ಸಿಯಾಟಲ್ ಕನ್ನಡಿ ಸ್ಪೇಸ್ ನೀಡಲ್

7

ಸಿಯಾಟಲ್ ಕನ್ನಡಿ ಸ್ಪೇಸ್ ನೀಡಲ್

Published:
Updated:
ಸಿಯಾಟಲ್ ಕನ್ನಡಿ ಸ್ಪೇಸ್ ನೀಡಲ್

ಅಮೆರಿಕದ ವಾಷಿಂಗ್ಟನ್ ಪ್ರಾಂತ್ಯದಲ್ಲಿನ ಸಿಯಾಟಲ್ ಹಸಿರ ಸಿರಿಯ ಹಾಗೂ ಸರೋವರ, ಝರಿ, ಜಲಪಾತಗಳಿಂದ ನಳನಳಿಸುವ ಬೃಂದಾವನ ಸದೃಶ ನಗರ. ಈ ಅಂದದೂರು ಜಗದ್ವಿಖ್ಯಾತ  ಸಾಫ್ಟ್‌ವೇರ್ ಕಂಪೆನಿ ಮೈಕ್ರೊಸಾಫ್ಟ್ ತವರು ಕೂಡ. ಬೋಯಿಂಗ್ ವಿಮಾನ ಕಾರ್ಖಾನೆ, ಗಾಜಿನಿಂದ ವಿಶಿಷ್ಟ ಕಲಾಕೃತಿಗಳನ್ನು ರಚಿಸುವ ಉದ್ಯಮ ಇಲ್ಲಿದೆ. ಈ ನಗರಕ್ಕೆ ಹತ್ತಿರದಲ್ಲೇ ನಮ್ಮ ಕಾಶ್ಮೀರವನ್ನು ಹೋಲುವ ‘ಮೌಂಟ್ ರೆನಿಯರ್' ಸಂದರ್ಶಿಸಲೇಬೇಕಾದ ಸ್ಥಳ. ಇಷ್ಟು ಹೇಳಿದರೆ ಸಿಯಾಟಲ್ ಬಗ್ಗೆ ಪರಿಚಯಿಸಿದಂತಾಗಲಿಲ್ಲ. ‘ಸ್ಪೇಸ್ ನೀಡಲ್' ಎಂಬ ಸಾಟಿಯಿಲ್ಲದ ವೀಕ್ಷಣಾ ಗೋಪುರವನ್ನು ಪ್ರವಾಸಿಗರು ನೋಡಲೇಬೇಕು.ಎಲಿವೇಟರ್ ಮೂಲಕ ‘ಸ್ಪೇಸ್ ನೀಡಲ್'ನ ಆರು ಮಹಡಿಗಳನ್ನು ಒಂದೊಂದಾಗಿ ಮೇಲೇರಿ ಅದರ ನಾವೀನ್ಯ ಆನಂದಿಸಬೇಕು. 605 ಅಡಿ ಎತ್ತರದ ‘ಸ್ಪೇಸ್ ನೀಡಲ್’ ಈಚೆಗಷ್ಟೇ ತನ್ನ ಸ್ವರ್ಣ ಮಹೋತ್ಸವ ಆಚರಿಸಿಕೊಂಡಿದೆ.ಗೋಪುರದ ತುಟ್ಟತುದಿಯ ದೀಪ ವಿಮಾನ ದಾಳಿಯ ಬಗ್ಗೆ ಎಚ್ಚರಿಕೆ ನೀಡುತ್ತದೆ. 520 ಅಡಿ ಎತ್ತರವಿರುವ ಡೆಕ್ ಮೇಲೆ ನಿಂತು ಸಿಯಾಟಲ್ ನಗರವಷ್ಟೇ ಅಲ್ಲ, 50 ಮೈಲಿಗಳ ದೂರದ ಮೌಂಟ್ ರೇನಿಯರ್ ಹಿಮಪರ್ವತ ಶ್ರೇಣಿಯನ್ನೂ ಕಣ್ತುಂಬಿಕೊಳ್ಳಬಹುದು. 500 ಅಡಿ ಎತ್ತರದಲ್ಲಿ ತಿರುಗುವ ಉಪಾಹಾರ ಮಂದಿರವೂ ಇದೆ. 100 ಅಡಿ ಎತ್ತರದಲ್ಲಿ ಸಭಾಂಗಣ ಹಾಗೂ ಗೋಪುರದ ತಳಭಾಗದಲ್ಲಿ ಶಾಪಿಂಗ್ ಮಾಲ್ ಉಂಟು. ಕೆಳಗಿನಿಂದ ಡೆಕ್ ತನಕ  848 ಮೆಟ್ಟಿಲುಗಳಿವೆ. ಅಂದಹಾಗೆ, ಎಲಿವೇಟರ್ ಮೇಲೇರುವ ಪ್ರಯಾಣದ ಅವಧಿ 43 ನಿಮಿಷ.   ಸ್ಪೇಸ್ ನೀಡಲ್ ನಿರ್ಮಾಣದ್ದೇ ಒಂದು ದಂತಕಥೆ. 120 ಅಡಿ ಉದ್ದ, 120 ಅಡಿ ಅಗಲದ ನಿವೇಶನದಲ್ಲಿ 30 ಅಡಿ ಆಳದ ತಳಪಾಯ ಇದಕ್ಕಿದೆ. 30 ಅಡಿ, 120 ಅಡಿ ಉದ್ದಗಲದ ಪಾಯವನ್ನು 467 ಟ್ರಕ್‌ಪ್ರಮಾಣದ ಕಾಂಕ್ರೀಟ್ ಮಿಶ್ರಣದಿಂದ ಕೇವಲ ಹನ್ನೆರಡು ತಾಸುಗಳಲ್ಲಿ  ಭರ್ತಿ ಮಾಡಲಾಯಿತಂತೆ. ತಳಪೀಠಕ್ಕೆ ಇಡೀ ಗೋಪುರವನ್ನು ತಲಾ 30 ಅಡಿ ಉದ್ದದ 72 ಬೋಲ್ಟ್‌ಬಳಸಿ ಸ್ಥಾಯಿಗೊಳಿಸಲಾಗಿದೆ. ಅಂದಹಾಗೆ, ಗೋಪುರ ತಾಸಿಗೆ 200 ಮೈಲಿಗಳ ವೇಗದಲ್ಲಿ ಬಿರುಗಾಳಿ ಬೀಸಿದರೂ ತಡೆದುಕೊಳ್ಳಬಲ್ಲದು. ತಾಸಿಗೆ ಪ್ರತಿ 10 ಮೈಲಿಗಳಷ್ಟು ಗಾಳಿಯ ರಭಸಕ್ಕೆ ಒಂದು ಅಂಗುಲ ಓಲಾಡುವುದೇ ಗೋಪುರದ ವಿಶೇಷ. ಬೇಸಿಗೆಕಾಲದಲ್ಲಿ ಗೋಪುರ ಒಂದಂಗುಲ ಹಿಗ್ಗುತ್ತದೆ. ಅದ್ಭುತ ತಾಂತ್ರಿಕ ಕೌಶಲದ ಜೊತೆಗೆ ಎಲಿವೇಟರ್‌ಗಳ ಸುರಕ್ಷತೆಗೆ ಒತ್ತು ನೀಡಲಾಗಿದೆ. ಒಂದು ಎಲಿವೇಟರ್‌ನಲ್ಲಿ ಒಮ್ಮೆಗೆ 25 ಮಂದಿಗೆ ಅವಕಾಶ. ಅದು ಮೇಲೇರುವ ವೇಗ ತಾಸಿಗೆ 10 ಮೈಲಿ. ಪ್ರತಿಯೊಂದಕ್ಕೂ ಒಂದೇ ಕೇಬಲ್ ಸಾಕಾದರೂ ಏಳು ಇವೆ. ಒಂದುವೇಳೆ ಆಕಸ್ಮಿಕವಾಗಿ ಏಳೂ ಕೇಬಲ್ ತುಂಡಾದರೆ ಎಲಿವೇಟರ್‌ಗೆ ಅಳವಡಿಸಿರುವ ಸ್ವಯಂಚಾಲಿತ ಬ್ರೇಕ್ ಇದ್ದೇ ಇದೆ.ಕೇವಲ 400 ದಿನಗಳ ಕಾಲಾವಧಿಯಲ್ಲಿ ನಿರ್ಮಾಣ ಪೂರ್ಣಗೊಂಡಿದ್ದು ಮತ್ತೊಂದು ದಾಖಲೆ. ಅಂದು ತಗುಲಿದ ವೆಚ್ಚ ನಾಲ್ಕೂವರೆ ಕೋಟಿ ಡಾಲರ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry