ಸಿರಿಯನ್ ಊಟ ವೈಭವ

7

ಸಿರಿಯನ್ ಊಟ ವೈಭವ

Published:
Updated:
ಸಿರಿಯನ್ ಊಟ ವೈಭವ

`ಸಿರಿಯನ್ ಕ್ರಿಶ್ಚಿಯನ್ನರು ಮೂಲ ಕೇರಳಿಗರಿಗಿಂತ ಭಿನ್ನ ಹಾಗೂ ಹೆಚ್ಚು ಮಾಂಸಾಹಾರ ಪ್ರಿಯರು. ಇವರ ವಂಶವೃಕ್ಷ ಪರ್ಷಿಯನ್, ಪೋರ್ಚುಗೀಸ್ ಹಾಗೂ ಬ್ರಿಟಿಷ್ ದೇಶಗಳೊಂದಿಗೂ ತಳಕು ಹಾಕಿಕೊಂಡಿದೆ. ಹಾಗಾಗಿ ತರಹೇವಾರಿ ಮಾಂಸಾಹಾರಿ ಖಾದ್ಯಗಳನ್ನು ಸವಿಯುವುದರಲ್ಲಿ ಇವರು ನಿಸ್ಸೀಮರು.ಸಿರಿಯನ್ ಕ್ರಿಶ್ಚಿಯನ್ನರ ನೆಚ್ಚಿನ ಆಹಾರವನ್ನು ಮೂಲ ಸೊಗಡಿನೊಂದಿಗೆ ಉಣಬಡಿಸಲು `ದಕ್ಷಿಣ್~ ರೆಸ್ಟೊರಾ ಕೂಡ ಸಜ್ಜುಗೊಂಡಿದೆ~ ಎಂದು ಹೇಳುತ್ತಲೇ ಟೇಬಲ್ ಮೇಲೆ ಬೆಳ್ಳಿತಟ್ಟೆ ತಂದಿಟ್ಟರು ಬಾಣಸಿಗ ಸಿ.ಬಿ. ಶಂಕರನ್.ಐಟಿಸಿ ವಿಂಡ್ಸರ್ ಮ್ಯಾನರ್‌ನಲ್ಲಿರುವ ದಕ್ಷಿಣ್ ರೆಸ್ಟೊರಾದ ಬಾಣಸಿಗರಾದ ಶಂಕರನ್ ಮತ್ತು ವಿಜಯ್ ಮಲ್ಹೋತ್ರಾ ಸಿರಿಯನ್ ಕ್ರಿಶ್ಚಿಯನ್ ಆಹಾರೋತ್ಸವದ ವಿಶೇಷತೆ ವಿವರಿಸುತ್ತಾ ಹೋಗಿದ್ದು ಹೀಗೆ...“ಕೇರಳದಲ್ಲಿರುವ ಸಿರಿಯನ್ ಕ್ರಿಶ್ಚಿಯನ್ನರು ತುಂಬು ಸಂಪ್ರದಾಯಸ್ಥರು. ಇವರ ಊಟ ಮಾಡುವ ಕ್ರಮದಲ್ಲಿ ಭಾರತೀಯ ಹಾಗೂ ಯುರೋಪಿಯನ್ ಶೈಲಿ ಮಿಳಿತಗೊಂಡಿರುತ್ತದೆ. ಅವರು ಊಟ ಮಾಡುವ ರೀತಿಯೇ ಭಿನ್ನ. ಪ್ರತಿ ಊಟದಲ್ಲೂ ಮಾಂಸ ಇರಲೇಬೇಕೆಂದು ಬಯಸುತ್ತಾರೆ.ಮೀನಿನ ಖಾದ್ಯಗಳ ಮೇಲಂತೂ ವಿಪರೀತ ಒಲವು. `ದಕ್ಷಿಣ್~ ಕೂಡ ಇದನ್ನು ಗಮನದಲ್ಲಿಟ್ಟುಕೊಂಡು ಸಿರಿಯನ್ ಕ್ರಿಶ್ಚಿಯನ್ನರಿಗೆ ಇಷ್ಟವಾಗುವಂತಹ ಖಾದ್ಯಗಳನ್ನೇ ಮೆನುವಿನಲ್ಲಿ ಇರಿಸಿದೆ.`ದೇವರ ನಾಡು~ ಎಂದು ಕರೆಯಿಸಿಕೊಳ್ಳುವ ಕೇರಳದಲ್ಲಿ ಸಿರಿಯನ್ ಕ್ರಿಶ್ಚಿಯನ್ನರು ಈಗಲೂ ತಮ್ಮದೇ ಸೊಗಡು ಹಾಗೂ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಇವರಿಗೆ ಅಪ್ಪಮ್, ಮೀನ್ ಮೋಯ್ಲಿ, ತರವೂ ರೋಸ್, ಅತ್ತೇರಾಚಿ ಕರ‌್ರಿ ಎಂದರೆ ತುಂಬಾ ಅಚ್ಚುಮೆಚ್ಚು. ಈ ಉತ್ಸವವನ್ನು ನಾವು `ಪ್ರಾರಂಭಂ~, `ಮಧ್ಯಂ~, `ಅನ್ನಂ~ ಹಾಗೂ `ಮಧುರಂ~ ಎಂದು ವಿಂಗಡಿಸುತ್ತೇವೆ. ಅದರಂತೆ ಗ್ರಾಹಕರಿಗೆ ನಾವು ತರಾವರಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಖಾದ್ಯಗಳನ್ನು ಉಣಬಡಿಸುತ್ತೇವೆ.`ಪ್ರಾರಂಭಂ~ನಲ್ಲಿ ಹಸಿವನ್ನು ಹೆಚ್ಚಿಸುವ ಸ್ಟಾರ್ಟರ್‌ಗಳನ್ನು ನೀಡಲಾಗುತ್ತದೆ. ಸೆಟ್ಟೂ ಸೂಪ್ ಕುಡಿದಾಗ ಹೊಟ್ಟೆ ತಂತಾನೇ ಹಸಿಯತೊಡಗುತ್ತದೆ. ಅದರ ಜತೆಜತೆಗೆ ಚೆನ್ನಾಗಿ ಕರಿದ ಮೀನಿನ ಕಟ್ಲೆಟ್ ಸವಿಯಲು ಅವಕಾಶವಿದೆ. ಕೋಳಿಪ್ರಿಯರಿಗಾಗಿ ಈರುಳ್ಳಿ ಮತ್ತು ಮಸಾಲೆ ಹಾಕಿ ಹುರಿದ ಕೋಳಿ ಮಾಂಸ `ಕೋಳಿ ಪೊರಿಯಾಥುಚು~ ಇದೆ.`ಮಧ್ಯಂ~ನಲ್ಲಿ ತರಹೇವಾರಿ ಮಾಂಸ ಹಾಗೂ ಸಸ್ಯಾಹಾರಿ ಭಕ್ಷ್ಯಗಳನ್ನು ಸವಿಯಬಹುದು. ಅಲ್ಲಿನವರಿಗೆ `ಕರಿಮೀನ್ ವರುಥ್ತಾತು~ ಅಂದ್ರೆ ತುಂಬಾ ಇಷ್ಟ. ನಮ್ಮ ಮೆನುವಿನ ಪ್ರಮುಖ ಆಕರ್ಷಣೆ ಕೂಡ ಇದೇ. ಕೇರಳದಲ್ಲಿರುವ ನದಿಯ ಹಿನ್ನೀರಿನಲ್ಲಿ ಹಿಡಿದು ತಂದಿರುವ ಪರ್ಲ್ ಸ್ಪಾಟ್ ಫಿಶ್‌ಗೆ ಕೆಂಪು ಮೆಣಸಿನಕಾಯಿ ಪುಡಿ, ಬೆಳ್ಳುಳ್ಳಿ ಹಾಗೂ ಶುಂಠಿ ಪೇಸ್ಟ್ ಹಾಕಿ ಇದನ್ನು ತಯಾರಿಸಲಾಗಿದೆ.

 

ಇದು ತಿನ್ನುವಾಗ ಸಿಗುವ ರುಚಿ ವರ್ಣಾತೀತ. ಇನ್ನು ಕಡಲಿನಲ್ಲಿ ಸಿಗುವ ಸಿಗಡಿಯಿಂದ ತಯಾರಿಸಿದ್ದು `ಚೆಮ್ಮೀನ್ ಉಲರಿಥಿಯಟ್ಟು~. ಈರುಳ್ಳಿ ಮತ್ತು ಎಳನೀರು ಮಿಶ್ರಣ ಮಾಡಿ ಅದರ ಜತೆಗೆ ವಿಶೇಷ ಖಾರ ಮೆಣಸು ಹಾಕಿ ಈ ತಿನಿಸು ಮಾಡಲಾಗುತ್ತದೆ. `ತರವು ರೋಸ್ಟ್~ ಇನ್ನೊಂದು ಆಕರ್ಷಣೆ. ಇದು ಬಾತುಕೋಳಿ ಮಾಂಸದಿಂದ ತಯಾರಿಸಿದ್ದು. ಇದು ಸಿರಿಯನ್ ಕ್ರಿಶ್ಚಿಯನ್ನರ ಸಾಂಪ್ರದಾಯಿಕ ಆಹಾರವೂ ಹೌದು. ಮಧ್ಯ ಕೇರಳದಲ್ಲಿ ನೆಲೆಸಿರುವವರಿಗೆ ಅಚ್ಚುಮೆಚ್ಚು. ಹೀಗಾಗಿ ಅದೂ ನಮ್ಮ ಮೆನುವಿನಲ್ಲಿದೆ.`ಅನ್ನಂ~ನಲ್ಲಿ ಬೇಯಿಸಿದ ಅನ್ನಕ್ಕೆ ಎಳನೀರು ಬೆರೆಸಿ ಅದನ್ನು ಕಿವುಚಿ ಮುದ್ದೆಯಂತೆ ಮಾಡಿ ತಯಾರಿಸಿದ ಪಿಡಿ ಇದೆ. ಇನ್ನುಳಿದಂತೆ ವಿಶ್ವದಾದ್ಯಂತ ಖ್ಯಾತಿ ಪಡೆದಿರುವ ಕಲಪ್ಪಂ, ಅಪ್ಪಂ ಇದೆ. ಇವುಗಳನ್ನು ಮಾಂಸಾಹಾರದಲ್ಲಿ ನೆಂಚಿಕೊಂಡು ತಿನ್ನುವಾಗ ಸಿಗುವ ಖುಷಿಯೇ ಬೇರೆ. ಇನ್ನು `ಮಧುರಂ~ನಲ್ಲಿ ಕೇರಳದ ವಿಶೇಷ ಪಾಯಸ ಪಾಲಡ, ಕಲ್ಲಿ ಬಾಯಿರುಚಿ ತಣಿಸುತ್ತವೆ...”

ಬಾಣಸಿಗರು ಹೀಗೆ ವಿವರಿಸುತ್ತಿರುವಾಗಲೇ ಬಾಯಲ್ಲಿ ನೀರು ತುಂಬಿಕೊಂಡಿತ್ತು.ಐಟಿಸಿ ವಿಂಡ್ಸರ್‌ಮ್ಯಾನರ್‌ನಲ್ಲಿರುವ `ದಕ್ಷಿಣ್~ ಪ್ರಶಸ್ತಿ ಪುರಸ್ಕೃತ ರೆಸ್ಟೊರಾ. ನೋಡಲು ಅರಮನೆಯಂತಿದೆ. ಇಲ್ಲಿ ಊಟಕ್ಕೆ ನೀಡುವ ತಟ್ಟೆ, ಲೋಟ, ಚಮಚೆ ಎಲ್ಲವೂ ಬೆಳ್ಳಿಯವು. ಯಾವ ಕೋನದಿಂದ ನೋಡಿದರೂ ಅಲ್ಲಿ ಐಷಾರಾಮಿತನ ಹಾಗೂ ಶುಚಿತ್ವ ಎದ್ದು ಕಾಣಿಸುತ್ತದೆ. ಮಾಂಸಾಹಾರ ಹಾಗೂ ಮೀನಿನ ಖಾದ್ಯಗಳನ್ನು ಇಷ್ಟಪಡುವವರು ಈ ಆಹಾರೋತ್ಸವ ಹೇಳಿಮಾಡಿಸಿದಂತಿದೆ.ಪ್ರತಿಯೊಂದು ಖಾದ್ಯವೂ ಭಿನ್ನ ರುಚಿ ಹೊಂದಿದೆ. ಊಟದಲ್ಲಿ ಹೆಚ್ಚು ಖಾರ ಬಯಸುವವರಿಗಾಗಿ `ದಕ್ಷಿಣ್~ ಈ ಹಿಂದೆ ಚೆಟ್ಟಿನಾಡು ಹಾಗೂ ಆಂಧ್ರ ಆಹಾರೋತ್ಸವವನ್ನು ಕೂಡ ಆಯೋಜಿಸಿತ್ತು. ಈಗ ಸಿರಿಯನ್ ಕ್ರಿಶ್ಚಿಯನ್ ಆಹಾರೋತ್ಸವದ ಸರದಿ. ಈ ಆಹಾರೋತ್ಸವ ಇದೇ 20ರ ವರೆಗೆ ನಡೆಯಲಿದೆ. ಸಿರಿಯನ್ ಕ್ರಿಶ್ಚಿಯನ್ ಖಾದ್ಯಗಳನ್ನು ಇಷ್ಟಪಡುವ ಮಂದಿ `ದಕ್ಷಿಣ್~ಗೆ ಆಗಮಿಸಿ ಅದರ ಸವಿ ಸವಿಯಬಹುದು. ಮಾಹಿತಿ ಮತ್ತು ಬುಕಿಂಗ್‌ಗಾಗಿ: 2226 9898.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry