ಭಾನುವಾರ, ಜೂನ್ 13, 2021
25 °C

ಸಿರಿಗನ್ನಡ ತೇರನೆಳೆಯಲು ಗಡಿಕನ್ನಡಿಗರು ಸಜ್ಜು

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

 `ಭುವನೇಶ್ವರೀ ದೇವಿ ರಥವನೇರಿದಳು

 ಜಯ್ ರಾಜೇಶ್ವರೀ ಕನ್ನಡಿಗರೊಡತೀ!~ಎಂಬ ಕವಿವಾಣಿ ಇಲ್ಲಿ ಅಕ್ಷರಶಃ ಸಾಕಾರಗೊಡಿದೆ. `ಕನ್ನಡದ ಗುಡಿ~ ಎಂದೇ ನಾಡಿನಾದ್ಯಂತ ಚಿರಪರಿಚಿತವಾಗಿರುವ ಚಿಕ್ಕೋಡಿ ತಾಲ್ಲೂಕಿನ ಚಿಂಚಣಿಯ ಸಿದ್ದಸಂಸ್ಥಾನಮಠದ ವತಿಯಿಂದ ನಿರ್ಮಿಸಲಾಗಿರುವ `ಸಿರಿಗನ್ನಡ ತೇರು~ ಎಳೆಯಲು ಗಡಿಕನ್ನಡಿಗರು ಸಜ್ಜಾಗುತ್ತಿದ್ದಾರೆ.ಧರ್ಮಪ್ರಸಾರದೊಂದಿಗೆ ಕನ್ನಡಪರವಾದ 29 ಅಮೂಲ್ಯ ಕೃತಿಗಳನ್ನು ಪ್ರಕಟಿಸುವ ಜೊತೆಗೆ ಗಡಿಯಲ್ಲಿನ ಕನ್ನಡ ಯೋಗಕ್ಷೇಮ ಕಾಯುವ  ಹತ್ತು ಹಲವು ಕಾರ್ಯಚಟುವಟಿಕೆಗಳ ಮೂಲಕ `ಕನ್ನಡದ ಸ್ವಾಮೀಜಿ~ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀಮಠದ ಅಲ್ಲಮಪ್ರಭು ಸ್ವಾಮೀಜಿ ಅವರ ವಿನೂತನ ಪರಿಕಲ್ಪನೆಯ ಪರಿಣಾಮವಿದು. ಬಹುತೇಕ ಜಾತ್ರೆ, ಉತ್ಸವ ಅಥವಾ ಹಬ್ಬ ಹರಿದಿನಗಳಂದು ಧಾರ್ಮಿಕ ತೇರು ಎಳೆಯುವುದು ಸಾಮಾನ್ಯ. ಆದರೆ, `ಕನ್ನಡದ ಕೆಲಸವೇ ಬಸವಣ್ಣನ ಕೆಲಸ~ ಎಂದು ಕನ್ನಡ ಕೈಂಕರ್ಯದಲ್ಲಿ ತೊಡಗಿರುವ ಸ್ವಾಮೀಜಿ ಅವರು, ಪ್ರತಿವರ್ಷದ ಯುಗಾದಿ ಪಾಡ್ಯದಂದು ಕನ್ನಡದ ತೇರು ಎಳೆಯುವ ವಿಶಿಷ್ಠ ಪರಂಪರೆಗೆ ನಾಂದಿ ಹಾಡಲಿದ್ದಾರೆ. ಇದಕ್ಕೆ ನಾಡಿನ ಬುದ್ದಿಜೀವಿಗಳು, ಈ ಭಾಗದ ಜನರೂ ಒಪ್ಪಿಗೆ ನೀಡಿರುವುದು ಶ್ರೀಗಳಿಗೆ ಇನ್ನಷ್ಟು ಸ್ಫೂರ್ತಿ ದೊರಕಿದಂತಾಗಿದೆ.11 ಅಡಿ ಎತ್ತರವಿರುವ ಸಿರಿಗನ್ನಡ ತೇರು ಸಂಪೂರ್ಣ ಕನ್ನಡಮಯವಾಗಿದೆ. ರಥದ ಒಂದಿನಿತೂ ಜಾಗವನ್ನು ಖಾಲಿಯಾಗಿ ಉಳಿಸದೇ ಕನ್ನಡಪರವಾದ ಸುಂದರ ಕಾಷ್ಠಕಲೆ ಅರಳಿದೆ. ಜಮಖಂಡಿ ತಾಲ್ಲೂಕಿನ ಸಾವಳಗಿಯ ಬಸಪ್ಪ ಕಾಳಪ್ಪ ಬಡಿಗೇರ ಎಂಬ ಕಲಾವಿದ ಭರ್ತಿ ಒಂದು ವರ್ಷ ಶ್ರಮವಹಿಸಿ ತೇರನ್ನು ಕಲಾತ್ಮಕವಾಗಿ ಕೆತ್ತನೆ ಮಾಡಿದ್ದು, ಇದೀಗ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ರಥ ನಿರ್ಮಾಣಕ್ಕಾಗಿ ಚಿಂಚಣಿ, ಖಡಕಲಾಟ ಮತ್ತು ನಿಪ್ಪಾಣಿಯ ಭಕ್ತರು ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಸಾಗವಾನಿ ಕಟ್ಟಿಗೆಯನ್ನು ದೇಣಿಗೆಯಾಗಿ ನೀಡಿದ್ದು, ರಥ ಕೆತ್ತನೆಗೆ ಶ್ರೀಮಠದ ವತಿಯಿಂದ ಕಲಾವಿದರಿಗೆ 1.75 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ.ರಥದ ತುಂಬ ಕನ್ನಡವೇ ಅವತರಿಸಿದೆ. ನಾಡಿನ ಎಂಟು ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ 35 ಜನ ಸಾಹಿತಿಗಳು, ಕರ್ನಾಟಕವನ್ನು ತಾಂತ್ರಿಕವಾಗಿ ಕಟ್ಟಿದ ಸರ್.ಎಂ.ವಿಶ್ವೇಶ್ವರಯ್ಯಾ, ನಟ ಸಾರ್ವಭೌಮ ಡಾ.ರಾಜಕುಮಾರ, ಸಜ್ಜನ ರಾಜಕಾರಣಿ ಎಸ್.ನಿಜಲಿಂಗಪ್ಪ ಅವರ ಮೂರ್ತಿಗಳನ್ನು ರಥದಲ್ಲಿ ಆಕರ್ಷಕವಾಗಿ ಕೆತ್ತನೆ ಮಾಡಲಾಗಿದೆ. ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಲಾಂಛನವೂ ಇಲ್ಲಿ ಕಂಗೊಳಿಸಿದೆ. `ಕನ್ನಡವೇ ದೇವರು, ಕನ್ನಡವೇ ಧರ್ಮ~, ಕನ್ನಡ ನುಡಿ ಆಡೋಣ, ಕನ್ನಡ ಗಡಿ ಕಾಯೋಣ~ ಮೊದಲಾದ 16 ಕನ್ನಡಪರ ಘೋಷವಾಕ್ಯಗಳೂ ಇವೆ.ತೇರಿನಲ್ಲಿ ವಿಜೃಂಭಿಸಲಿರುವ `ಕನ್ನಡ ತಾಯಿ~ಯ ಮೂರ್ತಿಯನ್ನು ಪಂಚಲೋಹದಿಂದ ನಿರ್ಮಿಸಲಾಗಿದೆ. ತೇರಿಗೆ 40 ಸಾವಿರ ರೂ.ಗಳ ಮೌಲ್ಯದ ಬೆಳ್ಳಿ ಕಳಸವನ್ನು ಸುರೇಶ ಅಪ್ಪಾಸಾಬ ಚೌಗಲಾ ಎಂಬುವವರು ದಾನವಾಗಿ ನೀಡಿದ್ದಾರೆ. `ಧರ್ಮದ ಜೊತೆಗೆ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಕುರಿತು ಜನರಲ್ಲಿ ಆಸಕ್ತಿ, ಅಭಿರುಚಿ ಹೆಚ್ಚಿಸಸುವ ನಿಟ್ಟಿನಲ್ಲಿ ಸಿರಿಗನ್ನಡ ತೇರು ಎಳೆಯುವ ವಿನೂತನವಾದ ಸಂಪ್ರದಾಯವನ್ನು ಶ್ರೀಮಠದಿಂದ ಆರಂಭಿಸಲಾಗುತ್ತಿದ್ದು, ಮುಂಬರುವ ವರ್ಷಗಳಲ್ಲಿ ಇದು ಕನ್ನಡದ ಜಾತ್ರೆಯಾಗಿ ಪರಿವರ್ತನೆ ಆಗಲಿದೆ~ ಎನ್ನುತ್ತಾರೆ ಅಲ್ಲಮಪ್ರಭು ಸ್ವಾಮೀಜಿ ಅವರು.ಮಾ. 23 ರಂದು ಬೆಳಿಗ್ಗೆ 10 ಗಂಟೆಗೆ (ಚಂದ್ರಮಾನ ಯುಗಾದಿ ಪಾಡ್ಯದಂದು) ಸಿರಿಗನ್ನಡ ತೇರಿನ ಉತ್ಸವ ನಡೆಯಲಿದ್ದು, ಕನ್ನಡದ ಜಗದ್ಗುರು ಗದುಗಿನ ಡಾ.ತೋಂಟದ ಸಿದ್ದಲಿಂಗ  ಸ್ವಾಮೀಜಿ ತೇರು ಎಳೆಯಲು ಆಗಮಿಸಲಿದ್ದಾರೆ. ನಿಡಸೋಶಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ತೇರಿಗೆ ಕಳಸ ಇಡಲಿದ್ದಾರೆ. ಗಡಿನಾಡಿನಲ್ಲಿ ನಡೆಯಲಿರುವ ಕನ್ನಡ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಜನ ಕಾತರದಿಂದ ಕಾಯುತ್ತಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.