲೆ ದಾಳಿ ಮಾಡಿರುವ ಉದಾಹರಣೆಗಳಿವೆ. ರಕ್ಷಣೆ ಇಲ್ಲ. ಸಿಬ್ಬಂದಿ ಕೊರತೆ ಇರುವುದರಿಂದ ರಾತ್ರಿ ವೇಳೆ ಒಬ್ಬ ಕಾವಲುಗಾರ ಮಾತ್ರ ಸೇವೆಯಲ್ಲಿ ಇರುತ್ತಾರೆ. ಈ ವೇಳೆ ವಿದ್ಯುತ್ ಕಡಿತವಾದರೆ ತೊಂದರೆಯಾಗುತ್ತದೆ. ಆದ್ದರಿಂದ, ಪುನರ್ವಸತಿ ಕೇಂದ್ರಕ್ಕೆ ನಿರಂತರ ವಿದ್ಯುತ್ ಪೂರೈಸಬೇಕು. ಅಥವಾ ಪರ್ಯಾಯ ವ್ಯವಸ್ಥೆಗೆ ಸೋಲಾರ್ ದೀಪ ಒದಗಿಸಬೇಕು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಬೇಕು ಎನ್ನುತ್ತಾರೆ ನಿರಾಶ್ರಿತರ ಕೇಂದ್ರದ ನೌಕರರೊಬ್ಬರು.ಕಳೆದ 3ತಿಂಗಳಿಂದ ಮಾನಸಿಕ ಸಮಸ್ಯೆ ಇರುವವರ ಪರೀಕ್ಷೆ ಮತ್ತು ಅಧ್ಯಯನ ಮಾಡಲಾಗುತ್ತಿದೆ. ಅವರಿಗೆ ಅವಶ್ಯ ಇರುವ ಔಷಧಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಒದಗಿಸುತ್ತಿದೆ. ಆದರೆ, ಔಷಧಗಳನ್ನು ಸರಿಯಾದ ಸಮಯ ಮತ್ತು ಸರಿಯಾದ ಪ್ರಮಾಣದಲ್ಲಿ ರೋಗಿಗಳಿಗೆ ನೀಡಲು ಶುಶ್ರೂಷಕರ ಅವಶ್ಯಕತೆ ಇದೆ. ಆದರೆ, ನಿರಾಶ್ರಿತ ಕೇಂದ್ರದಲ್ಲಿ ಸೇವೆ ಸಲ್ಲಿಸಲು ಶಶ್ರೂಷಕ ಸಿಬ್ಬಂದಿ ಸಿಗುತ್ತಿಲ್ಲ ಎನ್ನುತ್ತಾರೆ ಮನೋವೈದ್ಯ ಡಾ.ಸಂಜಯ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry