ಸಿಬ್ಬಂದಿ ಕೊರತೆ- ಸೊರಗಿದ ನಗರದ ಉದ್ಯಾನ

7

ಸಿಬ್ಬಂದಿ ಕೊರತೆ- ಸೊರಗಿದ ನಗರದ ಉದ್ಯಾನ

Published:
Updated:

ಮಂಗಳೂರು: ಯಾವುದೇ ನಗರದ ಅಂದ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಅಲ್ಲಿನ ಉದ್ಯಾನವನಗಳು. ಉದ್ಯಾನಗಳಿದ್ದರಷ್ಟೇ ಸಾಲದು, ನಿರ್ವಹಣೆಯೂ ಮುಖ್ಯ. ಆದರೆ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಬಹುತೇಕ ಉದ್ಯಾನವನಗಳು ನಿರ್ವಹಣೆಯಿಲ್ಲದೇ ಸೊರಗಿವೆ. ದಾಖಲೆಗಳ ಪ್ರಕಾರ ಮಂಗಳೂರು ನಗರಪಾಲಿಕೆ ವ್ಯಾಪ್ತಿಯಲ್ಲಿ 29 ಉದ್ಯಾನಗಳಿವೆ. ಇದರಲ್ಲಿ ನಿರ್ವಹಣೆಯಾಗುವುದು ಐದೊ-ಆರು ಉದ್ಯಾನಗಳು ಮಾತ್ರ. ತೀವ್ರವಾಗಿ ಕಾಡುತ್ತಿರುವ ಸಿಬ್ಬಂದಿ ಕೊರತೆ, ಸೌಕರ್ಯಗಳ ಕೊರತೆ, ಬಡಾವಣೆ ನಿರ್ಮಿಸುವವರ ನಿರಾಸಕ್ತಿ, ಆಡಳಿತದ ಅನಾಸಕ್ತಿ ಇದಕ್ಕೆ ಕಾರಣ ಎನ್ನಲಾಗುತ್ತಿದೆ.ನಗರದ ಅತೀ ದೊಡ್ಡ ಉದ್ಯಾನ ಎನಿಸಿದ ಕದ್ರಿಯ ಉದ್ಯಾನವನವನ್ನು ಮಾತ್ರ ತೋಟಗಾರಿಕೆ ಇಲಾಖೆ ನಿರ್ವಹಿಸುತ್ತಿದೆ. ನಗರದ ಉಳಿದೆಲ್ಲ ಉದ್ಯಾನಗಳ ನಿರ್ವಹಣೆ ಪಾಲಿಕೆಯ ಜವಾಬ್ದಾರಿ. ಮಣ್ಣಗುಡ್ಡೆಯ ಗಾಂಧಿ ಪಾರ್ಕ್ (3 ಎಕರೆ), ಎತ್ತರದ ತಾಣದಲ್ಲಿರುವ ಬಾವುಟಗುಡ್ಡೆಯ ಟಾಗೋರ್ ಪಾರ್ಕ್ (1 ಎಕರೆ), ನೆಹರೂ ಮೈದಾನದ ಮಕ್ಕಳ ಪಾರ್ಕ್ (1.60 ಎಕರೆ), ವೆಲೆನ್ಶಿಯಾ ಪಾರ್ಕ್ (1 ಎಕರೆ), ಹಿಂದೆ ಟೌನ್‌ಹಾಲ್ ಪಾರ್ಕ್ ಎಂದೇ ಖ್ಯಾತಿಪಡೆದಿದ್ದ ಪುರಭವನ ಎದುರಿನ ರಾಜಾಜಿ ಪಾರ್ಕ್ (1 ಎಕರೆ)  ಗಮನಾರ್ಹ ವಿಸ್ತಾರ ಹೊಂದಿರುವ ಪ್ರಮುಖ ಉದ್ಯಾನಗಳು.ಮೂರು ಪಾರ್ಕ್‌ಗಳು ನವೀಕರಣಗೊಂಡು ಉದ್ಘಾಟನೆಗೆ ಕಾಯುತ್ತಿವೆ. ಅವುಗಳೆಂದರೆ ಜಪ್ಪು ಭಾರತ್ ಮೈದಾನ (ಅರ್ಧ ಎಕರೆ), ಹುತಾತ್ಮರ ಪಾರ್ಕ್ (ಆಕಾಶವಾಣಿ ಬಳಿ) ಮತ್ತು ಜಪ್ಪಿನಮೊಗರುವಿನ ಶ್ರೀನಿವಾಸ ಮಲ್ಯ ಪಾರ್ಕ್. ಹುತಾತ್ಮರ ಪಾರ್ಕ್ ಸೇರಿ 29ರಲ್ಲಿ ಹೆಚ್ಚಿನವು ಸಣ್ಣಪುಟ್ಟ ಪಾರ್ಕ್‌ಗಳು. ಕೆಲವು 3 ರಿಂದ 5 ಸೆಂಟ್ಸ್ ವಿಸ್ತಾರದ್ದೂ ಇವೆ!ಕದ್ರಿ ಪಾರ್ಕ್ ಬಿಟ್ಟರೆ ಅತಿ ಹೆಚ್ಚಿನ ಜನರು ವಾಕಿಂಗ್, ವಿಹಾರಕ್ಕೆ ಬರುವುದು, ನಗರದ ಮಣ್ಣಗುಡ್ಡೆಯಲ್ಲಿರುವ ಗಾಂಧಿ ನಗರ ಪಾರ್ಕ್‌ಗೆ. ಇದು ನಗರದ 2ನೇ ಅತಿ ದೊಡ್ಡ ಪಾರ್ಕ್. ಮೂರು ಎಕರೆ ವಿಸ್ತೀರ್ಣ ಹೊಂದಿರುವ ಇದು ಉತ್ತಮ ಪಾರ್ಕ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆಯುತ್ತಾ ಬಂದಿದೆ.19 ಸಿಬ್ಬಂದಿ: ನಗರದ ಪಾರ್ಕ್‌ಗಳ ನಿರ್ವಹಣೆಗೆ ಅಗತ್ಯ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ. ‘ಸಿಬ್ಬಂದಿ ಕೊರತೆ ಹೊಸದೇನಲ್ಲ. 1984ರಿಂದಲೂ ಈ ಸಮಸ್ಯೆ ಇದೆ. ಪಾರ್ಕ್‌ಗಳ ನಿರ್ವಹಣೆಗೆ ಈಗ ಕೇವಲ 21 ಸಿಬ್ಬಂದಿ ಇದ್ದಾರೆ. ಹೆಚ್ಚಿನ ಸಿಬ್ಬಂದಿ ಕೊಡುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ’ ಎನ್ನುತ್ತಾರೆ ಸಂಗಪ್ಪ ತಡವಲ. 1982ರಲ್ಲಿ ‘ತೋಟಗಾರಿಕೆ ಸಹಾಯಕ’ರಾಗಿ ನಗರಪಾಲಿಕೆಗೆ ಸೇರಿದ ಅವರು ಈಗಲೂ ಅದೇ ಹುದ್ದೆಯಲ್ಲಿದ್ದಾರೆ.‘ತೋಟಗಾರಿಕೆ ಮೇಲ್ವಿಚಾರಕ ಹುದ್ದೆಗೆ ನಿಯೋಜನೆ ಮೇಲೆ ಬಂದ ಇಬ್ಬರು ಎರಡು ವರ್ಷ ಕೆಲಸ ಮಾಡಿದ್ದರು. 1984ರಿಂದ ಆ ಹುದ್ದೆಯೂ ಖಾಲಿಯಿದೆ. ಇನ್ನು ಸಿಬ್ಬಂದಿ ನೇಮಕವೇ ಆಗುತ್ತಿಲ್ಲ’ ಎನ್ನುತ್ತಾರೆ ಅವರು.ಒಂದು ಕಾಲದಲ್ಲಿ ದಿನಗೂಲಿ ಆಧಾರದ ಮೇಲೆ ಸೇವೆ ಸಲ್ಲಿಸುವವರೂ ಸೇರಿ 40 ಮಂದಿ ಸಿಬ್ಬಂದಿ ನಗರದ ಪಾರ್ಕ್‌ಗಳ ನಿರ್ವಹಣೆಗೆ ಇದ್ದರು. ನಂತರ ಈ ಸಂಖ್ಯೆ ಕ್ಷೀಣಿಸುತ್ತ ಬಂತು. ಸರ್ಕಾರದ ಮಾರ್ಗಸೂಚಿ ಪ್ರಕಾರ ಎಕರೆ ಪ್ರದೇಶದ ಉದ್ಯಾನ ನಿರ್ವಹಣೆಗೆ ಇಬ್ಬರು ಇರಬೇಕು.‘ಗಾಂಧಿನಗರ ಪಾರ್ಕ್‌ನಲ್ಲಿ ನೀರಿನ ಕೊರತೆಯಿದೆ. ಇಲ್ಲಿ ಬೋರ್‌ವೆಲ್ ಹಾಕಿಸಲು ಕಳೆದ ಮೂರು ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದೇನೆ. ಅನೇಕ ಬಾರಿ ಪಾಲಿಕೆಗೆ ಅಲೆದಿದ್ದೇನೆ. ಈಗ ಅದು ಸಾಕಾರವಾಗುವ ಹಂತದಲ್ಲಿದೆ’ ಎನ್ನುತ್ತಾರೆ ಗಾಂಧಿ ನಗರ ಪಾರ್ಕ್ ಟ್ರಸ್ಟ್‌ನ ಟ್ರಸ್ಟಿ ಪ್ರಭಾ ಕುಡ್ವ. ಟ್ರಸ್ಟ್ ವತಿಯಿಂದ ದಾನಿಗಳ ನೆರವು ಪಡೆದು ಕಳೆದ ಮೂರು ವರ್ಷಗಳಲ್ಲಿ ಪಾರ್ಕ್‌ನ ಅಭಿವೃದ್ಧಿಗೆಂದು ರೂ. 8 ಲಕ್ಷ ವೆಚ್ಚ ಮಾಡಿದ್ದಾರೆ.‘ನಗರದ ಹಲವು ಪಾರ್ಕ್‌ಗಳಲ್ಲಿ ಮಕ್ಕಳ ಆಟದ ಪರಿಕರಗಳು ಉಪಯೋಗಕ್ಕಿಲ್ಲದ ಸ್ಥಿತಿಯಲ್ಲಿವೆ. ಉದ್ಯಾನ ನಗರಿ ಎನಿಸಿರುವ ಬೆಂಗಳೂರಿನಲ್ಲಿ ಬಡಾವಣೆಗೊಂದು ಪಾರ್ಕ್ ಇದೆ. ಮುಂಬೈ ಮಹಾನಗರದಲ್ಲೂ ಪಾರ್ಕ್‌ಗಳು ಒಳ್ಳೆಯ ಸ್ಥಿತಿಯಲ್ಲಿವೆ. ಇಲ್ಲಿ ಪಾರ್ಕ್ ಬೆಳೆಸಲೂ ಆಸಕ್ತಿ ಇಲ್ಲ. ಡೆವಲಪರ್‌ಗಳು ಬಡಾವಣೆ ನಿರ್ಮಿಸಿದರೂ, ಉದ್ಯಾನಕ್ಕೆಂದು ಜಾಗ ಬಿಡುತ್ತಿಲ್ಲ. ನಗರಾಭಿವೃದ್ಧಿ ಪ್ರಾಧಿಕಾರದ ನಿರ್ದೇಶನಗಳಿಗೆ ಬೆಲೆ ನೀಡುವುದಿಲ್ಲ’ ಎಂದು ಅವರು ವಿಷಾದಿಸುತ್ತಾರೆ.ಪ್ರತಿ ವರ್ಷ ಫಲಪುಷ್ಪ ಪ್ರದರ್ಶನದ ವೇಳೆ ನಗರದ ಪಾರ್ಕ್‌ಗಳಿಗೆ ಬಹುಮಾನ ನೀಡಲಾಗುತ್ತದೆ. ಟಾಗೋರ್ ಪಾರ್ಕ್‌ಗೆ ಮೊದಲ ಸ್ಥಾನ. ಗಾಂಧಿನಗರದ ಪಾರ್ಕ್ ಎರಡನೇ ಸ್ಥಾನ ಪಡೆಯುತ್ತ ಬಂದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry