ಮುಂಬೈ (ಪಿಟಿಐ): ರಾಷ್ಟ್ರಕ್ಕೆ ಅರ್ಧ ಶತಮಾನ ಕಾಲ ಪರಮಾಣು ಶಕ್ತಿಯನ್ನು ಉತ್ಪಾದಿಸಿದ ಹೆಗ್ಗಳಿಕೆ ಹೊಂದಿರುವ ‘ಸಿರಸ್’ ಪರಮಾಣು ರಿಯಾಕ್ಟರ್ ಡಿ.31ರಿಂದ ಶಾಶ್ವತವಾಗಿ ಸ್ಥಗಿತವಾಗಲಿದೆ.
ರಾಷ್ಟ್ರದ ನಾಗರಿಕ ಪರಮಾಣು ಕಾರ್ಯಕ್ರಮಗಳ ಜತೆಗೆ ಕಾರ್ಯತಂತ್ರ ಅಣು ಚಟುವಟಿಕೆಗಳ ಭಾಗವಾದ ಈ ರಿಯಾಕ್ಟರ್‌ನ್ನು ಅಮೆರಿಕದೊಂದಿಗಿನ ಅಣು ಒಪ್ಪಂದದ ಕರಾರಿನ ಅನ್ವಯ ಸ್ಥಗಿತಗೊಳಿಸಲಾಗುತ್ತಿದೆ.
ಹಿರಿಯ ಪರಮಾಣು ವಿಜ್ಞಾನಿಯೊಬ್ಬರ ಪ್ರಕಾರ, 2003ರಲ್ಲಿ ಪುನರುಜ್ಜೀವಗೊಂಡ ಸಿರಸ್ (ಕೆನಡಾ ಇಂಡಿಯಾ ರಿಯಾಕ್ಟರ್ ಯುಟಿಲಿಟಿ ಸರ್ವೀಸಸ್) ರಿಯಾಕ್ಟರ್‌ನ್ನು ಇನ್ನೂ ಕೆಲವು ವರ್ಷಗಳ ಕಾಲ ಬಳಸಬಹುದು. ಆದರೆ ಅಮೆರಿಕದೊಂದಿಗಿನ ಒಪ್ಪಂದಕ್ಕೆ ಬಾಧ್ಯವಾಗಿ ಅದರ ಕಾರ್ಯವನ್ನು ಸ್ಥಗಿತಗೊಳಿಸಲಾಗುತ್ತಿದೆ.
ಸಿರಸ್‌ನಲ್ಲಿ ಬಳಕೆಯಾಗುತ್ತಿರುವ ಸ್ವದೇಶಿ ನಿರ್ಮಿತ ಇಂಧನವನ್ನು ತಂಪಾಗಿಸಿ ನಂತರ ಇಲ್ಲಿನ ‘ಬಾರ್ಕ್’ ಸಂಕೀರ್ಣದಲ್ಲಿರುವ ಪುನರ್‌ಸಂಸ್ಕರಣಾ ಘಟಕಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಒಟ್ಟಾರೆ ಇಂಧನ ಸ್ಥಳಾಂತರ ಹಾಗೂ ಅದನ್ನು ಕಶ್ಮಲಮುಕ್ತಗೊಳಿಸುವ ಪ್ರಕ್ರಿಯೆಗೆ ಕನಿಷ್ಠ ಒಂದು ವರ್ಷ ಸಮಯ ಹಿಡಿಯಲಿದೆ.
ನಿಷ್ಕ್ರಿಯವಾಗಲಿರುವ ಸಿರಸ್ ರಿಯಾಕ್ಟರ್‌ನ್ನು ವಿದ್ಯಾರ್ಥಿಗಳ ತರಬೇತಿ ಸೇರಿದಂತೆ ಇನ್ನೂ ಹಲವಾರು ಪರ್ಯಾಯ ರೀತಿಗಳಲ್ಲಿ ಬಳಸಿಕೊಳ್ಳಲು ಅವಕಾಶವಿದೆ ಎಂದು ತಜ್ಞರು ವಿವರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.